• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೀತಿಯ ತಂಗಿಯ ಮದುವೆಯಂಥ ಒಂದು ಕಾರ್ಯಕ್ರಮ !

By Staff
|
  • ರಘುನಾಥ ಚ.ಹ.
ಅದೊಂದು ಆಪರೇಷನ್‌ ಥಿಯೇಟರ್‌. ಅಲ್ಲಿದ್ದುದು ವೈದ್ಯರಲ್ಲ ; ಕಥೆಗಾರರು. ಆಪರೇಷನ್‌ ಥಿಯೇಟರ್‌ನಲ್ಲಿ ಕತ್ತರಿ ಇಕ್ಕಳಗಳೂ ಇರಲಿಲ್ಲ . ಇದ್ದುದು ಪುಸ್ತಕಗಳು. ಜೊತೆಗೊಂದು ಕಂಪ್ಯೂಟರ್‌, ಕಂಪ್ಯೂಟರ್‌ನಲ್ಲಿನ ಚಿತ್ರಗಳನ್ನು ಪ್ರತಿಬಿಂಬಿಸುತ್ತಿದ್ದ ಪರದೆ.

ಅದು ಪುಸ್ತಕ ಬಿಡುಗಡೆ ಕಾರ್ಯಕ್ರಮ; ಕಥೆಗಾರ ವಸುಧೇಂದ್ರ ಅವರ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ. ಪುಸ್ತಕ ಬಿಡುಗಡೆ ಮಾಡಲು ಬಂದಿದ್ದ ತ್ರಿಮೂರ್ತಿ ಕಥೆಗಾರರಲ್ಲೊಬ್ಬರಾದ ಕುಂ.ವೀರಭದ್ರಪ್ಪ ಅವರಿಗೆ ವೇದಿಕೆ ಆಪರೇಷನ್‌ ಥಿಯೇಟರ್‌ ಆಗಿ ಕಂಡಿದ್ದಕ್ಕೆ ಕಾರಣ, ಅಲ್ಲಿದ್ದ ಪರದೆ ಹಾಗೂ ಕಂಪ್ಯೂಟರ್‌. ಪುಸ್ತಕಗಳ ‘ಸಿಡಿ’ ರೂಪವನ್ನು ಬಿಡುಗಡೆ ಮಾಡಲು, ಅಳುಕುತ್ತಲೇ ಮೌಸ್‌ ಒತ್ತಿದ ಕುಂವೀ- ‘ಸದ್ಯ ಷಾಕ್‌ ಹೊಡೆಯಲಿಲ್ಲ’ ಎಂದು ನಕ್ಕರು. ‘ಜೀವನದಲ್ಲಿ ಕಂಪ್ಯೂಟರ್‌ ಮುಟ್ಟುತ್ತೇನೆ ಎಂದುಕೊಂಡಿರಲಿಲ್ಲ’ ಎಂದು ರೋಮಾಂಚಿತರಾದರು.

Vasudhendra’s three books and a CDಕುಂವೀ ಶೈಲಿಯೇ ಹಾಗೆ. ನೇರ ಮಾತು, ನೇರ ಬದುಕು. ಕುಂವೀ ಪಟ್ಟಣಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ. ಕಥೆ ಗಟ್ಟಿಯಾಗಿರಬೇಕೆಂದರೆ ಹಳ್ಳಿಯಲ್ಲಿಯೇ ಬದುಕಬೇಕು ಎಂದು ನಿರ್ಧರಿಸಿ ಕೊಟ್ಟೂರಿನಲ್ಲಿ ಶಿಕ್ಷಕರಾಗಿ ನೆಲೆ ನಿಂತವರು ಕುಂವೀ. ಹಳ್ಳಿಯಲ್ಲಿಯೇ ಉಳಿಯಲಿಕ್ಕಾಗಿ ಬಡ್ತಿಯನ್ನು ನಿರಾಕರಿಸಿದ ಅಪರೂಪದ ವ್ಯಕ್ತಿ . ಕುಂವೀ ಮಾತನಾಡುತ್ತಿದ್ದರೆ, ಅಲ್ಲೊಂದು ಅನುಭವದ ಲೋಕ ತೆರೆದುಕೊಳ್ಳುತ್ತದೆ, ನಗೆ ಹೊಳೆಯಾಗುತ್ತದೆ, ನಗುನಗುತ್ತಲೇ ವಿಷಾದವೊಂದು ಎದೆಗೆ ಸಂದಾಯವಾಗುತ್ತದೆ. ಅದು ಅವರ ಮಾತಿನ ಶಕ್ತಿ , ಜೀವನ ದ್ರವ್ಯವೇ ಮಾತಾದ ಶಕ್ತಿ .

