ಬದುಕಿನಲ್ಲಿ ಮರೀಚಿಕೆಯಾದ ನೆಮ್ಮದಿ: ಈ ಭೂಮಿ ಮೇಲೆ ನಾವು ಬಿಟ್ಟು ಹೋಗುವುದು ಏನನ್ನು?
ಜೀವರಾಶಿಗಳಲ್ಲಿ ಮನುಷ್ಯರು ಶ್ರೇಷ್ಠರಾಗಿದ್ದಾರೆ. ನಮಗೆ ಬುದ್ದಿವಂತಿಕೆಯಿದೆ, ತಿಳುವಳಿಕೆಯಿದೆ. ಆದರೂ ನಾವು ಬೆಳಗಾದರೆ ಹೋರಾಟದ ಬದುಕಿಗೆ ತೆರೆದುಕೊಳ್ಳುತ್ತಿದ್ದೇವೆ. ದ್ವೇಷದ ಜೀವನ ಮಾಡುತ್ತೇವೆ. ಬೇರೆಯವರನ್ನು ತುಳಿದು, ಮೋಸ, ವಂಚನೆ ಮಾಡಿ ಬದುಕುವುದನ್ನು ರೂಢಿಸಿಕೊಳ್ಳುತ್ತಿದ್ದೇವೆ. ನಾನು ಚೆನ್ನಾಗಿದ್ದರೆ ಸಾಕು.. ಬೇರೆಯವರು ಏನಾದರೇನು? ಎಂಬ ಮನೋಸ್ಥಿತಿಗೆ ತಲುಪಿದ್ದೇವೆ.
ಮನುಷ್ಯ ಸಂಘಜೀವಿ ಒಂದಲ್ಲ ಒಂದು ಕಾರಣಕ್ಕೆ ಒಬ್ಬರನ್ನು ಮತ್ತೊಬ್ಬರನ್ನು ಅವಲಂಭಿಸಿ ಬದುಕಲೇ ಬೇಕಾಗಿದೆ. ಆದರೂ ನಾವು ಮತ್ತೊಬ್ಬನನ್ನು ತುಳಿದು ಬದುಕುವತ್ತ ಹೆಚ್ಚಿನ ಶ್ರಮವಹಿಸುತ್ತಿದ್ದೇವೆ. ಮತ್ತೊಬ್ಬನ ಬದುಕನ್ನು ಹಸನು ಮಾಡುವ ಶಕ್ತಿ ನಮಗಿಲ್ಲವಾಗಿರುವಾಗ ಹಾಳು ಮಾಡುವುದು ಕೂಡ ಅಪರಾಧವೇ.. ನಾನು ಮತ್ತು ನನ್ನ ಕುಟುಂಬ ಮಾತ್ರ ಚೆನ್ನಾಗಿರಬೇಕೆಂಬ ದುರಾಸೆಯಿಂದಲೇ ನಾವು ಮಾತ್ರವಲ್ಲದೆ, ಬೇರೆಯವರು ಹಾಳಾಗುತ್ತಿದ್ದಾರೆ. ನಮ್ಮ ಸುತ್ತಮುತ್ತಲ ಪರಿಸರ ಚೆನ್ನಾಗಿದ್ದರೆ ನಾವು ಚೆನ್ನಾಗಿರಲು ಸಾಧ್ಯ.

ಈಗಾಗಲೇ ಕೊರೊನಾ ನಮಗೆ ದೊಡ್ಡದೊಂದು ಪಾಠ ಕಲಿಸಿ ಹೋಗಿದೆ. ನೀನು ಆರೋಗ್ಯವಾಗಿರ ಬೇಕಾದರೆ ಸುತ್ತಮುತ್ತಲಿನವರು ಆರೋಗ್ಯವಾಗಿರಬೇಕು. ಅವರಿಗೆ ತಗುಲಿದ ರೋಗ ನಾಳೆ ನಿನಗೂ ತಗಲಬಹುದು. ನೀನು ಮತ್ತು ನಿನ್ನ ಸುತ್ತಮುತ್ತ ಎಲ್ಲರೂ ಚೆನ್ನಾಗಿದ್ದರೆ ಮಾತ್ರ ನಿನಗೆ ಉಳಿಗಾಲ ಎಂಬ ಸಂದೇಶವನ್ನು ಬಿಟ್ಟು ಹೋಗಿದೆ. ಆದರೆ ನಾವು ಕೊರೊನಾದಿಂದ ಪಾಠಕಲಿತಂತೆ ಕಾಣಿಸುತ್ತಿಲ್ಲ.
