ಹಿರಿಯ ನಾಗರಿಕರಿಗೆ ಸಹಾಯ ಮಾಡಬಯಸುವಿರಾ ?

  • ಡಾ. ಹಳೇಬೀಡು ಸ್ವಾಮಿ, ಬಸವೇಶ್ವರನಗರ, ಬೆಂಗಳೂರು .
    [email protected]
ಈ ಬಾಳು ಸಾಕಪ್ಪಾ ಎಂದು ಕೊರಗುತ್ತಿರುವ ಮುದುಕರು ಬಹಳಷ್ಟಿದ್ದಾರೆ. ಅವರಿಗೆ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯ. ಅದರೆ ಮುದುಕರಿಗೆ ಸಹಾಯ ಮಾಡುವುದಕ್ಕೆ ಯಾರಿಗೂ ಮನಸ್ಸಿಲ್ಲ. ಹಿರಿಯರ ಋಣ ತೀರಿಸಬೇಕೆಂಬ ಭಾವನೆ /ಕನಿಕರ ಮಕ್ಕಳಿಗೂ ಹೊಂದು-ಬಂಧುಗಳಿಗೂ ಇಲ್ಲ. ಇದಲ್ಲವೇ ವಿಪರ್ಯಾಸ ?

ರೈತರಿಗಾಗಿ ಹೋರಾಟ ನಡೆಯುತ್ತಿದೆ. ರೈತಾಪಿ ಮುದುಕರನ್ನು ಕೇಳುವವರೇ ಇಲ್ಲ. ಪಟ್ಟಣಗಳಲ್ಲಿ ಭಿಕ್ಷೆ ಬೇಡುವ ಮುದುಕರನ್ನು ದಿನವಹಿ ನೋಡಬಹುದು. ಸಂಜೆಗೆ ಮನೆಗೆ ಬರುವಾಗ ಬರಿಗೈಯಲ್ಲಿ ಬಂದರೆ ಅವರು ಉಪವಾಸ ಮಲಗಬೇಕಾಗುತ್ತದಂತೆ. ನಿನ್ನ ಪೆನ್ಷನ್‌ ಅನ್ನ ಹಾಕಲಿಕ್ಕೂ ಸಾಕಾಗುವುದಿಲ್ಲ , ನಿನ್ನ ಔಷಧಿಗೆಲ್ಲಿ ತರಲಿ ಅನ್ನುವವರೂ ಇದ್ದಾರೆ. ಅವರ ಸ್ಥಿತಿ-ಗತಿಯನ್ನು ಯಾರೂ ವಿಚಾರಿಸಿಕೊಳ್ಳುತ್ತಿಲ್ಲ, ಅವರನ್ನ ದೇವರೇ ಕಾಪಾಡಬೇಕು. ರೈತರ ಸಂಘವಿದ್ದಂತೆ ಮುದುಕರ ಸಂಘಗಳಿಲ್ಲ. ಅವರಂತೆ ಈ ಮುದುಕರು ಒಗ್ಗಟ್ಟಾಗಲು ಶಕ್ತಿ ಇಲ್ಲದೆ ಹೋರಾಡಲಾರರು. ಅನೇಕ ಕಾರಣಗಳಿಂದ ಮುದುಕರ ಜೀವನ ಕಷ್ಟವಾಗಿದೆ. ‘ಕರ’ಗಳನ್ನು ಹಾಕುವಾಗ ಅಮೆರಿಕಾ ಮತ್ತಿತರ ದೇಶಗಳನ್ನು ಉದಾಹರಿಸುವ ನಮ್ಮ ಸರ್ಕಾರಗಳು ಅಲ್ಲಿರುವಂತೆ ‘ಸೋಷಿಯಲ್‌ ಸೆಕ್ಯುರಿಟಿ’ ಬಗ್ಗೆ ಚಿಂತಿಸಿಲ್ಲ.

