ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಚೀತೀರ್ಥದಾಳದಲ್ಲಿ ಶಕುಂತಲೆಯ ಉಂಗುರ..

By Staff
|
Google Oneindia Kannada News
ಶಾಪಗ್ರಸ್ತರ ಪೈಕಿ ಅತ್ಯಂತ ಕುತೂಹಲಕಾರಿ ಕತೆಯೆಂದರೆ ಶಕುಂತಲೆಯದು. ಈ ಕತೆಯಾಳಗೆ ಪ್ರೇಮ, ವಿರಹ, ತಂದೆ-ಮಗಳ ಪ್ರೀತಿ, ಗೆಳೆತನ, ಮರೆವು ಎಲ್ಲವೂ ಬರುತ್ತದೆ. ಪ್ರೇಮದಷ್ಟೇ ಕ್ರೌರ್ಯ, ಸಾತ್ವಿಕತೆಯಷ್ಟೇ ದರ್ಪ ತುಂಬಿಕೊಂಡಿರುವ ಕತೆಯಿದು.

ಶಕುಂತಲೆಯ ಹುಟ್ಟಿನಿಂದ ಆಕೆಯ ಕತೆ ಆರಂಭವಾಗುತ್ತದೆ. ವಿಶ್ವಾಮಿತ್ರ ಮತ್ತು ಮೇನಕೆಯರ ಪ್ರಣಯಕ್ಕೆ ಹುಟ್ಟಿದ ಬೇಡದ ಕೂಸು ಶಕುಂತಲಾ. ಆಕೆಗೆ ಬಹುಶಃ ಹೆತ್ತವರು ಹೆಸರಿಡಲೇ ಇಲ್ಲ. ವಿಶ್ವಾಮಿತ್ರನಿಗೆ ತನ್ನ ತಪಸ್ಸಿನ ಫಲವನ್ನು ಕಳೆದುಕೊಳ್ಳುವುದಕ್ಕೆ ಕಾರಣವಾದ ಮೋಹದ ಫಲ ಬೇಡವಾಗಿತ್ತು. ಮೇನಕೆಗೆ ತನ್ನ ಕರ್ತವ್ಯ ಮುಗಿಸುವುದಷ್ಟೇ ಬೇಕಿತ್ತು. ಹೀಗೆ ಇಬ್ಬರೂ ಕೈಬಿಟ್ಟು ಹೋದ ಮಗುವನ್ನು ಶಕುಂತ ಪಕ್ಷಿಗಳು ಪೋಷಿಸಿದವು. ಹೀಗಾಗಿ ಅವಳನ್ನು ಶಕುಂತಲಾ ಎಂದು ಕಣ್ವ ಮಹರ್ಷಿಗಳು ಕರೆದರು. ಸಾಕಿ ಬೆಳೆಸಿದರು.

ಮುಂದೆ ಶಕುಂತಲಾ ಮತ್ತು ದುಷ್ಯಂತರ ನಡುವೆ ಪ್ರಣಯಾಂಕುರವಾದದ್ದು ಇಬ್ಬರೂ ಒಂದಾದದ್ದು ದುಷ್ಯಂತ ಆಕೆಗೆ ಉಂಗುರ ಕೊಟ್ಟದ್ದು ಬೇರೊಂದು ಕತೆ.

Dushyanta and Shakuntalaವಿಶ್ವಾಮಿತ್ರನೂ ಋಷಿ. ಸಾಕಿದ ಕಣ್ವರೂ ಮುನಿಗಳೇ. ಹೀಗೆ ಹೆತ್ತವರೂ ಸಾಕಿದವರೂ ಋಷಿಗಳೇ ಆಗಿದ್ದರೂ ಶಾಕುಂತಲೆಗೆ ಮತ್ತೊಬ್ಬ ಋಷಿ-ದೂರ್ವಾಸ- ಶಾಪ ಕೊಡುತ್ತಾನೆ.