ವಸುಧೇಂದ್ರರ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದದ್ದು ಜ.25ರ ಭಾನುವಾರ, ಬೆಂಗಳೂರಿನ ಭಾರತೀಯ ಸಾಂಸ್ಕೃತಿಕ ಸಂಸ್ಥೆಯ ಸಭಾಂಗಣದಲ್ಲಿ . ಬಿಡುಗಡೆಯಾದದ್ದು ಮೂರು ಪುಸ್ತಕ - ‘ಯುಗಾದಿ’ ಕಥಾ ಸಂಕಲನ, ‘ಕೋತಿಗಳು ಸಾರ್‌ ಕೋತಿಗಳು’ ಸುಲಲಿತ ಪ್ರಬಂಧಗಳ ಸಂಕಲನ ಹಾಗೂ ‘ಮಿಥುನ’ ಅನುವಾದಿತ ಕಥೆಗಳ ಸಂಕಲನ. ಹಿರಿಯ ಲೇಖಕಿ ವಸುಮತಿ ಉಡುವ ಕೊಳ್ಳುವ ಮೂಲಕ ಪುಸ್ತಕಗಳ ಬಿಡುಗಡೆಯನ್ನು ಔಪಚಾರಿಕವಾಗಿ ನಡೆಸಿದರು. ಕನ್ನಡದ ಶ್ರೇಷ್ಠ ಕಥೆಗಾರರ ಸಾಲಿಗೆ ಸೇರಿದ ಕೆ.ಸತ್ಯನಾರಾಯಣ, ಕುಂವೀ ಹಾಗೂ ಜಯಂತ ಕಾಯ್ಕಿಣಿ ಪುಸ್ತಕಗಳ ಕುರಿತು ಮಾತನಾಡಿದರು.

ಕನ್ನಡದಲ್ಲಿ ಆರ್ವೆಲ್‌ ಯಾಕಿಲ್ಲ ?

Vasudhendra‘ಕೋತಿಗಳು ಸಾರ್‌ ಕೋತಿಗಳು’ ಸಂಕಲನದ ಬಗ್ಗೆ ಮಾತನಾಡಿದ ಕಥೆಗಾರ ಕೆ.ಸತ್ಯನಾರಾಯಣ- ಕನ್ನಡದಲ್ಲಿ ಪ್ರಬಂಧ ಬರೆಯುವುದನ್ನೇ ಪೂರ್ಣಕಾಲಿಕ ಪ್ರವೃತ್ತಿಯನ್ನಾಗಿ ಸ್ವೀಕರಿಸಿದವರು ಕಡಿಮೆ, ಆ ಕಾರಣದಿಂದಲೇ ಆರ್ವೆಲ್‌ ಮಟ್ಟದ ಪ್ರಬಂಧಕಾರರು ಕನ್ನಡದಲ್ಲಿ ರೂಪುಗೊಳ್ಳಲಿಲ್ಲ ಎಂದು ಅಭಿಪ್ರಾಯಪಟ್ಟರು. ಕನ್ನಡದ ಉತ್ತಮ ಪ್ರಬಂಧಕಾರರಾದ ಕುವೆಂಪು, ಪುತಿನ. ಗೊರೂರು, ಮೂರ್ತಿರಾವ್‌ ಮುಂತಾದವರಿಗೆ ಕಥೆ, ಕವಿತೆ, ಇತ್ಯಾದಿಗಳೊಂದಿಗೆ ಪ್ರಬಂಧ ಕೂಡ ಒಂದು ಮಾಧ್ಯಮವಾಯಿತೇ ಹೊರತು ಪ್ರಬಂಧವೇ ಮುಖ್ಯವಾಗಲಿಲ್ಲ . ಈ ಕಾರಣದಿಂದಲೇ ಕನ್ನಡದಲ್ಲಿ ಅತ್ಯುತ್ತಮ ಎನ್ನಬಹುದಾದ ಪ್ರಬಂಧಗಳ ಬೆಳೆ ಹುಲುಸಾಗಲಿಲ್ಲ . ವಸುಧೇಂದ್ರ ಕೂಡ ಪ್ರಬಂಧದೊಂದಿಗೆ ಇತರ ಪ್ರಕಾರಗಳಲ್ಲೂ ಬರೆಯುತ್ತಾರೆ. ಪ್ರಬಂಧ ಮಾಧ್ಯಮದಲ್ಲೇ ತೀವ್ರವಾಗಿ ತೊಡಗಿದಲ್ಲಿ ಅವರು ಒಳ್ಳೆಯ ಪ್ರಬಂಧಗಳ ಬರೆಯಬಲ್ಲರು ಎಂದರು ಸತ್ಯನಾರಾಯಣ.

