ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಡಬಿದಿರೆಯಲ್ಲಿ ಆಳ್ವಾಸ್ ನುಡಿಸಿರಿಗೆ ವೈಭವದ ತೆರೆ

By ವರದಿ : ಶ್ರೀನಿಧಿ ಡಿಎಸ್, ಮೂಡಬಿದಿರೆ
|
Google Oneindia Kannada News

ಆಳ್ವಾಸ್ ನುಡಿಸಿರಿ 2008 ಮೂಡುಬಿದಿರೆಯಲ್ಲಿ ಭಾನುವಾರ ಸಮಾಪನಗೊಂಡಿತು. ಕನ್ನಡ ಮನಸ್ಸು - ಶಕ್ತಿ ಮತ್ತು ವ್ಯಾಪ್ತಿ ಎಂಬ ಪರಿಕಲ್ಪನೆ ಈ ಬಾರಿಯ ಸಮ್ಮೇಳನದ್ದಾಗಿತ್ತು.

ಮುಸ್ಲಿಂ ಬರಹಗಾರನೊಬ್ಬನ ಮನದ ಸಂವೇದನೆಗಳನ್ನು ಆಳ್ವಾಸ್ ನುಡಿಸಿರಿಯ ಕೊನೆಯ ದಿನದ ಬೆಳಗಿನ ಕಥಾಸಮಯದಲ್ಲಿ ಬೊಳುವಾರು ಮಹಮದ್ ಕುಂಞ್ ಅತ್ಯಂತ ಸಮರ್ಥವಾಗಿ ನಮ್ಮೆದುರು ಬಿಡಿಸಿಟ್ಟರು. ತಾನು ಏನು- ತನ್ನ ಬರವಣಿಗೆಯ ಉದ್ದೇಶಗಳೇನು ಎಂಬುದನ್ನು ವಿವರಿಸುತ್ತಲೇ ತನ್ನ ಸುತ್ತಲ ಸಮಾಜ ತನ್ನ ಮೇಲೆ ಬೀರಿದ ಪರಿಣಾಮಗಳನ್ನು ಬೊಳವಾರು ಚಿತ್ರಿಸಿದ ರೀತಿ ಅನನ್ಯ.

"ನನಗೆ ಹುಟ್ಟುವ ಮೊದಲೇ ಅರ್ಜಿ ಹಾಕುವ ಸೌಲಭ್ಯ ಇದ್ದಿದ್ದರೆ, ದಶರಥನ ಮಗ ರಾಮನಾಗಿಯೋ, ವಸುದೇವನ ಮಗನಾದ ಕೃಷ್ಣನಾಗಿಯೋ, ಶುದ್ಧೋದನನ ಮಗ ಬುದ್ಧನಾಗಿಯೋ ಹುಟ್ಟಿಸುವಂತೆ ಅಥವಾ ಕಡೇ ಪಕ್ಷ ಕರಮಚಂದನ ಮಗ ಮೋಹನದಾಸನಾಗುವಂತೆ ಅರ್ಜಿ ಹಾಕುತ್ತಿದ್ದೆ. ಆದರೆ ಆ ಸೌಲಭ್ಯ ಇರಲಿಲ್ಲ. ಹೀಗಾಗಿ ಪುತ್ತೂರಿನ, ಬೀಡಿ ಕಟ್ಟುವ ಅಬ್ಬಾಸ್ ಬ್ಯಾರಿಯ ಮಗನಾಗಿ ಹುಟ್ಟಬೇಕಾಯಿತು. ಹಾಗೆ ಹುಟ್ಟಿದ ಮೇಲೆ, ಅಬ್ಬಾಸ್ ಬ್ಯಾರಿಯ ನಿಲುವಿಗೆ ನಾನೂ ಬದ್ಧನಾಗಬೇಕಾಯಿತು, ಆತನ ಸಂಪ್ರದಾಯಗಳೇ ನನ್ನ ಸಂಪ್ರದಾಯಗಳಾಗಬೇಕಾಯಿತು" ಎಂದರು ಬೊಳುವಾರು.

