Get Updates
Get notified of breaking news, exclusive insights, and must-see stories!

ಇಂದ್ರಿಯ ಸುಖಗಳ ಬೆನ್ನು ಹತ್ತಿದವರು ಎಂದೂ ಉದ್ಧಾರವಾಗುವುದಿಲ್ಲ!

ಇಂದ್ರಿಯಗಳನ್ನು ಸದ್ಭಳಕೆ ಮಾಡಿಕೊಳ್ಳದೆ ಅದನ್ನು ದುರುದ್ದೇಶಕ್ಕೆ ಬಳಸಿಕೊಂಡರೆ ಅದರಿಂದ ಏನಾಗುತ್ತದೆ ಎಂಬುದಕ್ಕೆ ಇವತ್ತು ರಾಜ್ಯದಲ್ಲಿ ನಡೆಯುತ್ತಿರುವ ಅಶ್ಲೀಲ ಸಿಡಿ ಪ್ರಕರಣ ಸಾಕ್ಷಿಯಾಗಿದೆ. ಇಂದ್ರಿಯ ಸೆಳೆತ ಎನ್ನುವುದು ಪುರಾಣ ಕಾಲದಿಂದ ಈಗಿನ ಕಲಿಯುಗದ ತನಕ ಯಾರನ್ನೂ ಬಿಟ್ಟಿಲ್ಲ. ಇದರ ಹಿಂದೆ ಬಿದ್ದವರು ಏನೆಲ್ಲ ಆಗಿದ್ದಾರೆ ಎನ್ನುವುದು ನಮ್ಮ ಮುಂದೆಯೇ ಇದೆ. ಹೀಗಿದ್ದರೂ ಇಂದ್ರಿಯ ಸುಖವನ್ನು ಅರಸಿ ಹೋಗುತ್ತಿದ್ದು, ಅದರಿಂದ ತಮ್ಮ ವೈಯಕ್ತಿಕ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ.

ನಿಜಹೇಳಬೇಕೆಂದರೆ ಮನುಷ್ಯನಾದವನು ಒಂದಲ್ಲಾ ಒಂದು ರೀತಿಯಲ್ಲಿ ಇಂದ್ರಿಯಗಳ ಸೆಳೆತಕ್ಕೆ ಒಳಗಾಗುತ್ತಾನೆ. ಅಷ್ಟೇ ಅಲ್ಲ, ಇಂದ್ರಿಯದಿಂದ ಸುಖ, ಸಂತೋಷ ಹೊಂದಲು ಕಾತರಪಡುತ್ತಾನೆ. ಇದು ಮನುಷ್ಯ ಗುಣ. ಇಂದ್ರಿಯ ಸುಖಗಳನ್ನು ತ್ಯಜಿಸಿ ಬದುಕುವುದು ಅಷ್ಟು ಸುಲಭವಲ್ಲ. ಬಹಳಷ್ಟು ಮಂದಿಗೆ ಇಂದ್ರಿಯಗಳ ಸುಖ, ಸಂತೋಷಗಳ ಮೂಲ ಯಾವುದೆಂಬುವುದೇ ಗೊತ್ತಿಲ್ಲವಾಗಿದೆ. ಹೀಗಾಗಿ ಅಡ್ಡ ಮಾರ್ಗದಿಂದ ಸುಖ ಪಡೆಯುವ ಪ್ರಯತ್ನ ಮಾಡಿ ಸೋಲುತ್ತಿದ್ದಾರೆ.

