ಒಳಗಣ್ಣಿನಿಂದೊಮ್ಮೆ ನೋಡಿ ಎನ್ನುವುದೇಕೆ..? ಒಳಗಣ್ಣು ಎಂದರೇನು?
ನಮಗೆ, ನಿಮಗೆ ಎಲ್ಲರಿಗೂ ಮೇಲೆ ಕಾಣಿಸುವ ಎರಡು ಕಣ್ಣುಗಳೇ ಆದರೂ ಯಾರಿಗೂ ಕಾಣದ ಒಳಗೊಂದು ಅಂತರಾತ್ಮದ ಕಣ್ಣೊಂದಿದೆ. ಅದು ಮೇಲೆ ನೋಡುವ ಕಣ್ಣಿಗಿಂತಲೂ ತುಂಬಾ ತೀಕ್ಷ್ಣವಾಗಿದೆ. ಏಕೆಂದರೆ ಹೊರಕಣ್ಣಿನಿಂದ ಏನನ್ನೇ ನೋಡಿದರೆ ಅದನ್ನು ಅಳೆದು ತೂಗಿ ಯಾವುದು ಸರಿ? ಯಾವುದು ತಪ್ಪು ಎನ್ನುವುದನ್ನು ಅದು ನಿರ್ಣಯಿಸುತ್ತದೆ. ಹೀಗಾಗಿಯೇ ಹಿರಿಯರು ನಿರ್ಧಾರ ಪ್ರಕಟಿಸುವ ಮುನ್ನ ಒಳಗಣ್ಣಿನಿಂದೊಮ್ಮೆ ನೋಡಿ ಎಂದು ಹೇಳಿದ್ದಾರೆ.
ನ್ಯಾಯ, ನೀತಿ, ಧರ್ಮದ ಕುರಿತಂತೆ ನಮ್ಮಲ್ಲೊಂದು ಜಾಗೃತಿ ಉಂಟಾದರೆ ಸರಿ? ತಪ್ಪುಗಳು ಯಾವುದೆಂಬುದನ್ನು ನಿರ್ಧರಿಸುವ ಸಲುವಾಗಿ ಒಳಗಣ್ಣು ತೆರೆಯುತ್ತದೆ. ಮತ್ತು ಅದು ನಾವು ತಪ್ಪಿದಾಗಲೆಲ್ಲ ಎಚ್ಚರಿಸುತ್ತಾ ಸರಿ ದಾರಿಯಲ್ಲಿ ಸಾಗುವಂತೆ ಮಾಡುತ್ತದೆ. ಹೊರಗಣ್ಣುಗಳು ಆಕರ್ಷಿಸಿದಾಗಲೆಲ್ಲ ಒಳಗಣ್ಣು ಎಚ್ಚರಿಸುತ್ತಾ ಇದು ಸರಿಯಲ್ಲ ನೀನು ತಪ್ಪು ಮಾಡುತ್ತಿದ್ದೀಯ ಎಂಬುದಾಗಿ ಹೇಳುತ್ತದೆ. ಹೀಗಾಗಿಯೇ ಒಳಗಣ್ಣನ್ನು ಜಾಗೃತಗೊಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ.

ನಿಜಹೇಳಬೇಕೆಂದರೆ, ನಮ್ಮ ಹೊರಗಣ್ಣಿಗೆ ಎಲ್ಲವೂ ಕಾಣುತ್ತದೆ. ಜೊತೆಗೆ ಪಾಪ ಪುಣ್ಯ, ನ್ಯಾಯ ಧರ್ಮ ಯಾವುದು ಎಂಬುದು ಕೂಡ ತಿಳಿಯುತ್ತದೆ. ಕಣ್ಣು ಇರುವುದು ಕೇವಲ ಸೌಂದರ್ಯ ಸವಿಯೋಕೆ ಅಲ್ಲ. ಅದರಾಚೆಗಿನ ಭವ್ಯತೆಯನ್ನು ನೋಡೋದಕ್ಕೆ. ಮೇಲ್ನೋಟಕ್ಕೆ ಕಂಡಿದೆಲ್ಲವೂ ಸತ್ಯ ಎಂದು ನಂಬಲಾಗುವುದಿಲ್ಲ. ಅದರಾಚೆಗೆ ಇನ್ನೇನೋ ನಿಗೂಢತೆ ಅಡಗಿರುತ್ತದೆ. ಅದಕ್ಕಾಗಿ ಹಿರಿಯರು ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂದಿರುವುದು.
