• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿನಗೂಲಿ ದಿನಕರ ಡಾ। ಕೆ.ಎಸ್‌.ಶರ್ಮಾ

By Staff
|

ಸಪ್ಟೆಂಬರ್‌ 30 ಎಂದರಾಯಿತು, ನನಗೆ ಧಾರವಾಡ-ಪ್ರಯಾಣ ಯೋಗ. ನನ್ನ ಆತ್ಮೀಯರಾದ, ಕರ್ನಾಟಕದ ದಿನಗೂಲಿ ನೌಕರರ ದಿನಕರ ಎಂದು ಖ್ಯಾತರಾದ, ಡಾ.ಕೆ ಎಸ್‌.ಶರ್ಮಾ ಅವರ ಜನ್ಮದಿನವದು.

ವೇದಪಾರಂಗತ, ಶಿಕ್ಷಕ, ಸ್ವಾತಂತ್ರ್ಯಯೋಧ ಶ್ರೀ ಎಂಬಾರ್‌ ಭಾಷ್ಯಾಚಾರ್‌ ಹಾಗೂ ಸಂಪತ್ತಮ್ಮನವರ ಏಕಮಾತ್ರ ಪುತ್ರನಾದ ಕುವಲಯ ಶ್ಯಾಮ ಶರ್ಮಾ ಮೂಲತಃ ಬೆಂಗಳೂರಿನವರು, ಆದರೆ ಇಂದು ಧಾರವಾಡ-ಹುಬ್ಬಳ್ಳಿ ಅವರ ಮನೆಯಾಗಿದೆ. ತೆಲಗು ಅವರ ಮಾತೃಭಾಷೆ, ಆದರೆ ಕನ್ನಡವೇ ಅವರ ಹೃದಯದ ಭಾಷೆಯಾಗಿದೆ. ಕಾರ್ಲ ಮಾರ್ಕ್ಸ್‌ ಅವರ ಗುರು, ಆದರೆ ಕನ್ನಡ ಕವಿಕುಲಗುರು 'ಅಂಬಿಕಾತನಯದತ್ತ" ಅವರ ಇನ್ನೊಬ್ಬ ಗುರು. ಬೇಂದ್ರೆಯವರು ಇನ್ನೊಬ್ಬ ಗುರು ಅಷ್ಟೇ ಅಲ್ಲ , 'ದತ್ತ-ತಂದೆ"ಯಾಗಿದ್ದಾರೆ. ಶರ್ಮಾ ಅವರು ಬೇಂದ್ರೆ ಸ್ಮಾರಕ ರಚಿಸಿದ್ದಾರೆ, ಬೇಂದ್ರೆ ಜೀವನ ಮಹಾಕಾವ್ಯ 'ಔದುಂಬರ ಗಾಥೆ"ಯನ್ನು ಪ್ರಕಾಶನಗೊಳಿಸಿದ್ದಾರೆ. ಕನ್ನಡಕ್ಕೆ (ಮನ)ಸೋತಿದ್ದಾರೆ, ಕವಿತೆ ಬರೆದಿದ್ದಾರೆ, ಹತ್ತಾರು ಗ್ರಂಥ ರಚಿಸಿದ್ದಾರೆ. ಕನ್ನಡ ಗ್ರಂಥ ರಚನೆಯಲ್ಲಿ ಅವರಿಗೆ ಬಹುಮಾನ, ಪ್ರಶಸ್ತಿಗಳು ದೊರೆತಿವೆ. ('ಲೆನಿನ್‌-ಗಾಂಧಿ" ಕೇಂದ್ರ ಸರಕಾರ ಪ್ರಶಸ್ತಿ, 'ಲೆನಿನ್‌-ಗಾಂಧಿ" ಹಾಗೂ 'ಮಾರ್ಕ್ಸ್‌-ಮಾರ್ಕ್ಸವಾದ"ಕ್ಕೆ ಸೋವಿಯಟ್‌ ಲ್ಯಾಂಡ್‌ ನೆಹರೂ ಪ್ರಶಸ್ತಿ).