Those Who Think About Bad Thoughts Will Not Succeed In Life

ಅಧ್ಯಾತ್ಮವಾಗಿ ನೋಡುತ್ತಾ ಹೋದರೆ ಇಂದ್ರಿಯಗಳನ್ನು ಮಾತ್ರೆಗಳೆಂದು ಕರೆಯಲಾಗುತ್ತಿದೆ. ಇವುಗಳಿಂದಲೇ ಇಂದ್ರಿಯಗಳ ಮೌಲ್ಯಮಾಪನವಾಗುತ್ತದೆ. ನಾಲಿಗೆಯಿಂದ ರುಚಿ ತಿಳಿಯುತ್ತದೆ. ಮೂಗಿನಿಂದ ವಾಸನೆ ಗ್ರಹಿಸಬಹುದು. ಅದೇ ರೀತಿ ಇಂದ್ರಿಯಗಳು ರೂಪ, ರಸ, ಗಂಧ, ಶಬ್ದ, ಸ್ಪರ್ಶಗಳ ದ್ವಾರವೂ ಹೌದು. ಹೀಗಾಗಿ ಇಂದ್ರಿಯಗಳನ್ನು ನಯವಾಗಿ ಅವಶ್ಯಕತೆಗೆ ತಕ್ಕಂತೆ ಬಳಸಬೇಕು ಆಗ ಮಾತ್ರ ಅದರಿಂದ ಸುಖ ಸಂತಸ ನೆಮ್ಮದಿ ಪಡೆಯಲು ಸಾಧ್ಯವಾಗುತ್ತದೆ.

ಇಂದ್ರಿಯಗಳ ದುರ್ವಿನಿಯೋಗ ಒಳ್ಳೆಯದಲ್ಲ

ಆಧ್ಯಾತ್ಮಿಕ ಚಿಂತಕರು ಹೇಳುವ ಪ್ರಕಾರ ಯಾರು ಇಂದ್ರಿಯಗಳನ್ನು ದುರ್ವಿನಿಯೋಗ ಪಡಿಸಿಕೊಳ್ಳುವರೋ? ಇಲ್ಲವೆ ದೈವ ನಿಯಮ ಮೀರಿ ನಡೆಯುವರೋ ಅಂತಹವರು ತಕ್ಷಣಕ್ಕೆ ಕ್ಷಣಿಕ ಸುಖ ಹೊಂದುವರಾದರೂ ನಂತರ ದಃಖ ಹಾಗೂ ನಷ್ಟ ಅನುಭವಿಸುತ್ತಾರಂತೆ. ಇದು ನಿಜ ಎಂಬುದು ಹಲವು ಘಟನೆಗಳಿಂದ ಸಾಭೀತಾಗುತ್ತಲೇ ಬರುತ್ತಿದೆ. ಉದಾಹರಣೆಗೆ ನಾವು ನಾಲಗೆಯನ್ನು ಸದ್ವಿಚಾರ ಮಾತನಾಡಲು ಬಳಸಬೇಕು. ಬದಲಿಗೆ ಅಶ್ಲೀಲ ಮಾತನಾಡಿದರೆ ಅದರಿಂದ ತೊಂದರೆ ತಪ್ಪಿದಲ್ಲ.

ಇಂದ್ರಿಯಗಳ ಸೆಳೆತಕ್ಕೆ ಜನರು ಪರವಶರಾಗುತ್ತಾರೆ. ರೂಪ, ರಸ, ಗಂಧ, ಸ್ಪರ್ಶ ಹಾಗೂ ಶಬ್ದಗಳೆಂಬ ಇಂದ್ರಿಯಗಳ ಸೆಳೆತಕ್ಕೆ ಬಲಿಯಾಗುವವರೂ ಇದ್ದಾರೆ. ಶಬ್ದಕ್ಕೆ ಜಿಂಕೆ ನಡುಗಿ ನಿಂತರೆ, ಆಗ ಅದು ಬೇಟೆಗಾರನ ಬೇಟೆಗೆ ಬಲಿಯಾಗುತ್ತದೆ. ಅಂದರೆ ಜಿಂಕೆಯು ಶಬ್ದದ ಮೋಹಕ್ಕೆ ತನ್ನ ಪ್ರಾಣವನ್ನು ಕಳೆದುಕೊಂಡಂತಾಯಿತು. ಪತಂಗ ಬೆಳಕಿನ ಮೋಹಕ್ಕೆ ಬಿದ್ದು ಸುಟ್ಟು ಹೋಗುತ್ತದೆ.