ಪ್ರಬಂಧಗಳ ಕುರಿತು ಪತ್ರಿಕೆಗಳು ಗಂಭೀರ ಧೋರಣೆ ಹೊಂದಿಲ್ಲ ದಿರುವ ಕುರಿತು ಸತ್ಯ ಆಕ್ಷೇಪ ವ್ಯಕ್ತಪಡಿಸಿದರು. ಅನೇಕ ವೇಳೆ ಒಳ್ಳೆಯ ಪ್ರಬಂಧಗಳನ್ನು ಹಾಸ್ಯ ಲೇಖನ ಎಂದು ಪ್ರಕಟಿಸುವ ಸಂಪಾದಕರ ಕುರಿತು, ಆ ಸಂದರ್ಭಗಳಲ್ಲಿ ಲೇಖಕರು ಅನುಭವಿಸುವ ಮುಜುಗರದ ಕುರಿತು ಹೇಳಿದರು.

ವಸುಧೇಂದ್ರಂರ ಪ್ರಬಂಧಗಳಲ್ಲಿನ ಸುಲಲಿತ ಭಾಷೆ ಹಾಗೂ ಶೈಲಿಯನ್ನು ಮೆಚ್ಚಿಕೊಂಡ ಸತ್ಯನಾರಾಯಣ- ‘ಕೋತಿಗಳು ಸಾರ್‌ ಕೋತಿಗಳು’ ಕನ್ನಡದಲ್ಲಿನ ಒಂದು ಒಳ್ಳೆಯ ಪ್ರಬಂಧ ಎಂದರು. ವಿಷಯದ ಬಗೆಗಿನ ಮಾಹಿತಿ, ಹಾಸ್ಯ, ಸುಲಲಿತ ಭಾಷೆ, ನೆನಪುಗಳ ದ್ರವ್ಯ-ಪ್ರತಿಯಾಂದೂ ಈ ಪ್ರಬಂಧದಲ್ಲಿ ಹದವಾಗಿದೆ. ತವರ ನೆನಪುಗಳನ್ನು ವರ್ತಮಾನದ ಹಿನ್ನೆಲೆಯಲ್ಲೂ ವಸುಧೇಂದ್ರ ಚರ್ಚಿಸಿದ್ದಾರೆ ಎಂದು ಸತ್ಯನಾರಾಯಣ ಅಭಿಪ್ರಾಯಪಟ್ಟರು.

‘ ವಸುಧೇಂದ್ರ ನೈಸ್‌. ಅವರ ಕಥೆಗಳೂ ನೈಸ್‌!’

‘ಮಿಥುನ’ ಸಂಕಲನದ ಕುರಿತು ಮಾತನಾಡಿದ ಕಥೆಗಾರ ಕು.ವೀರಭದ್ರಪ್ಪ - ಕಥೆಗಳನ್ನು ರೂಪಿಸುವ ಬಳ್ಳಾರಿ ಹಾಗೂ ಆಂಧ್ರದಲ್ಲಿನ ಸಾಂಸ್ಕೃತಿಕ ಪರಿಸರದ ಸಾದೃಶ್ಯ ವೈದೃಶ್ಯಗಳನ್ನು ಬಿಚ್ಚಿಟ್ಟರು. ವಸುಧೇಂದ್ರ ಅವರ ತವರು ಬಳ್ಳಾರಿ ಜಿಲ್ಲೆಯ ಸಂಡೂರು. ದಟ್ಟ ದಾರಿದ್ರ್ಯದ, ಮಳೆಯೆಂಬುದು ಗುಳೆ ಹೋಗಿರುವ, ರಿಸರ್ವ್‌ ಜಾಲಿಯೆಂಬ ಮುಳ್ಳುಗಿಡಗಳ ಮೂಲಕ ಸಸ್ಯ ಶ್ಯಾಮಲೆ ಅನ್ನಿಸಿಕೊಂಡ ಜಿಲ್ಲೆ ಬಳ್ಳಾರಿ. ಈ ಜಿಲ್ಲೆಯಿಂದ ಬಂದಿರುವ ವಸುಧೇಂದ್ರ ನೈಸ್‌. ಅವರ ಕಥೆಗಳೂ ನೈಸ್‌! ಎಂದು ಕುಂವೀ ಬಣ್ಣಿಸಿದರು.

