ಕಾರಂತ ಸ್ಮರಣೆ,ರಂಗಗೀತೆಗಳ ಝೇಂಕಾರ
ವರದಿ : ಮವಾಸು, ಲಾಸ್ ಏಂಜಲೀಸ್
ದಕ್ಷಿಣ ಕ್ಯಾಲಿಫೋರ್ನಿಯಾದ ರಂಗಧ್ವನಿ ಬಳಗದ ಅಂಗಳದಲ್ಲಿ ಸೆ. 6ರ ಸಂಜೆ ಕನ್ನಡ ಆಧುನಿಕ ರಂಗಭೂಮಿಯ ಪ್ರಮುಖ ಪ್ರವರ್ತಕ ಬಿ.ವಿ.ಕಾರಂತರನ್ನು ಸ್ಮರಿಸುವ ಅಪರೂಪ ಕಾರ್ಯಕ್ರಮ ಲಾಸ್ ಏಂಜಲೀಸ್ ಜರುಗಿತು. ಸ್ಥಳೀಯ ರಂಗಕರ್ಮಿ ವಲ್ಲೀಶ ಶಾಸ್ತ್ರಿ ಅವರ ನೇತೃತ್ವದಲ್ಲಿ ರೂಪಿತಗೊಂಡ ಈ ಸರಳ ಕಲಾಪದಲ್ಲಿ ಬಿ.ವಿ.ಕಾರಂತರ ವಿರಳ ರಂಗಗೀತೆಗಳು ಝೇಂಕರಿಸಿದವು.
ರಂಗಪಟುಗಳಾದ ಟಿ ಎಸ್ ನಾಗಾಭರಣ ಮತ್ತು ಲೇಖಕ ಜಯಂತ್ ಕಾಯ್ಕಿಣಿ ಬಿ.ವಿ.ಕಾರಂತರ ಕುರಿತು ತಮ್ಮ ನುಡಿ ಮುಡಿಪುಗಳ ಜೊತೆ ಖ್ಯಾತ ರಂಗ ಗಾಯಕಿ ಕಲ್ಪನಾ ನಾಗಾನಾಥ್ ಅವರು ಕಾರಂತರ ವಿಶಿಷ್ಟ ಅಪರೂಪದ ವೈವಿಧ್ಯಪೂರ್ಣ ರಂಗಗೀತೆಗಳನ್ನು ಪ್ರಸ್ತುತಪಡಿಸಿದರು. ಈ ವೃಂದಗಾನದಲ್ಲಿ ನಾಗಿಣಿ ಭರಣ, ಲಲಿತಾ ಶ್ರೀನಿವಾಸ್, ರಾಮಕೃಷ್ಣರ ಜೊತೆ ಸ್ಥಳೀಯ ರಂಗಧ್ವನಿ ಬಳಗದ ವೀಣಾ ಅನಂತ್, ಅರ್ವೈನ್ ಶ್ರೀನಿ, ಕವಿತಾ ಕೊಟ್ರಪ್ಪ, ನಾರಾಯಣ ಕಶ್ಯಪ್ ಅವರೂ ದನಿಗೂಡಿಸಿದರು.
ರಂಗಧ್ವನಿ ಯ ರೂವಾರಿ ವಲ್ಲೀಶ ಶಾಸ್ತ್ರಿ ಬಿ.ವಿ.ಕಾರಂತರ ನೆನಪೇ ನಮ್ಮನ್ನು ನಮ್ಮ ರಂಗಾಸಕ್ತಿಯನ್ನು ಸಜೀವವಾಗಿ ಇಡಬಲ್ಲ ಶಕ್ತಿ ಎಂದು ತಮ್ಮ ಸ್ವಾಗತ ನುಡಿಗಳಲ್ಲಿ ಹೇಳಿದರು. ಕಲ್ಪನಾ ನಾಗಾನಾಥ್ ಮುಖ್ಯ ದನಿಯಾಗಿ ರಂಗಗೀತೆಗಳನ್ನು ಹಾಡಿದ ನಾಗಾಭರಣರು ಬಿ.ವಿ.ಕಾರಂತರು ದೆಹಲಿಯಿಂದ ಕನ್ನಡ ನಾಡಿಗೆ ಬಂದು ಇಡೀ ಕನ್ನಡ ರಂಗಭೂಮಿಗೆ ಹೊಸ ದಿಕ್ಕು ದೆಸೆಯನ್ನು ನೀಡಿ ಹೊಸದೊಂದು ಪರಂಪರೆಯನ್ನೇ ಹುಟ್ಟಿಸಿದ ಪರಿಯನ್ನು ನೆನೆಸಿಕೊಂಡರು. ಪರಂಪರೆ ಮತ್ತು ಆಧುನಿಕತೆಗಳ ಅದ್ಭುತ ಕೊಂಡಿಯಾಗಿದ್ದ ಕಾರಂತರು ಭವಿಷ್ಯದ ದಾರಿಯನ್ನು ಕೂಡ ಹಾಕಿ ಕೊಟ್ಟಿದ್ದಾರೆ. ಅದರ ಮೇಲೆ ಹೆಜ್ಜೆ ಹಾಕುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಇನ್ನೊಬ್ಬ ರಂಗತಜ್ಞ ಶ್ರೀನಿವಾಸ್ ಅವರು ಬಿ.ವಿ.ಕಾರಂತರ ನಿರಂತರ ಪ್ರಯೋಗಶೀಲತೆ, ಅಪ್ಪಟ ಪ್ರತಿಭೆಯನ್ನು ಬಿಂಬಿಸುವ ಹಲವು ಪ್ರಸಂಗಗಳನ್ನು ಆತ್ಮೀಯವಾಗಿ ಹಂಚಿಕೊಂಡರು. ತಮ್ಮನ್ನೇ ತಾವು ಲೇವಡಿ ಮಾಡಿಕೊಳ್ಳುವ ಗುಣ ಕಾರಂತರ ವಿಶೇಷವಾಗಿತ್ತು. ರಂಗಭೂಮಿ ಅನ್ನೋದು ಕೇವಲ ಚಟುವಟಿಕೆಯಾಗದೇ ಒಂದು ಚಳುವಳಿಯಾಗಬೇಕು ಎನ್ನುವುದು ಕಾರಂತರ ಎಲ್ಲ ಯತ್ನಗಳ ಮುಖ್ಯ ಪ್ರೇರಣೆ ಮತ್ತು ನಂಬಿಕೆ ಎಂದರು.