Give them the support they needಸರ್ಕಾರಿ ನೌಕರಿಯಲ್ಲಿದ್ದ ಕೆಲವರಿಗೆ ಮಾತ್ರ ಜೀವನ ಪರ್ಯಂತ ಒಳ್ಳೆಯ ಪೆನ್ಷನ್‌ ಬರುತ್ತದೆ. ಆರು ತಿಂಗಳಿಗೊಮ್ಮೆ ಡಿ.ಎ. ಹೆಚ್ಚಾಗುತ್ತದೆ. ಬಹಳ ಹಿಂದೆ ರಿಟೈರ್‌ ಆದ ಕರ್ನಾಟಕ ಸರ್ಕಾರದ ಸಣ್ಣ ಪೆನ್ಷನ್‌ದಾರರೂ ಕಷ್ಟದಲ್ಲಿದ್ದಾರೆ. ಹೀಗಾಗಿ ಹಳ್ಳಿ ಪಟ್ಟಣಗಳಲ್ಲಿರುವ ಮುದುಕರನ್ನು ಕೇಳುವವವರೇ ಇಲ್ಲ.

ನಾನಾ ಕಾರಣಗಳಿಂದ ಬಳಲಿರುವ ನಾಡಿನ ಎಲ್ಲ ಮುದುಕರ ಬಗ್ಗೆ ನಾವೆಲ್ಲಾ ಸ್ವಲ್ಪ ಚಿಂತಿಸಬೇಕು. ಹಿರಿಯ ನಾಗರಿಕರ ಬೇಕು ಬೇಡಗಳನ್ನು ಸರ್ಕಾರಕ್ಕೆ ಮನದಟ್ಟಾಗುವಂತೆ ಹೇಳಬೇಕು. ‘ಅವರ ದುಡಿಮೆಯ ಫಲವಲ್ಲವೆ ಇಂದು ನಾವೆಲ್ಲ ಉಣ್ಣುತ್ತಿರುವುದು’. ಇಂದು ನಾವು ವೃದ್ಧರ ಬಗ್ಗೆ ಯೋಚಿಸದಿದ್ದರೆ ಇಂದಿನ ಅವರ ಕಷ್ಟ ಮುಂದೆ ನಮಗೂ ಕಟ್ಟಿಟ್ಟ ಬುತ್ತಿ. ಮಾಡಿದ್ದುಣ್ಣೋ ಮಾರಾಯ. ವೃದ್ಧರ ಅವಶ್ಯಕತೆಗಳಲ್ಲಿ ಕೆಲವನ್ನಾದರೂ ಇಲ್ಲಿ ಪಟ್ಟಿ ಮಾಡಿದೆ. ಇವುಗಳನ್ನು ಸರ್ಕಾರದ ಗಮನಕ್ಕೆ ತಿಳಿಸೋಣ. ಅವುಗಳ ಅನುಷ್ಠಾನಕ್ಕಾಗಿ ಹೋರಾಡೋಣ. ಈ ಹೋರಾಟದಲ್ಲಿ ನಿಮ್ಮ ದನಿಯೂ ಇರುತ್ತದಲ್ಲವೇ?

ವೃದ್ಧರಿಗೆ ಏನೇನು ಬೇಕು ?

1) ಅವರಿಗೆ ಹೆಚ್ಚು ಹೆಚ್ಚು ವೃದ್ಧಾಶ್ರಮಗಳು/ಅನಾಥಾಲಯಗಳು ಬೇಕು. ಅಲ್ಲಿ ಅವರಿಗೆ ಉಚಿತ ಇಲ್ಲವೆ ಕಡಮೆ ಬೆಲೆಯಲ್ಲಿ ಆಹಾರ ಕೊಡಬೇಕು. ಮುದುಕರ ಸೇವೆ ಮಾಡಲು ಮುಂದೆ ಬಂದವರಿಗೆ ಸರ್ಕಾರ ಸಹಾಯ ಮಾಡಬೇಕು. ಅನೇಕ ಕರುಣಾಮಯಿಗಳು ಪಶುಗಳಿಗೆ ‘ಪಿಂಜ್ರಾಪೋಲ್‌’ ಕಟ್ಟಿ ಅಲ್ಲಿ ಮುದಿ ಪ್ರಾಣಿಗಳನ್ನು ಇಟ್ಟಿದ್ದಾರೆ. ಮನುಷ್ಯರಿಗಾಗಿ ಯಾರೂ ಈ ಕೆಲಸ ಮಾಡಿದ್ದನ್ನು ನಾನು ಕೇಳಿಲ್ಲ ಮತ್ತು ನೋಡಿಲ್ಲ. ಅಂತಹ ಕೆಲಸ ಮಾಡಿದವರಿದ್ದರೆ ಅವಶ್ಯಕತೆ ಇದ್ದವರಿಗೆ ತಿಳಿಸಬೇಕು.

