ಅತಿಯಾದರೆ ಅಮೃತವೂ ವಿಷವಾಗಬಹುದು ಹುಷಾರ್!
ಅತಿಯಾದರೆ ಎಲ್ಲವೂ ವಿಷ ಎನ್ನುವುದು ಪ್ರಕೃತಿಯೆ ನಮಗೆ ತೋರಿಸಿ ಕೊಟ್ಟಿದೆ. ಅದನ್ನರಿತು ಮನುಷ್ಯನಾದವನು ತಮ್ಮ ಬದುಕಿನಾದ್ಯಂತ ನಡೆ, ನುಡಿ, ಆಹಾರ, ಹೀಗೆ ಎಲ್ಲದರಲ್ಲಿಯೂ ಮಿತವಾಗಿದ್ದರೆ ಅದರಿಂದ ಎಲ್ಲವೂ ಒಳ್ಳೆಯದೇ ಆಗುವುದರೊಂದಿಗೆ ಒಂದೊಳ್ಳೆಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ಮಿತ ಎನ್ನುವುದೇ ಗೊತ್ತಿಲ್ಲ ಹೀಗಾಗಿಯೇ ಬದುಕನ್ನು ಸುಂದರವಾಗಿಸಿಕೊಳ್ಳುವಲ್ಲಿ ಎಡವುತಿದ್ದಾರೆ.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ಮಾತಿದೆ. ಇದು ಸರ್ವ ಕಾಲಕ್ಕೂ ಅನ್ವಯಿಸುವಂತದ್ದು. ಒಳ್ಳೆಯದು ಅಥವಾ ಶ್ರೇಷ್ಠ ಎಂಬ ಕಾರಣಕ್ಕೆ ಅತಿಯಾಗಿ ಅಮೃತ ಸೇವಿಸಿದರೂ ವಿಷವಾಗುತ್ತೆ ಎಂಬ ಮಾತಿದೆ. ಇದೆಲ್ಲವನ್ನೂ ಹಿರಿಯರು ಸುಮ್ಮನೆ ಬಾಯಿ ಮಾತಿಗೆ ಹೇಳಿಲ್ಲ. ಅನುಭವದಿಂದ ಹೇಳಿದ್ದಾರೆ. ಹೀಗಾಗಿಯೇ ನಾವೆಲ್ಲರೂ ಎಲ್ಲವನ್ನು ಮಿತವಾಗಿಯೇ ಸ್ವೀಕರಿಸುವುದನ್ನು ಕಲಿಯಬೇಕಾಗುತ್ತದೆ.

ಎಲ್ಲವೂ ಮಿತವಾಗಿದ್ದರೆ ಹಿತ. ಅದು ಹೆಚ್ಚಾದರೆ ತೊಂದರೆ ತಪ್ಪಿದಲ್ಲ. ಆದರೆ ಕೆಲವೊಮ್ಮೆ ಮುಳ್ಳಿನಿಂದಲೇ ತೆಗೆಯಬೇಕೆನ್ನುವ ಮಾತು ಘಟನೆಗೆ ತಕ್ಕಂತೆ ಸಾಮ್ಯತೆ ಹೊಂದುತ್ತದೆ ಎಂಬುದಕ್ಕೆ ಸ್ವಾಮಿ ಶಿವಾನಂದರ ರೂಪಕ ಕಥೆಯೊಂದು ಹೇಳುತ್ತದೆ. ಯೌವನದ ಮದದಲ್ಲಿ ಮಾಡುವ ಕರ್ಮಗಳು ಏನೆಲ್ಲಾ ಮಾಡುತ್ತವೆ ಮತ್ತು ನಾವು ಮಾಡಿದ ಕರ್ಮಕ್ಕೆ ಪ್ರಾಯಶ್ಚಿತ್ತವನ್ನೂ ಅವರು ವಿವರಿಸುತ್ತಾರೆ.
