'ನಾಳೆ'ಯ ಚಿಂತೆ ಬಿಟ್ಟು ಬಿಡಿ... ಇವತ್ತು ಖುಷಿಯಾಗಿರಿ..!
ನಮ್ಮಲ್ಲಿ ಹೆಚ್ಚಿನವರು ಒಂದಲ್ಲ ಒಂದು ಕಾರಣಕ್ಕೆ ನಾಳೆ ಬಗ್ಗೆ ಚಿಂತೆ ಮಾಡುತ್ತಿರುತ್ತಾರೆ. ನಾಳೆಯ ಬಗ್ಗೆ ಆಲೋಚನೆ ಮಾಡುವುದರಲ್ಲಿ ತಪ್ಪೇನಿಲ್ಲ. ಅದು ಪಾಸಿಟಿವ್ ಆಗಿರುವಂತೆ ನೋಡಿಕೊಳ್ಳುವುದು ಬಹುಮುಖ್ಯವಾಗಿರುತ್ತದೆ. ಸಾಮಾನ್ಯವಾಗಿ ನಾವ್ಯಾರೂ ಇವತ್ತಿನ ಬಗ್ಗೆ ಚಿಂತಿಸುವುದೇ ಇಲ್ಲ. ಬದಲಿಗೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ನಾಳೆ ಏನಾಗುತ್ತೋ ಎಂಬ ಆತಂಕ ಪಡುವುದನ್ನು ಮಾತ್ರ ನಿಲ್ಲಿಸಲ್ಲ.
ಇವತ್ತಿದ್ದಂತೆ ನಾಳೆಯೂ ಇರುತ್ತೆ ಎಂಬ ನಂಬಿಕೆ ನಮಗಿಲ್ಲ. ನಾಳೆ ಏನು ಬೇಕಾದರೂ ಆಗಬಹುದು. ಆದರೆ ಒಳ್ಳೆಯದರ ಬದಲಿಗೆ ಕೆಟ್ಟದನ್ನು ಕಲ್ಪಿಸಿಕೊಂಡು ಚಿಂತೆ ಮಾಡುವುದು ಮೂರ್ಖತನ ಎಂದು ಗೊತ್ತಿದ್ದರೂ ಅದನ್ನೇ ಮಾಡುತ್ತಿರುತ್ತೇವೆ. ಚಿಂತೆ ಮಾಡುತ್ತಾ ಹೋದರೆ ಅದು ನಮ್ಮ ಬದುಕನ್ನು ಆವರಿಸಿ ಕತ್ತಲಿಗೆ ತಳ್ಳಿಬಿಡುತ್ತದೆ. ಹುಟ್ಟಿದ ಮನುಷ್ಯ ಸಾಯಲೇ ಬೇಕು. ಆದರೆ ಹುಟ್ಟು ಸಾವಿನ ನಡುವೆ ಸಮಸ್ಯೆ, ಕಷ್ಟ, ಸುಖ ಹೀಗೆ ಎಲ್ಲವೂ ಬರುತ್ತದೆ. ಅದನ್ನು ಅರಿತುಕೊಂಡು ಬದುಕುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು.

ನಮ್ಮ ಬದುಕನ್ನು ಒಳ್ಳೆಯ ಮಾರ್ಗದಲ್ಲಿ ಕಟ್ಟಿಕೊಳ್ಳಲು ನಮಗೆ ಬೇಕಾಗಿರುವುದು ಚಿಂತೆಯಲ್ಲ ಚಿಂತನೆ ಎಂಬುವುದನ್ನು ಮರೆಯಬಾರದು.ಇಷ್ಟಕ್ಕೂ ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬರನ್ನೂ ಚಿಂತೆ ಕಾಡದಿರದು. ಹಾಗೆಂದು ಬರೀ ಚಿಂತೆಯಲ್ಲೇ ಕಾಲ ಕಳೆಯುವಂತಿಲ್ಲ. ಚಿಂತೆ ಮಾಡುತ್ತಾ ಹೋದರೆ ಮನುಷ್ಯ ಚಿತೆಯಾಗಬೇಕಾಗುತ್ತದೆ. ಆದ್ದರಿಂದ ಚಿಂತೆಯಿಂದ ಹೊರಬರಬೇಕಾದರೆ ಭಗವಂತನನ್ನು ಕುರಿತ ಚಿಂತನೆ ಮಾಡುವುದು ಉತ್ತಮ. ಭಗವದ್ ವಿಷಯಗಳಲ್ಲಿ ನಾವು ಮಗ್ನರಾದಷ್ಟು ನಾವು ನಮ್ಮ ಮನಸ್ಸಿನಲ್ಲಿರುವ ಚಿಂತೆಗಳನ್ನು ದೂರ ಮಾಡಲು ಸಾಧ್ಯವಾಗುತ್ತದೆ.
