Life: ನೆಮ್ಮದಿಯ ಬದುಕು ನಿಮ್ಮದಾಗಬೇಕೇ..ತಪ್ಪದೆ ಈ ಅಮೃತವಾಣಿ ಓದಿ
ನಾವೆಲ್ಲರೂ ಒಂದೊಳ್ಳೆಯ, ನೆಮ್ಮದಿಯ, ಸಂಸ್ಕಾರಯುತ ಬದುಕನ್ನು ಕಟ್ಟಿಕೊಳ್ಳಬೇಕೆಂದು ಆಶಿಸುತ್ತೇವೆ, ಅದು ಸಾಧ್ಯವಾದರೆ ನಮ್ಮ ಬದುಕು ಸುಖಮಯವಾಗಿರುತ್ತದೆ. ಇವತ್ತು ಹುಟ್ಟಿ ನಾಳೆ ಸಾಯುವ ನಾವು ಅದರ ನಡುವೆ ಹೇಗೆ ಬದುಕಿದ್ದೇವೆ ಎನ್ನುವುದು ಬಹುಮುಖ್ಯವಾಗುತ್ತದೆ. ಅದು ಸಂಸ್ಕಾರಯುತ ಬದುಕಾಗಿದ್ದರೆ ಸತ್ತ ಮೇಲೂ ಜನ ನಮ್ಮ ಬಗ್ಗೆ ಒಂದೊಳ್ಳೆಯ ಮಾತನಾಡುತ್ತಾರೆ. ಹಾಗಾದರೆ ನಮ್ಮ ಬದುಕನ್ನು ಸಂಸ್ಕಾರಯುತವಾಗಿಸಿ ಕೊಳ್ಳುವುದು ಹೇಗೆ?
ಬದುಕನ್ನು ಒಂದು ಉನ್ನತ ಅಥವಾ ಸುಸಂಸ್ಕೃತ ನೆಲೆಗಟ್ಟಿನಲ್ಲಿ ಮುನ್ನಡೆಸಿಕೊಂಡು ಹೋಗುವ ಮೂಲಕ ಈ ಭೂಮಿ ಮೇಲೆ ಜೀವಂತವಾಗಿದ್ದಷ್ಟು ದಿನ ಸುತ್ತಮುತ್ತಲ ಮಂದಿಗೆ ಬೇಕಾದವರಾಗಿ ಬದುಕಿ ಬಾಳಲು ಅಥವಾ ಈ ರೀತಿಯ ಬದುಕನ್ನು ರೂಢಿಸಿಕೊಳ್ಳಿ ಎಂದು ಸಾಧು ಸಂತರು, ಹಿರಿಯರು ಹೇಳುತ್ತಲೇ ಬಂದಿದ್ದಾರೆ. ಅವಿಭಕ್ತ ಕುಟುಂಬದಲ್ಲಿ ಹಿರಿಯ ವ್ಯಕ್ತಿ ತಮಗಿಂತ ಕಿರಿಯರ ನಡವಳಿಕೆಯನ್ನು ತಿದ್ದಿ ಸುಸಂಸ್ಕೃತ ಮಾರ್ಗದಲ್ಲಿ ತೆರಳಲು ಮಾರ್ಗದರ್ಶನ ನೀಡುತ್ತಿದ್ದರು.

ಇನ್ನೊಂದೆಡೆ ನಮ್ಮ ನಡತೆಯನ್ನು ತಿದ್ದಿಕೊಂಡು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಹಿರಿಯರು ಹಲವು ಅಮೃತವಾಣಿಯನ್ನು ಬರೆದಿಟ್ಟು ಹೋಗಿದ್ದಾರೆ. ಅವುಗಳನ್ನು ಓದಿ ದಿನಂಪ್ರತಿ ಉಚ್ಛಾರ ಮಾಡುವುದರೊಂದಿಗೆ ಅದರಲ್ಲಿ ಅಡಗಿರುವ ನಿಗೂಡಾರ್ಥಗಳನ್ನು ಅರಿತು ಮನದಟ್ಟು ಮಾಡಿಕೊಂಡಿದ್ದೇ ಆದರೆ ನಾವು ತಪ್ಪು ದಾರಿಗಳಲ್ಲಿ ಸಾಗದಂತೆ ಎಚ್ಚರಿಕೆ ನೀಡುವುದರೊಂದಿಗೆ ಸನ್ಮಾರ್ಗದತ್ತ ಸಾಗಲು ಸಾಧ್ಯವಾಗಲಿದೆ.
