Pepper Rice Recipe: ತಿಂಡಿಗೆ ಏನು ಮಾಡೋದು ಅಂತ ಯೋಚನೆನಾ? ಸುಲಭವಾಗಿ ಥಟ್ ಅಂತ ತಯಾರಾಗುತ್ತೆ ಪೆಪ್ಪರ್ ರೈಸ್
ಬೆಳಗ್ಗೆ ಎದ್ದ ತಕ್ಷಣ ತಿಂಡಿಗೆ ಏನು ಮಾಡುವುದು ಎಂಬುದೇ ಬಹುತೇಕ ಗೃಹಿಣಿಯರ ಬೆಳಗ್ಗಿನ ಪ್ರಶ್ನೆ. ತಕ್ಷಣಕ್ಕೆ ನೆನಪಾಗುವುದು ಅನ್ನ ಬಳಸಿ ಮಾಡುವ ತಿಂಡಿಗಳೆ. ರೈಸ್ ಐಟಂಗಳು ಭಾರತೀಯರ ನೆಚ್ಚಿನ ಬ್ರೆಕ್‌ಫಾಸ್ಟ್‌ಗಳಲ್ಲಿ ಸ್ಥಾನ ಪಡೆದಿವೆ. ಆದರೆ, ದಿನ ಚಿತ್ರಾನ್ನ ಮಾಡಿ ತಿನ್ನೋಕೆ ಯಾರಿಗೆ ಮನಸ್ಸು ಬರುತ್ತೆ ಹೇಳಿ. ಅದಕ್ಕೆ ಅಂತಲೇ ಬಗೆ ಬಗೆಯ ಅನ್ನದ ರೆಸಿಪಿಗಳನ್ನು ಮಾಡಬಹುದು. ಅವುಗಳಲ್ಲಿ ಒಂದು ಪೆಪ್ಪರ್ ರೈಸ್.
ಹೌದು.. ಬೆಳಗ್ಗೆ ಬೇಗನೆ ಎದ್ದು ಆಫೀಸ್‌ಗೆ, ಶಾಲೆಗೆ, ಕಾಲೇಜಿಗೆ ಹೋಗುವ ಅರ್ಜೆಂಟ್‌ನಲ್ಲಿ ಇರುವವರಿಗಾಗಿ ಈ ಪೆಪ್ಪರ್ ರೈಸ್ ಅಂದರೆ ಕಾಳು ಮೆಣಸಿನ ಅನ್ನ ಒಂದು ಗಿಫ್ಟ್ ಎಂದರೆ ತಪ್ಪಲ್ಲ. ಇದನ್ನು ಮಾಡೋದು ಸುಲಭ ಮತ್ತು ಕಡಿಮೆ ಪದಾರ್ಥಗಳನ್ನು ಬಳಸಿ ಪಟ್ ಅಂತ ತಯಾರು ಕೂಡ ಮಾಡಬಹುದು. ಇದಕ್ಕಾಗಿ ಅಂಗಡಿಗೆ ಹೋಗಿ ಸಾಮಗ್ರಿಗಳನ್ನು ತರಬೇಕಿಲ್ಲ. ಮನೆಯಲ್ಲಿಯೇ ಇರುವ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಪಟ್ ಎಂದು ತಯಾರಿಸಬಹುದು.

ಪೆಪ್ಪರ್ ರೈಸ್ ಮಳೆಯ ದಿನಗಳು ಅಥವಾ ಚಳಿಗಾಲದ ಸಮಯಕ್ಕೆ ಹೆಚ್ಚು ಸೂಕ್ತವಾದರೂ ಕೂಡ ಬೇಗ ತಿಂಡಿ ಮಾಡಬೇಕು ಎನ್ನುವವರಿಗೆ ಇದು ವರದಾನ. ಪೆಪ್ಪರ್ ರೈಸ್ ಅನ್ನು ಅಕ್ಕಿ, ಈರುಳ್ಳಿ, ಗೋಡಂಬಿ, ಪುಡಿಮಾಡಿದ ಕರಿಮೆಣಸು ಮತ್ತು ಕೆಲವು ಇತರ ಮಸಾಲೆಗಳನ್ನು ಬಳಸಿ ತಯಾರಿಸಲಾಗುತ್ತದೆ.
ಪೆಪ್ಪರ್ ರೈಸ್ ಅಥವಾ ಕಾಳು ಮೆಣಸಿನ ಅನ್ನವನ್ನು ಮೊಸರು ಬಜ್ಜಿ ಅಥವಾ ಚಟ್ನಿಯೊಂದಿಗೆ ಬಡಿಸಬಹುದು. ಇದನ್ನು ಯಾವುದೇ ಸೈಡ್ ಡಿಶ್ ಇಲ್ಲದೆಯೂ ಹಾಗೆಯೇ ಬಡಿಸಬಹುದು. ಆರೋಗ್ಯಕರ ಪ್ರಯೋಜಗಳನ್ನು ಹೊಂದಿರುವ ಕಾಳು ಮೆಣಸಿನ ಅನ್ನವನ್ನು ನೆಗಡಿ ಅಥವಾ ಕೆಮ್ಮಿನಿಂದ ಬಳಲುತ್ತಿರುವಾಗ ತಿಂದೆ ಆರೋಗ್ಯ ಕೂಡ ಸುಧಾರಿಸುತ್ತದೆ.