2) ಹಣ ಉಳ್ಳವರಿಗೆ ಅನೇಕ ಕಡೆ ಏನೆಲ್ಲಾ ಸೌಕರ್ಯ ಗಳನ್ನು ದೊರಕಿಸಿ ಕೊಡುತ್ತಿದ್ದಾರೆ. ಇದು ಸಂತಸದ ಸಂಗತಿ. ಇತ್ತೀಚೆಗೆ, ಕರ್ನಾಟಕ ಸರ್ಕಾರ ಮನರಂಜನಾ ಕ್ಲಬ್‌ಗಳಲ್ಲಿ ಸದಸ್ಯರಾಗಿರುವವರಲ್ಲಿ 65 ವರ್ಷ ವಯೋಮಿತಿ ಮೀರಿದ ಹಿರಿಯರಿಗೆ ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ವಿಲಾಸಿ ತೆರಿಗೆಯಿಂದ ವಿನಾಯಿತಿ ನೀಡಿದೆ ನಮ್ಮ ಸರ್ಕಾರ ಅಕ್ಟೋಬರ್‌ 16 ರಂದು. ಸಂತೋಷ. ಆದರೆ ಅಂದು ನಡೆದ ಮಂತ್ರಿಗಳ ಸಭೆಯಲ್ಲಿ ಬಡವರಿಗೂ ಮತ್ತು ಮಧ್ಯಮ ವರ್ಗದ ಹಿರಿಯರಿಗೂ ಏನಾದರೂ ಕನಿಷ್ಠ ಸಹಾಯ ಮಾಡಲಿಲ್ಲವೇಕೆ ? ಆ ಸಭೆಯಲ್ಲಿ ಬಸ್‌ಗಳಲ್ಲಿ ಹಿರಿಯ ಪ್ರಯಾಣಿಕರಿಗೆ ರಿಯಾಯಿತಿ ಕೊಡುವ ಬಗ್ಗೆ ಆಲೋಚಿಸಿದರಂತೆ. ಆದರೆ ಅಂದು ಹಿರಿಯರ ಈ ಅವಶ್ಯಕತೆಗಳು ಅಲ್ಲಿದ್ದ ಮಂತ್ರಿಗಳಿಗೆ ಅಷ್ಟು ತುರ್ತು ವಿಷಯವಾಗಿ ಕಾಣಲಿಲ್ಲವಲ್ಲಾ ಎಂದು ವ್ಯಸನವಾಗುತ್ತದೆ.

3) ರಸ್ತೆ ರಸ್ತೆಗಳಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ದೇವಸ್ಥಾನಗಳನ್ನು ಕಟ್ಟುತ್ತಿದ್ದಾರೆ. ಅದಕ್ಕೆಲ್ಲ ವರಮಾನ ತೆರಿಗೆಯಲ್ಲಿ 80 ಜಿ ಮತ್ತು ಕಡಮೆ ಬೆಲೆಯಲ್ಲಿ ಜಾಗ(ಸೈಟು) ಇತ್ಯಾದಿ ಅನುಕೂಲಗಳನ್ನು ಮಾಡಿಕೊಡುತ್ತಿವೆ ಸರ್ಕಾರಗಳು. ಸರ್ಕಾರದಿಂದ ಸಹಾಯ ಪಡೆದ ಈ ಮಠ-ಮಂದಿರಗಳು ಸಂಪಾದಿಸುವ ಹಣದಲ್ಲಿ ಸ್ವಲ್ಪ ಭಾಗವನ್ನೂ ಅಶಕ್ತರಿಗಾಗಿ, ಹಿರಿಯರಿಗಾಗಿ ಉಪಯೋಗಿಸುತ್ತಿಲ್ಲ. ಗೋದಾಮುಗಳಲ್ಲಿ ಕೊಳೆಯುತ್ತ ಬಿದ್ದಿರುವ ಹಾಗೂ ಎರಡು ಮತ್ತು ನಾಲ್ಕು ಕಾಲಿನ ಹೆಗ್ಗಣಗಳು ತಿಂದು ಹಾಳಾಗುತ್ತಿರುವ ಆಹಾರವನ್ನು ಮುದುಕರಿಗಾಗಿ ಕಡಮೆ ಬೆಲೆಯಲ್ಲಿ ಕೊಡಬಾರದೆ? ‘ಅವರು ಬೆಳೆದದ್ದನ್ನಲ್ಲವೇ ನಾವು ಇಂದು ತಿನ್ನುತ್ತಿರುವುದು?’

