Happiness: ಕ್ಷಣಿಕ ಸುಖದ ಬಗ್ಗೆ ಸ್ವಾಮಿ ಶಿವಾನಂದರು ಹೇಳಿದ್ದೇನು..?
ಕ್ಷಣಿಕ ಸುಖವೇ ವಿಚಿತ್ರ ಮತ್ತು ವಿಭಿನ್ನ. ಅದು ನಮಗೆ ಸುಖ, ನೆಮ್ಮದಿ ಎಲ್ಲವನ್ನು ಒಟ್ಟಿಗೆ ಕೊಟ್ಟು ಬಿಡುತ್ತದೆ. ಆ ನಂತರ ಅದು ನಮ್ಮಿಂದ ಕಂದಾಯ ಕೇಳುತ್ತದೆ. ಹೀಗಾಗಿ ಆ ಕ್ಷಣಿಕ ಸುಖವೆಂದರೇನು? ಅದು ಕೊಡುವ ಸುಖ ಮತ್ತು ಕಷ್ಟಗಳೇನು ಎಂಬುದರ ಕುರಿತಂತೆ ಸ್ವಾಮಿ ಶಿವಾನಂದರು ಕಥೆಯೊಂದನ್ನು ಹೇಳಿದ್ದಾರೆ. ಅದು ಹೀಗಿದೆ.
ನದಿಯೊಂದರ ತಟ ಮೇಲೆ ಸೇರಿದ ಅಗ್ನಿ ಮತ್ತು ಜಲ ತಮ್ಮಲ್ಲಿ ಯಾರು ಬಲಿಷ್ಠರು ಎಂಬುದರ ಬಗ್ಗೆ ಚರ್ಚಿಸತೊಡಗಿದರು. ಇಬ್ಬರೂ ತಮ್ಮ, ತಮ್ಮ ಶಕ್ತಿಗಳನ್ನು ಹೇಳಿಕೊಳ್ಳ ತೊಡಗಿದರು. ಜಲವು ತಾನು ಎಷ್ಟು ಬಲಿಷ್ಠನೆಂದರೆ ಅಗಾಧ ಜ್ವಾಲೆಗಳನ್ನು ಕ್ಷಣಾರ್ಧದಲ್ಲಿ ಆರಿಸಿ ಬಿಡುವ ಶಕ್ತಿ ನನಗಿದೆ. ಸಣ್ಣ ಪಾತ್ರೆಗಳಲ್ಲಿ ಸಿಕ್ಕಾಗ ಮಾತ್ರ ನಿನಗೆ ಸೋಲುವೆನಾದರೂ ಉಳಿದಂತೆ ನನಗೆ ನೀನು ಯಾವ ರೀತಿಯಿಂದಲೂ ಸಮಾನನಲ್ಲ ಎಂದಿತು. ಅದು ಅಗ್ನಿಗೆ ನಿಜ ಎಂಬಂತೆ ತೋರಿತು. ಹೇಗಾದರು ಮಾಡಿ ಉಪಾಯದಿಂದ ಜಲವನ್ನು ಸೋಲಿಸುವ ಬಗೆಗೆ ಆಲೋಚಿಸಿತು.