ಹಣದ ದಾಹ ನಮ್ಮನ್ನು ಸುಖವಾಗಿಡುವುದಿಲ್ಲ
ಇನ್ನು ನಮ್ಮ ಅವನತಿಗೆ ಕಾರಣವಾಗುವುದು ಹಣದ ದಾಹವಾಗಿದ್ದು, ಹಣದ ಹಿಂದೆ ಬಿದ್ದವರಿಗೆ ಗುರುವಾಗಲೀ, ಬಂಧುವಾಗಲೀ ಇಲ್ಲ. ಕಾಮ ಪಿಪಾಸಿಗೆ ಹೆದರಿಕೆಯಾಗಲೀ ನಾಚಿಕೆಯಾಗಲೀ ಇಲ್ಲ. ವಿದ್ಯಾಸಕ್ತನಿಗೆ ಸುಖವಾಗಲೀ, ನಿದ್ರೆಯಾಗಲೀ ದೊರೆಯದು. ಹಸಿದವನಿಗೆ ಅಥವಾ ಬಾಯಾರಿದವನಿಗೆ ರುಚಿ-ಶುಚಿಗಳ ಗೊಡವೆಯೇ ಇರುವುದಿಲ್ಲ ಎಂಬುವುದನ್ನು ಹಲವು ಅಮೃತವಾಣಿಗಳು ಹೇಳಿವೆ.
ನಾನು ಸಂಪಾದಿಸಬೇಕು ಮತ್ತು ಅದರಿಂದ ಅಮೂಲ್ಯ ಸಂಪತ್ತನ್ನು ತಂದು ಮನೆಯೊಳಗೆ ಕೂಡಿಟ್ಟು ನಾನೊಬ್ಬ ಸಿರಿವಂತನಾಗಿ ಮೆರೆಯಬೇಕೆಂಬ ಹಂಬಲದಿಂದ ತನ್ನ ಬಂಧು ಬಾಂಧವರೊಂದಿಗೆ ಉತ್ತಮ ರೀತಿಯ ಬಾಂಧವ್ಯ ಹೊಂದದೆ ನಿರ್ದಾಕ್ಷಿಣ್ಯವಾಗಿ ವರ್ತಿಸುವುದರೊಂದಿಗೆ ಯಾವುದೇ ಕಷ್ಟ ಸುಖಗಳಲ್ಲಿ ಸಹಕರಿಸದೆ ಅವರನ್ನು ಹತ್ತಿರದಲ್ಲಿರಿಸಿಕೊಂಡರೆ ತನ್ನ ಸಂಪಾದನೆಗೆ ತೊಂದರೆಯಾದೀತೆಂದು ದೂರವಿರಿಸುತ್ತಾನೆ. ಇದರಿಂದ ಕ್ರಮೇಣ ಅವನ ನಡೆ-ನುಡಿಗೆ ಬೇಸತ್ತು ತಂದೆ ತಾಯಿ ಗುರುವಲ್ಲದೆ ಇತರ ಬಾಂಧವರೂ ದೂರವಾಗುತ್ತಾರೆ ಎಂಬುದನ್ನು ಅಧ್ಯಾತ್ಮಿಕ ಚಿಂತಕರು ಹಿಂದೆಯೇ ಹೇಳಿದ್ದಾರೆ. ಅದು ನಿಜವೂ ಹೌದು.

ಬದುಕಿಗೆ ಅಮೃತವಾಣಿಗಳೆಷ್ಟು ಸಹಕಾರಿ?
ಅಮೃತವಾಣಿಗಳ ಪೈಕಿ ಬದುಕಿಗೆ ಹತ್ತಿರವಾಗಿರುವ ಕೆಲವೊಂದು ಅಮೃತವಾಣಿಯನ್ನು ನೋಡಿದರೆ ಅದರ ಮಹತ್ವ ತಮ್ಮ ಬದುಕಿಗೆ ಎಷ್ಟಿದೆ ಮತ್ತು ಒಂದೊಳ್ಳೆಯ ಹಾದಿಯಲ್ಲಿ ಸಾಗಲು ಎಷ್ಟು ಸಹಕಾರಿ ಎಂಬುದು ಗೊತ್ತಾಗಲಿದೆ.
