ನಮ್ಮ ಬದುಕಿನಲ್ಲಿ ಸೋಲು-ಗೆಲುವಿನ ಆಟ ಹೇಗಿರುತ್ತದೆ..? ಎದುರಿಸುವುದು ಹೇಗೆ..?
ಸೋಲು ಗೆಲುವು ಎನ್ನುವುದು ಕೇವಲ ಸ್ಪರ್ಧೆಗಷ್ಟೇ ಸೀಮಿತವಾಗಿ ಉಳಿದಿಲ್ಲ. ನಮ್ಮ ಬದುಕಿಗೂ ಈಗ ಅನ್ವಯಿಸಲಾರಂಭಿಸಿದೆ. ನಮ್ಮ ಬದುಕಿನಲ್ಲಿ ವಿವಿಧ ಕಾರಣಗಳಿಗೆ ಸೋಲು ಗೆಲುವಿನ ಆಟ ಶುರುವಾಗಿದೆ. ಅದನ್ನು ಆಡಲೇ ಬೇಕಾಗಿದೆ. ಇಲ್ಲಿ ನಾವು ಸುಖ ಮತ್ತು ನೆಮ್ಮದಿಯನ್ನ ಉಳಿಸಿಕೊಳ್ಳಬೇಕಾದರೆ ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಇರುವುದನ್ನು ಕಲಿಯ ಬೇಕಷ್ಟೆ. ಅದೊಂದನ್ನು ಕಲಿತುಕೊಂಡರೆ ಬದುಕಿನಲ್ಲಿ ಖುಷಿಯಾಗಿ ಇದ್ದು ಬಿಡಬಹುದು.
ಹಿಂದಿನ ಕಾಲದಲ್ಲಿ ಹೊಟ್ಟೆಬಟ್ಟೆಗಿದ್ದರೆ ಸಾಕು. ಅಷ್ಟಕ್ಕೆ ಸಂಪಾದನೆ ಮಾಡಿಕೊಂಡು ನೆಮ್ಮದಿಯಾಗಿರುತ್ತಿದ್ದರು. ಬೇರೆಯವರನ್ನು ನೋಡಿ ಹಲಬುವ ಬದಲು ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಈಗ ಹಾಗಿಲ್ಲ ಕಾಲ ಬದಲಾಗಿದೆ. ಎಲ್ಲ ಕ್ಷೇತ್ರದಲ್ಲೂ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಸದಾ ಗೆಲುವಿನತ್ತಲೇ ಗುರಿಯಿಟ್ಟುಕೊಂಡು ಮುನ್ನಡೆಯುವುದು ಅನಿವಾರ್ಯವಾಗಿದೆ.

ಗೆಲುವಿಗಾಗಿ ತಂತ್ರ, ಕುತಂತ್ರ, ಅನ್ಯಾಯ, ಭ್ರಷ್ಟಾಚಾರ ಹೀಗೆ ನಮ್ಮಿಂದ ಏನೆಲ್ಲಾ ಮಾಡಲು ಸಾಧ್ಯವೋ ಅದೆಲ್ಲವನ್ನು ಮಾಡುತ್ತಾ ಸಾಗುತ್ತಿದ್ದೇವೆ. ಇದರಿಂದ ಹೇರಳ ಹಣವನ್ನು ಸಂಪಾದಿಸಿ ಕೂಡಿಡುತ್ತಿದ್ದರೂ ಅದರಿಂದ ದೈಹಿಕ ಮತ್ತು ಮಾನಸಿಕ ಎರಡು ಆರೋಗ್ಯವೂ ಇಲ್ಲದಾಗಿದೆ.
ನಾವು ಏನೇ ಮಾಡಿದರೂ ನಮಗೊಬ್ಬ ಪ್ರತಿಸ್ಪರ್ಧಿ ಎಲ್ಲಿ ಹುಟ್ಟಿಬಿಡುತ್ತಾನೋ ಎಂಬ ಭಯ ನಮ್ಮನ್ನು ಸದಾ ಕಾಡುತ್ತಲೇ ಇರುತ್ತದೆ. ಇಷ್ಟಕ್ಕೂ ನಾವು ಸಂಪಾದನೆಗಾಗಿ ಅನ್ಯ ಮಾರ್ಗವನ್ನಿಡಿದು ಸಂಪಾದಿಸಿದ್ದರೂ ಮಾನಸಿಕ ನೆಮ್ಮದಿ ಸಿಕ್ಕಿದೆಯಾ? ಆರೋಗ್ಯವಾಗಿದ್ದೇವೆಯೇ?.