ಇದು ಕಾಳಿದಾಸನ ಕಲ್ಪನೆ. ಇವತ್ತು ಜಾರಿಯಲ್ಲಿರುವುದು ಈ ಕಾಳಿದಾಸನ ಕಲ್ಪನೆಯ ಶಕುಂತಲೆಯೇ. ಆದರೆ ಮಹಾಭಾರತದಲ್ಲಿ ಬರುವ ಶಕುಂತಲೆಯ ಕತೆಯಲ್ಲಿ ಉಂಗುರದ ಪ್ರಸ್ತಾಪವೇ ಇಲ್ಲ. ಅಲ್ಲಿ ದೂರ್ವಾಸರ ಶಾಪದ ಪ್ರಸಂಗವೂ ಬರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಶಾಕುಂತಲೋಪಖ್ಯಾನದ ಎರಡು ಪ್ರಮುಖ ಪಾತ್ರಗಳಾದ ಪ್ರಿಯಂವದೆ ಎಂಬ ಸಖಿ ಮತ್ತು ಅನಸೂಯೆ ಎಂಬ ಮುನಿಕನ್ನಿಕೆಯರ ಪ್ರಸ್ತಾಪವೂ ಇಲ್ಲ.

ಆದರೆ ಮಹಾಭಾರತದಲ್ಲಿ ಬರುವ ಶಕುಂತಲೆಯ ಕತೆ ಪ್ರೇಮಕತೆಯೂ ಅಲ್ಲ, ವಿರಹದ ಕತೆಯೂ ಅಲ್ಲ. ದುಷ್ಯಂತ ಒಮ್ಮೆ ಕಣ್ವರ ನಿರ್ಜನವಾದ ಆಶ್ರಮಕ್ಕೆ ಬರುತ್ತಾನೆ. ಅಲ್ಲಿ ಶಕುಂತಲೆ ಎದುರಾಗುತ್ತಾಳೆ. ದುಷ್ಯಂತ ಆಕೆಯ ಕತೆ ಹೇಳಿ ಅವಳನ್ನು ಮೋಹಿಸುತ್ತಾನೆ. ಮೋಹಾವೇಶದಲ್ಲೂ ಶಕುಂತಲೆ ತನ್ನನ್ನು ತಾನು ಮರೆಯುವುದಿಲ್ಲ. ತನ್ನ ಮಗನಿಗೇ ರಾಜ್ಯ ಕೊಡುತ್ತೇನೆ ಎಂಬ ಭರವಸೆಯನ್ನು ಪಡೆದುಕೊಂಡೇ ಆಕೆ ದುಷ್ಯಂತನಿಗೆ ತನ್ನನ್ನು ಒಪ್ಪಿಸಿಕೊಳ್ಳುತ್ತಾಳೆ.

ಆಕೆಯ ಜೊತೆ ಕೆಲವು ದಿನ ಕಳೆದ ದುಷ್ಯಂತ ಅವಳನ್ನು ಶಾಸ್ತ್ರೋಕ್ತವಾಗಿ ಮದುವೆಯಾಗುತ್ತೇನೆ ಎಂದು ಹೇಳಿ ನಗರಕ್ಕೆ ಮರಳುತ್ತಾನೆ.

ಮುಂದೆ ಶಕುಂತಲೆ ಗರ್ಭಿಣಿಯಾದ ಮೂರು ವರುಷದ ನಂತರ ಆಕೆಗೆ ಮಗನು ಹುಟ್ಟುತ್ತಾನೆ. ಹುಟ್ಟುವಾಗಲೇ ನಾಲ್ಕು ಹಲ್ಲು, ಸಿಂಹದ ಮೈಕಟ್ಟು ಇರುವ ಬಾಲಕನಿಗೆ ಸರ್ವದಮನ ಎಂದು ಹೆಸರಿಡುತ್ತಾರೆ. ಈ ಮಧ್ಯೆ ದುಷ್ಯಂತ ಅವಳನ್ನು ಕರೆಯಿಸಿಕೊಳ್ಳುವ ಯೋಚನೆಯಲ್ಲಿದ್ದವನು ಕ್ರಮೇಣ ಅವಳನ್ನು ಮರೆತೇಬಿಡುತ್ತಾನೆ. ಮಗನಿಗೆ ಹನ್ನೆರಡು ವರುಷವಾಗುತ್ತಿದ್ದಂತೆ ಶಕುಂತಲೆ ಆತನನ್ನು ಕರೆದುಕೊಂಡು ದುಷ್ಯಂತನ ಬಳಿಗೆ ಬರುತ್ತಾಳೆ. ಹದಿನೈದು ವರುಷಗಳ ನಂತರ ಬಂದ ಶಕುಂತಲೆಯನ್ನು ದುಷ್ಯಂತ ನಿರಾಕರಿಸುತ್ತಾನೆ. ಕೊನೆಗೆ ಆತ ಅವರನ್ನು ಒಪ್ಪಿಕೊಳ್ಳುತ್ತಾನೆ.