4) ಅನೇಕ ಮುದುಕರು ಅನೇಕ ಕಾರಣಗಳಿಂದ ಅಲ್ಲಿ ಇಲ್ಲಿ ಕನಿಷ್ಠ ಕೂಲಿಗೆ ಕೆಲಸ ಮಾಡುತ್ತಿದ್ದು , ಕೆಲಸದ ಕಾರಣದಿಂದಾಗಿ ಮತ್ತು ಇನ್ನೂ ಅನೇಕ ಕಾರಣಗಳಿಗಾಗಿ ಓಡಾಡಬೇಕಾಗಿದೆ. ಅವರಿಗೆ ರಿಯಾಯಿತಿಯ ಬಸ್‌ ಪಾಸ್‌ ಗಳನ್ನು ಬೇಗ ಕೊಡಬಾರದೆ? ಬೆಂಗಳೂರು ಸಿಟಿಬಸ್‌ ಗಳಲ್ಲಿ, ಮುದುಕರಿಗೆ ಯಾವ ರೀತಿಯ ರಿಯಾಯಿತಿಯೂ ಇಲ್ಲ.

5) ‘ಬ್ಲಾಕ್‌ ಬೋರ್ಡ್‌ ಪಾಸ್‌’ ಇದ್ದ ಕೆಲವು ಮುದುಕರೇನಾದರೂ ಕಣ್ಣು ಕಾಣದೆ, ಬಸ್ಸಿನ ಬೋರ್ಡ್‌ ಗಳು ಸರಿ ಇಲ್ಲದೆ, ‘ರೆಡ್‌ ಬೋರ್ಡ್‌ ಬಸ್‌’ ಹತ್ತಿದರೆ ಮುಲಾಜಿಲ್ಲದೆ ಅವರನ್ನು ಕೆಳಕ್ಕೆ ಇಳಿಸುತ್ತಾರೆ ಬಸ್ಸಿನ ನಿರ್ವಾಹಕರು. ಅದು ಅವರ ತಪ್ಪಲ್ಲ. ಹತ್ತಿದವರ ತಪ್ಪು ನಿಜ. ಹತ್ತಲಿಕ್ಕೇ ಕಷ್ಟಪಡುವ, ‘ಬ್ಲಾಕ್‌ ಬೋರ್ಡ್‌ ಪಾಸ್‌ ಪಡೆದಿದ್ದ’ ಈ ಮುದುಕರಿಗೆ, ರೆಡ್‌ ಬೋರ್ಡ್‌ ಬಸ್ಸಿನಲ್ಲಿಯಾದರೂ ಹೋಗಲು ಸರ್ಕಾರ ಅವರಿಗೆ ಅನುಮತಿ ಕೊಡಬಾರದೆ?.