ಆಂಧ್ರದಲ್ಲಿ ವಾರಕ್ಕೊಂದು ಕೊಲೆಯಾಗದಿದ್ದರೆ ಅಲ್ಲಿಯ ಜನ ಅಸ್ವಸ್ಥರಾಗುತ್ತಾರೆ. ಸಿನಿಮಾ, ಜಮೀನ್ದಾರಿ ಪದ್ಧತಿ, ಬಡತನ, ಜಾತಿ ಮುಂತಾದವುಗಳಿರುವ ಆಂಧ್ರದಲ್ಲಿ ನೈಸ್‌ ಎಂಬುದೇ ಇಲ್ಲ . ಲೇಖಕನಿಗೆ ಬಹಳ ಫಲವತ್ತಾದ ನೆಲವದು. ಪಿವಿಎನ್‌, ವಿಶ್ವನಾಥ್‌ ಸತ್ಯಣ್ಣ, ಮುನಿಪಲ್ಲಿ , ಕೃಷ್ಣಾರೆಡ್ಡಿ , ಸಿ.ನಾರಾಯಣರೆಡ್ಡಿ ಮುಂತಾದ ಒಳ್ಳೆಯ ಸಾಹಿತಿಗಳು ಅಲ್ಲಿದ್ದಾರೆ. ಇವರೊಂದಿಗೆ- ಶ್ರೀಶ್ರೀ, ವರವರರಾವ್‌, ಅಜಂತ, ಗದ್ದರ್‌ ಮುಂತಾದ, ಒಂದು ಕಾಲು ಜೈಲಿನಲ್ಲಿಟ್ಟು ಇನ್ನೊಂದು ಕಾಲು ಸಮಾಜದಲ್ಲಿಟ್ಟ ಸಾಹಿತಿಗಳೂ ಅಲ್ಲಿದ್ದಾರೆ. ಸಾಹಿತ್ಯ ಅವರಿಗೆ ತಂತ್ರವಲ್ಲ , ಆಯುಧ. ಬಳಸು ದಾರಿ ಅವರಿಗೆ ಗೊತ್ತಿಲ್ಲ ; ಹೇಳುವುದು ನೇರವಾಗಿರಬೇಕು, ಅದು ಜನರ ಎದೆಗೇ ನೇರವಾಗಿ ಮುಟ್ಟಬೇಕು ಎನ್ನುವುದವರ ನಿಲುವು. ಅವರದು ಸ್ಫೋಟಕ ಸಾಹಿತ್ಯ.

ಆಂಧ್ರದಲ್ಲಿ ವಿರೋಧಾಭಾಸದ ಸಂಗತಿಗಳೂ ಸಾಕಷ್ಟಿವೆ. ಸಾಹಿತಿ ಶ್ರೀಶ್ರೀ ಅವರಿಗೆ ಆಂಧ್ರಪ್ರದೇಶ ಸರ್ಕಾರ ಕೆಲವು ಲಕ್ಷ ರುಪಾಯಿಗಳ ಭಾರೀ ಬಹುಮಾನ ಘೋಷಿಸಿದಾಗ ಪ್ರಶಸ್ತಿ ನಿರಾಕರಿಸುವಂತೆ ಅಭಿಮಾನಿಗಳು ಒತ್ತಾಯಿಸಿದರು. ಆದರೆ ಹಣದ ಅಗತ್ಯವಿದ್ದ ಶ್ರೀಶ್ರೀ ಪ್ರಶಸ್ತಿ ಸ್ವೀಕರಿಸಲು ಮುಂದಾದರು. ಆಗ ಶ್ರೀಶ್ರೀ ಅವರನ್ನು ಅಪಹರಿಸಿದ ಅಭಿಮಾನಿಗಳು, ಪ್ರಶಸ್ತಿ ಸಮಾರಂಭ ಮುಗಿಯುವವರೆಗೂ ಅವರನ್ನು ಅಡಗಿಸಿಟ್ಟಿದ್ದರು. ಈ ರೀತಿಯ ಸಂಗತಿಗಳು ಆಂಧ್ರದಲ್ಲಿ ನಿತ್ಯ ನಡೆಯುತ್ತಿರುತ್ತವೆ ಎಂದು ಕುಂವೀ ಬಣ್ಣಿಸಿದರು.