Those Who Think About Bad Thoughts Will Not Succeed In Life

ಇಂದ್ರಿಯಗಳ ಸುಖವೇ ಸುಖವಲ್ಲ..

ಜಿಂಕೆ, ಪತಂಗ, ಮೀನು, ದುಂಬಿ ಹೀಗೆ ಪ್ರಾಣಿ ಪಕ್ಷಿಗಳು ತಲಾ ಒಂದು ಇಂದ್ರಿಯದ ಸೆಳೆತಕ್ಕೆ ಒಳಗಾಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತವೆ. ಹೀಗಿರುವಾಗ ಪಂಚೇಂದ್ರಿಯಗಳನ್ನು ಹೊಂದಿರುವ ಮನುಷ್ಯನ ಪಾಡೇನು? ಪಂಚೇಂದ್ರಿಯಗಳ ಸೆಳೆತಕ್ಕೆ ಸಿಲುಕುವ ಮಾನವ ಲೌಕಿಕ ಸುಖಲೋಲುಪತೆಗೆ ಸಿಲುಕಿ ದುಃಖ, ದುಮ್ಮಾನಗಳನ್ನು ತನ್ನಿಂದ ತಾನೇ ತಂದುಕೊಳ್ಳುತ್ತಾನೆ. ಇಂದ್ರಿಯ ಸುಖ ದುಃಖದಿಂದ ಪ್ರಾಪ್ತವಾಗಿದ್ದು, ದುಃಖದಿಂದ ದುಃಖವೇ ದೊರೆಯುತ್ತದೆ. ಆದರೆ ಇದನ್ನು ಅರಿಯದ ನಾವುಗಳು ಇಂದ್ರಿಯಗಳ ಸುಖವೇ ಸುಖವೆಂದು ಭ್ರಮಿಸುತ್ತೇವೆ.

ಇಂದ್ರಿಯ ಸೆಳೆತ ಗುಣದ ಮನೋಚಂಚಲತೆಗೆ ಒಳಗಾಗಿ ಒಳ್ಳೆಯದು, ಕೆಟ್ಟದರ ಬಗ್ಗೆ ಆಲೋಚಿಸದೆ ಪಾಪಕೃತ್ಯದ ಮೂಲಕವೂ ಸುಖ ಪಡೆಯುವ ಆತುರತೆಗೆ ಮುಂದಾಗುತ್ತೇವೆ. ಇದು ಆ ಕ್ಷಣಕ್ಕೆ ನಮಗೆ ಸುಖದಂತೆ ಕಂಡರೂ ಆ ನಂತರವೇ ಅದಕ್ಕೆ ಕಂದಾಯ ಕಟ್ಟಬೇಕಾಗುತ್ತದೆ. ಇಲ್ಲಿ ನಾವು ಏನು ಮಾಡಿದ್ದೇವೆ? ಮಾಡುತ್ತಿದ್ದೇವೆ? ಎಲ್ಲದಕ್ಕೂ ಇಂದ್ರಿಯಗಳೇ ಕಾರಣವಾಗಿ ಬಿಡುತ್ತವೆ.

ಆದಿ ಶಂಕರರು ಹೇಳಿದ್ದೇನು ಗೊತ್ತಾ?

