Life Tips: ನಮ್ಮಲ್ಲಿ ಜೀವನೋತ್ಸಾಹ ಇಲ್ಲದೆ ಹೋದರೆ ಏನಾಗುತ್ತದೆ?
ಸಸ್ಯ, ಪ್ರಾಣಿ, ಕ್ರಿಮಿ, ಕೀಟಗಳಲ್ಲಿಯೂ ಜೀವನೋತ್ಸಾಹವಿರುವುದು ಗೋಚರಿಸುತ್ತದೆ. ಅಲ್ಪಾಯುಷಿಯಾಗಿರುವ ಕ್ರಿಮಿ, ಕೀಟಗಳೇ ಉತ್ಸಾಹದಿಂದ ಬದುಕುವಾಗ ಮನುಷ್ಯರಾದ ನಾವೇಕೆ ಜೀವನೋತ್ಸಾಹ ಕಳೆದುಕೊಳ್ಳಬೇಕು? ನಮ್ಮಲ್ಲಿ ಜೀವನೋತ್ಸಾಹ ಇಲ್ಲದೆ ಹೋದರೆ ನಾವು ಖುಷಿಯಾಗಿ ಬದುಕಲು ಖಂಡಿತಾ ಸಾಧ್ಯವಿಲ್ಲ. ಆದುದರಿಂದ ನಾವು ಮೊದಲಿಗೆ ಜೀವನೋತ್ಸಾಹ ಬೆಳೆಸಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ನಮ್ಮಲ್ಲಿ ಜೀವನೋತ್ಸಾಹ ಬಂದಿದ್ದೇ ಆದರೆ ಎಲ್ಲವನ್ನು ಸಹಿಸಿಕೊಂಡು, ಎದುರಿಸಿಕೊಂಡು ಬದುಕಲು ಅನುಕೂಲವಾಗುತ್ತದೆ.
ನಮ್ಮ ಸುತ್ತಮುತ್ತ ಇರುವ ಸಸ್ಯ, ಜೀವಸಂಕುಲಗಳನ್ನು ನೋಡಿದರೆ ಅದರಲ್ಲಿ ಜೀವನೋತ್ಸಾಹ ಇರುವುದು ಎದ್ದು ಕಾಣುತ್ತದೆ. ನಡೆದಾಡುವ ರಸ್ತೆಯಲ್ಲಿ, ಕಲ್ಲುಗಳ ಸಂದಿಯಲ್ಲಿ, ಹೀಗೆ ಮೊಳಕೆಯೊಡೆದು ಗಿಡವಾಗಿ ಬೆಳೆಯಲು ಸಾಧ್ಯವಾಗದ ಸ್ಥಳಗಳಲ್ಲಿ ಕೆಲವು ಬೀಜಗಳು ಮೊಳಕೆಯೊಡೆದು ಗಿಡವಾಗಿ ಬೆಳೆಯುವುದನ್ನು ಕಾಣುತ್ತೇವೆ. ಆ ಬೀಜ ಮೊಳಕೆ ಒಡೆದು ಗಿಡವಾದರೆ ಯಾರು ಯಾವಾಗ ಕಿತ್ತು ಎಸೆಯುತ್ತಾರೋ? ಅಥವಾ ಇನ್ಯಾರ ಕಾಲಡಿಗೆ ಸಿಕ್ಕಿ ಸತ್ತು ಹೋಗುತ್ತೋ ಗೊತ್ತಿಲ್ಲ. ಆದರೂ ಅದು ಮೊಳಕೆ ಒಡೆಯದೆ, ಗಿಡವಾಗದೆ ಉಳಿಯುವುದಿಲ್ಲ.

