ಅಂದು ಭಯ ಇಂದು ನಗೆ ತರಿಸುವ 'ನಾಳೆ ಬಾ'

* ಪ್ರಕಾಶ್ ಉಪಾಧ್ಯಾಯ, ಚಿಕ್ಕಮಗಳೂರು
ನಾಳೆ ಬಾ - ಈ ಬಾಗಿಲು ಬರಹ ಸುಮಾರು 15 ವರ್ಷದ ಹಿಂದೆ ನಮ್ಮ ಊರಿನಲ್ಲಿ ತುಂಬಾ ಜನಪ್ರಿಯವಾಗಿತ್ತು. ನಾಳೆ ಬಾ ಎಂದುಮನೆಯ ಬಾಗಿಲಿನ ಮೇಲೆ ಬಿಳಿಯ ಬಳಪದಲ್ಲಿ ಬರೆದಿರುವುದನ್ನು ಸಾಮಾನ್ಯವಾಗಿ ಎಲ್ಲರ ಮನೆಯ ಮುಂದೆ ಕಾಣುತ್ತಿದ್ದವು. ಕಟ್ಟುತ್ತಿರುವ ಮನೆಯಿಂದ ಹಿಡಿದು ಪಾಳುಬಿದ್ದ ಮನೆಯ ಮೇಲೂ ಬರೆದ ಈ ಬಾಗಿಲು ಬರಹ ಚಳಿ ಜ್ವರದಂತೆ ಎಲ್ಲರನ್ನೂ ಆವರಿಸಿತ್ತು.
ಉಪೇಂದ್ರ ಅವರ 'ಶ್' ಚಿತ್ರ ಬಿಡುಗಡೆಯಾದ ಸಮಯ ಅದು, ಆ ಚಿತ್ರ ನಮ್ಮ ಊರಿನಲ್ಲೂ ಭರ್ಜರಿಯಾಗಿ ಪ್ರದರ್ಶನಕಾಣುತ್ತಿತ್ತು, ಎಲ್ಲರ ಬಾಯಲ್ಲೂ 'ಶ್' ಚಿತ್ರದ್ದೇ ಚರ್ಚೆ, ನಾನು ಕೂಡಾ ಆ ಚಿತ್ರ ನಮ್ಮ ನೆಂಟರ ಮನೆಯೆಲ್ಲಿ ವಿ.ಸಿ.ಪಿ.ಯಲ್ಲಿ ನೋಡಿದ್ದೆ (ನಕಲಿ ಪ್ರಿಂಟ್). ಆಗಿನ್ನೂ ನನಗೆ 11 ವರ್ಷ ತುಂಬಿರಬಹುದು, ಆ ಚಿತ್ರದಲ್ಲಿ ದೆವ್ವ, ಭೂತ ಇಲ್ಲ ಎಂದು ಉಪ್ಪಿ ನಿರೂಪಿಸಿದರೂ ನಮ್ಮ ಜನಕ್ಕೆ ದೆವ್ವದ ಭಯ ಹೋಗಿರಲಿಲ್ಲ, ಬದಲಾಗಿ ಇನ್ನು ಜಾಸ್ತಿಯಾಗತೊಡಗಿತು. ಅದು ದೂರದರ್ಶನದ ಕಾಲ, ದೂರದರ್ಶನದಲ್ಲಿ ಬರುವ ಧಾರವಾಹಿ, ಸಿನಿಮಾ ಜೊತೆಗೆ ಚಿತ್ರಮಂಜರಿಯನ್ನೂ ಬಿಡದೆ ನೋಡುತ್ತಿದ್ದ ಕಾಲವದು. ಢವಢವ ಎಂದು ಶ್ ಚಿತ್ರದ ಹಾಡುಬಂದರೆ ಸಾಕು ರಾತ್ರಿ ಎಲ್ಲಾ ಬರಿ ಆ ದೆವ್ವದ್ದೇ ಯೋಚನೆ. ಇದೇ ಸಮಯದಲ್ಲಿ ನಮ್ಮ ಚಿಕ್ಕಮಗಳೂರಿನ ಖ್ಯಾತ ವೈದ್ಯರ ಹೆಂಡತಿಯ ಕೊಲೆಯಾಯಿತು, ತದನಂತರ ನಾಳೆ ಬಾ ಎಂಬ ಕ್ಯಾಪ್ಶನ್ ಇನ್ನೂ ಜನಪ್ರಿಯವಾಗಿ ಸುತ್ತಮುತ್ತ ಊರುಗಳಲ್ಲಿಯೂ ಮನೆಯ ಬಾಗಿಲಿನಲ್ಲೂ ಕಾಣಸಿಗುತ್ತಿತ್ತು. ಬಾರುಗಳಿಂದ ಹಿಡಿದು ಬಸ್ ಸ್ಟ್ಯಾಂಡ್ ನಲ್ಲಿಯೂ 9ರ ನಂತರ ಯಾರೂ ಹೊರಗಡೆ ಬರುತ್ತಿರಲಿಲ್ಲ.
ದೆವ್ವ ರಾತ್ರಿ ಬರುತ್ತದ೦ತೆ, ಬಂದರೆ ನಾಳೆ ಬಾ ಎಂಬ ಶೀರ್ಷಿಕೆ ನೋಡಿ ನಾಳೆಬರುವೆ ಎಂದು ಮುಂದೆ ಹೋಗುತ್ತದೆಯ೦ತೆ ಎಂಬ ಅಂತೆ ಕಂತೆಗಳದ್ದೇ ಸಂತೆ! ನಮ್ಮ ಹುಡುಗರಿಗೆ ಹಗಲು ಹೊತ್ತಿನಲ್ಲಿ 'ನಾಳೆ ಬಾ' ಬಗ್ಗೆ ಮಾತಾಡಲು ಭಾರೀ ಧೈರ್ಯ. ಅದೇ ರಾತ್ರಿಯಾದರೆ ಆ ಶೂರರೇ ಪುಕ್ಕಲುಗಳ ಥರ ಆಡುತ್ತಿದ್ದರು. ಇದಕ್ಕೆ ಯಾರೂ ಹೊರತಾಗಿರಲಿಲ್ಲ. ಅದಲ್ಲದೇ ಇನ್ನು ದೊಡ್ಡವರು ತಾವು ದೆವ್ವ ನೋಡಿದ್ದಾಗಿ ಕೊಚ್ಚಿಕೊಳ್ಳುತ್ತಿದ್ದರಿಂದ ನಾವು ರಾತ್ರಿ ವಿಭೂತಿ-ಕುಂಕುಮ ಇಟ್ಟೇ ಹೊರಗೆ ಹೋಗುವಂತೆ ಮಾಡುತ್ತಿತ್ತು. ದೆವ್ವಬಂದರೆ ಚಪ್ಪಲಿ ತೋರಿಸು, ಹೊಲಸಾಗಿ ಬೈದರೆ ಅದು ನಿನಗೆ ಏನೂ ಮಾಡುದಿಲ್ಲ ಎಂದು ಕೆಲವು ಸ್ನೇಹಿತರು ಹೇಳಿದರೆ, ನನ್ನ ಚಿಕಪ್ಪ ಒಬ್ಬರು ದೆವ್ವ ಬಂದರೆ ಮೂತ್ರ ಮಾಡಿ, ಮೂತ್ರ ಮಾಡಿದ ಆ ಮಣ್ಣನು ಹಣೆಗೆ ಹಚ್ಕಿಕೋ ಎಂದ ಆ ನೆನಪು ಅಂದು ಸ್ವಲ್ಪ ದೈರ್ಯ ಕೊಟ್ಟರೆ ಇಂದು ನನಗೆ ನಗು ಬರಿಸುತ್ತದೆ.
ಕೆಲವು ದಿನಗಳ ಹಿಂದೆ ನನ್ನ ಸಹುದ್ಯೋಗಿ ಆತ್ಮಹತ್ಯೆ ಮಾಡಿಕೊಂಡಾಗ ಆಫೀಸಿನಲ್ಲಿ ಸಹದ್ಯೋಗಿಗಳಿಗೆ ಮೂರ್ನಾಲ್ಕು ದಿನ ಅವನ ನೆನಪು ಬರುತ್ತಿದೆ ಎಂದು ಹೇಳುತ್ತಿದ್ದರು, ಆಗ ನನಗೆ 15 ವರ್ಷದ ಹಿಂದಿನ ಆ "ನಾಳೆ ಬಾ" ಎಂಬ 'ಸವಿಸವಿ' ನೆನಪು ತೇಲಿಬಂತು. ಇದನ್ನು ನಾನು, ಮೂಢನ೦ಬಿಕೆ ಎನ್ನಬೇಕೋ ಅಥವಾ ಮೂರ್ಖತನದ ಪರಮಾವಧಿ ಎನ್ನಬೇಕೋ ಎಂದು ತೋಚುತ್ತಿಲ್ಲ, ಆದರು ಇದು ನನಗೆ ಸವಿಸವಿ ಅಲ್ಲ ಭಯ ಭಯ ನೆನಪು.












Click it and Unblock the Notifications