ರಂಗಭೂಮಿಯಲ್ಲಿ ರಿಮೇಕ್ ಇಲ್ಲ ಅಂದು ಮತ್ತೆ ಮತ್ತೆ ಹೇಳುತ್ತಿದ್ದರು ಕಾರಂತರು. ಸಿನಿಮಾ ಮನುಷ್ಯನನ್ನು ಬೃಹದಾಕಾರದಲ್ಲಿ ತೋರಿಸಿದರೆ, ಟೆಲಿವಿಷನ್ ಕುಬ್ಜವಾಗಿಸುತ್ತದೆ. ರಂಗಭೂಮಿ ಮಾತ್ರ, ಅವನನ್ನು ಅವನ ನಿಜ ಆಕಾರ, ರೂಪದಲ್ಲಿ ಬಿಂಬಿಸುತ್ತದೆ ಎಂದು ಕಾರಂತರು ಪ್ರತಿಪಾದಿಸಿದರು ಎಂದರು. ಕರಾವಳಿಯಲ್ಲಿ ಹುಟ್ಟಿ ಯಕ್ಷಗಾನದ ಬಹುಮುಖ ಸಂವೇದನೆಯಲ್ಲಿ ಬೆಳೆದ ಕಾರಂತರು ಕಂಪನಿ ನಾಟಕಗಳಲ್ಲಿ ಬೆಳೆದು ರಾಷ್ಟ್ರೀಯ ನೆಲೆಯಲ್ಲಿ ಆಧುನಿಕತೆಯ ಸನ್ಮಾನ ಪಡೆದು ತಮ್ಮದೇ ಆದ ದರ್ಶನವನ್ನು ರೂಪಿಸಿಕೊಂಡ ರೀತಿಯನ್ನು ಲೇಖಕ ಜಯಂತ್ ಕಾಯ್ಕಿಣಿ ಚಿತ್ರಿಸಿದರು.
ಕೇವಲ ಭೌದ್ಧಿಕ ಒಣ ಪ್ರಯೋಗಗಳಿಗಿಂತ ರಸವತ್ತಾದ ಅನುಭವವನ್ನು ಕೊಡುವ ಕಾರಂತರ ರಂಗಕಲ್ಪನೆಗೆ ಸಂಗೀತ ಮತ್ತು ಉತ್ಸವಗುಣ ಅನಿವಾರ್ಯವಾಗಿತ್ತು ಎಂದು ಅಭಿಪ್ರಾಯಪಟ್ಟರು. ಪ್ರತಿ ವ್ಯಕ್ತಿಯಲ್ಲೂ ವಿಶೇಷವನ್ನು ಕಾಣುವ ದೃಷ್ಟಿ ಹೊಂದಿದ್ದ ಕಾರಂತರು ಸುತ್ತಣ ಮನುಜಲೋಕದಲ್ಲಿ ತಳೆದ ಬೆರಗು ಬೇಂದ್ರೆಯವರ ಅಪ್ಪಟ ದೇಸಿ ಪ್ರತಿಭೆಗೆ ತೀರ ಹತ್ತಿರವಾದದ್ದು ಎಂದರು.
ಹಯವದನ , ಮಿಸ್ ಸದಾರಮೆ, ಪಂಜರ ಶಾಲೆ, ಸತ್ತವರ ನೆರಳು ಮುಂತಾದ ನಾಟಕಗಳಿಂದ ಆಯ್ದ ಮುತ್ತಿನಂಥ ಗೀತೆಗಳನ್ನು ತನ್ಮತೆಯಿಂದ ಹಾಡಿದ ಕಲ್ಪನಾ ನಾಗಾನಾಥ್, ಕಾರಂತರ ನೇಪಥ್ಯಕ್ಕೆ, ಮೇಳಕ್ಕೆ, ವೃಂದಕ್ಕೆ ಕೊಟ್ಟ ಸಮನಾದ ಪ್ರಾಮುಖ್ಯತೆ ಅವರ ರಂಗದರ್ಶನದ ಹೆಗ್ಗಳಿಕೆಯಾಗಿತ್ತು.












Click it and Unblock the Notifications