• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಬ್ಬಣ್ಣ : ದಿಲ್ಲಿ ಶಾಲೆಯ ಧೀಮಂತ ಕಲಾವಿದ

By Staff
|
  • ವಸಂತ ಶೆಟ್ಟಿ, ಬಳ್ಳಾರಿ

‘ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬ ಮಾತನ್ನು ಯಾರೋ ನಮ್ಮ ಸುಬ್ಬಣ್ಣನವರನ್ನು ನೋಡಿಯೇ ಹೇಳಿರಬೇಕು. ಎಲೆಮರೆಯ ಕಾಯಿಯಂತೆ ಅವರು ಪ್ರಚಾರದಿಂದ ದೂರವಾಗಿದ್ದುಕೊಂಡೇ ತಮ್ಮ ಮಹತ್ಸಾಧನೆಯನ್ನು ಸಾಧಿಸಿದ್ದಾರೆ. ದೆಹಲಿ ಕನ್ನಡ ಶಾಲೆಯಲ್ಲಿ ನಾನು ಅವರನ್ನು ಸಾಕಷ್ಟು ಬಾರಿ ಕಂಡಿದ್ದೇನೆ, ಮುಗುಳ್ನಗುವಿನ ಗೌರವವನ್ನೂ ಹಂಚಿಕೊಂಡಿದ್ದೇನೆ. ಆದರೆ, ಅವರು ಇಷ್ಟು ದೊಡ್ಡ ವ್ಯಕ್ತಿತ್ವವೆಂದೇ ಗೊತ್ತೇಯಿರಲಿಲ್ಲ. ಅವರು ತಮ್ಮ ಕಲೆಯನ್ನು ನಮ್ಮ ದೆಹಲಿ ಕನ್ನಡ ಶಾಲಾ ಮಕ್ಕಳಿಗೂ ತಮ್ಮ ಹೃತ್ಕಮಲದಿಂದ ಹೀಗೆಯೇ ಉದಾರವಾಗಿ ಧಾರೆಯೆರೆಯಲೆಂದು ಮನಸಾ ಹಾರೈಸುವೆ.

ಕುಳ್ಳನೆ ಆಸಾಮಿ, ಗಡ್ಡಧಾರಿ. ನೋಡಲು ಕ್ಯೂಬಾದ ಕ್ರಾಂತಿಕಾರಿಯಂತೆ, ಛೆಗ್ವಾರನಂತೆ ಕಾಣುವ ಸದಾ ಹಸನ್ಮುಖಿಯಾಗಿರುವ ಕೆ. ಆರ್‌. ಸುಬ್ಬಣ್ಣ ದೆಹಲಿಯ ಕನ್ನಡಿಗರಿಗೆ ದೆಹಲಿ ಕನ್ನಡಶಾಲೆಯ ಚಿತ್ರಕಲಾ ಅಧ್ಯಾಪಕರಾಗಿ ಪರಿಚಯ. ಎಲ್ಲರನ್ನು ತುಂಬು ಅಕ್ಕರೆಯಿಂದ ಮಾತಾಡಿಸುವ, ಮೃದುಭಾಷಿ, ಪ್ರಚಾರದಿಂದ ದೂರವಿರುವ, ಕಲೆಯನ್ನೇ ಉಸಿರಾಗಿಸಿಕೊಂಡ ಸುಬ್ಬಣ್ಣ ಅವರ ಬಣ್ಣ ಬಣ್ಣದ ವ್ಯಕ್ತಿತ್ವ ಮತ್ತು ಸಾಧನೆ ವಿಶಾಲ ಜಗತ್ತಿನ ಬಹುತೇಕ ಕನ್ನಡಿಗರಿಗೆ ತಿಳಿಯದು.