ಸ್ಫೋಟಕ ಸಾಹಿತ್ಯವೇ ಮೇಲುಗೈಯಾದ ತೆಲುಗು ನೆಲದಲ್ಲಿ ಶ್ರೀರಮಣರದು ವಿಶಿಷ್ಠ ದನಿ, ಮೆಲುದನಿ. ಶ್ರೀರಮಣ ಬರೆದಿರುವುದು ಐದಾರು ಕಥೆಗಳನ್ನು ಮಾತ್ರ. ಅಷ್ಟೂ ಒಳ್ಳೆಯ ಕಥೆಗಳು. ಮಿಥುನ ಜೀವನಪ್ರೀತಿಯನ್ನು ಉಕ್ಕಿಸುವ ಕಥೆ. ಬಂಗಾರದ ಕಡಗ ಇನ್ನೊಂದು ಒಳ್ಳೆಯ ಕಥೆ. ಈ ಕಥೆಗಳನ್ನು ವಸುಧೇಂದ್ರ ಸಮರ್ಥವಾಗಿ ಅನುವಾದಿಸಿದ್ದಾರೆ. ಇಲ್ಲಿನ ಕಥೆಗಳು ಅಗ್ರಹಾರದ ಚೌಕಟ್ಟುಳ್ಳವು. ಜನರು ದೀಪಸದೃಶ ಬದುಕಿನವರು. ಶ್ರೀರಮಣರ ಕಥೆಗಳನ್ನು ವಸುಧೇಂದ್ರ ಕನ್ನಡಕ್ಕೆ ತರುವಾಗ ಅನೇಕ ನುಡಿಗಟ್ಟುಗಳನ್ನು ಬಳಸಿದ್ದಾರೆ. ಅವರು ಇನ್ನಷ್ಟು ಒಳ್ಳೆಯ ಕಥೆಗಳನ್ನು ಬರೆಯಲಿ, ಅನುವಾದಿಸಲಿ ಎಂದು ಕುಂವೀ ಹಾರೈಸಿದರು.

ಪ್ರೀತಿಯ ತಂಗಿಯ ಮದುವೆಯಂತೆ... !

‘ಯುಗಾದಿ’ ಸಂಕಲನದ ಬಗ್ಗೆ ಮಾತನಾಡಿದ ಜಯಂತ ಕಾಯ್ಕಿಣಿ ಮುಖ್ಯವಾಗಿ ಗುರ್ತಿಸಿದ್ದು - ಕೊಟ್ಟೂರಿನಿಂದ ಐಟಿ ಜಗತ್ತಿನ ತಲ್ಲಣಗಳವರೆಗಿನ ಕಥೆಗಾರನ ಪಯಣವನ್ನು. ವರ್ತಮಾನದ ತವಕ ತಲ್ಲಣಗಳಿಗೆ ಮುಖಾಮುಖಿಯಾಗಿ ವಸುಧೇಂದ್ರ ಬರೆಯುತ್ತಿದ್ದಾರೆ.