ಇನ್ನು ಮೊಟ್ಟೆಯಿಂದ ಮರಿಯಾಗಿ ಚಿಟ್ಟೆಯಾಗಿ ಹಾರಾಡುವ ಅದಕ್ಕೆ ಆಯುಷ್ಯವೇ ಇಲ್ಲ ಎಂಬುದೇ ಗೊತ್ತಿಲ್ಲ. ಯಾವಾಗ ಬೇಕಾದರೂ ಅದು ಇನ್ಯಾವುದೋ ಜೀವಿಗಳಿಗೆ ಆಹಾರವಾಗಿ ಬಿಡಬಹುದು. ಆದರೂ ಅದು ಸುಪ್ತಾವಸ್ಥೆಯಿಂದ ಹೊರ ಬರುವಾಗ ಉತ್ಸಾಹದಿಂದಲೇ ಹಾರಿ ಬರುತ್ತದೆ. ಅಷ್ಟೇ ಅಲ್ಲದೆ ಎಲ್ಲೆಂದರಲ್ಲಿ ಹಾರಾಡಿ ಖುಷಿಪಡುತ್ತವೆ. ಜೇನು ಹುಳುಗಳು ಕೇವಲ ಒಂದು ತಿಂಗಳಷ್ಟೇ ಬದುಕಿದರೂ ಅವುಗಳು ಸದಾ ಲವಲವಿಕೆಯಿಂದಲೇ ಕೆಲಸ ಮಾಡುತ್ತವೆ. ಹೀಗೆ ಪ್ರಕೃತಿಯಲ್ಲಿ ಬದುಕುವ ಪ್ರತಿಯೊಂದು ಪ್ರಾಣಿ ಪಕ್ಷಿಯೂ ಜೀವನೋತ್ಸಾಹವನ್ನೇ ತೋರುತ್ತಿರುವಾಗ ಮನುಷ್ಯರಾದ ನಾವು ಜೀವನೋತ್ಸಾಹ ಕಳೆದು ಕೊಂಡು ಮಂಕಾಗುತ್ತಿರುವುದು ಬೇಸರದ ಸಂಗತಿಯೇ..
ಇರುವೆಯಂತಹ ಜೀವನೋತ್ಸಾಹ ಇರಬೇಕು!
ಒಂದೇ ಒಂದು ಹರಳು ಸಕ್ಕರೆ ಬಿದ್ದರೂ ಅದಕ್ಕೆ ಮುತ್ತಿಕೊಂಡು ಅದನ್ನು ಹೊತ್ತುಕೊಂಡು ಬಿಲ ಸೇರುವ ಇರುವೆಗಳನ್ನು ನೋಡಿದರೆ ಅದಕ್ಕೆ ತಾನು ಮಾಡುವ ಕೆಲಸದಲ್ಲಿರುವ ಬದ್ಧತೆ ಗೊತ್ತಾಗುತ್ತದೆ. ಅಷ್ಟೇ ಅಲ್ಲದೆ ಕಷ್ಟಪಟ್ಟು ಹೊತ್ತೊಯ್ಯುವ ಅದರ ಶ್ರಮಗಳನ್ನು ಗಮನಿಸಿದರೆ ನಿಜಕ್ಕೂ ಅದರ ಮುಂದೆ ನಾವು ಕುಬ್ಜರಾಗಿ ಬಿಡುತ್ತೇವೆ. ತನ್ನಿಂದ ಆಗಲ್ಲ ಎಂಬುದು ಗೊತ್ತಿದ್ದರೂ ಒಮ್ಮೆ ಸಕ್ಕರೆಯಿಂದ ಕೂಡಿದ ಬೆಟ್ಟಕ್ಕೆ ಹೋದ ಇರುವೆ ಯೋಚಿಸಿತಂತೆ. ಈಗ ಒಂದು ಹರಳನ್ನಷ್ಟೆ ಹೊತ್ತುಕೊಂಡು ಹೋಗುತ್ತೇನೆ ಆಮೇಲೆ ಬಂದು ಬೆಟ್ಟವನ್ನೇ ಹೊತ್ತೊಯ್ಯುತ್ತೇನೆಂದು. ಇದು ಕೂಡ ಜೀವನೋತ್ಸಾಹವೇ.
ಮನುಷ್ಯರಾದ ನಾವು ಪ್ರಕೃತಿಯೊಂದಿಗೆ ಒಡನಾಟವಿಟ್ಟುಕೊಂಡೇ ಬೆಳೆದವರು. ಇವತ್ತಿಗೂ ಪ್ರಕೃತಿಯನ್ನು ಬಿಟ್ಟು ಬದುಕಲು ನಮಗೆ ಸಾಧ್ಯವಿಲ್ಲ. ಪ್ರಕೃತಿ ನಮಗೆ ಎಲ್ಲ ರೀತಿಯಿಂದಲೂ ಬದುಕುವುದನ್ನು ಕಲಿಸಿಕೊಟ್ಟಿದೆ. ಹೀಗಿರುವಾಗ ಪ್ರಕೃತಿಗೆ ವಿರುದ್ಧವಾಗಿ ಬದುಕುವುದು ಒಳಿತಲ್ಲ. ಪ್ರಕೃತಿಗೆ ವಿರುದ್ಧವಾಗಿ ಹೋದಾಗಲೆಲ್ಲ ನಮಗೆ ಅದು ವಿಕೋಪಗಳ ಮೂಲಕ ತಿರುಗೇಟು ನೀಡಿದೆ. ಅದನ್ನು ನಾವು ಅರಿಯದ ಕಾರಣದಿಂದ ಮತ್ತೆ, ಮತ್ತೆ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಹೋಗುತ್ತಿದ್ದೇವೆ.