6) ಮುದುಕರ ಬಳಿ ‘ಬ್ಲಾಕ್‌ ಬೊರ್ಡ್‌ ಬಸ್‌ ಪಾಸ್‌’ ಇದ್ದರೂ ‘ರೆಡ್‌ ಬೋರ್ಡ್‌ ಬಸ್‌’ಗಳಲ್ಲಿ ಅದಕ್ಕೆ ಬೆಲೆ ಇಲ್ಲ. ಅವರಿಂದ ಟಿಕೆಟ್ಟಿನ ಪೂರ್ತಾ ಹಣ ಪಡೆಯುವುದು ಇಲ್ಲವೆ ಅವರನ್ನ ಕೆಳಕ್ಕಿಳಿಸುವುದು ಯಾವ ನ್ಯಾಯ. ಬೇಕಿದ್ದರೆ ಅವರಿಂದ ಒಂದೋ ಎರಡೋ ರೂಪಾಯಿ (ಡಿಫರೆನ್ಸ್‌) ಹಣ ಪಡೆದು ಅದೇ ಬಸ್ಸಿನಲ್ಲಿ ಹೋಗಲು ಅನುಮತಿ ಕೊಡಬಾರದೆ? ಕಷ್ಟಪಟ್ಟು ಹತ್ತಿದ ಅವರನ್ನ, ಮತ್ತೆ ಕೇಳಿದಷ್ಟು ಕೊಡಲಾಗದ ಮುದುಕರನ್ನ ಬಸ್‌ನಿಂದ ಇಳಿಸುವುದು ನ್ಯಾಯವೆ? ಆತಿ ಎತ್ತರದ ಮೆಟ್ಟಲಿರುವ ಬಸ್‌ಗಳಲ್ಲಿ, ನುಗ್ಗುವ ಯವಕರೆಲ್ಲಾ ಹತ್ತಿದ ಮೇಲೆ ಅವರು ಪ್ರಯಾಸದಿಂದ ಬಸ್‌ ಹತ್ತುವುದನ್ನು ನೋಡಿದ್ದೇನೆ. ಅವರಿಗಾಗಿ ಕಾದಿರಿಸಿದ ಜಾಗವನ್ನು ಇತರರು ಬಿಟ್ಟುಕೊಡುವುದಿಲ್ಲ. ನಿಂತೇ ಇರುವುದನ್ನು ನೋಡುತ್ತಾ ಸುಮ್ಮನಿರುತ್ತಾರೆ ನಿರ್ವಾಹಕರು. ಅವರ ಮೇಲೆ ಕರುಣೆ ಇರಲಿ. ಇದನ್ನೆಲ್ಲ ಕರುಣಿಸಲು ಬಹಳ ಹಣ ಬೇಕಿಲ್ಲ. ನಮ್ಮ ಸರ್ಕಾರಕ್ಕೆ ಮಾನವೀಯತೆ ಬೇಕು.

7) ಸರ್ಕಾರೀ ಆಸ್ಪತ್ರೆಗಳಲ್ಲಿ ಜೀರಿಯಾಟ್ರಿಕ್‌/ಮುದುಕರ ವಾರ್ಡ್‌ ತೆರೆಯಬೇಕು. ರಸ್ತೆಗಳಲ್ಲಿ ಮುದುಕರು ರೋಗಗ್ರಸ್ತರಾಗಿ ಬಿದ್ದಿರಬಾರದು.

8) ನಮ್ಮ ಘನಸರ್ಕಾರದವರು ಹಿರಿಯರಿಗೆ ಬಸ್‌ಗಳಲ್ಲಿ ರಿಯಾಯಿತಿ ನೀಡಲಿ. ದೇಶದೆಲ್ಲೆಡೆಯೂ ಆ ರಿಯಾಯಿತಿ ಎಲ್ಲ ಮುದುಕರಿಗೂ ಸಿಗಲಿ.

ಮುಂದಿನ ವಿಶ್ವ ಮುದುಕರ ದಿನಾಚರಣೆ ಮಾಡುವ ಹೊತ್ತಿಗಾದರೂ ಮೇಲಿನವುಗಳಲ್ಲಿ ಕೆಲವಾದರೂ ಮುದುಕರಿಗೆ ಸಿಕ್ಕಲಿ.

Note;

This govt, to show that the congress govt cares for the senior citizens, has exempted the people above 65 yrs going to clubs and resorts in Karnataka from paying the luxury taxes in its recent cabinet meeting(16th October 2003).

ಮುಖ್ಯಮಂತ್ರಿ ಕೃಷ್ಣ ಅವರ ಇ-ಮೇಲ್‌ ವಿಳಾಸ : [email protected]
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇ-ವಿಳಾಸ : [email protected]

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ ?


ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+