ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟ ನ್ಯಾಯಮೂರ್ತಿ ಸೌಮಿತ್ರರಿಗೆ ಅರ್ಧಚಂದ್ರ?

By Staff
|
Google Oneindia Kannada News

Kolkata HC Judge Soumitra Senಭಾರತದಲ್ಲಿ ಇತ್ತೀಚೆಗೆ ನ್ಯಾಯಾಧೀಶರಲ್ಲಿ ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ನ್ಯಾಯಾಂಗದ ಪಾವಿತ್ರ್ಯದ ಬಗ್ಗೆ, ವಿಶ್ವಾಸಾರ್ಹತೆಯ ಬಗ್ಗೆ ಜನಸಾಮಾನ್ಯರಿಗೆ ಸಂಶಯಗಳೇಳುವಂತೆ ಮಾಡುತ್ತಿವೆ. ಈಗ ಕೊಲ್ಕತಾದ ನ್ಯಾಯಮೂರ್ತಿ ನೌಮಿತ್ರಸೇನ್ ಕಟಕಟೆಯಲ್ಲಿ ನಿಂತಿದ್ದಾರೆ. ನಿಷ್ಪಕ್ಷಪಾತವಾಗಿ ಇಂಥವರಿಗೆ ಶಿಕ್ಷೆಯಾದರೆ ಮಾತ್ರ ನ್ಯಾಯಾಂಗದ ಮೇಲೆ ಜನರಿಗೆ ನಂಬಿಕೆ ಮೂಡಲು ಸಾಧ್ಯ.

ಲೇಖನ : ಡಾ|| ಕೆ.ಎಸ್. ಶರ್ಮಾ, ಹುಬ್ಬಳ್ಳಿ

ಸ್ವಾತಂತ್ರ್ಯೋತ್ತರ ಭಾರತದಲ್ಲಿ ನ್ಯಾಯಾಂಗೀಯ ಸ್ವಾತಂತ್ರ್ಯದ ಹೆಸರಿನಲ್ಲಿ ನ್ಯಾಯಾಂಗೀಯ ಹೊಣೆಗಾರಿಕೆ ಪ್ರಶ್ನಾರ್ಥಕವಾಗುತ್ತಿರುವುದು ಕಂಡುಬರುತ್ತಿದೆ. ನ್ಯಾಯಾಂಗೀಯ ಕ್ರಿಯಾವಾದ ಹೆಚ್ಚುತ್ತಾ ಕಾರ್ಯಾಂಗ ಹಾಗೂ ಶಾಸಕಾಂಗಗಳ ಮೇಲೂ ಹಸ್ತಕ್ಷೇಪ ಮಾಡುವ ಒಲವುಗಳು ಒಂದೆಡೆ ಕಾಣಿಸಿಕೊಳ್ಳತೊಡಗಿದ್ದರೆ, ಇನ್ನೊಂದೆಡೆ ನ್ಯಾಯಾಧೀಶರ ಭ್ರಷ್ಟಾಚಾರ ಪ್ರಸಂಗಗಳು ಯಾವ ಸಭ್ಯರನ್ನೂ ತಲೆತಗ್ಗಿಸುವಂತೆ ಮಾಡುತ್ತಿವೆ. ಎಲ್ಲದಕ್ಕಿಂತ ಮುಖ್ಯವಾಗಿ ನ್ಯಾಯಾಂಗೀಯ ಪಾವಿತ್ರ್ಯತೆಯ ಭವಿತವ್ಯವೇನು? ಎಂಬ ಪ್ರಶ್ನೆ ಏಳುತ್ತಿದೆ.

ಅಂತೆಯೇ ಈ ಅವನತಿಗೆ ಮುಖ್ಯ ಕಾರಣ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ ಅಂತರ್ಗತವಾಗಿರುವ ನ್ಯೂನತೆಗಳು ಹಾಗೂ ನ್ಯಾಯಾಧೀಶರು ತಪ್ಪಿತಸ್ಥರೆಂದು ನಿರ್ಣಯವಾದ ಮೇಲೂ ಅವರಿಗೆ ಯಾವ ಶಿಕ್ಷೆ ವಿಧಿಸಬೇಕೆಂಬ ಪ್ರಶ್ನೆ. ಭಾರತೀಯ ಸಂವಿಧಾನದಲ್ಲಿ ವಿಧಿಸಿರುವ ಇಮ್‌ಪೀಚ್‌ಮೆಂಟ್ ವಿಧಾನದ ಅಪ್ರಾಯೋಗಿಕತೆಯು ನ್ಯಾಯಮೂರ್ತಿಗಳಿಗೆ ಶಿಕ್ಷೆ ನೀಡುವುದೇ ಅಸಾಧ್ಯವೇನೋ? ಎನ್ನುವಂತಾಗಿದೆ.