ಮಿತಿಮೀರಿದರೆ ಎಲ್ಲವೂ ಅಪಾಯವೇ
ಒಬ್ಬ ವ್ಯಕ್ತಿ ಹಬ್ಬದೂಟದಲ್ಲಿ ತುಪ್ಪವನ್ನು ಮಿತಿಮೀರಿ ಸೇವಿಸಿಬಿಟ್ಟನು. ಇದರಿಂದ ಜೀರ್ಣವಾಗದೆ ಅಜೀರ್ಣವಾಗಿ ಆತ ಅಸ್ವಸ್ತಗೊಂಡನು. ಇನ್ನು ಸಾಧ್ಯವಾಗಲ್ಲ ಎಂದಾಗ ಆತ ಒಬ್ಬ ಆಯುರ್ವೇದದ ವೈದ್ಯರ ಬಳಿಗೆ ಹೋದನು. ಅಲ್ಲಿ ತುಪ್ಪ ಸೇವಿಸಿದ ಬಗ್ಗೆ ಅದರಿಂದಲೇ ನನಗೆ ಅಜೀರ್ಣವಾಗಿದೆ ಎಂಬ ವಿಷಯವನ್ನು ವೈದ್ಯನ ಮುಂದೆ ಹೇಳಿದನು.
ಇದನ್ನು ಆಲಿಸಿದ ವೈದ್ಯ ಒಂದು ಸ್ವಲ್ಪ ತುಪ್ಪವನ್ನು ತಂದುಕೊಡಿ ಅದರಲ್ಲಿ ಔಷಧಿ ಮಾಡಿಕೊಡುತ್ತೇನೆ ಎಂದನು. ಇದನ್ನು ಕೇಳಿದ ರೋಗಿಗೆ ಆಶ್ಚರ್ಯವಾಯಿತಲ್ಲದೆ, ಬೆಚ್ಚಿ ಬಿದ್ದನು. ಅಲ್ಲದೆ ಆಶ್ಚರ್ಯದಿಂದಲೇ ಅಲ್ಲ ವೈದ್ಯರೇ ನನಗೆ ತುಪ್ಪ ತಿಂದಿರುವುದರಿಂದಲೇ ಅಜೀರ್ಣವಾಗಿದೆ. ಈಗ ತುಪ್ಪದಿಂದಲೇ ಔಷಧಿ ಕೊಡುತ್ತೇನೆ ಎನ್ನುತ್ತೀರಲ್ಲ. ನೀವು ಹೇಳುವುದನ್ನು ನೋಡಿದರೆ ನನ್ನ ರೋಗ ಇನ್ನಷ್ಟು ಜಾಸ್ತಿಯಾಗುವಂತೆ ಕಾಣುತ್ತಿದೆಯಲ್ಲ ಎಂದು ಭಯಗೊಂಡನು.
ಸ್ವಾಮಿ ಶಿವಾನಂದರು ಹೇಳುವುದೇನು?
ಆತನ ಮಾತನ್ನು ಕೇಳಿದ ವೈದ್ಯ ಅವನನ್ನು ಸಮಾಧಾನಿಸುತ್ತಾ ಮೊದಲು ತುಪ್ಪ ತನ್ನಿ ನಾನು ಅದರಿಂದ ಔಷಧಿ ಮಾಡಿಕೊಡುತ್ತೇನೆ ಎಂದನು. ಬೇರೆ ದಾರಿ ಕಾಣದ ರೋಗಿ ತುಪ್ಪ ತಂದು ಕೊಟ್ಟನು. ವೈದ್ಯ ಇನ್ನು ಕೆಲವು ಪದಾರ್ಥಗಳನ್ನು ಸೇರಿಸಿ ಔಷಧಿ ತಯಾರಿಸಿ ಇಂತಿಷ್ಟೇ ಪ್ರಮಾಣದಲ್ಲಿ ಸೇವಿಸುವಂತೆ ಹೇಳಿದನು. ರೋಗಿ ಆ ಔಷಧಿಯನ್ನು ಅನುಮಾನದಿಂದ ಕುಡಿದನಾದರೂ ಅದು ಪರಿಣಾಮಕಾರಿಯಾಗುವುದರೊಂದಿಗೆ ಅವನು ಅಜೀರ್ಣದ ತೊಂದರೆಯಿಂದ ಮುಕ್ತನಾದನು.