ತಾವೇಕೆ ಬರೆಯ ಹೊರಟೆ ಮತ್ತು ತಾನು ಯಾವ ಶೈಲಿಯಲ್ಲಿ ಬರೆದೆ- ಅದಕ್ಕೆ ಕಾರಣಗಳೇನು ಎನ್ನುವುದನ್ನು ಬೊಳುವಾರು ಚೆನ್ನಾಗಿ ವಿವರಿಸಿದರು.

ಇದಕ್ಕೂ ಮೊದಲು ನಡೆದ ಗೋಷ್ಠಿಯಲ್ಲಿ 'ಕನ್ನಡ ಜಾನಪದ ಮತ್ತು ವ್ಯಾಪ್ತಿ- ಮಹಾಕಾವ್ಯಗಳು ಮತ್ತು ಕ್ರಿಯಾತ್ಮಕ ನೆಲೆ' ಕುರಿತು ಚರ್ಚೆಗಳು ಜರುಗಿದವು. ಡಾ.ತೀ.ನಂ.ಶಂಕರನಾರಾಯಣ ಮತ್ತು ಅಂಬಳಿಕೆ ಹಿರಿಯಣ್ಣ ವಿಚಾರ ಮಂಡಿಸಿದರು. ನೆರೆದ ಜನ ಆಸಕ್ತಿಯಿಂದ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದು, ಬಂದ ಪ್ರಶ್ನೆಗಳ ಮಹಾಪೂರದಲ್ಲೇ ಗೊತ್ತಾಯಿತು.

ಡಾ.ವಸಂತ ಕುಮಾರ ಪೆರ್ಲ ಅವರಿಂದ ಕವನ ವಾಚನ ಮತ್ತು ಎಂ.ಎಸ್. ಗಿರಿಧರ್ ಅವರ ತಂಡದಿಂದ ಗಾಯನ ನಡೆಯಿತು. ಭೋಜನ ವಿರಾಮದ ನಂತರ ನಾಡುನುಡಿಗಳ ಪ್ರೇಮ ಬಿಂಬಿಸುವ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ಜರುಗಿತು. ನಂತರ ಸಮಾರೋಪ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಕನ್ನಡ ನಾಡುನುಡಿಗೆ ಸೇವೆ ಸಲ್ಲಿಸಿದ ಹಲವು ಮಹನೀಯರಿಗೆ ಸನ್ಮಾನ ಮಾಡಲಾಯಿತು.

ಸಮಾರೋಪ ಸಮಾರಂಭ : ಕನ್ನಡ ಹಬ್ಬ ನುಡಿಸಿರಿಯ ಸಮಾರೋಪ ಸಮಾರಂಭ ಇಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ರತ್ನಾಕರ ವರ್ಣಿ ವೇದಿಕೆಯಲ್ಲಿ ಜರುಗಿತು. ಮೊದಲಿಗೆ ಸಮ್ಮೇಳನದ ಮಾಹಿತಿಯನ್ನ ಪಾದೇಕಲ್ಲು ವಿಷ್ಣು ಭಟ್ಟರು ನೀಡಿದರು. ನುಡಿಸಿರಿಯ ಭಿನ್ನ ಸಾಧ್ಯತೆಗಳ ಬಗ್ಗೆ ಮಾತನಾಡಿದ ಅವರು, ಹೇಗೆ ನುಡಿಸಿರಿಯನ್ನು ಮತ್ತೂ ಚಂದ ಮಾಡಬಹುದು ಎನ್ನುವುದರ ಬಗ್ಗೆ ಸಲಹೆಗಳನ್ನು ನೀಡಿದರು.

