ದುಬಾರಿ ಆ್ಯಂಟಿ ಏಜಿಂಗ್ ಕ್ರೀಮ್‌ಗಿಂತ ಈ ತರಕಾರಿಯೇ ಪರಿಣಾಮಕಾರಿಯಂತೆ: ಚಿರಯೌವನ ತ್ವಚೆಗೆ ನೈಸರ್ಗಿಕ ಉಪಾಯ
ಅನೇಕರು ತ್ವಚೆಯ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತಾರೆ.ಆದರೆ ಈ ರೀತಿ ದುಬಾರಿ ಕ್ರೀಮ್, ಲೋಶನ್‌ಗಳನ್ನು ಹಚ್ಚುವ ಬದಲು ನೈಸರ್ಗಿಕವಾಗಿ ಸಿಗುವ ಕೆಲವು ಹಣ್ಣು ತರಕಾರಿಗಳೇ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಸದಾ ಯುವಕರಂತೆಯೇ ಕಾಣಿಸುವುದು ಯಾರಿಗೆ ತಾನೇ ಇಷ್ಟವಿಲ್ಲ. ಎಷ್ಟೇ ವಯಸ್ಸಾಗಲಿ ತ್ವಚೆ ಮಾತ್ರ ಯುವಕರಂತೆ ನಳನಳಿಸಬೇಕು ಎಂದು ಬಯಸುವವರೇ ಬಹುತೇಕ ಮಂದಿ. ಇದಕ್ಕೆ ತಕ್ಕಂತೆ ಆಂಟಿ ಏಜಿಂಗ್ ಚಿಕಿತ್ಸೆಗಳು ಮತ್ತು ಸೂಪರ್‌ಫುಡ್‌ಗಳು ಕೂಡಾ ಲಭ್ಯವಿದೆ. ಇನ್ನು ತ್ವಚೆಗೆ ಸದಾ ಯೌವನದ ಹೊಳಪನ್ನು ನೀಡುತ್ತದೆ ಎಂದು ಹೇಳಿಕೊಳ್ಳುವ ವಿಲಕ್ಷಣ ಹಣ್ಣುಗಳಿಂದ ಹಿಡಿದು ಟ್ರೆಂಡಿ ಸಪ್ಲಿಮೆಂಟ್‌ವರೆಗೆ ಎಲ್ಲವೂ ಮಾರುಕಟ್ಟೆಯಲ್ಲಿ ಭರಪೂರವಾಗಿ ಸಿಗುತ್ತದೆ.ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಈ ಪರಿಹಾರ ಕ್ರಮಗಳು ಅದೆಷ್ಟು ಪರಿಣಾಮಕಾರಿ ಎಂದು ಹೇಳುವುದು ಕಷ್ಟವೇ ಸರಿ. ಆದರೂ ನಮ್ಮಲ್ಲಿ ಅನೇಕರು ಖಂಡಿತವಾಗಿಯೂ ಅವುಗಳ ಪ್ರಯತ್ನಕ್ಕಂತೂ ಕೈ ಹಾಕುತ್ತಾರೆ ಎನ್ನುವುದು ಕೂಡಾ ಸುಳ್ಳಲ್ಲ.
ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಉತ್ಪನ್ನಗಳಿಗೆ ನೀರಿನಂತೆ ಹಣ ಖರ್ಚು ಮಾಡುವ ಬದಲು, ನೈಸರ್ಗಿಕ ಮತ್ತು ಆರೋಗ್ಯಕರ ಆಹಾರಗಳ ಮೇಲೆ ಕೇಂದ್ರೀಕರಿಸುವುದರಿಂದಲೇ ತ್ವಚೆ ಯುವಕರಂತೆ ಹೊಳೆಯುವಂತೆ ಮಾಡಬಹುದು ಎನ್ನುತ್ತಾರೆ ತಜ್ಞರು. ಇವುಗಳಲ್ಲಿ ಮೊದಲನೆಯದು ಮಾವು. ಪ್ರತಿದಿನ ಮಾವಿನ ಹಣ್ಣು ತಿನ್ನುವುದರಿಂದ ಇದರಲ್ಲಿರುವ ವಿಟಮಿನ್ ಸಿ ದೇಹದಲ್ಲಿ ಕಾಲಜನ್ ಉತ್ಪಾದನೆ ಹೆಚ್ಚಾಗಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಮೇಲಿನ ಸುಕ್ಕುಗಳನ್ನು ತಡೆಯುತ್ತದೆ. ಇದು ಹೇಗೂ ಮಾವಿನ ಋತುವೇ ಆಗಿರುವುದರಿಂದ ಇದನ್ನು ಒಮ್ಮೆ ಪ್ರಯತ್ನಿಸಿ ನೋಡಬಹುದು.