ನಿಜ ಹೇಳಬೇಕೆಂದರೆ ಶ್ರೀಮಂತಿಕೆ ಹಣದಲ್ಲಿಲ್ಲ
ಪ್ರಕೃತಿ ಮತ್ತು ಜೀವಸಂಕುಲಗಳ ಜತೆಗೆ ಬದುಕುತ್ತಿರುವ ನಾವು ಅವುಗಳಂತೆ ಜೀವನೋತ್ಸಾಹವನ್ನು ಕಲಿಯದೆ ಸದಾ ಏನೋ ಕಳೆದುಕೊಂಡವರಂತೆ ಬದುಕುವುದರಲ್ಲಿ ಏನಿದೆ? ನಮ್ಮ ನಿರೀಕ್ಷೆಗಳೆಲ್ಲವೂ ಹಣದ ಮೇಲಿದೆ. ಹಣವಿದ್ದವನು ಶ್ರೀಮಂತ ಎಂಬ ಭ್ರಮೆಯಲ್ಲಿದ್ದೇವೆ. ಹೀಗಾಗಿ ಐಷಾರಾಮಿ ಬದುಕು ಸಾಗಿಸುವವರನ್ನು ನೋಡಿಕೊಂಡು ನಾವು ಕೊರಗುತ್ತಿದ್ದೇವೆ. ನಮ್ಮ ಬಗ್ಗೆ ನಾವೇ ಜಿಗುಪ್ಸೆ ಪಡುತ್ತಿದ್ದೇವೆ. ನಮಗಿಂತ ಮೇಲಿನವರನ್ನು ನೋಡಿ ಅವರಲ್ಲಿರುವ ಆಸ್ತಿ ಅಂತಸ್ತುಗಳಿಗೆ ಹೋಲಿಕೆ ಮಾಡಿಕೊಂಡು ಕೊರಗುವುದನ್ನು ಮೊದಲಿಗೆ ಬಿಡಬೇಕು. ಹಾಗೆಯೇ ನಮಗಿಂತ ಕೆಳಗಿನವರನ್ನು ನೋಡಿ ನೆಮ್ಮದಿ ಪಡುವುದನ್ನು ಕಲಿಯಬೇಕು.
ಶ್ರೀಮಂತಿಕೆ ಕೇವಲ ಹಣದಲ್ಲಿಲ್ಲ. ವಿದ್ಯೆಯಲ್ಲಿದೆ, ಗುಣದಲ್ಲಿದೆ, ಆರೋಗ್ಯದಲ್ಲಿದೆ, ಬುದ್ದಿವಂತಿಕೆಯಲ್ಲಿದೆ. ಹೀಗಾಗಿ ನಮ್ಮಲ್ಲಿ ಏನೆಲ್ಲ ಶ್ರೀಮಂತಿಕೆ ಇದೆಯೋ ಅದರ ಬಗ್ಗೆ ಖುಷಿಪಡಬೇಕಾಗಿದೆ. ಅದನ್ನು ಹೊರತುಪಡಿಸಿ ಕೇವಲ ಹಣವೊಂದಕ್ಕಷ್ಟೆ ನಮ್ಮನ್ನು ನಾವು ಸಣ್ಣವನ್ನಾಗಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲಿ ಏನಿದೆ? ಏನಿಲ್ಲ ಎಂಬುದರ ಬಗ್ಗೆ ಲೆಕ್ಕಚಾರ ಮಾಡಿಕೊಂಡು ಬದುಕುವುದಕ್ಕಿಂತ ಎಲ್ಲವೂ ಇದೆ ಎಂಬ ಖುಷಿಯಲ್ಲಿ ಬದುಕ ಬೇಕಾಗಿದೆ. ಜತೆಗೆ ನಮ್ಮಲ್ಲಿಯೂ ಜೀವನೋತ್ಸಾಹ ಬರುವಂತೆ ನಮ್ಮನ್ನು ನಾವು ಸಜ್ಜುಗೊಳಿಸಬೇಕಾಗಿದೆ. ಆಗ ನಮ್ಮ ಬದುಕು ಸಾರ್ಥಕವಾಗುತ್ತದೆ.












Click it and Unblock the Notifications