ಒಳಗಣ್ಣಿನಿಂದ ಪರಾಂಬರಿಸಿ ನೋಡಿ
ನಾವು ಮೇಲ್ನೋಟಕ್ಕೆ ಏನು ಕಾಣುತ್ತದೆಯೋ ಅದನ್ನೇ ಸತ್ಯ ಎಂದು ನಂಬುತ್ತೇವೆ. ಆದ್ದರಿಂದಲೇ ಕೆಲವರ ವಿಚಾರಗಳು ಹೊರಬಂದಾಗ ಅಚ್ಚರಿಪಡುತ್ತೇವೆ. ಇವತ್ತು ಪರದೆಯಾಚೆಗಿನ ಚಟುವಟಿಕೆಗಳೇ ಜಾಸ್ತಿ. ನಮಗೆ ಒಬ್ಬ ವ್ಯಕ್ತಿಯ ಒಂದು ಮುಖ ಮಾತ್ರ ಕಾಣುತ್ತಿದೆ. ಮತ್ತೊಂದು ಮುಖ ಕಾಣುತ್ತಿಲ್ಲ. ಏನು ಮಾಡಿದ್ದೇವೆಯೋ? ನೋಡಿದ್ದೇವೆಯೋ? ಅದೇ ನಿಜ ಎಂಬ ತೀರ್ಮಾನಕ್ಕೆ ಬಂದು ಬಿಡುತ್ತೇವೆ. ಆದರೆ ಒಳಗಣ್ಣಿನಿಂದ ಪರಾಂಬರಿಸಿ ನೋಡುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ತಕ್ಷಣಕ್ಕೆ ನಡೆಯುವ ಕೆಲವು ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ.

ಇವತ್ತು ಕಣ್ಣಿನಿಂದ ಒಳ್ಳೆಯದನ್ನು ನೋಡೋದಕ್ಕಿಂತ ಹೆಚ್ಚಾಗಿ ಕೆಟ್ಟದನ್ನೇ ನೋಡುತ್ತಿದ್ದೇವೆ. ಮತ್ತು ಅದಕ್ಕೆ ಬಹು ಬೇಗ ಹೊಂದಿಕೊಳ್ಳುತ್ತಿದ್ದೇವೆ. ನಮ್ಮ ಬದುಕು ನಮಗೆ ಎನ್ನುವ ಮಟ್ಟಕ್ಕೂ ಬಂದು ನಿಂತಿದ್ದೇವೆ. ಕೆಟ್ಟದನ್ನು ನೋಡಿಯೂ ನೋಡದಂತೆ ಸಾಗುವ ಪ್ರಯತ್ನ ಮಾಡಬೇಕು ಇದು ನಿಜಕ್ಕೂ ಒಳ್ಳೆಯದು. ಕೆಟ್ಟವರೊಂದಿಗೆ ಒಳ್ಳೆಯವರಾಗಿಯೇ ಉಳಿಯುವುದು ಸುಲಭವಲ್ಲ. ಆದರೂ ಕೆಟ್ಟವರಿಗೆ ಒಂದಷ್ಟು ಒಳ್ಳೆತನವನ್ನು ತೋರಿಸಿ ಅವರನ್ನು ತಿದ್ದುವ ಕೆಲಸ ಮಾಡಬೇಕು. ಕೆಟ್ಟವರೊಂದಿಗೆ ಇದ್ದು ತಾವು ಕೆಟ್ಟವರಾಗದೆ ಉಳಿದವರು ಎಷ್ಟೋ ಮಂದಿಯಿದ್ದಾರೆ.
ಸದಾ ಎಚ್ಚರಿಸುತ್ತಲೇ ಇರುವ ಒಳಗಣ್ಣು
ಹಿರಿಯರು ಕೆಟ್ಟವರಿಂದ ದೂರ ಇರಿ ಎಂದು ಹೇಳಿದ್ದಾರೆ. ಇದು ನಿಜಕ್ಕೂ ಒಳ್ಳೆಯದೇ. ಏಕೆಂದರೆ ಕೆಟ್ಟವರ ನಡುವೆ ಇದ್ದರೆ ನಾವು ಕೂಡ ಸಮಾಜದ ಕಣ್ಣಿಗೆ ಕೆಟ್ಟವರಾಗಿಯೇ ಕಾಣುತ್ತೇವೆ. ಒಮ್ಮೆ ನಮ್ಮ ಮೇಲೆ ಅಪವಾದ ಬಂದರೆ ಮತ್ತೆ ಅದನ್ನು ಹೋಗಲಾಡಿಸುವುದು ಸುಲಭದ ಕೆಲಸವಲ್ಲ. ಹಾಗೆಯೇ ಬೇರೆಯವರನ್ನು ದೃಷ್ಟಿಯೂ ನಮ್ಮಲ್ಲಿ ಬದಲಾಗಬೇಕಾಗಿದೆ. ನಾವು ಕಣ್ಣಾರೆ ನೋಡಿದ ಮೇಲೆಯೂ ಅದನ್ನು ಪರಾಂಬರಿಸಿ ನೋಡದೆ ಅವರು ಕೆಟ್ಟವರು ಎಂಬ ನಿರ್ಧಾರಕ್ಕೆ ಬರಬಾರದು.