ನೆಮ್ಮದಿಯ ನಿದ್ದೆ ಬಂದಿದೆಯಾ ಹೀಗೆ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಹೆಚ್ಚಿನವುಗಳಿಗೆ ಇಲ್ಲ ಎಂಬ ಉತ್ತರವೇ ಬರುತ್ತದೆ. ಈಗಿನ ತೋರಿಕೆಯ ಬದುಕಿನಲ್ಲಿ ನಾಲ್ಕು ಜನರ ಮುಂದೆ ತಮ್ಮ ಐಶ್ವರ್ಯ, ಸಂಪತ್ತು, ಐಷಾರಾಮಿ ಜೀವನವನ್ನು ತೋರ್ಪಡಿಸಬೇಕು. ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಒಂದೇ ಒಂದು ಕಾರಣಕ್ಕೆ ಸಮಾಜಸೇವೆ ಮಾಡುವವರು ಇಲ್ಲದಿಲ್ಲ.

ಒಬ್ಬ ಸೋತರಷ್ಟೆ ಮತ್ತೊಬ್ಬ ಗೆಲ್ಲಲು ಸಾಧ್ಯ
ತಾವು ಅಕ್ರಮವಾಗಿ ಮಾಡಿದ ಸಂಪಾದನೆಯಲ್ಲಿ ಒಂದಷ್ಟನ್ನು ಸಮಾಜಕ್ಕೆ ದಾನ ಮಾಡಿ ಅಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳುವ ಕಾರ್ಯವನ್ನು ಮಾಡುವ ಹಲವರು ತಮ್ಮೊಂದಿಗಿದ್ದಾರೆ. ಅವರು ಮಾಡುತ್ತಿರುವುದು ನಿಜಕ್ಕೂ ಸ್ವಾರ್ಥ ರಹಿತ ಸಮಾಜ ಸೇವೆನಾ? ಖಂಡಿತಾ ಅಲ್ಲ. ಅದು ತಮ್ಮ ಬೇಳೆ ಬೇಯಿಸಿಕೊಳ್ಳುವ ಮತ್ತು ತಮ್ಮ ಗೆಲುವಿಗಾಗಿ ಮಾಡಿಕೊಳ್ಳುತ್ತಿರುವ ಭದ್ರತೆ ಅಷ್ಟೆ.
ಮನುಷ್ಯ ಜೀವನದಲ್ಲಿ ಸೋಲು ಗೆಲುವು ಸಹಜ. ಗೆಲುವಿಗೆ ಹಿಗ್ಗದೆ ಸೋಲಿಗೆ ಕುಗ್ಗದೆ ಎರಡನ್ನೂ ಸಮನಾಗಿ ಸ್ವೀಕರಿಸುವ ಮನಸ್ಥಿತಿ ತಮ್ಮದಾಗಿರಬೇಕು. ಸದಾ ಗೆಲುವೇ ನಮ್ಮದಾಗಿರುತ್ತೆ ಎಂಬ ಭ್ರಮೆಯಿಂದ ಹೊರಬರಬೇಕು. ಏಕೆಂದರೆ ತಲೆಗೆ ಹಾಕಿದ ನೀರು ಕಾಲಿಗೆ ಬರುತ್ತೆ ವಿನಃ ಕಾಲಿಗೆ ಹಾಕಿದ ನೀರು ತಲೆಗೆ ಬರುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು ಜೀವನ ನಡೆಸುವುದು ಅಗತ್ಯವಿದೆ.
