Sweet Potato Dosa Recipe: ಮಾರುಕಟ್ಟೆಗೆ ಸಿಹಿಗೆಣಸು ಬಂದಿದೆ ನೋಡಿದ್ರಾ? ಇದರಿಂದ ರುಚಿಯಾದ ದೋಸೆ ಮಾಡಬಹುದು, ರೆಸಿಪಿ ಇಲ್ಲಿದೆ
ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಸಿಹಿಗೆಣಸು ಕಾಣಸಿಗುತ್ತದೆ. ಇದನ್ನು ನೋಡಿ ಸುಮ್ಮನೆ ಹಾಗೇ ಹೋಗ್ಬೇಡಿ. ಯಾಕೆಂದರೆ ಇದನ್ನ ಕೊಂಡು ತಿನ್ನುವುದರಿಂದ ಸಾಕಷ್ಟು ಆಯೋಗ್ಯಕರ ಪ್ರಯೋಜನಗಳಿವೆ. ಜೊತೆಗೆ ಇದರಿಂದ ನೀವು ನಾನಾ ಬಗೆಯ ಖಾದ್ಯಗಳನ್ನು ಕೂಡ ತಯಾರಿಸಬಹುದು. ಸಿಹಿಗೆಣಸಿನಿಂದ ಪಡ್ಡು, ಇಡ್ಲಿ, ಪಲ್ಯ, ಚಟ್ನಿ ಸೇರಿದಂತೆ ನಾನಾ ಬಗೆಯ ಕರಿದ ತಿಂಡಿಗಳನ್ನು ಸಹ ತಯಾರಿಸಬಹುದು.
ಮಾತ್ರವಲ್ಲ ಮನೆಯಲ್ಲಿ ಸಿಹಿಗೆಣಸಿನಿಂದ ರುಚಿ ರುಚಿಯಾಗಿ ದೋಸೆ ಕೂಡ ಮಾಡಬಹುದು. ನೀವೇನಾದ್ರೂ ದೋಸೆ ಪ್ರಿಯರಾಗಿದ್ದರೆ ಇದು ಖಂಡಿತ ನಿಮಗೆ ಇಷ್ಟವಾಗುತ್ತದೆ. ಹಾಗಾದರೆ ತಡ ಮಾಡುವುದು ಬೇಡ ಸಿಹಿಗೆಣಸಿನ ದೋಸೆ ಮಾಡಲು ಬೇಕಾದ ಪದಾರ್ಥಗಳು ಹಾಗೂ ಅದನ್ನು ತಯಾರಿಸುವ ವಿಧಾನವನ್ನು ನೋಡೋಣ.

ಬೇಕಾದ ಪದಾರ್ಥಗಳು:
* ಸಿಹಿಗೆಣಸು ಅರ್ಧ ಕೆಜಿ
* ತೆಂಗಿನ ತುರಿ ಒಂದು ಕಪ್
* ಉಪ್ಪು
* ಚಿರೋಟಿ ರವೆ ಮುಕ್ಕಾಲು ಕಪ್
* ಗೋದಿ ಹಿಟ್ಟು ಅರ್ಧ ಕಪ್
* ಕಾಳು ಮೆಣಸಿನ ಪುಡಿ ಕಾಲ್ ಚಮಚ
* ಜೀರಿಗೆ ಪುಡಿ ಅರ್ಧ ಚಮಚ

ತಯಾರಿಸುವ ವಿಧಾನ:
* ಮೊದಲಿಗೆ ಸಿಹಿಗೆಣಸನ್ನು ಚೆನ್ನಾಗಿ ತೊಳೆದು ಕುದಿಸಿ ಸಿಪ್ಪೆ ತೆಗೆದಿಟ್ಟುಕೊಳ್ಳಿ
* ಒಂದು ಮಿಕ್ಸಿ ಜಾರ್‌ಗೆ ತೆಂಗಿನ ತುರಿಯನ್ನು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ಒಂದು ಪಾತ್ರೆಯಲ್ಲಿ ರುಬ್ಬಿಕೊಂಡ ತೆಂಗಿನಕಾಯಿ ಹಾಗೂ ಸಿಹಿಗೆಣಸು ಹಾಕಿ ಚೆನ್ನಾಹಿ ಮಿಕ್ಸ್ ಮಾಡಿಕೊಳ್ಳಿ
* ಇದಕ್ಕೆ ಚಿರೋಟಿ ರವೆ, ಗೋದಿ ಹಿಟ್ಟು ಹಾಕಿ ಗಂಡು ಇರದಂತೆ ಚೆನ್ನಾಗಿ ಕಲಸಿ.
* ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಕಾಳು ಮೆಣಸಿನ ಪುಡಿ, ಜೀರಿಗೆ ಪುಡಿ ಹಾಕಿ ಕಲಸಿ
* ಎಲ್ಲಾ ಮಿಶ್ರಣವನ್ನು ದೋಸೆ ಹಿಟ್ಟಿನ ಹದಕ್ಕೆ ಕಲಸಿ ಅರ್ಧ ಗಂಟೆ ಪಾತ್ರೆ ಮುಚ್ಚಿಡಿ
* ಒಲೆಯ ಮೇಲೆ ಹೆಂಚು ಇಟ್ಟು ದೋಸೆ ಹಾಕಿ ಬೇಯಿಸಿದರೆ ಬಿಸಿ ಬಿಸಿ ಸಿಹಿಗೆಣಸಿನ ದೋಸೆ ಸವಿಯಲು ಸಿದ್ಧ.
ಇದನ್ನು ಶೇಂಗಾ ಚಟ್ನಿ, ಆಲುಗಡ್ಡೆ ಬಾಜಿ, ಸಾಂಬಾರ್ ಅಥವಾ ಇನ್ನಿತರ ಚಟ್ನಿಯೊಂದಿಗೆ ತಿನ್ನಬಹುದು. ಜೊತೆಗೆ ಇದನ್ನು ಚಟ್ನಿ ಸಾಂಬರ್ ಇಲ್ಲದೆ ಬರಿದಾಗಿಯೂ ತಿನ್ನಬಹುದು ರುಚಿಯಾಗಿರುತ್ತದೆ. ನೀವು ಕೂಡ ಮನೆಯಲ್ಲಿ ಒಂದು ಬಾರಿ ಇದನ್ನು ಟ್ರೈ ಮಾಡಿ. ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.












Click it and Unblock the Notifications