ಇಂದ್ರಿಯಗಳಿಂದಾಗಿ ಮನಸ್ಸು ಚಂಚಲತೆಗೆ ಒಳಗಾಗಿ ತಾತ್ಕಾಲಿಕ ಸುಖ ಪಡೆದರೂ ಅದರಿಂದ ಸಹಿಸಲಾಗದಂತಹ ನೋವು ಇದ್ದೇ ಇರುತ್ತದೆ. ಮನುಷ್ಯನಿಗೆ ವಿವೇಕವಿದೆ. ಏನು ಮಾಡಿದರೆ ಎಂತಹ ಪರಿಣಾಮ ಬೀರಬಹುದು ಎಂಬ ಅರಿವಿದೆ. ಆದರೂ ಕೆಲವೊಮ್ಮೆ ಇಂದ್ರಿಯಗಳ ಸೆಳೆತಕ್ಕೆ ಒಳಗಾಗಿ ವಿವೇಕ ಕಳೆದುಕೊಂಡು ಮಣ್ಣು ತಿನ್ನುವ ಕೆಲಸ ಮಾಡಿ ಸಮಾಜದ ಮುಂದೆ ಬೆತ್ತಲಾಗಿ ಬಿಡುತ್ತಾನೆ. ಇಂತಹ ಸಂದರ್ಭದಲ್ಲಿ ಪ್ರಾಪಂಚಿಕ ಸುಖದ ಕುರಿತಂತೆ ಆದಿ ಶಂಕರರು ಹೇಳಿರುವ ಮಾತುಗಳು ಪ್ರಸ್ತುತ ಎನಿಸುತ್ತದೆ.

Those Who Think About Bad Thoughts Will Not Succeed In Life

ಅವರು ಹೇಳುವುದೇನೆಂದರೆ, ಧನ ಸಂಪತ್ತು ಲಭಿಸಿದಾಗ ಹಮ್ಮು ಬಿಮ್ಮಿನಿಂದಿರಬೇಡ. ಜನಬಲ ನಂಬಬೇಡ. ಯೌವನ ಮದದಿಂದ ಗರ್ವಿತನಾಗದಿರು. ಇವುಗಳೆಲ್ಲವೂ ಚದುರಿ ಹೋಗುವ ಮೋಡವಿದ್ದಂತೆ ನಶ್ವರ ಬಂದು ಹೋಗುವುದಷ್ಟೆ. ಈ ಮಾತುಗಳು ಅರ್ಥಪೂರ್ಣವಾಗಿವೆ. ಅಷ್ಟೇ ಅಲ್ಲದೆ ಮನುಕುಲಕ್ಕೆ ಎಚ್ಚರಿಕೆಯ ಸಂದೇಶವಾಗಿದೆ. ಆದರೆ ಇಂದ್ರಿಯ ಸೆಳೆತಕ್ಕೊಳಗಾದವನಿಗೆ ಇದ್ಯಾವುದೂ ನೆನಪಿಗೆ ಬರುವುದೇ ಇಲ್ಲ. ಬದಲಿಗೆ ನಾನೇನು ಮಾಡುತ್ತಿದ್ದೇನೆಯೋ ಅದುವೇ ಸರಿ ಎಂಬ ಅಹಂ ಆತನನ್ನು ಆವರಿಸಿರುತ್ತದೆ.

ಗೊತ್ತಿದ್ದೂ ಮಾಡುವ ತಪ್ಪುಗಳಿಗೆ ಕ್ಷಮೆಯಿಲ್ಲ

ನಮಗೆಲ್ಲರಿಗೂ ಕೆಟ್ಟದು ಮತ್ತು ಒಳ್ಳೆಯದರ ಅರಿವಿದೆ. ಹಾಗೆಯೇ ನ್ಯಾಯ ಅನ್ಯಾಯದ ಬಗ್ಗೆಯೂ ಗೊತ್ತಿದೆ. ಆದರೂ ನಾವು ಕೆಟ್ಟದನ್ನು ಮಾಡುತ್ತೇವೆ. ಮತ್ತು ಅದರಿಂದ ಜಯಿಸಿಕೊಂಡು ಬರುತ್ತೇವೆ ಅಹಂಕಾರವೂ ನಮ್ಮಲ್ಲಿ ತುಂಬಿಕೊಂಡಿದೆ. ಹೀಗಾಗಿ ತಪ್ಪುಗಳನ್ನೇ ಜಾಸ್ತಿ ಮಾಡುತ್ತೇವೆ. ಗೊತ್ತಿಲ್ಲದೆ ಮಾಡುವ ತಪ್ಪುಗಳಿಗೆ ಕ್ಷಮೆ ಇರುತ್ತದೆ. ಆದರೆ ಗೊತ್ತಿದ್ದೂ ಮಾಡುವ ತಪ್ಪುಗಳಿಗೆ ಕ್ಷಮೆ ಇರುವುದಿಲ್ಲ. ಅದಕ್ಕೆ ತಕ್ಕ ಶಾಸ್ತಿ ಅನುಭವಿಸಲೇ ಬೇಕಾಗುತ್ತದೆ.