ಒಬ್ಬ ಗೆದ್ದಿದ್ದಾನೆ ಎಂದಾದರೆ ಮತ್ತೊಬ್ಬ ಸೋತಿದ್ದಾನೆ ಎಂದರ್ಥ. ಆಧ್ಯಾತ್ಮದಲ್ಲಿ ಚಿಂತಕರು ಹೇಳುತ್ತಾರೆ. ನಾವು ಬೇರೆಯವರನ್ನು ಗೆಲ್ಲುವುದರಲ್ಲಿ ಯಾವ ಶೂರತ್ವವೂ ಇಲ್ಲ. ನಾವು ನಮ್ಮನ್ನು ಗೆಲ್ಲುವುದರಲ್ಲಿ ನಿಜವಾದ ಶೂರತ್ವ ಅಡಗಿದೆ ಎಂದು. ಇದು ಅಚ್ಚರಿಯಾಗಿ ಕಾಣಬಹುದು. ಇದೇ ವಿಚಾರವನ್ನು ಭಗವಾನ್ ಬುದ್ಧ ಒಂದು ಕಡೆ ಹೇಳುತ್ತಾರೆ. ಒಬ್ಬ ರಣರಂಗದಲ್ಲಿ ಸಾವಿರಾರು ಯೋಧರನ್ನು ಸೋಲಿಸಿ ಗೆಲುವು ಪಡೆದಿರಬಹುದು. ಆದರೆ ಇದಕ್ಕಿಂತಲೂ ನಿತ್ಯದ ಬದುಕಿನ ಜಂಜಾಟದಲ್ಲಿ ತನ್ನನ್ನು ತಾನು ಗೆಲುವುದು ನಿಜವಾದ ಗೆಲುವು ಎಂದು ಹೇಳಿದ್ದಾರೆ.

ಗೆದ್ದವರು ಸಾವಿಗೆ ಶರಣಾದ ನಿದರ್ಶನಗಳಿವೆ.
ಬಹಳಷ್ಟು ಮಂದಿ ಬೇರೆಯವರ ವಿರುದ್ಧ ಹೋರಾಡಿ ಗೆದ್ದಿದ್ದರೂ ತಮ್ಮನ್ನು ಗೆಲ್ಲಲಾಗದೆ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಮುಂದಾಗುವುದನ್ನು ನಾವು ಆಗಾಗ್ಗೆ ಕಾಣುತ್ತಿರುತ್ತೇವೆ. ಹಾಗಾಗಿ ಮನುಷ್ಯನ ಬದುಕು ಮೇಲ್ನೋಟಕ್ಕೆ ಏನೂ ಅಲ್ಲ. ಆದರೆ ಇಲ್ಲಿ ಎಲ್ಲವೂ ಇದೆ ಎಂಬುವುದನ್ನು ಮಾತ್ರ ಯಾರೂ ಮರೆಯಬಾರದು.
ಸೋತವನೂ ಮಾತ್ರ ಗೆಲುವನ್ನು ಅರ್ಥ ಮಾಡಿಕೊಳ್ಳಬಲ್ಲ. ಅಷ್ಟೇ ಅಲ್ಲ ಅದನ್ನು ಕಾಪಾಡಿಕೊಳ್ಳಬಲ್ಲ. ಆದರೆ ಗೆದ್ದವನು ಸೋತರೆ ಕಂಗಾಲಾಗಿ ಬಿಡುತ್ತಾನೆ. ಇಲ್ಲಿಗೆ ಬದುಕೇ ಮುಗಿದು ಹೋಯಿತು ಎಂದುಕೊಳ್ಳುತ್ತಾನೆ. ಹಾಗಾಗಿ ಗೆಲುವಿನ ಹಿಂದೆಯೇ ಸೋಲಿನ ನೆರಳಿದೆ ಎಂಬ ಎಚ್ಚರಿಕೆಯನ್ನು, ಸೋತವನು ನಾಳೆ ನಮಗೂ ಗೆಲುವಿದೆ ಎಂಬ ಭರವಸೆಯ ಬೆಳಕಲ್ಲಿ ಬದುಕಬೇಕು. ಸೋಲು ಗೆಲುವು ಎರಡನ್ನು ಸಮಾನವಾಗಿ ಎದುರಿಸಲು ಮಾನಸಿಕವಾಗಿ ತಯಾರಿ ಮಾಡಿಕೊಳ್ಳಬೇಕು.
ಗೆಲುವು ಒಂದೇ ಅದು ಕೊಡುವ ತೃಪ್ತಿ ಭಿನ್ನ
ಗೆಲುವು ಒಂದೇ ಆದರೂ ಅದನ್ನು ಅನುಭವಿಸುವ ಮನಸ್ಥಿತಿ ಮಾತ್ರ ವಿಭಿನ್ನವಾಗಿರುತ್ತದೆ. ಜೂಜಿನಲ್ಲಿ ಗೆದ್ದವನಿಗೂ, ಕಷ್ಟಪಟ್ಟು ಆಟವಾಡಿ ಗೆದ್ದ ಕ್ರೀಡಾಪಟುವಿಗೂ ಗೆಲುವು ಒಂದೇ ಆದರೂ ಮನಸ್ಥಿತಿ ಬೇರೆಯಾಗಿರುತ್ತದೆ. ಇಬ್ಬರಿಗೂ ಗೆಲುವು ಹಣದ ರೂಪದಲ್ಲೇ ಬಂದಿದ್ದರೂ ಒಂದರಲ್ಲಿ ಸಿಕ್ಕ ತೃಪ್ತಿ, ಸಾರ್ಥಕ್ಯ ಮತ್ತೊಂದರಲ್ಲಿ ಇರುವುದಿಲ್ಲ.