ಒಂದು ಕ್ಷಣ ಕಣ್ಣುಮುಚ್ಚಿ ನೋಡಬೇಕು ಆಗ ನಮ್ಮ ಮುಂದೆ ಏನಿದೆ ಏನಿಲ್ಲ? ಎಲ್ಲವೂ ಕತ್ತಲೆಯೇ... ಆ ಕತ್ತಲನ್ನು ಹೋಗಲಾಡಿಸಬೇಕಾದರೆ ನಾವು ನಮ್ಮ ಒಳ ಕಣ್ಣು ತೆರೆಯಬೇಕು. ಹೊರಕಣ್ಣು ಮುಚ್ಚಿದಾಗ ಮಾತ್ರ ಒಳಗಣ್ಣು ಕಾಣುತ್ತದೆ. ಅದು ಮನುಷ್ಯ ಜೀವನ ಇಷ್ಟೇನಾ ಎಂದು ಪ್ರಶ್ನಿಸುತ್ತದೆ. ನಮ್ಮ ಒಳಗಿನ ಕಣ್ಣಿಗೆ ಕಾಮಾಧಿ ಅರಿಷಡ್ವರ್ಗಗಳನ್ನು ನಿಗ್ರಹಿಸುವ ಶಕ್ತಿಯಿದೆ. ಹೀಗಾಗಿ ಒಳಗಣ್ಣಿಗೆ ಎಂಬುದು ಹೊರಗಣ್ಣು ಮುಚ್ಚಬೇಕು. ಮತ್ತು ಒಳಗಣ್ಣುಗಳನ್ನು ತೆರೆಯಬೇಕು.
ಒಳಗಣ್ಣು ತೆರೆದರೆ ಬದುಕಿನ ದರ್ಶನ
ಒಬ್ಬ ವ್ಯಕ್ತಿ ಒಳಗಣ್ಣು ತೆರೆದು ನೋಡಿದರೆ ಆತನಿಗೆ ಅಲ್ಲಿ ಚಿಮ್ಮುತ್ತಿರುವ ಚಿರಂತನ ತೇಜಸ್ಸಿನ ಅಮೃತದರ್ಶನವಾಗುತ್ತದೆ ಎಂದು ಅಧ್ಯಾತ್ಮಿಕ ಚಿಂತಕರು ಹೇಳುತ್ತಾರೆ. ಇವತ್ತಿನ ಲೌಕಿಕ ಬದುಕಿನಲ್ಲಿ ನಾವೆಲ್ಲರೂ ಬಹುಸುಲಭವಾಗಿ ಆಕರ್ಷಣೆಗೊಳಗಾಗುತ್ತಿದ್ದೇವೆ. ಹಣ, ಆಸ್ತಿ ಮತ್ತು ಐಷಾರಾಮಿ ಬದುಕಿನ ಹಿಂದೆ ಬಿದ್ದಿದ್ದೇವೆ. ಇದೆಲ್ಲ ಪಡೆಯಬೇಕಾದರೆ ಹಣದ ಅಗತ್ಯತೆಯಿದೆ. ಈ ಹಣವನ್ನು ಸಂಪಾದಿಸುವ ಸಲುವಾಗಿಯೇ ನ್ಯಾಯದ ಹಾದಿ ಬಿಟ್ಟು ಅನ್ಯಾಯದ ಹಾದಿ ಹಿಡಿಯುತ್ತಿದ್ದೇವೆ. ಇದೆಲ್ಲವನ್ನು ಗಮನಿಸುವ ಒಳಗಣ್ಣು ಎಚ್ಚರಿಸುತ್ತಲೇ ಇರುತ್ತದೆ.
ಹಣ ಸಂಪಾದನೆಯೇ ಮುಖ್ಯವಾಗಿರುವ ಈ ಕಾಲದಲ್ಲಿ ಅದರ ಹಿಂದೆ ಬಿದ್ದು ನಮ್ಮ ಸಂತಸ, ಆರೋಗ್ಯ, ಸಂಬಂಧ ಹೀಗೆ ಎಲ್ಲವನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮವರೊಂದಿಗೆ ಬೆರೆಯುವುದನ್ನು ಕಡಿಮೆ ಮಾಡುತ್ತಿದ್ದೇವೆ. ಚಿಕ್ಕ ಚಿಕ್ಕ ವಿಚಾರಗಳು ಕೂಡ ದೊಡ್ಡದಾದ ಸಂತಸ ಕೊಡುತ್ತವೆ ಎಂಬುದನ್ನು ಮರೆಯುತ್ತಿದ್ದೇವೆ. ಬದುಕಿನ ಧಾವಂತದಲ್ಲಿ ನಮ್ಮೊಳಗಿನ ಕಣ್ಣನ್ನು ಮುಚ್ಚಿ ಮುನ್ನಡೆಯುತ್ತಿದ್ದೇವೆ ಇದು ಒಳ್ಳೆಯದಲ್ಲ.. ನಮ್ಮ ಬದುಕು ನೆಮ್ಮದಿಯಿಂದ ಖುಷಿಯಾಗಿರಬೇಕಾದರೆ ಒಳಗಣ್ಣನ್ನು ತೆರೆಯಲೇ ಬೇಕಾಗುತ್ತದೆ.











Click it and Unblock the Notifications