Inaugural Function of K.S. Sharma 71, Felicitation function in Dharwarಕನ್ನಡ ಜನಮಾನಸದಲ್ಲಿ ಶರ್ಮಾ ಪರಿವಾರ ಎಷ್ಟೊಂದು ಹಾಸು ಹೊಕ್ಕಾಗಿದೆ ಎಂದರೆ ಅವರ ಬಗ್ಗೆ ವಿಶ್ವವಿದ್ಯಾಲಯದಲ್ಲಿ ನಡೆದ ಅಭ್ಯಾಸಗಳೇ ಸಾಕ್ಷಿ. 'ಎಂಬಾರ ಭಾಷ್ಯಾಚಾರ್ಯ- ಒಂದು ಅಧ್ಯಯನ", 'ಡಾ। ಕೆ.ಎಸ್‌.ಶರ್ಮಾ - ಒಂದು ಅಧ್ಯಯನ" ಎಂಬ ಎರಡು ಸಂಶೋಧನ ಪ್ರಬಂಧಗಳನ್ನು ಕರ್ನಾಟಕ ವಿಶ್ವ ವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಡಾ। ಶಾಂತಾದೇವಿ ಸಣ್ಣಯೆಲ್ಲಪ್ಪನವರ್‌ ಅವರ ಮಾರ್ಗದರ್ಶನದಲ್ಲಿ ಮಂಡಿಸಿ 'ಎಂ.ಫಿಲ್‌" ಪದವಿ ಗಳಿಸಿದ್ದಾರೆ. ತಂದೆ-ಮಗನ ಬಗ್ಗೆ ನಡೆಸಿದ ಸಂಶೋಧನೆ ಅಪರೂಪವೆಂದೇ ಹೇಳಬೇಕು.