ಕೆಲವರಿಗೆ ಚಿಂತೆ ಮಾಡುವುದೇ ಅಭ್ಯಾಸ
ನಮ್ಮ ಬದುಕನ್ನು ಬೆರೆಯುವಾಗ ಬದುಕಿನೊಂದಿಗೆ ಸಮೀಕರಿಸಿ ನೋಡುವುದನ್ನು ಮೊದಲು ಬಿಡಬೇಕು. ಒಂದು ವೇಳೆ ಹಾಗೆ ಮಾಡಿದರೂ ಬೇರೆ ವ್ಯಕ್ತಿಗಳ ಬದುಕಿನ ಒಳ್ಳೆತನಗಳನ್ನು ನಮ್ಮೊಂದಿಗೆ ಹೋಲಿಸುತ್ತಾ ಅವರ ಆದರ್ಶಗಳನ್ನು ಪಾಲಿಸುವಂತಾಗಬೇಕು. ಆದರೆ ಅದು ನಮ್ಮಿಂದ ಸಾಧ್ಯವೇ? ನಾವು ಬೇರೆಯವರ ಒಳ್ಳೆತನಗಳನ್ನು ಪಾಲಿಸುವುದಿಲ್ಲ ಬದಲಾಗಿ ಅವರ ಮನೆಯಲ್ಲಿರುವ ಐಷಾರಾಮಿ ವಸ್ತುಗಳಿಗೆ ಪೈಪೋಟಿ ನೀಡುತ್ತೇವೆ. ಅವರಲ್ಲಿರುವ ವಸ್ತು ನಮ್ಮಲ್ಲಿಲ್ಲವಲ್ಲ ಎಂದು ಚಿಂತೆ ಮಾಡುತ್ತೇವೆ. ಇಂಥ ಕೆಟ್ಟ ಪ್ರವೃತ್ತಿ ಬೆಳೆಸಿಕೊಳ್ಳುವುದು ಕೂಡ ನಮ್ಮನ್ನು ವೃಥಾ ಚಿಂತೆಗೆ ದೂಡುತ್ತದೆ.

ಕೆಲವರಿಗೆ ಚಿಂತೆ ಮಾಡುವುದೇ ಒಂದು ಕಾಯಿಲೆ ಎಂದರೂ ತಪ್ಪಾಗುವುದಿಲ್ಲ. ಏಕೆಂದರೆ ಅವರು ಬೇಡವಾದ ವಿಚಾರಕ್ಕೆಲ್ಲ ಚಿಂತೆ ಮಾಡುತ್ತಿರುತ್ತಾರೆ. ಅದರಿಂದಲೇ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಾರೆ. ಈ ಪ್ರಪಂಚದಲ್ಲಿ ಜನ್ಮವೆತ್ತ ನಾವೆಲ್ಲರೂ ಸಾಯಲೇ ಬೇಕು. ಆ ಸತ್ಯ ನಮಗೂ ಗೊತ್ತಿದೆ. ನಮ್ಮ ಸಂಸಾರದ ಜವಾಬ್ದಾರಿ ಹೊತ್ತ ವ್ಯಕ್ತಿ ಅಥವಾ ನಾವು ಅತೀ ಹೆಚ್ಚು ಪ್ರೀತಿಸುವ ಜೀವ ನಮ್ಮನ್ನು ಬಿಟ್ಟು ಹೋದರೆ ನಮ್ಮ ಬದುಕೇ ಮುಗಿದು ಹೋಯತೆಂಬ ಭಾವ ನಮ್ಮನ್ನು ಕಾಡುತ್ತದೆ. ಹಾಗೆಂದು ಅವರ ಚಿಂತೆಯಲ್ಲೇ ಕಾಲ ಕಳೆದರೆ ನಮ್ಮನ್ನು ಆಶ್ರಯಿಸಿದವರ ಪಾಡೇನು? ಎಲ್ಲವನ್ನು ಎದುರಿಸಿ ನಿಲ್ಲುವ ಶಕ್ತಿಯನ್ನು ನಾವು ತಂದುಕೊಳ್ಳಬೇಕು.