ಮೇಲ್ಮೋಟಕ್ಕೆ ಸ್ನೇಹ ಬಾಂಧವ್ಯ ಇದ್ದರೂ ನಮ್ಮೊಳಗೆ ಗೆಲುವಿನ ಹೋರಾಟ ಇದ್ದೇ ಇರುತ್ತದೆ. ಅವನಿಗಿಂತ ಮೇಲ್ದರ್ಜೆಗೆ ಹೋಗಬೇಕು. ಅವನ ಮುಂದೆ ಗೆಲುವು ನನ್ನದೇ ಆಗಿರಬೇಕು ಎಂದು ಸದಾ ಯೋಚಿಸುತ್ತಿರುತ್ತಾನೆ. ಅಷ್ಟೇ ಅಲ್ಲ ಅದಕ್ಕೆ ಬೇಕಾದ ಮಾರ್ಗಗಳನ್ನು ಹುಡುಕುತ್ತಿರುತ್ತೇವೆ. ಗೆಲುವುಗಳು ಒಂದು ಹಂತದಲ್ಲಿ ನಮ್ಮದೇ ಆಗಿರಬಹುದು.
ಸೋತವನಿಗೆ ಗೆಲುವಿನ ಬೆಲೆ ಗೊತ್ತಿರುತ್ತದೆ
ಗೆಲುವಿನ ಅಮಲಿನಲ್ಲಿ ಸೋತವರನ್ನು ಅಣಕಿಸುವುದು ಮಾತ್ರ ಮಹಾ ಪಾಪದ ಕೆಲಸ. ಕೆಲವೊಮ್ಮೆ ಗೆದ್ದವನು ಗೆಲುವಿನ ಖುಷಿಯಲ್ಲಿ ಮೈಮರೆತು ತಟಸ್ಥನಾಗಿಬಿಡಬಹುದು. ಆದರೆ ಸೋತವನು ಚಲನಶೀಲನಾಗಿರುತ್ತಾನೆ. ಆತ ಗೆಲುವಿಗಾಗಿ ಶ್ರಮಪಡುತ್ತಿರುತ್ತಾನೆ. ಅವನಲ್ಲಿ ಒಂದೇ ಒಂದು ಗುರಿ ಅದು ಗೆಲುವು. ಆ ಗೆಲುವಿಗಾಗಿ ಅವನು ಅವಿರತ ಶ್ರಮಿಸುತ್ತಿರುತ್ತಾನೆ. ಹಾಗಾಗಿ ಮುಂದೆ ಗೆದ್ದರೂ ಆ ಗೆಲುವನ್ನು ಜತನದಿಂದ ಕಾಯ್ದುಕೊಳ್ಳುತ್ತಾನೆ. ಏಕೆಂದರೆ ಸೋಲು ಅವನಿಗೆ ಗೆಲುವಿನ ಪಾಠ ಕಲಿಸಿರುತ್ತದೆ. ನೆನಪಿರಲಿ.. ಸೋಲನ್ನು ಉಂಡವನಿಗಷ್ಟೆ ಗೆಲುವನ್ನು ಅರಗಿಸಿಕೊಳ್ಳಲು ಸಾಧ್ಯ.
-
Summer Alert: ಬೇಸಿಗೆಯಲ್ಲಿ ಫ್ರಿಜ್ ನೀರು ಕುಡಿಯುತ್ತಿದ್ದೀರಾ? ಮೊದಲು ಈ ವಿಷಯ ತಿಳಿದುಕೊಳ್ಳಿ -
ವಾಸ್ತು ಮಾತ್ರ ಸಾಲದು! ನಿಮ್ಮ ಜಾತಕವೇ ಯಶಸ್ಸನ್ನು ನಿರ್ಧರಿಸುತ್ತದೆ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral












Click it and Unblock the Notifications