ಹುಬ್ಬಳ್ಳಿಯ ಗೋಕುಲರೋಡ್‌ನಲ್ಲಿರುವ 'ವಿಶ್ವ-ಶ್ರಮ-ಚೇತನ" ಸಂಕುಲವು 'ಶ್ರಮಜೀವಿಗಳ ಕಾಶಿ"ಯಾಗುವುದರ ಜೊತೆಗೆ ವಿದ್ಯೆ-ವಿಜ್ಞಾನ-ತಂತ್ರಜ್ಞಾನ-ಆರೋಗ್ಯ-ಸಾಹಿತ್ಯ-ಸಂಗೀತ-ಕಲ್ಯಾಣ-ಸಂಸ್ಕೃತಿ ಕೇಂದ್ರವಾಗಿ ವಿಕಾಸ ಹೊಂದುತ್ತಿದೆ. ಇಲ್ಲಿ ಶಿಶುವಿಹಾರ, ಉಚ್ಚ-ಪ್ರಾಥಮಿಕ ಶಾಲೆ, ಐ.ಟಿ.ಐ., ಕಾಲೇಜ್‌ ಫಾರ್‌ ಕಾಂಪ್ಯುಟರ್‌ ಅಪ್ಲಾಯನಸ್‌, (ಡಿಗ್ರಿ ಹಾಗೂ ಪೋಸ್ಟ್‌-ಗ್ರ್ಯಾಜ್ಯುವೇಟ್‌ ಡಿಪ್ಲೊಮಾಗಳಿಗಾಗಿ), ಜ್ಯೂನಿಯರ್‌ ಕಾಲೇಜ್‌ ಇವೆ (ನೂತನ ಕಟ್ಟಡ ಸಿದ್ಧವಾಗಿದೆ); ಡಾ। ಶರ್ಮಾ ಇನ್‌ಸ್ಟಿಟ್ಯೂಟ್‌ ಆಫ್‌ ನ್ಯಾಚರೋಪಥಿ ಅಂಡ್‌ ಯೋಗಿಕ್‌ ಸಾಯನ್ಸಿಸ್‌, ವರಕವಿ ಡ.ರಾ.ಬೇಂದ್ರೆ ಸಂಶೋಧನ ಸಂಸ್ಥೆ, ಬೇಂದ್ರೆ ಕುಟೀರ, ಬೇಂದ್ರೆ ಕಂಡ ಬೆನಕ ವಿದ್ಯಾ ವಿನಾಯಕ ದೇವಾಲಯ, ಬೇಂದ್ರೆ ಸಂಗೀತ ಅಕಾಡೆಮಿ, ಮಾರ್ಕ್ಸಿಸ್ಟ್‌ ಸ್ಟಡೀ ರಿಸರ್ಚ್‌ ಸೆಂಟರ್‌, ಶರ್ಮಾ ಕಲ್ಯಾಣ ಮಂಟಪ - ಇವೆಲ್ಲ ಒಂದೇ ಛತ್ರದ ಕೆಳಗೆ ಇವೆ. ಇದೊಂದು ಭಾವೀ ವಿಶ್ವವಿದ್ಯಾಲಯದ ಕನಸನ್ನು ನನಸಾಗಿಸುವ ಪಥದಲ್ಲಿದೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ಶರ್ಮಾ ಅವರ ಹುಟ್ಟುಹಬ್ಬ ಆಚರಿಸಲು ರಾಜ್ಯದ ಮೂಲೆ ಮೂಲೆಯಿಂದ ಕಾರ್ಮಿಕ ಪ್ರತಿನಿಧಿಗಳು, ಬಂಧು-ಮಿತ್ರರು, ಸಾಹಿತ್ಯ-ಸಂಗೀತ-ಕಲಾಭಿಮಾನಿಗಳು ನೆರೆಯುತ್ತಾರೆ. ಪ್ರತಿ ವರ್ಷ ಏನಾದರೂ ಒಂದು ವಿನೂತನ ಮುಖ ನಮ್ಮನ್ನು ಆಕರ್ಷಿಸುತ್ತದೆ. ಈ ವರುಷ ಎರಡು ಪ್ರಮುಖ ಆಕರ್ಷಣೆಗಳು ಇದ್ದವು. ಮೊದಲನೆಯದು ವಿನೂತನ ಕಟ್ಟಡದಲ್ಲಿ 'ಕಾರ್ಲ ಮಾರ್ಕ್ಸ್‌ ಮೆಮೋರಿಯಲ್‌ ರೆವೊಲ್ಯೂಶನರಿ ಸೆಂಟರ್‌"ದ ಉದ್ಘಾಟನೆಯನ್ನು ಡಾ। ಕೆ. ರಾಘವೇಂದ್ರರಾಯರು ಮಾಡಿದರು. ಇದು 'ಗ್ರಂಥಾಲಯ-ವಾಚನಾಲಯ ಮತ್ತು ಸ್ಮಾರಕ" (ಲೈಬ್ರರಿ ಕಂ ಮೆಮೋರಿಯಲ್‌) ಆಗಿದೆ. ಭಾರತದಲ್ಲಿ ಈ ರೀತಿಯಯದು ಇದೊಂದೇ ಎನಿಸುತ್ತದೆ. ಇಲ್ಲಿ ಕಾರ್ಲ್‌ ಮಾರ್ಕ್ಸನ ಜೀವನವನ್ನು ಚಿತ್ರಿಸುವ (ಬಾಲ್ಯದಿಂದ ಅವಸಾನದ ವರೆಗೆ) ಛಾಯಾಚಿತ್ರಗಳಿವೆ. ಅಪೂರ್ವ ಚಿತ್ರಗಳನ್ನು ಸಂಗ್ರಹಿಸಿ, ಅವನ್ನು ಬೃಹದಾಕಾರಕ್ಕೆ

Yoga Campಎನ್‌ಲಾರ್ಜ್‌ ಮಾಡಿ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಮಾರ್ಕ್ಸನ ಜನನ, ವಿದ್ಯಾಭ್ಯಾಸ, ಅವನ ಪರಿವಾರ, ಅವನು ಸಂಶೋಧನೆ ನಡೆಸಿದ ಬ್ರಿಟಿಶ್‌ ಮ್ಯೂಜಿಯಂ ಲೈಬ್ರರಿ, ಅವನ ಸ್ಮಾರಕ, ಅವನ ಅವಸಾನದ ನಂತರ ಮಿತ್ರ ಫೆಡ್ರಿಚ್‌ ಎಂಗಿಲ್ಸ್‌ ನುಡಿದ ಮಾತುಗಳು ಇಲ್ಲಿವೆ. ಶರ್ಮಾ ಅವರೇ ವಿನ್ಯಾಸ ಮಾಡಿದ ವಿಶೇಷ ಟೇಬಲ್‌-ಖುರ್ಚಿಗಳು ಆಕರ್ಷಕವಾಗಿವೆ. ಮಹತ್ವದ ಪುಸ್ತಕಗಳ ಸಂಗ್ರಹ ವಾಚಕರನ್ನು ಆಕರ್ಷಿಸಲಿದೆ.