ಭಗವಾನ್ ಬುದ್ಧ ಹೇಳುವುದೇನು ಗೊತ್ತಾ?
ಬೇಡ, ಬೇಡ ಎಂದರೂ ನಮ್ಮ ಮನಸ್ಸನ್ನು ಆವರಿಸಿ ಬರುವ ಚಿಂತೆಯನ್ನು ದೂರ ಮಾಡಬೇಕೆಂದರೆ ಮನಸ್ಸನ್ನು ಭಗವಂತನತ್ತ ತಿರುಗಿಸಬೇಕು ಹೀಗೆ ಸದಾ ದೇವರ ಧ್ಯಾನದಲ್ಲಿ ತೊಡಗುವುದರಿಂದ ನಮ್ಮ ಮನಸ್ಸಿನಲ್ಲಿ ಆವರಿಸಿದ ಚಿಂತೆ ಸದ್ದಲ್ಲದೆ ಮಾಯವಾಗುತ್ತದೆ. ನಮ್ಮನ್ನು ಚಿಂತೆ ಆವರಿಸುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ಮನಸ್ಸನ್ನು ಒಳ್ಳೆಯ ಚಿಂತನೆಯತ್ತ ಹರಿಸಬೇಕು. ಇದು ಒಂದು ರೀತಿಯ ತಂತ್ರ ಎಂದರೂ ತಪ್ಪಾಗಲಾರದು.
ಏಕೆಂದರೆ ಭಗವಂತನ ಕುರಿತು ಮತ್ರೋಚ್ಛಾರಣೆಯನ್ನು ಮಾಡುವುದರಿಂದ ನಮ್ಮಲ್ಲಿ ಜಾಗೃತವಾಗುವ ಉದಾತ್ತ ಭಾವವು ನಮ್ಮನ್ನು ಆಗಾಗ್ಗೆ ದಾಳಿ ಮಾಡಿ ಕೊಲ್ಲುವ ಚಿಂತೆಯಿಂದ ಪಾರು ಮಾಡಬಲ್ಲದು. ಭಗವಾನ್ ಬುದ್ಧ ಹೇಳುತ್ತಾನೆ ಮನಸ್ಸಿನಲ್ಲಿ ಹುಟ್ಟಿದ ಚಿಂತನೆಯನ್ನು ದೂರ ಓಡಿಸಬೇಕಾದರೆ ಮನಸ್ಸಿನ ಸ್ತರಗಳನ್ನು ಮತ್ತೆ ಮತ್ತೆ ಪರಿಶೀಲನೆಗೆ ಒಳಪಡಿಸಬೇಕು. ಹಾಗೆಯೇ ಕೆಲಸಕ್ಕೆ ಬಾರದ ಚಿಂತನೆಗಳನ್ನು ಮನಸ್ಸಿನಿಂದ ಕಿತ್ತುಹಾಕಿ ಒಳ್ಳೆಯದನ್ನು ಮಾತ್ರ ತುಂಬಿಕೊಳ್ಳಬೇಕು. ಇದು ನಿಜ ಎನಿಸದಿರದು. ಆದ್ದರಿಂದ ನಾಳಿನ ಚಿಂತೆ ಬಿಟ್ಟು ಇವತ್ತು ಖುಷಿಯಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳೋಣ.












Click it and Unblock the Notifications