ಬದುಕಿನಲ್ಲಿ ಮರೀಚಿಕೆಯಾಗುತ್ತಿರುವ ನೆಮ್ಮದಿ
ವೃತ್ತಿಯಲ್ಲಿ ವೈಷಮ್ಯ, ಸಂಬಂಧದಲ್ಲಿ ಹಗೆತನ, ರಾಜಕೀಯದಲ್ಲಿ ದ್ವೇಷ ಹೀಗೆ ಎಲ್ಲದರಲ್ಲಿಯೂ ನಾವು ನಾವಾಗಿ ಒಳಿಯದೆ ಎಲ್ಲೋ ಒಂದು ಕಡೆ ಮನುಷ್ಯತ್ವ ಸತ್ತು ರಾಕ್ಷಸಿತನ ಬೆಳೆಯುತ್ತಿದೆ. ಇದು ನಮಗೆ ಗೊತ್ತಾಗದಂತೆ ನಮ್ಮ ಬದುಕನ್ನೇ ಕಿತ್ತುಕೊಳ್ಳುತ್ತಿದೆ. ಕೇವಲ ಹಣ ಮಾಡುವುದಷ್ಟೇ ಉದ್ದೇಶವಾಗಿಟ್ಟುಕೊಂಡು ಅದಕ್ಕೋಸ್ಕರ ಎಲ್ಲವನ್ನು ಬದಿಗೊತ್ತುತ್ತಿದ್ದೇವೆ. ಅದರ ಪರಿಣಾಮದಿಂದ ನಮಗೆ ನೆಮ್ಮದಿ ಮರೀಚಿಕೆಯಾಗುತ್ತಿದೆ.

ಊಟ, ತಿಂಡಿಯಿಂದ ಆರಂಭವಾಗಿ ಕೆಲಸಕಾರ್ಯ, ರಾತ್ರಿ ನಿದ್ದೆ ಮಾಡುವವರೆಗೆ ನಮ್ಮಲ್ಲಿ ನೆಮ್ಮದಿ ಇಲ್ಲದಂತಾಗಿದೆ. ನಾವು ನಮಗಾಗಿ ಬದುಕದೆ ಮತ್ಯಾರಿಗೋ ಬದುಕುತ್ತಿದ್ದೇವೆಯೇನೋ ಎಂಬ ಭಾವನೆ ಮೂಡುತ್ತಿದೆ. ಅವರ ಬಳಿ ಇರೋದು ನನ್ನ ಬಳಿಯಿಲ್ಲ ಎಂಬ ಕೊರಗು ನೆಮ್ಮದಿಯನ್ನು ಕೀಳುತ್ತಿದೆ. ಅದಕ್ಕಿಂದ ಹೆಚ್ಚಾಗಿ ಪೈಪೋಟಿ ನೀಡುವ ಸಲುವಾಗಿ ನಮ್ಮಿಂದ ಸಾಧ್ಯವಾಗದನ್ನು ಸಾಧ್ಯವಾಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅದರಿಂದ ಸಂಕಷ್ಟ ಎಳೆದುಕೊಳ್ಳುತ್ತಿದ್ದೇವೆ.
ಈಗ ನಾವು ನಮಗಾಗಿ ಬದುಕುತ್ತಿಲ್ಲ
ನಾವು ನಮಗಾಗಿ ಬದುಕುವುದನ್ನು ಮರೆಯುತ್ತಿದ್ದೇವೆ. ಅದರ ಪರಿಣಾಮವೇ ಇವತ್ತು ನೆಮ್ಮದಿ ಮರೀಚಿಕೆಯಾಗುತ್ತಿದೆ. ಯಾರನ್ನೋ ಮೆಚ್ಚಿಸಲೋ ಅಥವಾ ನಾನೇನು ಕಡಿಮೆಯಿಲ್ಲವೆಂದು ತೋರಿಸಲೇನೋ ಎಂಬಂತೆ ಬದುಕುತ್ತಿದ್ದೇವೆ. ಇದರಿಂದ ಬೇರೆಯವರಿಗೆ ಏನೂ ಆಗುವುದಿಲ್ಲ. ಎಲ್ಲವೂ ನಮಗೆ ಆಗುತ್ತಿದೆ. ನಮ್ಮ ಶಕ್ತ್ಯಾನುಸಾರ ಬದುಕುವುದನ್ನು ರೂಢಿಸಿಕೊಳ್ಳುವಲ್ಲಿ ಎಡವುತ್ತಿದ್ದೇವೆ.