ನೇರವಾಗಿ ಜಲದೊಂದಿಗೆ ಸೆಣಸಿ ಗೆಲ್ಲುವಂತೆಯೂ ಇರಲಿಲ್ಲ. ಹಾಗಾಗಿ ಜಲವನ್ನು ಉಪಾಯದಿಂದ ಸೋಲಿಸುವ ಪ್ರಯತ್ನವನ್ನು ಅಗ್ನಿಯು ಮಾಡಿತು. ಜಲವೇ ಲೋಕ ಕಲ್ಯಾಣದಲ್ಲಿ ತೊಡಗಿರುವ ನೀನು ಲೋಕದ ಪಾಪವನ್ನೆಲ್ಲಾ ತೊಳೆದು ಪವಿತ್ರಗೊಳಿಸುವ ಕಾಯಕದಲ್ಲಿ ನಿರತರಾಗಿರುವೆ. ಈ ಭರದಲ್ಲಿ ನಿನ್ನ ಮೈಯೆಲ್ಲಾ ಕೊಳೆ ತುಂಬಿದೆ. ನಿನ್ನ ಮೈಯ್ಯಲ್ಲಿರುವ ಕೊಳೆ ತೊಳೆದು ಪರಿಶುದ್ಧವಾಗುವುದಾದರು ಬೇಡವೆ? ಈ ಸುಂದರವಾದ ಚಿನ್ನದ ಬಿಂದಿಗೆಯಲ್ಲಿ ಇಳಿ ಇದರಿಂದ ನೀನು ಶುದ್ಧವಾಗಿ ಬಿಡುವೆ ಎಂದಿತು.
ಅಗ್ನಿಯ ಮಾತಿಗೆ ಮರುಳಾದ ಜಲ
ಅಗ್ನಿ ಹೇಳುವುದು ನಿಜವೇ ಎಂದರಿತ ಜಲವು ಬಿಂದಿಗೆಯೊಳಗೆ ಇಳಿಯಿತು. ಇದೇ ಸಂದರ್ಭ ಕಾಯುತ್ತಿದ್ದ ಅಗ್ನಿಯು ತನ್ನ ಶಕ್ತಿಯನ್ನು ಬಳಸಿ ಬಿಂದಿಗೆಗೆ ಶಾಖ ನೀಡತೊಡಗಿತು. ಬಿಂದಿಗೆ ಶಾಖದಿಂದ ಬಿಸಿಯಾಗತೊಡಗಿತು. ಮೊದಮೊದಲು ಬಿಂದಿಗೆಯ ಒಳಗಿದ್ದ ಜಲಕ್ಕೆ ಹೊರಗಿನ ಬೆಚ್ಚಗೆ ಹಿತವಾಗತೊಡಗಿ ಸುಖದ ನಿಟ್ಟುಸಿರು ಬಿಡತೊಡಗಿತು. ಆದರೆ ಹೆಚ್ಚು ಹೊತ್ತು ಆ ಸುಖ ನಿಲ್ಲಲಿಲ್ಲ. ಶಾಖ ಹೆಚ್ಚಾಗತೊಡಗಿದಂತೆ ಜಲವು ಕುದಿಯತೊಡಗಿತು. ಈಗ ಜಲಕ್ಕೆ ಅಗ್ನಿಯ ಬಣ್ಣದ ಮಾತಿಗೆ ಸೋತು ಎಂತಹ ತೊಂದರೆಗೆ ಸಿಲುಕಿದೆ ಎಂಬುದು ಅರಿವಾಗತೊಡಗಿತು. ಆ ಬಗ್ಗೆಯೇ ಚಿಂತಿಸತೊಡಗಿತು.
ಇದು ಸ್ವಾಮಿ ಶಿವಾನಂದರು ಹೇಳಿದ ರೂಪ ಕಥೆ. ಈ ಕಥೆಯ ಪೂರ್ಣ ಮರ್ಮವನ್ನು ಕೂಡ ಅವರು ಹೀಗೆಯೇ ವಿವರಿಸಿದ್ದಾರೆ. ಅದೇನೆಂದರೆ ಮನುಷ್ಯನ ಇಚ್ಛೆಗಳು ಸಹ ಜಲದಂತೆ ಪರಿಶುದ್ಧವಾಗಿರಬೇಕು. ಅಷ್ಟೇ ಅಲ್ಲ ಗ್ರಾಹಕ ಶಕ್ತಿಯೂ ಪರ್ಯಾಲೋಚನೆಗೊಳಪಟ್ಟಿರಬೇಕು. ನಮ್ಮ ಕಾರ್ಯತತ್ಪರತೆಯೂ ಮೋಕ್ಷತ್ವವೂ ಮತ್ತು ಪ್ರೇಮವು ಆತ್ಮೋನ್ನತಿಗಾಗಿ ಸದಾ ಮೀಸಲಾಗಿರಬೇಕು.

ಮೊದಲಿಗೆ ಕ್ಷಣಿಕ ಸುಖ ಹಿತವೆನಿಸುತ್ತದೆ
ಹರಿದು ತನ್ನ ಪಾಡಿಗೆ ಹೋಗುವ ಜಲ ಹೇಗೆ ಶುದ್ಧವಾಗಿರುತ್ತದೆಯೋ ಅಷ್ಟೇ ಅಲ್ಲ ಸುತ್ತಲಿನ ಪರಿಸರವನ್ನು ಹೇಗೆ ಪರಿಶುದ್ಧವಾಗಿರಿಸುತ್ತದೆಯೋ ಹಾಗೆ ನಾವು ನಮ್ಮ ಇಚ್ಚೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ನಮ್ಮ ಮುಮುಕ್ಷತ್ವವನ್ನೂ ನಮ್ಮ ವಿಚಾರ ಶಕ್ತಿಯನ್ನು ಪರಿಜ್ಞಾನಪೂರ್ವಕ ಜಾಣ್ಮೆಯನ್ನೂ ನಮ್ಮೊಳಗೆ ಭದ್ರಗೊಳಿಸಿ ಇಂದ್ರಿಯಗಳನ್ನು ನಿಗ್ರಹಿಸುವ ಮೂಲಕ ಪರಿಶುದ್ಧವಾದ ಸಂತುಷ್ಟ ಬದುಕನ್ನು(ಕಟ್ಟಿಕೊಳ್ಳಬೇಕು) ಕಟ್ಟಿಕೊಂಡಿರುತ್ತೇವೆ ಎಂದಾದಲ್ಲಿ ನಮ್ಮ ಶಕ್ತಿಯನ್ನು ಪ್ರದರ್ಶಿಸಿ ಗೆಲುವು ನಿರೀಕ್ಷಿಸುವುದು ನಮ್ಮನ್ನೇ ನಾವು ನಾಶಮಾಡಿಕೊಂಡಂತೆ.
ಏಕೆಂದರೆ ನಮ್ಮಲ್ಲಿ ಅಡಗಿರುವ ಶಕ್ತಿ ನಮ್ಮ ಒಳಿತಿಗಾಗಿಯೇ ಇರುವಾಗ ಅದನ್ನು ಪ್ರದರ್ಶಿಸುವ ಅಗತ್ಯವೇ ಇಲ್ಲ. ಹಾಗೊಂದು ವೇಳೆ ಈ ಬಗ್ಗೆ ಪ್ರಯತ್ನ ಮಾಡಿದ್ದೇ ಆದರೆ ಕಾಮವೆಂಬ ಅಗ್ನಿ ನಮ್ಮನ್ನು ಮೋಸಗೊಳಿಸಲು ಸಿದ್ಧವಾಗುತ್ತದೆ. ಮೊದ ಮೊದಲು ನಮಗೆ ದೊರೆಯುವ ಸುಖಗಳು ಅದು ಶಾರೀರಿಕ ಅಥವಾ ಬಾಹ್ಯವೇ ಆಗಿರಲಿ ನಮಗೆ ಎಲ್ಲಿಲ್ಲದ ಸುಖವನ್ನು ನೀಡುತ್ತದೆ. ಇದು ಬಿಂದಿಗೆಯೊಳಗಿನ ಜಲದ ಪಾಡಿನಂತೆ ಹಿತವೆನಿಸುತ್ತದೆ. ಆದರೆ ಕಾಮವೆಂಬ ಅಗ್ನಿಯ ಶಾಖ ಹೆಚ್ಚಾಗಿ ಕುದಿಯತೊಡಗಿದಾಗ ನಮ್ಮ ನಾಶ ಬಹಳ ಸಮೀಪದಲ್ಲಿದೆ ಎಂಬುದು ಅರಿವಾಗುತ್ತದೆ. ಆಗ ನಾವು ಮಾಡಿದ ತಪ್ಪುಗಳು ಕಣ್ಮುಂದೆ ಬರುತ್ತವೆ. ಚಿಂತೆಗಳು ನಮ್ಮನ್ನು ಜೀವಂತವಾಗಿ ಸುಡಲು ಆರಂಭಿಸುತ್ತದೆ.