ಶರ್ಮಾ ಅವರ ಜನ್ಮದಿನಕ್ಕೆ ಕರ್ನಾಟಕ ರಾಜ್ಯದ ಮೂಲೆಮೂಲೆಯಿಂದ ದಿನಗೂಲಿ ನೌಕರರ ಪ್ರತಿನಿಧಿಗಳು ಬಂದಿದ್ದರು. ಶರ್ಮಾ ಅವರ ಮಿತ್ರರು, ಅಭಿಮಾನಿಗಳು, ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು. ಹಿರಿಯ ಶಿಕ್ಷಕರಾದ ಎಸ್‌.ಜಿ.ನಾಡಗೇರ ಮಾಸ್ತರರು, ಪೋತ್ನೀಸ್‌ ಸಹೋದರಿಯರು, ಮಿತ್ರರಾದ 'ಜೀವಿ"ಕುಲಕರ್ಣಿ, ಜೋಗಳೇಕರ್‌, ವಾಮನ ಬೇಂದ್ರೆ, ಮೋಹನ ಲಿಂಬೀಕಾಯಿ, ಪ್ರಕಾಶ ಪ್ರಭು, ಗುರುಗಳಾದ ರಾಘವೇಂದ್ರರಾವ್‌ ಉಪಸ್ಥಿತರಿದ್ದರು, ಮಿತ್ರರು ಶರ್ಮಾ ಅವರ ಸಧನೆಯ ಬಗ್ಗೆ ಮಾತನಾಡಿದರು. ಶರ್ಮಾ ಅವರ ಎರಡು ಕಾವ್ಯಸಂಕಲನಗಳಿಂದ ('ಕತ್ತಲೆಯಿಂದ ಬೆಳಕಿನೆಡೆಗೆ", 'ಎಚ್ಚರ") ಆಯ್ದ ಕವಿತೆಗಳನ್ನು ಸುಶ್ರಾವ್ಯವಾಗಿ ಪಂ. ಕೃಷ್ಣಾಜಿ ಕುರ್ತಕೋಟಿಯವರ ವಿದ್ಯಾರ್ಥಿನಿ ಶ್ರೀದೇವಿ ಶಿರೋಳ ಹಾಡಿದರು. ಈ ಹಾಡುಗಳಿಗೆ 'ಬೇಂದ್ರೆ ಘರಾಣೆದ ಹಾಡುಗಳು" ಎಂದು ಕರೆದರು.