ಕಾಮಾತುರಣಾಂ ಭಯಂ ನ ಲಜ್ಜಾಃ: ಕಾಮುಕ ವ್ಯಕ್ತಿಗೆ ಯಾವುದೇ ರೀತಿಯ ಭಯ ಅಥವಾ ಲಜ್ಜೆ ಇರಲಾರದು. ಏಕೆಂದರೆ ಈತ ಇದೆಲ್ಲದಕ್ಕೂ ವಿರುದ್ಧವಾಗಿಯೇ ನಡೆಯುತ್ತಿರುತ್ತಾನೆ. ಯಾವ ಅಡ್ಡಿ ಆತಂಕ ಎಡರು ತೊಡರುಗಳನ್ನು ಲೆಕ್ಕಿಸದೆ ಮುನ್ನಡೆಯುತ್ತಾನೆ. ಲೋಕದಲ್ಲಿರುವ ಎಲ್ಲರೂ ಕಾಮದ ಬೊಂಬೆಯಾಗಿ ಕಾಣುತ್ತದೆ. ಎಲ್ಲರೊಂದಿಗೆ ಅಸಹ್ಯವಾಗಿ ವರ್ತಿಸುವ ಮೂಲಕ ತನ್ನ ಮಾನ ಮರ್ಯಾದೆಯನ್ನು ಕಳೆದುಕೊಳ್ಳುತ್ತಾನೆ. ಪರಸ್ತ್ರೀ ಸಂಗ ಮಾಡಿ ರೋಗ ರುಜಿನ, ಹಣ ಸಂಪತ್ತು ಕಳೆದುಕೊಂಡು ಮಾನ ಮರ್ಯಾದೆ ಎಲ್ಲವನ್ನೂ ಕಳೆದುಕೊಂಡು ಬದುಕನ್ನೇ ನಾಶ ಮಾಡಿಕೊಳ್ಳುತ್ತಾನೆ.
ಓದಿ ಅರ್ಥೈಸಿಕೊಂಡು ಬದುಕಬೇಕು
ವಿದ್ಯಾತುರಣಾಂ ನ ಸುಖ ನ ನಿದ್ರಾಃ ವಿದ್ಯಾಸಕ್ತನಿಗೆ ಸುಖವೆಂಬುದು ಇರಲಾರದು. ಈ ವಿದ್ಯೆ ಎಂದರೆ ಯಾವುದಾದರೂ ವೃತ್ತಿ ಕಲೆಯಾಗಿಬಹುದು. ಅದನ್ನು ಇತರರಿಂದ ಕಲಿಯ ಬೇಕಾಗಿರುವುದರಿಂದ ಅವರ ಆದೇಶದಂತೆ ಹಗಲಿರುಳೆನ್ನದೆ ಅಭ್ಯಸಿಸಬೇಕಾಗಿರುವುದರಿಂದ ಅವನಿಗೆ ನಿದ್ದೆ ವಿಶ್ರಾಂತಿ ಬಗ್ಗೆ ಗೊಡವೆಯೇ ಇರುವುದಿಲ್ಲ.
ಕ್ಷುದ್ರಾ ತುರಣಾಂ ನ ರುಚಿ ನ ಪಕ್ವಂ: ಹಸಿದು ಬಾಯಾರಿದವನಿಗೆ ಯಾವ ರುಚಿ ಶುಚಿಗಳ ಗೊಡವೆ ಇರುವುದಿಲ್ಲ. ಹಸಿವು ತೃಷೆಗಳ ಬಾಧೆಯಿಂದ ಬಳಲಿ ಬೆಂಡಾದ ಆತ ಅಪಕ್ವವಾದ ಆಹಾರಗಳನ್ನು ಅಶುದ್ಧವಾದ ನೀರನ್ನಾದರೂ ಸೇವಿಸಿ ತನ್ಮೂಲಕ ತನ್ನನ್ನು ಕಾಡುತ್ತಿರುವ ಬಾಧೆಯನ್ನು ನಿವಾರಿಸಿಕೊಳ್ಳುತ್ತಾನೆ. ಇವುಗಳನ್ನು ಓದಿ ಅದರ ಅರ್ಥ ತಿಳಿದುಕೊಂಡು ಅದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ನಿಜವಾಗಿಯೂ ನೆಮ್ಮದಿಯಾಗಿ, ಖುಷಿಯಾಗಿ, ಸಂಸ್ಕಾರಯುತ ಜೀವನ ಸಾಗಿಸಲು ಸಾಧ್ಯವಾಗಲಿದೆ ಎಂಬುದನ್ನು ಮರೆಯಬಾರದು.












Click it and Unblock the Notifications