Dilli Subbanna1984 ರಲ್ಲಿ ಲಲಿತ ಕಲಾ ಅಕಾಡೆಮಿಯ ರಾಷ್ಟ್ರ ಪ್ರಶಸ್ತಿ ಪಡೆದಿರುವ ಕೆ.ಆರ್‌. ಸುಬ್ಬಣ್ಣ ಅವರು ಮೂಲತಃ ಶಿವಮೊಗ್ಗದ ಸೊರಬದವರು. 1978 ರಿಂದ ದೆಹಲಿ ವಾಸಿಯಾಗಿರುವ ಇವರು ದಾವಣಗೆರೆಯ ಕಲಾ ಶಾಲೆಯಿಂದ ಡಿಪ್ಲೊಮಾ; ದೆಹಲಿಯ ಕಾಲೇಜ್‌ ಆಫ್‌ ಆರ್ಟ್ಸನಿಂದ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಭಾರತದ ಎಲ್ಲೆಡೆ ಇವರ ಕಲಾಕೃತಿಗಳು ಪ್ರದರ್ಶನಗೊಂಡಿದ್ದು ಮಾತ್ರವಲ್ಲದೆ ಫ್ರಾನ್ಸ್‌, ಇಂಗ್ಲೆಂಡ್‌, ದಕ್ಷಿಣ ಕೋರಿಯಾ, ಕೆನಡಾ, ನೇಪಾಲ, ಟೋಕಿಯೋ, ಡೆನ್ಮಾರ್ಕ್‌, ಸ್ವೀಡನ್‌, ಜರ್ಮನಿಗಳಲ್ಲಿ ಅವರ ಕೃತಿಗಳು ಪ್ರದರ್ಶನಗೊಂಡು ವಿಮರ್ಶಕರಿಂದ ಪ್ರಶಂಸಿಸಲ್ಪಟ್ಟಿವೆ. ಅಂತರಾಷ್ಟ್ರೀಯ ಗ್ರಾಫಿಕ್ಸ್‌ ಪ್ರಿಂಟ್ಸ್‌ ಪ್ರದರ್ಶನವನ್ನು ಅಮೇರಿಕದ ಮ್ಯಾನ್‌ ಹಟನ್‌ ಗ್ರಾಫಿಕ್‌ ಕಾರ್ಯಾಗಾರದಲ್ಲಿ 2004 ರ ಫ್ರೆಬ್ರುವರಿಯಲ್ಲಿ ಸುಬ್ಬಣ್ಣನವರು ಅಯೋಜಿಸಿದ್ದರು. ಈ ವರ್ಷದ ನವಂಬರ್‌ ತಿಂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸುಮಾರು ಎಪ್ಪತ್ತೈದು ಭಾರತದ ಖ್ಯಾತ ಕಲಾವಿದರು ಹಾಗು ಅಮೇರಿಕಾದ ಎಪ್ಪತ್ತೈದು ಖ್ಯಾತ ಕಲಾವಿದರು ಭಾಗವಹಿಸಲಿರುವ ಗ್ರಾಫಿಕ್‌ ಪ್ರದರ್ಶನವನ್ನು ಸುಬ್ಬಣ್ಣನವರು ದೆಹಲಿಯಲ್ಲಿ ಆಯೋಜಿಸುತ್ತಿದ್ದಾರೆ.

ಕಲಾವಿದ ಸುಬ್ಬಣ್ಣ ಅವರು ದೇಶದ ನಾನಾ ಎಡೆಗಳಲ್ಲಿ ತರಬೇತಿ ಶಿಬಿರಗಳನ್ನು ಏರ್ಪಡಿಸಿ, ಹೊಸ ಕಲಾವಿದರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ದೆಹಲಿ ಕನ್ನಡಿಗರು ಸುಬ್ಬಣ್ಣ ಅವರನ್ನು ಗುರುತಿಸಿಕೊಂಡದ್ದು ಕಡಿಮೆಯಾದರೂ, ರಾಷ್ಟ್ರೀಯ ಹಾಗೂ ಅಂತರ್‌ ರಾಷ್ಟ್ರೀಯಮಟ್ಟದಲ್ಲಿ ಒಬ್ಬ ಮೇರುಮಟ್ಟದ ಕಲಾವಿದನಾಗಿ ಗುರುತಿಸಲ್ಪಟ್ಟಿದ್ದಾರೆ. ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿಯು ನಡೆಸಿದ 13ನೇ ವಾರ್ಷಿಕ ಕಲಾ ಪ್ರದರ್ಶನದಲ್ಲಿ ಇವರಿಗೆ ರಾಜ್ಯಪ್ರಶಸ್ತಿ ಸಂದಿದೆ. ಹೈದರಾಬಾದಿನಲ್ಲಿ ನಡೆದ ಏಳನೆಯ ಗ್ರಾಫಿಕ್‌ ಪ್ರದರ್ಶನದಲ್ಲಿ ವಾರ್ಷಿಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಫ್ರಾನ್ಸ್‌ ಸರ್ಕಾರದ ಶಿಷ್ಯವೇತನ, ಭಾರತ ಸರಕಾರದ ಸಂಸ್ಕೃತಿ ಇಲಾಖೆಯ ಶಿಷ್ಯವೇತನ ಮತ್ತು ಬ್ರಿಟನ್ನಿನ ಚಾರ್ಲ್ಸ್‌ವೆಲೇಸ್‌ ಶಿಷ್ಯವೇತನಗಳು ಸುಬ್ಬಣ್ಣ ಅವರನ್ನು ತಾವಾಗಿಯೇ ಹುಡುಕಿಕೊಂಡು ಬಂದಿವೆ.