ಮನುಷ್ಯನಿಗೆ ಹಣ ಮತ್ತು ಅಧಿಕಾರ ಎರಡು ಯಾವಾಗ ಬರುತ್ತೋ ಅವತ್ತು ಅವನು ಇಂದ್ರಿಯ ಸುಖಗಳ ಬೆನ್ನೇರಿ ಹೋಗುತ್ತಾನೆ. ಮತ್ತು ತನ್ನ ಅಮೂಲ್ಯ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾನೆ. ಅಧ್ಯಾತ್ಮಿಕ ಚಿಂತಕರ ಪ್ರಕಾರ ಇಂದ್ರಿಯಗಳು ಭಗವಂತನ ಅನುಪಮ ಕೊಡುಗೆಗಳು, ಉದಾರ ಉಡುಗೊರೆಗಳು, ದೈವಾನುಗ್ರಹ ಸಾಧನೆಗೆ ಪೂರಕ ಸಾಧನಗಳು. ಹೀಗಾಗಿ ಭಗವಂತ ಇಂದ್ರಿಯಗಳನ್ನು ಯಾವ ಉದ್ದೇಶಕ್ಕೆ ನೀಡಿರುವನೋ ಆ ಉದ್ದೇಶಕ್ಕೆ ಮಾತ್ರ ಉಪಯೋಗಿಸಬೇಕಂತೆ.

ಇಂದ್ರಿಯಗಳ ಸದ್ಭಳಕೆ ಮಾಡಿಕೊಳ್ಳಿ

ದುರಂತ ಏನೆಂದರೆ ಇಂದ್ರಿಯಗಳನ್ನು ನಾವು ಸನ್ಮಾರ್ಗಕ್ಕಿಂತ ಹೆಚ್ಚಾಗಿ ದುರ್ಮಾರ್ಗಕ್ಕೆ ಬಳಸಿಕೊಳ್ಳುತ್ತಿದ್ದೇವೆ. ಯಾರಾದರೂ ನೀನು ಸಾಗುತ್ತಿರುವ ಹಾದಿ ಸರಿಯಿಲ್ಲ ಎಂದರೆ ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ. ಹೀಗಾಗಿ ದೈವಾನುಗ್ರಹದಿಂದ ವಂಚಿತನಾಗುತ್ತಿದ್ದು, ಇಂದ್ರಿಯಗಳನ್ನು ನಿಗ್ರಹಿಸುವಲ್ಲಿ ವಿಫಲರಾಗಿ ಇರುಳು ಕಂಡ ಬಾವಿಗೆ ಹಗಲಿನಲ್ಲಿ ಬೀಳುವ ಸ್ಥಿತಿಗೆ ಬಂದು ತಲುಪಿದ್ದೇವೆ. ಇನ್ನಾದರೂ ಮನುಷ್ಯ ನಿಸ್ವಾರ್ಥ ಸೇವೆಗಾಗಿ ಇಂದ್ರಿಯಗಳನ್ನು ಬಳಸುವುದನ್ನು ಕಲಿತರೆ ಅದರಿಂದ ಆತನ ವ್ಯಕ್ತಿತ್ವಕ್ಕೆ ಮತ್ತು ಸಮಾಜಕ್ಕೆ ಒಳ್ಳೆಯದಾಗುತ್ತದೆ. ಇದು ನೆನಪಿರಬೇಕಷ್ಟೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+