ಇನ್ನೊಂದು ಮಹತ್ವದ ಕಾರ್ಯಕ್ರಮವೆಂದರೆ 'ಮಹಿಳೆಯರು ಹಾಗೂ ಪ್ರಕೃತಿ ಚಿಕಿತ್ಸೆಯ ಪರಿಜ್ಞಾನ" ಎಂಬ ಐದು ದಿನಗಳ ಕಾರ್ಯಗಾರದ ಉದ್ಘಾಟನೆ. ಇದನ್ನು ಸಂಘಟಿಸಿದವರು 'ಶರ್ಮಾ ನ್ಯಾಚರೋಪತಿ ಹಾಗೂ ಯೋಗ ವಿಜ್ಞಾನ ಕೇಂದ್ರ"ದವರು. ಇದನ್ನು ಪ್ರಾಯೋಜಿಸಿದವರು ಪುಣೆಯ 'ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಪ್‌ ನ್ಯಾಚರೋಪತಿ" ಅವರು. ಈ ಸಂಸ್ಥೆಯ ಹಾಗೂ ದೆಹಲಿಯಲ್ಲಿರುವ 'ಸೆಂಟ್ರಲ್‌ ಕೌನ್ಸಿಲ್‌ ಫಾರ್‌ ರಿಸರ್ಚ್‌ ಇನ್‌ ಯೋಗ ಅಂಡ್‌ ನ್ಯಾಚರೋಪತಿ" ಯ ನಿರ್ದೇಶಕರಾದ ಡಾ। ಚಿದಾನಂದ ಮೂರ್ತಿಯವರು ಹುಬ್ಬಳ್ಳಿಯ 'ಶರ್ಮಾ ಇನ್‌ಸ್ಟಿಟ್ಯೂಟ್‌ ಆಫ್‌ ನ್ಯಾಚರೋಪತಿ"ಯ ಪ್ರಪ್ರಥಮ ನಿರ್ದೇಶಕರಾಗಿದ್ದರು ಎಂಬ ಮಾತನ್ನು ಡಾ। ಶರ್ಮಾ ಅಭಿಮಾನದಿಂದ ಹೇಳಿದರು. ಈ ಕಾರ್ಯಾಗಾರಕ್ಕೆ ಮಹಿಳೆಯರನ್ನೇ ಯಾಕೆ ಆಯ್ಕೆ ಮಾಡಲಾಯಿತು, ಅದರಲ್ಲಿ ನರ್ಸ್‌ ಆಗಲಿರುವ ವಿದ್ಯಾರ್ಥಿನಿಯರನ್ನೇ ಯಾಕೆ ಆರಿಸಲಾಯಿತು ಎಂಬ ವಿಚಾರ ಹೇಳುತ್ತ ಶರ್ಮಾ ವಿವರಿಸಿದರು :

'ಪ್ರತಿ ಕುಟುಂಬದ ಆರೋಗ್ಯದ ರಕ್ಷಣೆ ಮಹಿಳೆಯರ ಕೈಯಲ್ಲಿ ಇರುತ್ತದೆ. ಸಮಾಜದ ಜನರ ಆರೈಕೆಯ ವಿಷಯದಲ್ಲಿ ಡಾಕ್ಟರರಿಗಿಂತಲೂ ನರ್ಸ್‌ ಆಗಿರುವವರ ಹೊಣೆ ಮಹತ್ವದ್ದಾಗಿದೆ. ಇವರು ಹೆಚ್ಚಾಗಿ ಅಲೋಪತಿಯ ಬಗ್ಗೆ ತಿಳಿದಿರುತ್ತಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ತಿಳಿದಿರುವದು ಅವಶ್ಯ. ಇದರ ಬಗ್ಗೆ ಬರಿಯ ಭಾಷಣಕ್ಕಿಂತ ಪ್ರಾಯೋಗಿಕ ಅನುಭವ ನೀಡಲು ಈ ಕಾರ್ಯಾಗಾರ ಪ್ರಯತ್ನಿಸುತ್ತದೆ".

ಈ ವಿನೂತನ-ಉಚಿತ-ಕಾರ್ಯಗಾರದಲ್ಲಿ ಮಹಿಳಾ ವಿದ್ಯಾ ಪೀಠ ನಡೆಸುವ 'ನರ್ಸಿಂಗ ಸ್ಕೂಲ್‌"ನ ದ್ವಿತೀಯ ಹಾಗೂ ತೃತೀಯ ವರ್ಷದ ಎಪ್ಪತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕೆಲವು ಸ್ಥಳೀಯ ಗೃಹಿಣಿಯರು, ಶಿಕ್ಷಕಿಯರೂ ಬಂದು ಕಾರ್ಯಾಗಾರ ಸೇರಿ ಲಾಭ ಪಡೆದರು.