ಪೆಪ್ಪರ್ ರೈಸ್ ಮಾಡಲು ಬೇಕಾದ ಸಾಮಗ್ರಿಗಳು
* 1/2 ಕಪ್ ಅಕ್ಕಿ (ಸೋನಾ ಮಸೂರಿ, ಬಾಸುಮತಿ, ಹಂಸ ಯಾವುದಾದರೂ ಅಕ್ಕಿ ಬಳಸಬಹದು)
* 1/2 ಟೀಸ್ಪೂನ್ ಸಾಸಿವೆ ಕಾಳುಗಳು
*1/2 ಚಮಚ ಜೀರಿಗೆ
*1 ಟೀಸ್ಪೂನ್ ಉದ್ದಿನ ಬೇಳೆ
* ಹತ್ತು ಚಮಚ ಗೋಡಂಬಿ
* ಒಂದು ಈರುಳ್ಳಿ
* ಒಗ್ಗರಣೆಗೆ ಕರಿಬೇವಿನ ಎಲೆಗಳು
* ಎರಡು ಟೀಸ್ಪೂನ್ ಕರಿಮೆಣಸು
* ರುಚಿಗೆ ತಕ್ಕಂತೆ ಉಪ್ಪು
* ಬೇಕಿದ್ದರೆ ಕಡಲೆ ಬೀಜಗಳನ್ನು ಬಳಸಬಹುದು
* ಕೊತ್ತಂಬರಿ ಸೊಪ್ಪು
ಪೆಪ್ಪರ್ ರೈಸ್ ಮಾಡುವ ವಿಧಾನ
ಮೊದಲು ಅನ್ನವನ್ನು ಕುಕ್ಕರ್‌ನಲ್ಲಿ ಅಥವಾ ಪಾತ್ರೆಯಲ್ಲಿ ಉದುರು ಉದುರಾಗಿ ತಯಾರಿಸಿಕೊಂಡು ಅದನ್ನು ಪಕ್ಕಕ್ಕೆ ಇರಿಸಿ. ಅನ್ನ ಬೇಯುತ್ತಿರುವಾಗಲೇ ಕಾಳು ಮೆಣಸನ್ನು ಪುಡಿ ಮಾಡಿಕೊಂಡು ರೆಡಿ ಇಟ್ಟುಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಸಾಸಿವೆ, ಜೀರಿಗೆ ಮತ್ತು ಉದ್ದಿನಬೇಳೆ ಹಾಕಿ ಹುರಿದುಕೊಳ್ಳಿ.
ಸಾಸಿವೆ ಕಾಳುಗಳು ಸಿಡಿಯಲು ಪ್ರಾರಂಭವಾದ ಬಳಿಕ ಇದಕ್ಕೆ ಗೋಡಂಬಿ ಸೇರಿಸಿ. ನಂತರ ಕತ್ತರಿಸಿದ ಈರುಳ್ಳಿ, ಕರಿಬೇವಿನ ಎಲೆಗಳನ್ನು ಸೇರಿಸಿ ಗೋಲ್ಡನ್ ಬ್ರೌನ್ ಬರುವವರೆಗೂ ಹುರಿಯಿರಿ. ಬಳಿಕ ಪುಡಿಮಾಡಿದ ಕರಿಮೆಣಸು ಮತ್ತು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ. ಬೇಯಿಸಿದ ಅನ್ನವನ್ನು ಸೇರಿಸಿ ಚೆನ್ನಾಘಿ ಮಿಕ್ಸ್ ಮಾಡಿ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ಸೇರಿಸಿ. ಸ್ಟೌವ್ ಆಫ್ ಮಾಡಿ ಬಿಸಿ ಬಿಸಿ ತಿನ್ನಲು ಬಡಿಸಿ.












Click it and Unblock the Notifications