ಮಾತನಾಡುವಾಗಲೂ ನಮ್ಮಲ್ಲಿ ಗಂಭೀರತೆ ಇಲ್ಲ. ನಮ್ಮ ಮುಂದಿರುವ ವ್ಯಕ್ತಿ ಜತೆ ಮುಖಕೊಟ್ಟು ಮಾತನಾಡುವ ವ್ಯವಧಾನ ನಮಗಿಲ್ಲ. ಆತ ಮಾತನಾಡುತ್ತಿದ್ದರೆ ಅದನ್ನು ಕೇಳುವ ತಾಳ್ಮೆಯಿಲ್ಲ. ಮೊಬೈಲ್ ನಲ್ಲಿ ಮೆಸೇಜ್ ಓದುತ್ತಲೋ, ಮತ್ತೇನನ್ನೋ ಮಾಡುತ್ತಿರುತ್ತೇವೆ. ಎದುರಿಗಿನ ವ್ಯಕ್ತಿಯೊಂದಿಗೆ ಸ್ನೇಹಪೂರ್ವಕವಾಗಿ ಮಾತನಾಡುವ ಸೌಜನ್ಯವೂ ಇಲ್ಲದಾಗಿದೆ. ಆರೋಗ್ಯಪೂರ್ಣ ಆಹಾರ ನಮಗೆ ಬೇಕಾಗಿಲ್ಲ. ಕಷ್ಟಪಟ್ಟು ಅಡುಗೆ ಮಾಡಿ ಅದನ್ನು ಸವಿದು ನೆಮ್ಮದಿಯಿಂದ ಕುಳಿತು ಸುಧಾರಿಸಿಕೊಳ್ಳಲು ಪುರುಸೊತ್ತಿಲ್ಲ. ಇನ್ನು ಜಂಜಾಟದ ನಡುವೆ ಸಂಬಂಧಿಕರನ್ನು ಕರೆದು ಊಟ ಹಾಕಿ ಉಪಚರಿಸುವ ಉದಾರತೆ ಅಂತು ಇಲ್ಲದಾಗಿದೆ.
ಅತಿಥಿ ದೇವೋಭವ ಮಾಯವಾಗಿದೆ
ಪೂರ್ವಜರು ಅತಿಥಿ ದೇವೋಭವ ಎಂದು ರಸ್ತೆಯಲ್ಲಿ ಹೋಗುತ್ತಿದ್ದವರನ್ನು ಕರೆದು ಉಪಚರಿಸಿ ಕಳುಹಿಸುತ್ತಿದ್ದರು. ಅವತ್ತಿನ ದಿನದಲ್ಲಿ ಹಸಿದ ಹೊಟ್ಟೆಗೆ ಅನ್ನ ಹಾಕಿದರೆ ಪುಣ್ಯ ಬರುತ್ತೆ ಎಂದು ನಂಬಿದ್ದರು. ಆದರೆ ಈಗ ಅದು ಸಾಧ್ಯವಿಲ್ಲದಾಗಿದೆ. ಹೆತ್ತವರಿಗೆ ಊಟ ಹಾಕುವುದೇ ದುಸ್ತರ ಎನ್ನುವ ಪರಿಸ್ಥಿತಿಗೆ ಬಂದು ಬಿಟ್ಟಿದ್ದೇವೆ. ಬದಲಾದ ಕಾಲದಲ್ಲಿ ಎಲ್ಲವನ್ನು ಹಣದಿಂದಲೇ ಅಳೆಯುವುದರಿಂದಾಗಿ ಹಣದ ಸಂಪಾದನೆಗೆ ಬಿದ್ದ ಜನ ನೈತಿಕತೆಯನ್ನು ಮರೆತು ಅನೈತಿಕ ಹಾದಿ ಹಿಡಿಯುತ್ತಿದ್ದಾರೆ. ಮೋಸ, ಸುಲಿಗೆ, ವಂಚನೆಗೆ ಒಡ್ಡಿಕೊಳ್ಳುತ್ತಿದ್ದೇವೆ.