Subbannas art work Subbannas art work

ದೆಹಲಿಯ ಏಕೈಕ ಕನ್ನಡದ ವಿದ್ಯಾಸಂಸ್ಥೆಯಾದ, ದೆಹಲಿ ಕನ್ನಡ ಶಾಲೆಯಲ್ಲಿ ಚಿತ್ರಕಲಾ ಅಧ್ಯಾಪಕರಾಗಿ ದುಡಿಯುತ್ತಿರುವ ಸುಬ್ಬಣ್ಣ, ಕೇಂದ್ರ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ, ಲಲಿತಕಲಾ ಅಕಾಡೆಮಿಯ ಹಣಕಾಸು ಸಮಿತಿಯ ಸದಸ್ಯರಾಗಿ, ಲಲಿತಕಲಾ ಅಕಾಡೆಮಿಯ ದೆಹಲಿ ವಲಯದ ಸಲಹಾಕಾರರಾಗಿ, ಇಂಡಿಯನ್‌ ಪ್ರಿಂಟ್‌ ಮೇಕರ್ಸ್‌ ಗಿಲ್ಡನ್‌ ಕಾರ್ಯದರ್ಶಿಯಾಗಿ ಇಂಗ್ಲೆಂಡ್‌ ಮತ್ತು ಡೆನ್ಮಾರ್ಕ್‌ ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕಲಾಕೃತಿಗಳ ಬಗ್ಗೆ ಡಾಕ್ಯೂಮೆಂಟರಿ ಫಿಲ್ಮ್‌, ಭಾರತೀಯ ಮತ್ತು ಅಂತಾರಾಷ್ಟ್ರೀಯ ಕಿರುತೆರೆಯಲ್ಲಿ ಪ್ರಸಾರಗೊಂಡಿದೆ.

ದೆಹಲಿಯ ಲಲಿತ ಕಲಾ ಅಕಾಡೆಮಿ, ಬೆಂಗಳೂರಿನ ಲಲಿತಕಲಾ ಅಕಾಡೆಮಿ, ಹೈದರಾಬಾದಿನ ಲಲಿತಕಲಾ ಅಕಾಡೆಮಿ, ಮೈಸೂರಿನ ಜಾನಪದ ವಸ್ತುಸಂಗ್ರಹಾಲಯ, ನೇಪಾಲದ ಸೋಲಿಟಿ ಒಬೆರೈ, ಡೆನ್ಮಾರ್ಕಿನ ಡೆಟ್‌ಗ್ರಾಫಿಸ್ಕೆ ಹೀಗೆ ಹಲವೆಡೆ ಸುಬ್ಬಣ್ಣನವರ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.

ಚಿತ್ರಕಲೆಯಲ್ಲದೆ ಸುಬ್ಬಣ್ಣ ಅವರಿಗೆ ಸಂಗೀತ ಮತ್ತು ನಾಟಕಗಳಲ್ಲಿ ಕೂಡಾ ವಿಶೇಷ ಆಸಕ್ತಿ. ಬಿ.ವಿ.ಕಾರಂತರ ನಾಟಕಗಳು, ಹಾಗೂ ಇತರ ಹಲವು ನಾಟಕಗಳಲ್ಲಿ ಅಭಿನಯಿಸಿರುವದಲ್ಲದೇ ರಂಗದ ಹಿಂದೆ ಕೂಡಾ ಅಷ್ಟೇ ಪರಿಣಿತರು. ಮಕ್ಕಳಿಗಾಗಿ ರಂಗ ತರಬೇತಿ ಶಿಬಿರವನ್ನು ನಡೆಸಿ ಹಲವಾರು ಕಿರು ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶಿಸಿದ್ದಾರೆ.

ಕೇಂದ್ರ ಲಲಿತಕಲಾ ಅಕಡೆಮಿಯ ದಕ್ಷಿಣ ದೆಹಲಿಯ ‘ಈಸ್ಟ್‌ ಆಫ್‌ ಕೈಲಾಶ್‌’ದ ಕಲಾಗ್ರಾಮದಲ್ಲಿ ಸುಬ್ಬಣ್ಣನವರು ಪ್ರತಿದಿನ ತಮ್ಮ ಶಾಲಾ ಕೆಲಸಗಳ ನಂತರ ಕಲಾಕೈಂಕರ್ಯವನ್ನು ಮುಂದುವರೆಸುತ್ತಾರೆ. ಈ ಕಲಾಗ್ರಾಮಕ್ಕೆ ಹೋದರೆ ನೀವು ಅವರು ರಚಿಸಿದ ಕಲಾಕೃತಿಗಳ ಜೊತೆಗೆ ಕಲಾಕೃತಿಗೆ ಜೀವ ಕೊಡುತ್ತಿರುವ ಸುಬ್ಬಣ್ಣವನರನ್ನು ಕಾಣಬಹುದು. ಕಾಣಿರಿ.

(ಸೌಜನ್ಯ : ‘ಅಭಿಮತ ’ : ದೆಹಲಿ ಕನ್ನಡ ಸಂಘದ ಪುರವಣಿ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more