ಸ್ವಾತಂತ್ರ್ಯಾನಂತರದ ಅರುವತ್ತೊಂದು ವರುಷಗಳಲ್ಲಿ ಈವರೆಗೆ ಒಬ್ಬ ನ್ಯಾಯಮೂರ್ತಿಯನ್ನೂ ಸಂಸತ್ತು ಇಮ್‌ಪೀಚ್ ಮಾಡುವಲ್ಲಿ ಸಫಲವಾಗಿಲ್ಲ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ. ರಾಮಸ್ವಾಮಿ ತಪ್ಪಿತಸ್ಥರೆಂದು ಸರ್ವೋಚ್ಚ ನ್ಯಾಯಾಲಯ ನೇಮಿಸಿದ ವಿಚಾರಣಾ ಸಮಿತಿಯೇ ನಿರ್ಧರಿಸಿದ ಮೇಲೆಯೂ, ಇವರನ್ನು ಸಂಸತ್ತು ಇಂಪೀಚ್ ಮಾಡಲಾಗಲಿಲ್ಲ. ಅಂತೆಯೇ ಈವರೆಗೆ ಒಬ್ಬ ನ್ಯಾಯಮೂರ್ತಿಯೂ ಸಂಸತ್ತಿನಿಂದ ಇಂಪೀಚ್ ಆಗದೇ ಇರುವುದು ದುರಂತವಾದರೂ, ಅದು ವಾಸ್ತವಾಂಶ. ಬಹುಶಃ ಈಗ ಈ ಇಂಪೀಚ್‌ಮೆಂಟ್‌ನಲ್ಲಿ ಸಂಸತ್ತು ಯಶಸ್ವಿಯಾಗುವುದೇ? ಎಂಬ ಪ್ರಶ್ನೆ ಹಾಗೂ ಪರೀಕ್ಷಾಕಾಲ ಬಂದಿದೆ.

ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳಾದ ಕೆ.ಜಿ. ಬಾಲಕೃಷ್ಣನ್ ಇವರು ಕಲ್ಕತ್ತಾ ವರಿಷ್ಠ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸೌಮಿತ್ರಸೇನ್ ಇವರ ವಿರುದ್ಧ ಇಂಪೀಚ್‌ಮೆಂಟ್ ಪ್ರೊಸೀಡಿಂಗ್ಸ್ (ಸಾರ್ವಜನಿಕ ಅಧಿಕಾರಿಯನ್ನು ಪದದಿಂದ ಕೆಳಗಿಳಿಸುವ ಪ್ರಕ್ರಿಯೆ) ಜರುಗಿಸಲು ಶಿಫಾರಸು ಮಾಡಿದ್ದಾರೆ. ಇದು ಯಶಸ್ವಿಯಾಗುವುದೇ? ಎಂದು ಕಾದುನೋಡಬೇಕಾಗಿದೆ. ನ್ಯಾಯಾಧೀಶ ಸೌಮಿತ್ರಸೇನ್ ಇವರ ಪ್ರಕರಣ ಗಮನಾರ್ಹವಾಗಿದೆ. ಇವರು ವರಿಷ್ಠ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿದ್ದಾಗ,1993ರಲ್ಲಿ ಅವರನ್ನು ನ್ಯಾಯಾಲಯ ಒಂದು ಪ್ರಕರಣದಲ್ಲಿ ರಿಸೀವರ್ ಎಂದು ನೇಮಕಮಾಡಿತು. ಇದರಲ್ಲಿ ಸೌಮಿತ್ರಸೇನ್ ರೂ.24 ಲಕ್ಷ ಹಣವನ್ನು ಸ್ವೀಕರಿಸಿದ್ದು, ಈ ಹಣವನ್ನು ಸಂಬಂಧಪಟ್ಟ ಪ್ರಕರಣದ ಬ್ಯಾಂಕ್ ಖಾತೆಗೆ ತುಂಬಬೇಕಾಗಿತ್ತು. ಆದರೆ ಸೌಮಿತ್ರಸೇನ್ ಅದನ್ನು ತನ್ನ ವೈಯಕ್ತಿಕ ಖಾತೆಗೆ ಜಮಾಮಾಡಿಕೊಂಡಿದ್ದರು.