ಮುಂಜಾನೆ ಏಳು ಗಂಟೆಯಿಂದ ಎಂಟರವರೆಗೆ ಯೋಗಾಭ್ಯಾಸ. ನಂತರ ಬ್ರೆಕ್‌-ಫಾಸ್ಟ್‌. 9ರಿಂದ 1 ಗಂಟೆಯ ವರೆಗೆ ನ್ಯಾಚರೋಪತಿ ಟ್ರೀಟ್‌ಮೆಂಟ್‌ (ಮಡಪ್ಯಾಕ್‌, ಹಿಪ್‌ಬಾಥ್‌, ಮಸಾಜ್‌, ಸ್ಟೀಂ ಬಾಥ್‌ ಇತ್ಯಾದಿ). 1 ರಿಂದ 2 ಭೋಜನ ವಿರಾಮ. 2 ರಿಂದ 5-30 ರ ವರೆಗೆ ಯೋಗ ನಿಸರ್ಗೋಪಚಾರದ ಬಗ್ಗೆ ತಜ್ಞರಿಂದ ಭಾಷಣ, ಚರ್ಚೆ, ಪರಿಸಂವಾದಗಳು. ಭಾಷಣಕಾರರು: ಡಾ। ಕೆ.ಆರ್‌.ಅಜಿನ್‌, ಮುಖ್ಯ-ಸಂಘಟಕರು ('ನಿತ್ಯ ಜೀವನದಲ್ಲಿ ಯೋಗ ಹಾಗೂ ನಿಸರ್ಗೋಪಚಾರ", 'ಕಾರ್ಡಿಯೋ-ವ್ಯಾಸ್ಕ್ಯುಲರ ಬಾಧೆಗೆ ಯೋಗ ಹಾಗೂ ನಿಸರ್ಗೋಪಚಾರದ ಚಿಕಿತ್ಸೆ"), ಡಾ। ಜಕಾರೆಡ್ಡಿ ('ದೀರ್ಘ ಕಾಲದ ರೋಗಗಳ ನಿವಾರಣೆಗೆ ನಿಸರ್ಗೋಪಚಾರ ಅಮೃತ ಸಮಾನ"),

ಡಾ। ಮೀನಾ ಶೆಟ್ಟಿ ('ಸೈಕೊಸೊಮ್ಯಾಟಿಕ್‌ (ಮನಸ್ಸುಕಾರಣವಾದ) ರೋಗಗಳ ನಿವಾರಣೆಯಲ್ಲಿ ನಿಸರ್ಗೋಪಚಾರದ ಪಾತ್ರ"), ಡಾ। ಶಾಂತಾದೇವಿ ಸಣ್ಣಯೆಲ್ಲಪ್ಪ('ಮಹಿಳೆಯರಿಗಾಗಿ ಯೋಗ"), ಶ್ರೀಮತಿ ಮಧು ಹುಯಿಲಗೋಳ ('ನಿಸರ್ಗೋಪಚಾರದಲ್ಲಿ ಆಹಾರದ ಪಾತ್ರ"), ಡಾ। ಪದ್ಮಾವತಿ('ಪಂಚಕರ್ಮ ಚಿಕಿತ್ಸೆ"), ಡಾ।ಶಶಿಧರ('ಅಕುಪ್ರೆಶರ್‌ ಹಾಗೂ ಅಕುಪಂಕ್ಚರ್‌"), ಡಾ। ಜಿ.ವಿ.ಕುಲಕರ್ಣಿ ('ಯೋಗ ಮತ್ತು ನಿಸರ್ಗ ಚಿಕಿತ್ಸೆ- ಆರೋಗ್ಯ ಎಂಬ ನಾಣ್ಯದ ಎರಡು ಮುಖಗಳು"), ಪ್ರೊ. ಈಶ್ವರ ಬಸವರೆಡ್ಡಿ ('ಆರೋಗ್ಯಕ್ಕಾಗಿ ಯೋಗ"), ಡಾ। ಅಕ್ಷತಾ ಹಳ್ಳಿಕೇರಿ, ಕೋ-ಆರ್ಡಿನೇಟರ್‌('ಯೋಗ ಮತ್ತು ನಿಸರ್ಗೋಪಚಾರದಿಂದ 'ಸ್ಟ್ರೆಸ್‌"(ಮನೋದ್ವೇಗ) ನಿಯಂತ್ರಣ"), ಪ್ರೊ.ಲಕ್ಷ್ಮಣಕುಮಾರ ಸಣ್ಣಯೆಲ್ಲಪ್ಪನವರ ('ಯೋಗದಿಂದಾಗುವ ಲಾಭ" -ಭಾಷಣ ಮತ್ತು ಯೋಗ-ಪ್ರಾತ್ಯಕ್ಷಿಕೆ).

