ಆಸ್ತಿ..ಅಧಿಕಾರವಲ್ಲ..ನಿಮ್ಮ ಬದುಕಿನಲ್ಲಿ ನಿಜವಾದ ಯಶಸ್ಸು ಯಾವುದು ಗೊತ್ತಾ..? ನಮ್ಮ ಬದುಕಿಗೊಂದು ಒಳ್ಳೆಯ ಗುರಿ ಅಗತ್ಯವಾಗಿದ್ದು,
ನಮ್ಮ ಬದುಕಿಗೊಂದು ಒಳ್ಳೆಯ ಗುರಿ ಅಗತ್ಯವಾಗಿದ್ದು, ಗುರಿಯಿಲ್ಲದೆ ಹೋದರೆ ಅದು ಬದುಕಾಗಿ ಉಳಿಯಲು ಸಾಧ್ಯವಿಲ್ಲ. ಆದುದರಿಂದ ಬದುಕಿಗೊಂದು ತಮ್ಮದೇ ಆದ ಗುರಿಯಿಟ್ಟುಕೊಂಡು ಮುನ್ನಡೆಯುವುದು ಒಳ್ಳೆಯದು. ಆದರೆ ಆ ಗುರಿಯನ್ನು ನಾವು ನ್ಯಾಯಯುತವಾಗಿ ತಲುಪಬೇಕು. ಆಗ ಮಾತ್ರ ಗುರಿ ತಲುಪಿದ ಮೇಲೆಯೂ ನಾವು ಸಂತೋಷ, ನೆಮ್ಮದಿಯಿಂದ ಇರಲು ಸಾಧ್ಯವಾಗಲಿದೆ. ಜತೆಗೆ ಯಶಸ್ಸಿನ ಮೆಟ್ಟಿಲಿಗೂ ಹತ್ತಿರವಾಗುತ್ತೇವೆ.
ಸಮಾಜದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬದುಕುತ್ತಿರುತ್ತಾರೆ. ಎಲ್ಲರಿಗೂ ಅಂದು ಕೊಂಡಂತೆ ಬದುಕಲು ಸಾಧ್ಯವಾಗದೆ ಹೋಗಬಹುದು ಆದರೆ ನ್ಯಾಯಯುತ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನ ಪಡಬೇಕು. ಅಷ್ಟೇ ಅಲ್ಲದೆ ಒಂದೊಳ್ಳೆಯ ಗುರಿಯಿಟ್ಟುಕೊಂಡು ಅದರ ಈಡೇರಿಕೆಗಾಗಿ ಪ್ರತಿನಿತ್ಯ ಶ್ರಮಪಡಬೇಕಾಗುತ್ತದೆ. ಇಲ್ಲಿ ಮುಖ್ಯವಾಗಿ ನೆನಪಿಟ್ಟುಕೊಳ್ಳಬೇಕಾದ ಸಂಗತಿ ಎಂದರೆ ಬೇರೆಯರ ಬದುಕನ್ನು ಕಂಡು ಹಲಬುವುದಕ್ಕಿಂತ ನಮ್ಮದೇ ಆದ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಸಮಾಜದಲ್ಲಿ ನಾವು ನಾವಾಗಿಯೇ ಗುರುತಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ.

ಈ ಭೂಮಿ ಮೇಲೆ ಹುಟ್ಟಿದ ಮನುಷ್ಯ ಒಂದಲ್ಲ ಒಂದು ದಿನ ಸಾಯಲೇ ಬೇಕು. ಆದರೆ ಆ ಹುಟ್ಟು ಮತ್ತು ಸಾವಿನ ನಡುವೆ ಹೇಗೆ ಬದುಕಿದ್ದ ಎಂಬುದು ಮುಖ್ಯವಾಗುತ್ತದೆ. ಹಾಗಾಗಿಯೇ ನಾವೆಲ್ಲರೂ ಒಂದೊಳ್ಳೆಯ ಬದುಕನ್ನು ಕಟ್ಟಿಕೊಳ್ಳುವ ಅಗತ್ಯವಿದೆ. ಮತ್ತು ಅದಕ್ಕಾಗಿ ನಿತ್ಯವೂ ಪ್ರಯತ್ನಪಡಬೇಕಿದೆ. ಇದರ ಜತೆಗೆ ಹಿರಿಯರ, ಜ್ಞಾನಿಗಳ, ಸಾಧಕರ ತತ್ವ, ಆದರ್ಶಗಳನ್ನು ಪಾಲಿಸುತ್ತಾ ಅವರ ಮಾರ್ಗದಲ್ಲಿ ಬದುಕಿನ ಹಾದಿಯನ್ನು ಸವೆಸುವ ಪ್ರಯತ್ನ ಮಾಡಬೇಕಿದೆ. ಆ ಮೂಲಕ ಸಮಾಜಕ್ಕೆ ನಾವು ಕೊಡುಗೆಯಾಗ ಬಹುದಾಗಿದೆ.
ಆಸ್ತಿ, ಅಧಿಕಾರದಿಂದ ಅಳೆಯಬೇಡಿ
ಬದಲಾದ ಕಾಲದಲ್ಲಿ ನಾವು ಒಬ್ಬ ವ್ಯಕ್ತಿಯನ್ನು ಆತನ ಸಾಧನೆ ಮತ್ತು ಒಳ್ಳೆಯತನದ ವೃದ್ಧಿಯನ್ನು ಪರಿಗಣಿಸದೆ ಆತ ಸಂಪಾದಿಸಿದ ಆಸ್ತಿ ಮತ್ತು ಅಧಿಕಾರದಿಂದ ಅಳೆಯುತ್ತೇವೆ. ಹೀಗಾಗಿ ಆದರ್ಶ, ಪ್ರಾಮಾಣಿಕತೆ ಬದಿಗೊತ್ತಿ ಹಣ ಸಂಪಾದನೆಯಷ್ಟೆ ಗುರಿ ಎಂಬಂತೆ ಬದುಕುವುದು ಸಾಮಾನ್ಯವಾಗಿದೆ. ಪ್ರತಿಯೊಬ್ಬರದು ಈಗ ಒತ್ತಡದ ಬದುಕು. ಎಲ್ಲವೂ ಲೆಕ್ಕಚಾರದಲ್ಲಿಯೇ ನಡೆಯುತ್ತಿದೆ. ಜತೆಗೆ ಪೈಪೋಟಿಯೂ ಇರುವುದರಿಂದ ನಿತ್ಯದ ಬದುಕಿನಲ್ಲಿ ಹಲವು ರೀತಿಯ ಸ್ಪರ್ಧೆಗಳನ್ನು ಎದುರಿಸಲೇ ಬೇಕಾಗಿದೆ.
ನಮ್ಮ ನಾಳಿನ ಬದುಕಿನ ಕುರಿತಂತೆ ಹಲವು ನಿರೀಕ್ಷೆಗಳು ಇದ್ದರೂ ಅವು ಅಂದುಕೊಂಡಂತೆ ಆಗುತ್ತವೆ ಎನ್ನಲಾಗುವುದಿಲ್ಲ. ಆದರೆ ನಾವು ಮಾಡುವ ಕೆಲಸಗಳು, ತೆಗೆದುಕೊಳ್ಳುವ ನಿರ್ಣಯಗಳ ಮೇಲೆಯೇ ಜೀವನದ ಯಶಸ್ಸು ನಿರ್ಣಯಿಸಲ್ಪಡುತ್ತದೆ ಎಂಬುವುದನ್ನು ತಳ್ಳಿಹಾಕುವಂತಿಲ್ಲ. ಇವತ್ತು ಮತ್ತೊಬ್ಬರ ಏಳಿಗೆ ನೋಡಿ ಹಲಬುವವರ ಸಂಖ್ಯೆ ಹೆಚ್ಚಿದೆ. ಅಷ್ಟೇ ಅಲ್ಲ ನಮ್ಮ ಸೋಲಿಗೆ ಕಾರಣ ಹುಡುಕಿ ಸರಿಪಡಿಸಿಕೊಳ್ಳುವ ಬದಲಿಗೆ ಯಶಸ್ಸು ಕಂಡವರ ಕುರಿತಂತೆ ಅವರ ಅದೃಷ್ಟ ಚೆನ್ನಾಗಿತ್ತು. ಹಾಗಾಗಿ ಆತ ಏಳ್ಗೆಯಾದ ಎನ್ನುವವರೇ ಜಾಸ್ತಿ.

ಸೋಲಿನಿಂದಲೂ ತಕ್ಕ ಪಾಠ ಕಲಿಯಬಹುದು
ಬದಲಾಗಿ ಆತ ಆ ರೀತಿಯಾಗಲು ಎಷ್ಟು ಕಷ್ಟಪಟ್ಟಿದ್ದಾನೆ. ಅದೆಷ್ಟು ದಿನ ನಿದ್ದೆಗೆಟ್ಟು ದುಡಿದಿದ್ದಾನೆ ಎಂಬುವುದರ ಬಗ್ಗೆ ಯೋಚಿಸುವುದೇ ಇಲ್ಲ. ಜತೆಗೆ ಅವನಂತೆ ನಾವು ಕಷ್ಟಪಡಲು ತಯಾರಿರುವುದಿಲ್ಲ. ಹೀಗಾಗಿ ನಾವು ದಿನದಿಂದ ದಿನಕ್ಕೆ ಕಡೆಗಣನೆಗೆ ಒಳಗಾಗಿ ಬಿಡುತ್ತೇವೆ. ನಮ್ಮಲ್ಲಿ ಹೆಚ್ಚಿನವರು ಯಶಸ್ಸು ಕಂಡವರ ಬಗ್ಗೆ ಹೆಚ್ಚು ತಿಳಿಯಲು ಮುಂದಾಗುತ್ತೇವೆ. ಆದರೆ ಸೋಲು ಕಂಡವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಿಜ ಹೇಳಬೇಕೆಂದರೆ ಸೋತವರ ಬಗ್ಗೆಯೂ ಗಮನಿಸಬೇಕು. ಆಗ ಸೋಲಿಗೆ ಕಾರಣಗಳು ಸಿಗುತ್ತವೆ. ಬೇರೆಯವರ ಸೋಲು ಕೆಲವೊಮ್ಮೆ ನಮ್ಮ ಜೀವನಕ್ಕೆ ಪಾಠವಾದರೂ ಆಗಬಹುದು.
ಜೀವನದಲ್ಲಿ ಸೋಲು, ಕಷ್ಟ ಎಲ್ಲವೂ ಇದ್ದದ್ದೇ.
ಒಮ್ಮೆ ಸೋಲು ಎದುರಾಯಿತೆಂದರೆ ಜೀವನವೇ ಮುಗಿಯಿತು ಎಂದುಕೊಳ್ಳುವುದು ದಡ್ಡತನ. ಮಳೆಬಿಟ್ಟ ನಂತರ ಬಿಸಿಲು ಬಂದೇ ಬರುತ್ತದೆ. ಹಾಗೆಯೇ ಕಷ್ಟಗಳು ಕೂಡ. ಒಮ್ಮೆ ಸೋತ ಮಾತ್ರಕ್ಕೆ ನಾವು ಕಳೆದುಕೊಳ್ಳುವಂತಹದ್ದೇನಿಲ್ಲ. ಸೋಲಿನಿಂದ ತಕ್ಕ ಪಾಠ ಕಲಿತುಕೊಂಡು ಮೇಲೇರಲು ಪ್ರಯತ್ನ ಮಾಡಬೇಕು. ಸೋಲಿಗೆ ಭಯಪಡದೆ ಅವು ಸಹಜವಾಗಿ ಎದುರಾಗುವ ಅಡೆತಡೆಗಳಲ್ಲೊಂದು ಎಂದು ಭಾವಿಸಿ ಅವುಗಳನ್ನು ಧೈರ್ಯವಾಗಿ ಎದುರಿಸುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು. ತಮ್ಮ ಮುಂದಿರುವ ಗುರಿಯನ್ನು ಮರೆಯಬಾರದು. ಗುರಿಯನ್ನು ತಲುಪುವುದೇ ನಿಜವಾದ ಯಶಸ್ಸು ಎಂಬುದು ಸದಾ ನೆನಪಿನಲ್ಲಿರಬೇಕು.












Click it and Unblock the Notifications