ಇದು ನ್ಯಾಯಾಲಯ ನಿಧಿಯನ್ನು ಮೋಸದಿಂದ ಸ್ವಂತಕ್ಕೆ ಬಳಸಿಕೊಂಡ ಕ್ರಿಮಿನಲ್ ಅಪರಾಧವೇ ಆಗಿತ್ತು. ಆದರೆ ಇದು ಎಲ್ಲರ ಕಣ್ಣು ತಪ್ಪಿಸಿಹೋಗಿತ್ತು. ಅಷ್ಟೇ ಅಲ್ಲ ಇವರನ್ನು ಅದೇ ವರಿಷ್ಠ ನ್ಯಾಯಾಲಯದ ನ್ಯಾಯಮೂರ್ತಿಗಳೆಂದು 2003ರಲ್ಲಿ ನೇಮಕ ಮಾಡಲಾಯಿತು. ಈ ನ್ಯಾಯವಾದಿ ಸೌಮಿತ್ರಸೇನ್ ವಿರುದ್ಧ ನ್ಯಾಯಾಲಯದ ನಿಧಿಯ ದುರುಪಯೊಗದ ಪ್ರಕರಣವಿದ್ದಾಗ ಹೇಗೆ ಇವರನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ಕೊಲೀಜಿಯಮ್ ಆಫ್ ಜಡ್ಜಸ್ ನೇಮಕಮಾಡಿದೆ? ಎಲ್ಲದಕ್ಕಿಂತ ವಿಚಿತ್ರವೆಂದರೆ, ಕಲ್ಕತ್ತಾ ವರಿಷ್ಠ ನ್ಯಾಯಾಲಯದ ಏಕಸದಸ್ಯಪೀಠ ಸೌಮಿತ್ರಸೇನ್ ಅವರು ರಿಸೀವರ್ ಆಗಿ ಸ್ವೀಕರಿಸಿದ್ದ ಮಾರಾಟದ ನಿಧಿಯನ್ನು ದುರುಪಯೋಗ ಪಡಿಸಿಕೊಂಡರೆಂಬ ಆರೋಪ ಸಾಬೀತಾಗಿದೆ ಎಂದು ತೀರ್ಪನ್ನಿತ್ತಿತು.

ಆದರೆ ಅದೇ ನ್ಯಾಯಾಲಯದ ವಿಭಾಗೀಯಪೀಠವು ಕಳೆದ ವರ್ಷ ಏಕನ್ಯಾಯಾಧೀಶರು ಮಾಡಿದ್ದ ಬಿರುಸಾದ ವಾಗ್ದಂಡನೆಯನ್ನು ತೊಡೆದುಹಾಕಿತ್ತು. ಆದರೆ ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳು ಪ್ರಧಾನಮಂತ್ರಿಗಳಿಗೆ ಪತ್ರವನ್ನು ಬರೆದು ನ್ಯಾಯಾಧೀಶ ಸೌಮಿತ್ರಸೇನ್ ವಿರುದ್ಧ ಇನ್-ಹೌಸ್ ವಿಚಾರಣೆಯು ತಪ್ಪಿತಸ್ಥನೆಂದು ತೀರ್ಮಾನಿಸಿದ್ದಾಗಿಯೂ ಇವರ ವಿರುದ್ಧ ಇಮ್‌ಪೀಚ್‌ಮೆಂಟ್ ಕ್ರಮ ಜರುಗಿಸಬೇಕೆಂದು ಶಿಫಾರಸು ಮಾಡಿದ್ದಾರೆ. ಅಂತೆಯೇ ಸಂಸತ್ತು ಈ ಇಂಪೀಚ್‌ಮೆಂಟ್ ಅನ್ನು ಯಶಸ್ವಿಯಾಗಿ ಮಾಡುವುದೇ? ಎಂದು ಕಾದುನೋಡಬೇಕಾಗಿದೆ. ಇದಾದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇಂಪೀಚ್ ಆದ ಮೊದಲ ನ್ಯಾಯಾಧೀಶ ಸೌಮಿತ್ರಸೇನ್ ಎಂದು ದಾಖಲಾಗುವುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X