ನಾನು ಶರ್ಮಾ ಇನ್‌ಸ್ಟಿಟ್ಯೂಟ್‌ನಲ್ಲೇ ವಾಸ್ತ್ಯವ್ಯ ಮಾಡಿದ್ದರಿಂದ ಪ್ರತಿದಿನ ಯೋಗ ಕ್ಲಾಸು ನಡೆಸಲು ಶರ್ಮಾ ಕೇಳಿದರು. ಇದು ನನಗೆ ಅತೀವ ಸಂತಸ ತಂದಿತು. ನನ್ನ 'ಯೋಗಶಿಬಿರ" ಪುಸ್ತಕ ಹಾಗೂ ಕ್ಯಾಸೆಟ್‌ನ ಸಹಾಯದಿಂದ, ಪ್ರಶಿಕ್ಷಣ ನೀಡಲು ಅನುಕೂಲವಾಯಿತು. ಒಬ್ಬಶಿಕ್ಷಕನಿಗೆ ಅತಿಶಯ ಆನಂದ ನೀಡುವ ಗಳಿಗೆ ಅಂದರೆ ಉತ್ತಮ ವಿದ್ಯಾರ್ಥಿಗಳ ಸಾನ್ನಿಧ್ಯ. ಜಲನೇತಿ, ಜಲಧೌತಿಯಂತಹ ಶುದ್ಧಿ-ಕ್ರಿಯೆಗಳನ್ನು ಕಲಿಸಿದಾಗ ವಿದ್ಯಾರ್ಥಿಗಳಿಗೆ ಹೊಸ ಅನುಭವ ಉಂಟಾಗಿತ್ತು.

ಹುಬ್ಬಳ್ಳಿಯ ಐದು ದಿನಗಳ ವಾಸ್ತವ್ಯದಲ್ಲಿ ಇನ್ನೊಂದು ಆಕರ್ಷಣೆಯಿತ್ತು. ಇದೇ ವೇಳೆ ಚಂದನ ಟಿ.ವಿ. ಟೀಮ್‌ ಕೆ.ಟಿ.ದೇಸಾಯಿ ಅವರ ಹಿರಿತನದಲ್ಲಿ ಎರಡು ಡಾಕ್ಯುಮೆಂಟರಿಗಳನ್ನು ಚಿತ್ರೀಕರಿಸಿದರು. ಒಂದು ಶರ್ಮಾ ಅವರ ಜೀವನ ಹಾಗೂ ಕಾರ್ಯವನ್ನು ಆಧರಿಸಿತ್ತು. ಇನ್ನೊಂದು ವರಕವಿ ಬೇಂದ್ರೆಯವರ ಸ್ಮರಣೆಯ ಕುರಿತಾಗಿ ಇತ್ತು. ಅದಕ್ಕಾಗಿ ನಾವು ಧಾರವಾಡದ ಬೇಂದ್ರೆ ನಿವಾಸಕ್ಕೂ ಹೋಗಿದ್ದೆವು. ಮುಖ್ಯವಾಗಿ ಡಾ। ಶರ್ಮಾ ಹಾಗೂ ಡಾ। ವಾಮನ ಬೇಂದ್ರೆಯವರ ಸಂದರ್ಶನಗಳು ನಡೆದವು. ಅದರಲ್ಲಿ ಬೇಂದ್ರೆ ಶಿಷ್ಯನಾದ ನನಗೂ ಒಂದು ಚಿಕ್ಕ ಪಾತ್ರವಿತ್ತು.

ಶರ್ಮಾ ಅವರ ಹುಟ್ಟುಹಬ್ಬದ ನೆಪದಲ್ಲಿ ಬೇಂದ್ರೆ-ಯೋಗ ಮುಂತಾದ ಚಟುವಟಿಕೆಗಳು ನಡೆದುದು, ಈ ಚಟುವಟಿಕೆಗಳಲ್ಲಿ ನಾನೂ ಒಂದು ಅಂಗವಾದುದು ಯೋಗಾಯೋಗ, ಅಲ್ಲವೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more