ನಾಡೋಜ ದರೋಜಿ ಈರಮ್ಮ, ಡಾ|ಸಾ.ಶಿ.ಮರುಳಯ್ಯ, ಹೊಸ್ತೋಟ ಮಂಜುನಾಥ ಭಾಗವತ, ಡಾ| ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಸದಾನಂದ ಸುವರ್ಣ, ಎ.ಈಶ್ವರಯ್ಯ, ವೈ.ಕೆ.ಮುದ್ದುಕೃಷ್ಣ, ನಾಗತಿಹಳ್ಳಿ ಚಂದ್ರಶೇಖರ ಇವರುಗಳ ಜೊತೆಗೆ ಬಹರೇನ್ ಕನ್ನಡ ಸಂಘಕ್ಕೆ 'ನುಡಿಸಿರಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮ್ಮಾನ ಸ್ವೀಕರಿಸಿದ ಗಣ್ಯರಿಗೆ ಆರತಿ ಎತ್ತಿ, ತಿಲಕವಿಟ್ಟು ಗೌರವಿಸಲಾಯಿತು. ಅವರುಗಳಿಗೆ ಧನ್ಯವಾದ ಹೇಳುವ ಹಾಡು, ಸನ್ನಿವೇಶವನ್ನು ಹೃದಯಸ್ಪರ್ಶಿಯನ್ನಾಗಿಸಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಗಣ್ಯರು, ನುಡಿಸಿರಿ ಹೇಗೆ ಕನ್ನಡ ಸಾಹಿತ್ಯದ ಬೆಳವಣಿಗೆ ಪೂರಕವಾಗುತ್ತಿದೆ ಮತ್ತು ಹೊಸ ತಲೆಮಾರಿಗೆ ಪ್ರೇರಕ ಶಕ್ತಿಯಾಗುತ್ತಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಧರ್ಮಸ್ಥಳದ ಧರ್ಮದರ್ಶಿ ವೀರೇಂದ್ರ ಹೆಗ್ಗಡೆಯವರು ಕನ್ನಡನಾಡಿನ ವೈಯುಕ್ತಿಕ ಸಂಸ್ಕೃತಿ ಉಳಿಸಲು ನುಡಿಸಿರಿಯಂತಹ ಆಪ್ತ ಸಮಾವೇಶಗಳು ಅತ್ಯಂತ ಅವಶ್ಯ ಎಂದು ಹೇಳಿದರು. ತಾವು ಧರ್ಮಸ್ಥಳದಲ್ಲಿ ನಡೆಸಿದ ಕನ್ನಡ ಸಾಹಿತ್ಯ ಸಮ್ಮೇಳನದ ದಿನಗಳನ್ನೂ ಅವರು ನೆನಪಿಸಿಕೊಂಡರು. ಮೋಹನ ಆಳ್ವರಂತಹ ಉತ್ಸಾಹ ಖಂಡಿತ ತನಗೆ ಬರದು ಎಂದು ಒಪ್ಪಿಕೊಂಡ ಅವರು, ನುಡಿಸಿರಿಯ ಸಮಸ್ತ ತಂಡಕ್ಕೆ ಶುಭ ಹಾರೈಸಿದರು.

ಸಮಾರೋಪ ಭಾಷಣ ಮಾಡಿದ ಮುಖ್ಯಮಂತ್ರಿ ಚಂದ್ರು, ಕನ್ನಡ ನಾಡುನುಡಿಯ ರಕ್ಷಣೆಯ ಸದ್ಯದ ಅವಶ್ಯಕತೆಗಳ ಬಗ್ಗೆ ಮಾತನಾಡಿದರು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಬಂದ ಹಿನ್ನೆಲೆ ಮತ್ತು ಅದಕ್ಕಾಗಿ ನಡೆದ ಹೋರಾಟಗಳ ಬಗ್ಗೆ ಕೂಡ ಅವರು ಪ್ರಸ್ತಾಪಿಸಿದರು. ಕೊನೆಯಲ್ಲಿ ಚೆನ್ನವೀರ ಕಣವಿಯವರು ಅಧ್ಯಕ್ಷ ಭಾಷಣ ಮಾಡಿ, ಈ ದೇಶದ ಚರಿತ್ರೆ ಮತ್ತು ಸಾಂಸ್ಕೃತಿಕ ಉನ್ನತಿಯನ್ನು ಅರ್ಥ ಮಾಡಿಕೊಳ್ಳದೇ ಹೋದರೆ ನಾವು ಮತ್ತಷ್ಟು ಅಧಃಪತನಕ್ಕೆ ಇಳಿಯುತ್ತೇವೆ, ಹೀಗಾಗಲು ಬಿಡಬಾರದು ಎಂದರು. ಧರ್ಮಗಳ ನಡುವಿನ ಬೆಂಕಿ ಆರಿಸ ಬೇಕಿದೆ, ಸಾಹಿತ್ಯ ಕೋಮುವಾದದ ಉಪಶಮನಕ್ಕೆ ಸಹಕರಿಸಬೇಕು ಎನ್ನುವ ಆಶಯ ವ್ಯಕ್ತಪಡಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X