ಕರ್ನಾಟಕ ಹೋಳಾದೀತು ಎಚ್ಚರ! ಸಮ್ಮೇಳನದಲ್ಲಿ ಪಾಪು ಕರೆಗಂಟೆ
ಮೂಡಬಿದಿರೆ : ಪ್ರಾದೇಶಿಕ ಅಸಮಾನತೆ ನೀಗದಿದ್ದಲ್ಲಿ ಒಂದಲ್ಲಾ ಒಂದು ದಿನ ರಾಜ್ಯ ಹೋಳಾಗುವುದು ತಪ್ಪದು ಎಂದು ನಿಕಟಪೂರ್ವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಾಗೂ ಕನ್ನಡ ಚಳವಳಿಕಾರ ಪಾಟೀಲ ಪುಟ್ಟಪ್ಪ ಎಚ್ಚರಿಸಿದ್ದಾರೆ.
ಗುರುವಾರ ಮೂಡಬಿದಿರೆಯಲ್ಲಿ ಆರಂಭವಾದ 71ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ , ನಿಕಟಪೂರ್ವ ಅಧ್ಯಕ್ಷ ಭಾಷಣ ಮಾಡಿದ ಪಾಪು- ಪ್ರಾದೇಶಿಕ ಅಸಮಾನತೆಯ ಕುರಿತ ತಮ್ಮ ನಿಲುವನ್ನು ಪುನರುಚ್ಚರಿಸಿದರು.
ನಂಜುಂಡಪ್ಪ ವರದಿಯ ಶಿಫಾರಸ್ಸಿನಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ ನಿರ್ದಿಷ್ಟ ಮೊತ್ತ ಮೀಸಲಿಡಬೇಕು ಎಂದು ಪಾಪು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಮೂಡಬಿದಿರೆ ಸಮ್ಮೇಳನಾಧ್ಯಕ್ಷೆ ಡಾ.ಕಮಲಾ ಹಂಪನಾ ಅವರಿಗೆ ಪಾಪು ಧ್ವಜ ಹಸ್ತಾಂತರಿಸಿದರು.
ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳು ಕೇವಲ ಕಾಗದದ ಮೇಲಷ್ಟೇ ಉಳಿಯುವ ಕುರಿತು ಪಾಟೀಲ ಪುಟ್ಟಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಸಮ್ಮೇಳನದ ನಿರ್ಣಯಗಳು ಕಾರ್ಯಗತಗೊಳ್ಳಲು ಸರ್ಕಾರ ಮುಂದಾಗಬೇಕೆಂದು ಪಾಪು ಒತ್ತಾಯಿಸಿದರು.
ರಾಜ್ಯದಲ್ಲಿ ಪುಸ್ತಕ ಸಂಸ್ಕೃತಿ ನಶಿಸುತ್ತಿದೆ. ನೆರೆಯ ಕೇರಳ ಸರ್ಕಾರ ಮಲಯಾಳಿ ಲೇಖಕರಿಗೆ ಪ್ರೋತ್ಸಾಹ ನೀಡುತ್ತಿದೆ. ಪ್ರತಿ ಲೇಖಕರ 2500 ಪ್ರತಿಗಳನ್ನು ಕೇರಳದ ಗ್ರಂಥಾಲಯ ಇಲಾಖೆ ಕೊಳ್ಳುತ್ತಿದೆ. ಈ ಪರಿಸ್ಥಿತಿ ಕರ್ನಾಟಕದಲ್ಲಿ ಏಕಿಲ್ಲ ಎಂದು ಪ್ರಶ್ನಿಸಿದ ಪಾಪು- ಪ್ರತಿ ಲೇಖಕರ ಸಾವಿರ ಪ್ರತಿಗಳನ್ನಾದರೂ ಕೊಳ್ಳುವಂತೆ ಸರ್ಕಾರ ನಿಯಮ ರೂಪಿಸಬೇಕೆಂದು ಪಾಪು ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಮೂಡಬಿದಿರೆ ಸಾಹಿತ್ಯ ಸಮ್ಮೇಳನ












Click it and Unblock the Notifications