ಈ ಕಥೆ ನೀಡುವ ಸಂದೇಶವೇನು ಗೊತ್ತಾ?
ಹಾಗೆನೋಡಿದರೆ ಸಣ್ಣಪುಟ್ಟ ಶಾರೀರಿಕ ಸುಖಗಳಿಂದ ಮನತಣಿಸಿಕೊಳ್ಳಲು ಸ್ಪರ್ಶ ಸುಖವು ಸದಾ ಕಾತರಗೊಂಡಿರುತ್ತದೆ. ಇಲ್ಲಿ ಕಾಮವನ್ನು ಅಗ್ನಿಗೆ ಸ್ಪರ್ಶ, ದೇಹವನ್ನು ಜಲಕ್ಕೆ ಹೋಲಿಸಬಹುದು. ನಮ್ಮ ಆತ್ಮೋನ್ನತಿಗಾಗಿ ಬೇಕಾದ ಪ್ರೇಮ ಮತ್ತು ಬಯಕೆಗಳನ್ನು ಪಡೆಯಲು ನಮ್ಮಲ್ಲಿರುವ ಉನ್ನತ ಶಕ್ತಿಯನ್ನು ಉಪಯೋಗಿಸುವ ಮೂಲಕ ದುಷ್ಟವಾಸನೆಗಳೆಂಬ ಕೀಳು ಸ್ವಭಾವದ ಕಾಮವೆಂಬ ಅಗ್ನಿಗೆ ಬಲಿಯಾಗದೆ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಾಗಿದೆ.
ಈ ಕಥೆ ಎಷ್ಟೊಂದು ಅರ್ಥಪೂರ್ಣವಾಗಿದೆ. ಅಷ್ಟೇ ಅಲ್ಲದೆ ಕ್ಷಣಿಕ ಸುಖದ ಅಮಲಿನಲ್ಲಿ ಮನುಷ್ಯ ದಾರಿ ತಪ್ಪುವ ಬಗ್ಗೆ ವಿವರಿಸಿದ್ದಾರೆ. ಈ ಕಥೆ ಓದಿದ ಬಳಿಕ ಒಂದಷ್ಟು ವಿಚಾರಗಳು ನಮ್ಮನ್ನು ಜಾಗೃತಗೊಳಿಸುವುದರಲ್ಲಿ ಎರಡು ಮಾತಿಲ್ಲ. ಇವತ್ತು ನಾವೆಲ್ಲರೂ ಸುಖ, ಸಂಪತ್ತಿನಿಂದ ಹಿಂದೆ ಓಡುತ್ತಿದ್ದೇವೆ. ನಮ್ಮ ಕಣ್ಣಮುಂದೆ ಕಾಣುವುದು ಸುಖ ಮತ್ತು ಸಂಪತ್ತು ಮಾತ್ರ. ಆದರೆ ಆ ಸುಖ ಸಂಪತ್ತು ನಿಜವಾಗಿಯೂ ನಮ್ಮನ್ನು ಸುಖವಾಗಿಡುತ್ತದೆಯಾ? ಎಂಬುದನ್ನು ಪ್ರಶ್ನಿಸಿ ಉತ್ತರ ಕಂಡುಕೊಳ್ಳಬೇಕಾಗಿದೆ.












Click it and Unblock the Notifications