ಒಂದೆಡೆ ತವರು, ಇನ್ನೊಂದೆಡೆ ಐಟಿ ಯುಗದ ತಲ್ಲಣಗಳು ‘ಯುಗಾದಿ’ಯಲ್ಲಿ ಕಥೆಗಳಾಗಿವೆ. ‘ಯುಗಾದಿ’, ‘ಆರ್ತನಾದದಲ್ಲಿ ಅಪಸ್ವರ’, ‘ಹುಲಿಗೆ ಕಾಡೇ ರಕ್ಷೆ , ಕಾಡಿಗೆ ಹುಲಿಯೇ ರಕ್ಷೆ’ ಕಥೆಗಳು ಓದುಗನನ್ನು ತಲ್ಲಣಗೊಳಿಸುತ್ತವೆ. ಪುಸ್ತಕ ಸೊಗಸಾಗಿದೆ. ಮುಖಪುಟ ಆಪ್ತವಾಗಿದೆ. ಪ್ರೀತಿಯ ತಂಗಿಯ ಮದುವೆ ಮಾಡಿದಂತೆ, ಒಂದಷ್ಟು ಗೆಳೆಯರು (ವಸುಧೇಂದ್ರ, ಅಪಾರ, ಸೃಜನ್‌) ಅಕ್ಕರೆಯಿಂದ ಪುಸ್ತಕದ ಪುಟಪುಟಗಳನ್ನೂ ರೂಪಿಸಿದ್ದಾರೆ. ಬೆಲೆಯೂ ಓದುಗನಿಗೆ ಹಿತವಾಗಿದೆ. ಒಳ್ಳೆ ಪುಸ್ತಕ ಚಳವಳಿಗೆ ಈ ಕಾರ್ಯಕ್ರಮ ನಾಂದಿಯಾಗಲಿ ಎಂದು ಕಾಯ್ಕಿಣಿ ಆಶಿಸಿದರು.

ಈ ತಲೆಮಾರಿನ ಜನಾಂಗ ಅನುಭವಿಸಿದಷ್ಟು ತಲ್ಲಣಗಳನ್ನು ಯಾರೂ ಅನುಭವಿಸಿಲ್ಲ . ಸಾಮಾಜಿಕ ಲಜ್ಜೆ ಇಲ್ಲವಾದಂಥ, ದೇಶ ಭ್ರಷ್ಟವಾದಂಥ, ಪಾಲಕರು ಭ್ರಷ್ಟವಾದಂಥ ಯುಗವಿದು. ಡೈನಿಂಗ್‌ ಟೇಬಲ್‌ ಮೇಲೆ ಫ್ರೂಟ್‌ ಸಲಾಡ್‌ ಇದೆ, ಪೀಡ್ಜಾ ಇದೆ, ಜೊತೆಗೆ ಮೌನವೂ ಇದೆ. ಮಕ್ಕಳಿಗೆ ಪಾಲಕರ ಭ್ರಷ್ಟತನದ ಅರಿವಿರುವುದೇ ಈ ಮೌನಕ್ಕೆ ಕಾರಣ. ಇಂಥ ತಲ್ಲಣಗಳನ್ನು ಮೌನದ ಒಳನೆಲೆಗಳನ್ನು ಸಾಹಿತ್ಯ ಒಳಗೊಳ್ಳಬೇಕು. ಕಥೆಗಳು ನಮ್ಮೊಳಗಿನ ಪರಿಧಿಗಳನ್ನು ವಿಸ್ತರಿಸಬೇಕು. ಆದರೆ ಇತ್ತೀಚಿನ ಕಥೆಗಳು ವಾಚಕರ ವಾಣಿಗೆ ಪತ್ರ ಬರೆದಂತೆ ಕಾಣುತ್ತವೆ ಎಂದು ಕಾಯ್ಕಿಣಿ ಹೇಳಿದರು.

ಕುಂವೀ-ಸತ್ಯನಾರಾಯಣ-ಕಾಯ್ಕಿಣಿ : ತ್ರಿಮೂರ್ತಿಗಳ ಅಪರೂಪದ ಸಂಗಮವದು. ಸಂಭ್ರಮಿಸಿದ ಸಹೃದಯರ ಸಂಖ್ಯೆಯೂ ದೊಡ್ಡದಿತ್ತು .

ಕಥೆಗಾರ ಅಶೋಕ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರರಾವ್‌ ದಂಪತಿಗಳು, ಚಿತ್ರಕಾರ ಸೃಜನ್‌, ವಿಶ್ವಕನ್ನಡ.ಕಾಂನ ಪವನಜ, ಹೈದ್ರಾಬಾದ್‌ ಕರ್ನಾಟಕ ಸೀಮೆಯ ಭರವಸೆಯ ಕವಿ ವಿಕ್ರಮ ವಿಸಾಜಿ, ವಸುಮತಿ ಉಡುಪ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ವಾರ್ತಾ ಸಂಚಯ
ತ್ರಿವಳಿ ಪುಸ್ತಕ-ಸಿಡಿ ತಟ್ಟೆ ಸಂಭ್ರಮ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more