ಅತಿಥಿ ದೇವೋಭವ ಎನ್ನುವ ಕಾಲ ಮಾಯವಾಗಿ ಮನೆಗೆ ಕಾಂಪೌಂಡ್ ನಿರ್ಮಿಸಿ ಸಂಬಂಧಗಳಿಂದ ದೂರವಾಗಿ ನಮ್ಮೊಳಗೆ ಬಂಧಿಯಾಗಿದ್ದೇವೆ. ಮನೆಗೆ ಕರೆದು ಉಪಚರಿಸಲು ಇಷ್ಟವಿಲ್ಲ. ಅಷ್ಟಕ್ಕೂ ಎಲ್ಲರೂ ದುಡಿಮೆಯಲ್ಲೇ ಇರುವುದರಿಂದ ಉಪಚರಿಸಲು ಸಮಯವೂ ಇಲ್ಲವಾಗಿದೆ. ಆದ್ದರಿಂದ ಮನೆ ಮುಂದೆ ನಾಯಿಗಳಿವೆ ಎಚ್ಚರಿಕೆ ಎಂಬ ನಾಮಫಲಕ ತೂಗು ಹಾಕಿ ಪರೋಕ್ಷವಾಗಿ ಬರಬೇಡಿ ಎಂಬ ಸಂದೇಶ ರವಾನಿಸುತ್ತಿದ್ದೇವೆ.
ಬಿಟ್ಟು ಹೋಗುವುದು ಒಳ್ಳೆತನಗಳನ್ನಷ್ಟೇ
ಒಟ್ಟಾರೆ ಹೇಳಬೇಕೆಂದರೆ ನಾವು ಬೆಳಿಗ್ಗೆಯಿಂದ ಸಂಜೆವರೆಗೆ ನೂರೆಂಟು ಜವಾಬ್ದಾರಿಗಳನ್ನು ಹೊತ್ತುಕೊಂಡು ನೆಮ್ಮದಿಯಾಗಿ ತಿಂಡಿ, ಊಟ, ನಿದ್ದೆ ಮಾಡದೆ ಒದ್ದಾಡುತ್ತಿದ್ದೇವೆ. ಹಣ ಸಂಪಾದಿಸಿದರೆ ಸಾಕು. ಅದರಿಂದ ಎಲ್ಲವನ್ನೂ ಪಡೆದುಕೊಳ್ಳಬಹುದು ಎಂಬ ಕೆಟ್ಟ ಮನೋಭಾವ ನಮ್ಮಲ್ಲಿ ಬಂದು ಬಿಟ್ಟಿದೆ. ಆದ್ದರಿಂದ ಹೇಗಾದರು ಆಗಲಿ ಹಣ ಸಂಪಾದಿಸಲೇ ಬೇಕು ಎಂಬ ಹಠಕ್ಕೆ ಬಿದ್ದಿರುವ ನಾವು ಅದರಲ್ಲಿ ಮಗ್ನರಾಗುತ್ತಿದ್ದೇವೆ. ಪರಿಣಾಮ ನಮ್ಮಲ್ಲಿನ ಸ್ವಾಭಾವಿಕತೆ ಮರೆಯಾಗುತ್ತಿದೆ.
ನಮ್ಮ ಬದುಕು ಶಾಶ್ವತವಲ್ಲ ಕೇವಲ ಮೂರು ದಿನವಷ್ಟೆ. ಅದರಲ್ಲಿ ಹೆಚ್ಚಿನ ಸಮಯವನ್ನು ನಾವು ದುಡಿಯುವುದರಲ್ಲಿ, ಸಂಸಾರದ ಜಂಜಾಟದಲ್ಲಿ ಕಳೆದು ಬಿಡುತ್ತೇವೆ. ನಮ್ಮದು ಅಂಥ ಇಲ್ಲಿ ಯಾವುದೂ ಇಲ್ಲ. ಆದರೂ ನಾನು, ನನ್ನದು ಎಂಬ ಭ್ರಮೆಯಲ್ಲಿ ಓಡಾಡುತ್ತೇವೆ. ಇಲ್ಲಿ ನಾವು ನೀವು ಶಾಶ್ವತವಲ್ಲ. ನಾವು ಮಾಡಿಟ್ಟ ಆಸ್ತಿಯೂ ಶಾಶ್ವತವಲ್ಲ. ಹೀಗಿರುವಾಗ ಶಾಶ್ವತವಾಗಿ ಉಳಿಯುವುದು ನಾವು ಬಿಟ್ಟು ಹೋಗುವ ಒಳ್ಳೆತನಗಳಷ್ಟೆ... ನಾವು ಹೇಗೆ ಬದುಕಿದ್ದೆವು ಎನ್ನುವುದಷ್ಟೆ.











Click it and Unblock the Notifications