ಈ ರೂಪಕ ಕಥೆಯನ್ನು ಮುಂದಿಟ್ಟುಕೊಂಡು ಸ್ವಾಮಿ ಶಿವಾನಂದರು ಹೇಳುತ್ತಾರೆ. ಮನುಷ್ಯ ಜನನ ಮರಣಗಳ ಚಕ್ರದಲ್ಲಿ ಕರ್ಮಾನುಸಾರ ನಡೆದುಕೊಳ್ಳುತ್ತಾನೆ. ಬಯಕೆಯ ಬೆನ್ನೇರಿ ಮಾಡ ಬಾರದ್ದನೆಲ್ಲ ಮಾಡಿ ಹಲವು ಸಂಕಷ್ಟಗಳಿಗೀಡಾಗುತ್ತಾನೆ. ತಾನು ಮಾಡಿದ್ದು ಕರ್ಮ ಎಂದು ತಿಳಿಯುವ ವೇಳೆಗೆ ಅವನು ಜರ್ಜರಿತನಾಗಿರುತ್ತಾನೆ. ಸಲಹೆಗಾಗಿ ಸಂತನ ಬಳಿಗೆ ಹೋಗುತ್ತಾನೆ. ಆತ ಅವನಿಗೆ ನಿನ್ನಲ್ಲಿರುವ ಅಹಂಕಾರದಿಂದ ಹೀಗಾಗಿದೆ ಸೇವೆ ಮಾಡು ಎನ್ನುತ್ತಾನೆ. ಅದರಲ್ಲಿ ಸುಖ ಕಾಣುವ ಆತ ಮಾನವ ಜನ್ಮದ ಸಾರ್ಥಕತೆಯನ್ನು ಪಡೆಯುತ್ತಾನೆ.
ನಮ್ಮೊಳಗಿನ ಮಿತಿಯ ಗೆರೆ ದಾಟದಿರಲಿ
ಇಲ್ಲಿ ಮುಖ್ಯವಾಗಿ ಅರಿಯ ಬೇಕಾದ ವಿಚಾರ ಏನೆಂದರೆ ನಮಗೆ ನಮ್ಮ ಬದುಕಿನಾದ್ಯಂತ ಹಲವು ವಿಚಾರಗಳು ಇಷ್ಟವಾಗುತ್ತವೆ. ಅದು ತಿನ್ನುವ ಆಹಾರದಿಂದ ಆರಂಭವಾಗಿ ಕೊಂಡು ಕೊಳ್ಳುವ ವಸ್ತುಗಳ ತನಕ.. ಇನ್ನು ನಮ್ಮ ನಡುವಿನ ಸಂಬಂಧದಲ್ಲಿಯೂ ಅಷ್ಟೇ ಅತಿಯಾಗಿರದೆ ಅಂತರ ಕಾಪಾಡಿಕೊಂಡರೆ ಅದರಿಂದ ಸಂಬಂಧವನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ.
ನಾವು ಏನು ಮಾಡುತ್ತಿದ್ದೇವೆ? ಏನು ಮಾತಾಡುತ್ತಿದ್ದೇವೆ? ಎಂಬುದರ ಮೇಲೆಯೂ ನಿಗಾವಹಿಸಬೇಕಾಗುತ್ತದೆ. ನಾವು ಎಲ್ಲಿ ಮಿತಿ ಮೀರುತ್ತಿದ್ದೇವೆ? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅಷ್ಟೇ ಅಲ್ಲದೆ ಮಿತಿಮೀರಿ ಹೋಗದಂತೆ ಎಚ್ಚರಿಕೆ ವಹಿಸಬೇಕು. ನಮ್ಮೊಳಗೆ ಮಿತಿಯ ಗೆರೆಯನ್ನು ಎಳೆದುಕೊಂಡು ಅದನ್ನು ದಾಟದಂತೆ ಎಚ್ಚರಿಕೆ ವಹಿಸಿದರೆ ಬದುಕು ಸುಂದರವಾಗುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications