ಋಷಿಮುನಿಗಳು ಪ್ರಕೃತಿಗೆ ಧಾರ್ಮಿಕ ಸ್ವರೂಪ ನೀಡಿದ್ದೇಕೆ ಗೊತ್ತಾ?
ಮನುಷ್ಯನ ಅಳಿವು ಉಳಿವು ಪ್ರಕೃತಿ ಮೇಲೆ ನಿಂತಿದ್ದು, ಅದರಲ್ಲಿ ನಾವು ಅರಿಯದ ಹಲವು ಅಗೋಚರ ಶಕ್ತಿಯಿದ್ದು ಅದಕ್ಕೆ ನಮ್ಮನ್ನು ಉಳಿಸುವ ಮತ್ತು ಅಳಿಸುವ ಶಕ್ತಿಯಿದೆ. ಪ್ರಕೃತಿಯ ಶಕ್ತಿಯನ್ನು ಅರಿತಿದ್ದ ಋಷಿ ಮುನಿಗಳು ಅಲ್ಲಿಯೇ ದೇವರನ್ನು ಕಂಡಿದ್ದರಲ್ಲದೆ, ಪ್ರಕೃತಿ ರಕ್ಷಣೆ ಬಗ್ಗೆ ಸಾವಿರಾರು ವರ್ಷಗಳ ಹಿಂದೆಯೇ ಎಚ್ಚರಿಕೆಯ ಗಂಟೆ ಮೊಳಗಿಸಿದ್ದರು. ಪ್ರಕೃತಿಯ ರಕ್ಷಣೆ ಹಾಗೂ ಪೋಷಣೆಗೆ ಅವರೊಂದು ಧಾರ್ಮಿಕ ಸ್ವರೂಪದ ರೂಪ ಕೊಟ್ಟಿದ್ದರು.
ಈ ಧಾರ್ಮಿಕ ಆಚರಣೆಯ ಮೂಲಕ 'ಪಂಚಭೂತ'ಗಳ ಬಗ್ಗೆ ಜ್ಞಾನವನ್ನು ವಿತರಿಸುವ ವಿಧಾನ ಅವರದ್ದಾಗಿತ್ತು. ಪ್ರಕೃತಿಯನ್ನು ಮಾನವ ಪೂಜಿಸತೊಡಗಿದಾಗಲೇ ಅವನಲ್ಲಿ ಅದನ್ನು ರಕ್ಷಿಸುವ ಕರ್ತವ್ಯವೂ ರೂಪುಗೊಂಡಿತು. ಮಾನವ ಸಹಜವಾಗಿ ಪ್ರಕೃತಿಯನ್ನು ಪ್ರೀತಿಸತೊಡಗಿದನು. ಪ್ರಕೃತಿಯನ್ನು ಪ್ರೀತಿಸಿದ ಮಾನವ ಕ್ರಮೇಣ ಅದರಲ್ಲಿ ತನ್ನನ್ನೇ ಗುರುತಿಸಿಕೊಂಡಿದ್ದರಿಂದಲೇ ಅವನಲ್ಲಿ ಪ್ರಕೃತಿಯನ್ನು ಪ್ರೀತಿಸಿ ರಕ್ಷಿಸುವ ಹೊಣೆಗಾರಿಕೆ ಮೂಡಿಬಂತು.

ಆಧುನಿಕ ಯುಗದ ಮನೋಭಾವ ಬದಲಾಗಿದೆ. ನಮ್ಮ ಪೂರ್ವಜರು ರಕ್ಷಿಸಿದ ಪ್ರಕೃತಿಯ ದುರ್ಲಾಭ ಪಡೆಯುವ ಹುನ್ನಾರ ನಮ್ಮದಾಗಿದೆ. ಪ್ರಕೃತಿಯ ರಕ್ಷಣೆ, ಪೋಷಣೆಯ ಬಗ್ಗೆ ನಾವೀಗ ಪಠ್ಯ ಪುಸ್ತಕಗಳಲ್ಲಿ ಓದಬೇಕಷ್ಟೆ. ಅದೂ ಅಂಕಗಳನ್ನು ಗಳಿಸುವುದಕ್ಕೆ ಮಾತ್ರ. ಪ್ರಕೃತಿಯ ರಕ್ಷಣೆ ಬಗ್ಗೆ ನಾವು ಕಾರ್ಯಮಗ್ನರಾಗುವುದಿರಲಿ, ಅದರ ಬಗ್ಗೆ ಚಿಂತಿಸುವ ಸಮಯವೂ ನಮಗಿಲ್ಲದ ಯಾಂತ್ರಿಕ ಬದುಕು ನಮ್ಮದಾಗಿದೆ.
ವಾಯುಮಾಲಿನ್ಯ ಜೀವಿಗಳ ಅಸ್ತಿತ್ವಕ್ಕೆ ಮಾರಕ
ವಾಯು ಪ್ರಾಣಾಧಾರ. ಜೀವಿಗಳ ಅಸ್ತಿತ್ವಕ್ಕೆ ಕಾರಣೀಭೂತವಾದ ವಾಯು ಇಂದು ಮೋಟಾರ್ ವಾಹನಗಳು ಉಗುಳುವ ಹೊಗೆ, ಕೈಗಾರಿಕೆಗಳಿಂದ ಹೊಮ್ಮುವ ಧೂಳು, ಧೂಮಪಾನದ ಹೊಗೆಯಿಂದ ಮಲೀನಗೊಂಡಿದೆ. ವಾಯು ಮಾಲಿನ್ಯದಿಂದ ಉತ್ಪತ್ತಿಯಾಗುವ 'ಕ್ಲೋರೋಪ್ಲೋರೋ ಕಾರ್ಬನ್' ಓಜ್ಹೋನ್ ಘಟಕವನ್ನೇ ನಾಶ ಮಾಡುತ್ತಿದೆ. ಹಾನಿಕಾರಕ ಕಿರಣ ಅಣುಗಳಿಂದ ನಮ್ಮನ್ನು ರಕ್ಷಿಸುತ್ತಿರುವ ಓಜ್ಹೋನ್ ನಾಶವಾಗುವ ಸ್ಥಿತಿ ತಲುಪಿದೆ.
ಸಾವಿರಾರು ಜನರ ಸಾವಿಗೆ ಕಾರಣವಾದ ಭೂಪಾಲ್ ಅನಿಲ ಸೋರಿಕೆ ದುರಂತ ಸಂಭವಿಸಿದ ಸಮಯದಲ್ಲಿ ಹೋಮ ನಡೆಯುತ್ತಿದ್ದ ಮನೆಯೊಂದರ ಸದಸ್ಯರು ಅನಿಲ ದುರಂತದಿಂದ ಆಶ್ಚರ್ಯಕರ ರೀತಿಯಲ್ಲಿ ಪಾರಾದ ಸಂಗತಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಬೇಕಾದ ಅವಶ್ಯಕತೆಯಿದೆ. ಹಿಂದೂ ಧರ್ಮಗಳ ಆಚರಣೆಗಳು ಪರಿಸರವನ್ನು ರಕ್ಷಿಸುವ ಹಾಗೂ ಪ್ರಕೃತಿಯ ವಿಕೋಪಗಳಿಂದ ನಮ್ಮನ್ನು ರಕ್ಷಿಸುವ ಅನೇಕ ಸೂತ್ರಗಳನ್ನು ಹೊಂದಿವೆ.

ಕಲುಷಿತವಾಗುತ್ತಿರುವ ಕುಡಿಯುವ ನೀರು
ಅಮೂಲ್ಯ ಪ್ರಾಕೃತಿಕ ಸಂಪತ್ತಾದ ನೀರನ್ನು ಕೂಡ ಮಾನವ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾನೆ. ಚಿಪ್ಕೋ ಚಳವಳಿಯ ನೇತಾರ ಸುಂದರಲಾಲ್ ಬಹುಗುಣರವರು ಪ್ರಕೃತಿಯ ನಾಶದಿಂದ ಕರ್ನಾಟಕದ ಎರಡು ಜೀವನದಿಗಳಾದ ಶರಾವತಿ ಮತ್ತು ಕಾಳಿ ನದಿಗಳು ಮುಂದೊಂದು ದಿನ ಬತ್ತಿಹೋಗಲಿವೆ ಎಂಬ ಆತಂಕಕಾರಿ ವಿಷಯವನ್ನು ದಶಕಗಳ ಹಿಂದೆಯೇ ಹೇಳಿದ್ದಾರೆ.
ನಮ್ಮ ಪೂರ್ವಜರು ಪ್ರಕೃತಿ ಸಂರಕ್ಷಣೆಯೇ ಅಭಿವೃದ್ಧಿ ಎಂದು ನಂಬಿದ್ದರು. ಆ ಕಾರಣಕ್ಕಾಗಿಯೇ ಗ್ರಾಮದೇವತೆಯ ಹೆಸರಿನಲ್ಲಿ ದೇವರಕಾಡುಗಳ ಕಲ್ಪನೆ ಸಾಕಾರಗೊಂಡು ಇಂದಿಗೂ ಜೀವಂತವಾಗಿದೆ. ಜೀವವಾಹಿನಿಯಾದ ನೀರು ಮಾನವನ ಅಗತ್ಯಗಳಿಗೆ ಅಲ್ಲದೆ, ವಿದ್ಯುಚ್ಛಕ್ತಿಯ ಉತ್ಪಾದನೆ, ಸಾರಿಗೆ, ಕೃಷಿ ಮತ್ತಿತರ ಉದ್ದೇಶಗಳಿಗೆ ಬಳಸಲ್ಪಡುತ್ತದೆ. ಪ್ರಾಣಿ ಮನುಷ್ಯರ ಶವಗಳನ್ನು ನೀರಿಗೆ ಬಿಡುವುದು, ರಾಸಾಯನಿಕ ತ್ಯಾಜ್ಯಗಳನ್ನು ನೀರಿಗೆ ಹರಿಸುವುದು ಮುಂತಾದ ಕೃತ್ಯಗಳಿಂದ ಕುಡಿಯುವ ನೀರು ಕೂಡ ಕಲುಷಿತಗೊಳ್ಳುತ್ತಿದ್ದು ರೋಗ ಹರಡಲು ಕಾರಣವಾಗಿದೆ.
ಪ್ರಕೃತಿ ದುರುಪಯೋಗಕ್ಕಿಲ್ಲ ಕಡಿವಾಣ
ನಿಂತ ನೆಲವನ್ನೂ ಬಿಡದಂತೆ ಮಾನವ ಪ್ರಕೃತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾನೆ. ನೆಲವನ್ನು ಎಲ್ಲೆಂದರಲ್ಲಿ ಕೊರದು ಕೊಳವೆ ಬಾವಿ ತೆಗೆಯುವುದು ನಮ್ಮಲ್ಲಿ ಪ್ರತಿಷ್ಠೆಯ ವಿಷಯವಾಗಿದೆ. ಆದರೆ ಇದರಿಂದ ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಾರದಾಗಿದೆ. ರಸ್ತೆಗಳಿಗೆ ಡಾಂಬರು, ಇಕ್ಕೆಲಗಳಿಗೆ ಕಾಂಕ್ರಿಟ್ ನೆಲಹಾಸು ಹಾಕುತ್ತಿರುವುದರಿಂದ ನೀರು ಭೂಮಿಯಲ್ಲಿ ಇಂಗದೆ ಹರಿದು ಸಮುದ್ರ ಸೇರುತ್ತಿದೆ.
ನಗರಗಳಲ್ಲಂತೂ ಹಸಿರು ಮಾಯವಾಗಿ 'ಕಾಂಕ್ರಿಟ್‌ಕಾಡು' ಹೆಚ್ಚಾಗುತ್ತಿದೆ. ಇದರಿಂದ ಜಲವರ್ಧನೆಗೆ ಅವಕಾಶವೇ ಇಲ್ಲದಂತಾಗಿದೆ. ಇನ್ನು ಅರಣ್ಯ ನಾಶ ಭೀಕರ ಪ್ರಕೃತಿಯ ವಿಕೋಪಗಳಿಗೆ ಕಾರಣವಾಗುತ್ತಿದೆ. ಸಾಲು ಮರದ ತಿಮ್ಮಕ್ಕನ ಸಸ್ಯ ಸಂರಕ್ಷಣೆಯ ಧೋರಣೆ ಆದರ್ಶಪ್ರಾಯವಾಗಬೇಕಾಗಿದೆ. ಪುರಾತನ ರಾಜತ್ವದಲ್ಲಿ ಅರಣ್ಯಗಳನ್ನು ಕಟ್ಟು ನಿಟ್ಟಾಗಿ ಕಾಪಾಡುವ ವ್ಯವಸ್ಥೆಯಿತ್ತೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಆದರೆ ಇವತ್ತು ಸದ್ದಿಲ್ಲದೆ ಅರಣ್ಯ ನಾಶವಾಗುತ್ತಿದೆ ಇದಕ್ಕೆ ಜನಸಂಖ್ಯಾ ಸ್ಫೋಟ ಕಾರಣವಾಗಿದೆ.
ಪ್ರಕೃತಿ ಬಗೆಗಿನ ಉದಾಸೀನತೆ ಬಿಡಿ
ಪ್ರಕೃತಿ ಬಗೆಗಿನ ಉದಾಸೀನತೆ, ಮುಂದಾಲೋಚನೆ ಮಾಡದಿರುವುದು, ಇಂದಿನ ದಿನಗಳನ್ನು ಮನಸ್ಸೋ ಇಚ್ಛೆಯಿಂದ ಕಳೆಯುತ್ತಿರುವುದು, ಕೈಗಾರಿಕೆಗಳ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಮಾಡುತ್ತಿರುವುದರಿಂದ ಪರಿಸರದಲ್ಲಿ ಬದಲಾವಣೆ ಕಂಡು ಬರುತ್ತಿದೆ. ಇದರ ದುಷ್ಪರಿಣಾಮ ಎಂಬಂತೆ ಮಳೆ ಬೀಳುವ ಪ್ರಮಾಣ ಕಡಿಮೆಯಾಗುತ್ತಿದೆ. ಒಮ್ಮೊಮ್ಮೆ ಸಮತೋಲನವಿಲ್ಲದೆ ಒಮ್ಮೆಲೆ ಸುರಿದು ನಾಶ ಮಾಡುತ್ತಿದೆ.
ಪ್ರಕೃತಿಯ ಸೌಮ್ಯ ಸೌಂದರ್ಯ ಹೃದಯಕ್ಕೆ ಸ್ಪೂರ್ತಿಯ ಸೆಲೆಯಂತೆ ಆದರೆ ಈಗೀಗ ಅದು ಭೀಬತ್ಸ ಭೀಕರ ಅವತಾರಗಳಿಂದ ನಮ್ಮನ್ನು ದಿಗ್ಭ್ರಾಂತಗೊಳಿಸುತ್ತಿರುವುದು ಭೂಕುಸಿತ, ಮಹಾಮಳೆ, ಪ್ರವಾಹ, ಭೂಕಂಪನ, ತಾಪಮಾನ ಹೆಚ್ಚಳ, ಹೀಗೆ ಹತ್ತಾರು ಪ್ರಕೃತಿ ವಿಕೋಪಗಳು ಮೇಲಿಂದ ಮೇಲೆ ಬಾಧಿಸುತ್ತಲೇ ಇದೆ. ಇದಕ್ಕೆ ಕಾರಣ ಪ್ರಕೃತಿ ಮೇಲೆ ನಡೆಯುತ್ತಿರುವ ಅನಾಚಾರಗಳು ಎನ್ನುವುದನ್ನು ಒಪ್ಪಿಕೊಳ್ಳಬೇಕಿದೆ. ಹೀಗಾಗಿಯೇ ನಾವು ಮಾಡಿರುವ ತಪ್ಪಿಗೆ ಸಂಕಷ್ಟ ಎದುರಿಸಬೇಕಾಗಿದೆ ಅದು ಅನಿವಾರ್ಯವಾಗಿದೆ.












Click it and Unblock the Notifications