*

ಶಾಪಗ್ರಸ್ತರಿಗೆ ವಿಮೋಚನೆಯಿಲ್ಲ. ಮಹಾಭಾರತದಲ್ಲಿ ಬರುವ ಪ್ರತಿಯಾಬ್ಬರೂ ಶಾಪಗ್ರಸ್ತರೇ. ಪರಶುರಾಮನಿಂದ ಕರ್ಣನಿಗೆ ಶಾಪ. ಊರ್ವಶಿಯಿಂದ ಅರ್ಜುನನಿಗೆ ಶಾಪ, ಮತ್ಯಾವುದೋ ಮುನಿಯಿಂದ ಕೃಷ್ಣನಿಗೆ ಶಾಪ, ಗೌತಮರಿಂದ ಇಂದ್ರನಿಗೆ ಶಾಪ, ಅವತಾರ ಎತ್ತುವಂತೆ ವಿಷ್ಣುವಿಗೆ ಶಾಪ, ಬ್ರಹ್ಮಕಪಾಲಿಯಾಗಿ ಭಿಕ್ಷೆ ಬೇಡುವಂತೆ ಶಿವನಿಗೆ ಶಾಪ, ನಾಲ್ಕು ತಲೆಯವನಾಗುವಂತೆ ಬ್ರಹ್ಮನಿಗೆ ಶಾಪ. ಅರಸರಿಗೂ ದೇವತೆಗಳನ್ನೂ ಶಾಪ ಬಿಡಲಿಲ್ಲ.

ಶಾಪದಷ್ಟೇ ವರವೂ ನಮ್ಮ ಪುರಾಣಗಳಲ್ಲಿವೆ. ಆದರೆ ವರದಿಂದ ಪಡೆದದ್ದರ ಬಗ್ಗೆ ಹೆಚ್ಚಿನ ವಿವರಣೆಯಿಲ್ಲ. ದಶರಥ ಮಾಡುವ ಪುತ್ರಕಾಮೇಷ್ಠಿ ಯಾಗದಿಂದ ಆತನಿಗೆ ಪುತ್ರೋತ್ಸವ ಆಯಿತು ಅನ್ನುವುದನ್ನು ಕೇಳಿದ್ದೇವೆ. ಆದರೆ ಪುತ್ರಕಾಮೇಷ್ಠಿ ಅನ್ನುವುದರ ಅರ್ಥ ಮಕ್ಕಳನ್ನು ಹೊಂದುವ ಬಯಕೆಯನ್ನು ಸುಡುವುದು ಎಂದು. ನಮ್ಮ ಬಯಕೆಗಳನ್ನು ನೀಗಿಕೊಂಡಾಗ ಅದು ಈಡೇರುತ್ತದೆ ಅನ್ನುವುದು ತುಂಬ ಪ್ರಸಿದ್ಧವಾದ ನಂಬಿಕೆ. ನೀಗಿಕೊಂಡ ಮೇಲೆ ಪೂರೈಸಿದರೆ ಏನು ಫಲ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವವಾಗುತ್ತದೆ. ಆದರೆ ಫಲಾಫೇಕ್ಷೆಯಿಲ್ಲದೆ ಬಂದದ್ದನ್ನು ಅನುಭವಿಸಬೇಕು ಅನ್ನುವ ತತ್ವಜ್ಞಾನವೂ ಅಲ್ಲಿದೆ.

ಈ ಶಾಪ ಉಃಶಾಪಗಳ ಒಟ್ಟಾರೆ ಅರ್ಥವೇನು?

ಮನುಷ್ಯ ಸುಖಿಯಲ್ಲ, ಸ್ವತಂತ್ರನೂ ಅಲ್ಲ. ಆತ ಪರಿಸ್ಥಿತಿಗೆ ಬಂದಿ. ಒಂದೋ ಶಾಪ ಅಥವಾ ಸ್ಥಿತಿ ಅವನನ್ನು ಸುತ್ತಿಕೊಂಡೇ ಇರುತ್ತದೆ. ಅದರಿಂದ ಆತ ಸುಲಭವಾಗಿ ಬಿಡಿಸಿಕೊಂಡು ಹೊರಗೆ ಬರುವಂತಿಲ್ಲ.

ಎಂಬಲ್ಲಿಗೆ ಶಾಪ ಎನ್ನುವುದು ಒಂದು ಸ್ಥಿತಿ ಮತ್ತು ಗತಿ ಎರಡೂ ಆದಂತಾಯಿತಲ್ಲ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X