ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಥೆಗಾರ ಎಸ್‌.ದಿವಾಕರ್‌ಗೆ ಅಯೋವಾ ವಿವಿ ಕಮ್ಮಟಕ್ಕೆಆಹ್ವಾನ

By Staff
|
Google Oneindia Kannada News

ಬೆಂಗಳೂರು : ಜಾಗತಿಕ ಕಥಾಕೋಶಕ್ಕೆ ಕನ್ನಡ ಓದುಗರನ್ನು ಕೈ ಹಿಡಿದು ನಡೆಸಿದ ಪ್ರಸಿದ್ಧ ಕಥೆಗಾರ ಎಸ್‌.ದಿವಾಕರ್‌, ಅಮೆರಿಕಾದ ಅಯೋವಾ ವಿಶ್ವವಿದ್ಯಾಲಯದಲ್ಲಿ ನಡೆಯುವ ‘ಅಂತರರಾಷ್ಟ್ರೀಯ ಲೇಖಕರ ಕಾರ್ಯಾಗಾರ’ ಕ್ಕೆ ಆಹ್ವಾನಿತರಾಗಿದ್ದಾರೆ.

ಆಗಸ್ಟ್‌ 25 ರಿಂದ ಕಮ್ಮಟ ಆರಂಭವಾಗಲಿದ್ದು , ಕಮ್ಮಟದ ಅಂಗವಾಗಿ ಕನ್ನಡದ ಉತ್ತಮ ಕಥೆಗಳನ್ನು ದಿವಾಕರ್‌ ಇಂಗ್ಲಿಷ್‌ಗೆ ಅನುವಾದಿಸುವರು. ಇದೇ ಸಂದರ್ಭದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರ ಸಂಕಿರಣ ಹಾಗೂ ಚರ್ಚೆಯಲ್ಲಿ ದಿವಾಕರ್‌ ಭಾಗವಹಿಸುವರು.

ವಿಶ್ವದ ಪ್ರತಿಭಾನ್ವಿತ ಬರಹಗಾರರಿಗೆ ಅಮೆರಿಕಾದ ಬದುಕನ್ನು ಪರಿಚಯಿಸುವ ಹಾಗೂ ಸೃಜನಶೀಲ ಕೃತಿಗಳ ರಚನೆಗೆ ತಕ್ಕ ವಾತಾವರಣವನ್ನು ಕಲ್ಪಿಸುವ ಉದ್ದೇಶದ- ಅಯೋವಾ ವಿಶ್ವ ವಿದ್ಯಾಲಯದ 35 ನೇ ವರ್ಷದ ‘ಅಂತರರಾಷ್ಟ್ರೀಯ ಲೇಖಕರ ಕಾರ್ಯಾಗಾರ’ ವನ್ನು ಈ ಬಾರಿ ಬರಹಗಾರರಿಗೆ ಹಾಗೂ ಅನುವಾದಕರಿಗೆಂದೇ ರೂಪಿಸಲಾಗಿದೆ. ನೊಬೆಲ್‌ ಪ್ರಶಸ್ತಿ ವಿಜೇತ ಕವಿ ಡೆರೆಕ್‌ ವಾಲ್ಕಾಟ್‌ ಕೂಡ ಕಮ್ಮಟದಲ್ಲಿ ಭಾಗವಹಿಸುವರು.

ಕಥೆಗಾರ ದಿವಾಕರ್‌

ಪ್ರಸ್ತುತ ಚೆನ್ನೈನಲ್ಲಿನ ಅಮೆರಿಕ ರಾಯಭಾರಿ ಕಚೇರಿಯಲ್ಲಿ ಕನ್ನಡ ವಿಭಾಗದ ಸಂಪಾದಕರಾಗಿ ಕೆಲಸ ಮಾಡುತ್ತಿರುವ ದಿವಾಕರ್‌ ಸಣ್ಣ ಕಥೆಗಾರರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಸಿದ್ಧರು. ಜಗತ್ತಿನ ಶ್ರೇಷ್ಠ ಸಣ್ಣಕಥೆಗಳನ್ನು ಕನ್ನಡಕ್ಕೆ ತಂದಿರುವ ದಿವಾಕರ್‌, ಕನ್ನಡದ ಕೆಲವು ಶ್ರೇಷ್ಠ ಕಥೆಗಳನ್ನು ಇಂಗ್ಲಿಷಿಗೂ ಅನುವಾದಿಸಿದ್ದಾರೆ. ದಿವಾಕರ್‌ ಕನ್ನಡಕ್ಕೆ ಅನುವಾದಿಸಿದ ಜಗತ್ತಿನ ಅತ್ಯಂತ ಚಿಕ್ಕ ಕಥೆಗಳು ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದು , ಪುಸ್ತಕರೂಪದಲ್ಲಿಯೂ ಹೊರಬಂದಿವೆ.

18 ಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ಪ್ರಕಟಿಸಿರುವ ದಿವಾಕರ್‌ ಅವರಿಗೆ ‘ರಾಜ್ಯೋತ್ಸವ ಪುರಸ್ಕಾರ’ ನೀಡುವ ಮೂಲಕ ರಾಜ್ಯ ಸರ್ಕಾರ ಗೌರವಿಸಿದೆ. ಕನ್ನಡಪ್ರಭ ಸಂಕ್ರಾಂತಿ ಕಥಾಸ್ಪರ್ಧೆ, ವಿಜಯಕರ್ನಾಟಕ ಯುಗಾದಿ ಕಥಾಸ್ಪರ್ಧೆ, ಕಥಾರಂಗಂನ ಪ್ರಶಸ್ತಿಗಳು ದಿವಾಕರ್‌ ಕಥನ ಪ್ರತಿಭೆಗೆ ಸಂದ ಕೆಲವು ಗರಿಗಳು. ಪ್ರಸ್ತುತ ‘ಉದಯ ವಾಣಿ’ ಪತ್ರಿಕೆಯಲ್ಲಿ ದಿವಾಕರ್‌ ಅವರ ‘ಅಚ್ಚುಮೆಚ್ಚು’ ಅಂಕಣ ಪ್ರಕಟವಾಗುತ್ತಿದೆ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X