ಒಣ ಹಣ್ಣುಗಳು (Dry Fruits):
ಡ್ರೈ ಫ್ರೂಟ್ಸ್ ಅದರಲ್ಲಿಯೂ ವಿಶೇಷವಾಗಿ ಬಾದಾಮಿ ಮತ್ತು ವಾಲ್ನಟ್ಸ್, ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಜೊತೆಗೆ ವಿಟಮಿನ್ ಇ ಅನ್ನು ಕೂಡಾ ಹೇರಳವಾಗಿ ಹೊಂದಿರುತ್ತವೆ. ಇದು ಸ್ಕಿನ್ ಸೆಲ್‌ಗಳನ್ನು ಹಾನಿಯಿಂದ ರಕ್ಷಿಸಿ, ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇನ್ನು ನಟ್ಸ್ ಅಂದರೆ ಒಣ ಹಣ್ಣುಗಳು ಹೊಂದಿರುವ ಸೆಲೆನಿಯಮ್ ತ್ವಚೆಯ ಸೌಂದರ್ಯವನ್ನು ಕಾಪಾಡುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.
ಟೊಮೆಟೊ:
ಟೊಮೆಟೊಗಳು ಲೈಕೋಪೀನ್‌ನ ಅತ್ಯುತ್ತಮ ಮೂಲವಾಗಿದೆ.ಇದು ಚರ್ಮವನ್ನು UV ಹಾನಿಯಿಂದ ರಕ್ಷಿಸುವ ಶಕ್ತಿಶಾಲಿ ಉತ್ಕರ್ಷಣ ನಿರೋಧಕವಾಗಿದೆ.ಲೈಕೋಪೀನ್ ಬಿಸಿಲಿನಿಂದ ತ್ವಚೆಗೆ ಆಗಬಹುದಾದ ಹಾನಿಯಿಂದ ರಕ್ಷಣೆ ನೀಡುತ್ತದೆ.ಇನ್ನು ಟೊಮೆಟೊಗಳು ವಿಟಮಿನ್ ಸಿ ಮತ್ತು ಎ ಅನ್ನು ಹೊಂದಿರುತ್ತವೆ.ಇವೆರಡೂ ಚರ್ಮದ ಆರೋಗ್ಯಕ್ಕೆ ಖಂಡಿತವಾಗಿಯೂ ಬೇಕೇ ಬೇಕು.
ಸಿಹಿ ಗೆಣಸು:
ಸಿಹಿ ಗೆಣಸಿನಲ್ಲಿ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದ್ದು, ದೇಹವು ಇದನ್ನು ವಿಟಮಿನ್ ಎ ಆಗಿ ಪರಿವರ್ತಿಸಿಕೊಳ್ಳುತ್ತದೆ.ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಮತ್ತು ಸೆಲ್ ಟರ್ನ್ ಓವರ್ ಅನ್ನು ಹೆಚ್ಚಿಸಲು ವಿಟಮಿನ್ ಎ ಅತ್ಯಗತ್ಯ. ವಿಟಮಿನ್ ಎ ಚರ್ಮದ ಹೊಸ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.ಈ ಮೂಲಕ ಮುಖದ ಮೇಲಿನ ಸೂಕ್ಷ್ಮ ಗೆರೆಗಳು ಮತ್ತು ಸುಕ್ಕುಗಳನ್ನು ತೆಗೆದು ಹಾಕುವ ಕೆಲಸವನ್ನು ಮಾಡುತ್ತದೆ.
ಪಾಲಕ್ ಸೊಪ್ಪು:
ಪಾಲಕ್ ಸೊಪ್ಪು ವಿಟಮಿನ್ ಎ, ಸಿ ಮತ್ತು ಇ ಯನ್ನು ಹೊಂದಿದ್ದು, ಇದು ಚರ್ಮವನ್ನು ಹಾನಿಯಿಂದ ರಕ್ಷಿಸಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.ವಿಟಮಿನ್ ಎ ಸ್ಕಿನ್ ಸೆಲ್ ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಕಾಲಜನ್ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ. ವಿಟಮಿನ್ ಇ ಫ್ರೀ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಮತ್ತು ಉರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಗ್ರೀನ್ ಟೀ:
ಗ್ರೀನ್ ಟೀ ಆಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದೆ.ಈ ಸಂಯುಕ್ತಗಳು ತ್ವಚೆಯ ಮೇಲಿರುವ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ಗ್ರೀನ್ ಟೀ ಕುಡಿಯುವುದರಿಂದ ತ್ವಚೆಯ ಸೌಂದರ್ಯ ಶಾಶ್ವತವಾಗಿ ಉಳಿಯುವಂತೆ ಮಾಡಬಹುದು ಎಂದು ಹೇಳಲಾಗುತ್ತದೆ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications