ಮನಸ್ಸನ್ನು ಏಕಾಗ್ರತೆಗೆ ತರಲು ಮಂತ್ರ ಜಪಿಸಿ: ಇದರ ಲಾಭವೇನು?
ಪುರಾಣ ಕಾಲದಿಂದಲೂ ನೋಡುತ್ತಾ ಬಂದರೆ ಮಂತ್ರಫಲಗಳು ಎಷ್ಟು ಶಕ್ತಿಶಾಲಿ ಎಂಬುದು ಗೊತ್ತಾಗುತ್ತದೆ. ಋಷಿವರ್ಯರು ತಮ್ಮ ಮಂತ್ರ ಶಕ್ತಿಯಿಂದಲೇ ಏನೆಲ್ಲ ಸಾಧಿಸುತ್ತಿದ್ದರು ಎಂಬುದು ಕೂಡ ತಿಳಿಯುತ್ತದೆ. ಈ ಮಂತ್ರಗಳಿಂದಲೇ ದೇವರನ್ನು ಒಲಿಸಿಕೊಳ್ಳುತ್ತಿದ್ದರು. ಇವತ್ತಿಗೂ ಮಂತ್ರವಿಲ್ಲದೆ ಪೂಜಾಕಾರ್ಯಗಳು, ಶುಭಕಾರ್ಯಗಳು ನಡೆಯುವುದೇ ಇಲ್ಲ. ಮಂತ್ರ ಮತ್ತು ಅದು ಕೊಡುವ ಫಲಗಳ ಬಗ್ಗೆ ಪುರಾಣದಲ್ಲಿ ಹಲವು ರೀತಿಯ ಉಲ್ಲೇಖಗಳನ್ನು ಕಾಣಬಹುದಾಗಿದೆ.
ಹಾಗೆಂದು ಈ ಮಂತ್ರಗಳು ಅಷ್ಟು ಸುಲಭವಾಗಿ ಸಿದ್ಧಿಸುವುದಿಲ್ಲ. ಅವುಗಳನ್ನು ಕಠಿಣ ಪರಿಶ್ರಮದಿಂದ ಕಲಿಯಬೇಕಾಗುತ್ತದೆ. ಏಕಾಗ್ರತೆ ಇಲ್ಲಿ ಬಹುಮುಖ್ಯವಾಗುತ್ತದೆ. ಏಕಾಗ್ರತೆಯಿಂದ ಕಲಿತಾಗ ಮಾತ್ರ ಅದು ಸಿದ್ಧಿಸುತ್ತದೆ. ಮಂತ್ರ ಕಲಿವಾಗಲೂ ಮತ್ತು ಪಠಿಸುವಾಗಲೂ ಏಕಾಗ್ರತೆ ಮುಖ್ಯವಾಗುತ್ತದೆ. ಅದು ಇಲ್ಲದೆ ಹೋದರೆ ಅದರಿಂದ ಯಾವುದೇ ನಿರೀಕ್ಷಿತ ಫಲ ಸಿಗಲಾರದು.

ಇನ್ನು ಹಿಂದಿನ ಕಾಲಕ್ಕೆ ಮಾತ್ರವಲ್ಲದೆ ಇವತ್ತಿಗೂ ನಮ್ಮಲ್ಲಿ ಏಕಾಗ್ರತೆ ಗಟ್ಟಿಗೊಳ್ಳಲು ಮಂತ್ರಜಪ ಸಹಕಾರಿಯಾಗಿದೆ. ಹಿಂದೆ ತಮ್ಮಲ್ಲಿ ಏಕಾಗ್ರತೆ ಮೂಡಿಸಲು ಸಾಧಕರು ಹಲವು ತಂತ್ರಗಳನ್ನು ಕಂಡುಕೊಂಡಿದ್ದರಲ್ಲದೆ ಅದನ್ನು ಅನುಸರಿಸುತ್ತಿದ್ದರು. ಹೀಗಾಗಿಯೇ ಅವರು ದೇವರಲ್ಲಿ ಅನುರುಕ್ತರಾಗುತ್ತಿದ್ದರು ಇದಕ್ಕೆ ಮಂತ್ರ ಜಪವೇ ಕಾರಣವಾಗಿದೆ.
ಮಂತ್ರಜಪದಿಂದ ಮೋಕ್ಷ ಸಾಧ್ಯ
ಇನ್ನು ಹಿಂದೆ ಸಾಧಕರು ಜಪಿಸುತ್ತಿದ್ದ ಓಂಕಾರಯುಕ್ತ ಅಷ್ಟಾಕ್ಷರಮಂತ್ರವು ಮಹತ್ವಪಡೆದಿದ್ದು, ಇದು ಗೋಪನಿಯ ವಸ್ತುಗಳಲ್ಲಿ ಅತ್ಯಂತ ಪವಿತ್ರವಾಗಿದೆ ಎಂದು ಹೇಳಲಾಗಿದೆ. ಇದನ್ನು ಜಪಿಸುವ ವ್ಯಕ್ತಿ ಆಯುಷ್ಯ, ಸಂಪತ್ತು, ಪಶು, ವಿದ್ಯೆ, ಯಶಸ್ಸು, ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಪಡೆದುಕೊಳ್ಳುತ್ತಾನಂತೆ. ಮಂತ್ರಗಳ ಬಗ್ಗೆ ವೇದಗಳಲ್ಲಿ ಧರ್ಮಸಮ್ಮತ ಹಾಗೂ ಸತ್ಯವೂ ಆಗಿದೆ ಎಂದು ಹೇಳಿದೆ.

ಮಂತ್ರ ಸ್ವರೂಪನಾದ ಶ್ರೀಮನ್ನಾರಾಯಣನು ಮನುಷ್ಯರಿಗೆ ಸಿದ್ದಿಯನ್ನು ಅನುಗ್ರಹಿಸುತ್ತಾನೆ. ಋಷಿಗಳು, ಪಿತೃಗಣಗಳು, ದೇವತೆಗಳು, ಸಿದ್ದರು, ಅಸುರರು ಮಂತ್ರವನ್ನು ಜಪಿಸಿ ಸಿದ್ದಿಯನ್ನು ಪಡೆದ ಬಗ್ಗೆ ಪೌರಾಣಿಕ ಕಥೆಗಳಲ್ಲಿ ಕಾಣಬಹುದು. ಯಾರು ಜ್ಯೋತಿಷ್ಯ ಹಾಗೂ ಇತರೆ ಶಾಸ್ತ್ರಗಳಿಂದ ತಮ್ಮ ಅಂತ್ಯಕಾಲವನ್ನು ತಿಳಿದು ಮಂತ್ರವನ್ನು ಜಪಿಸುವರೋ ಅವರುಗಳು ಪರಮಸಿದ್ದಿಯಾದ ಮಹಾವಿಷ್ಣುವಿನ ಪರಮಪದದ ಗತಿಯನ್ನು ಪಡೆಯುವರು ಎಂದು ಆಧ್ಯಾತ್ಮದಲ್ಲಿ ವಿವರಿಸಲಾಗಿದೆ.
ಮಂತ್ರ ಜಪದಿಂದ ಏನೆಲ್ಲ ಸಿದ್ಧಿಸುತ್ತದೆ?
ಇನ್ನು ಮಂತ್ರ ಜಪದ ಮಹತ್ವದ ಬಗ್ಗೆಯೂ ಹೇಳಲಾಗಿದ್ದು, ಒಂದು ಲಕ್ಷ ಜಪಿಸಿದರೆ-ಚಿತ್ತಶುದ್ದಿಯಾಗುತ್ತದೆ, ಎರಡು ಲಕ್ಷ ಜಪಿಸಿದರೆ ಮಂತ್ರ ಸಿದ್ದಿಯಾಗುತ್ತದೆ, ಮೂರು ಲಕ್ಷ ಜಪಿಸಿದರೆ -ಸ್ವರ್ಗಲೋಕ ಪ್ರಾಪ್ತಿ, ನಾಲ್ಕು ಲಕ್ಷ ಜಪಿಸಿದರೆ- ವಿಷ್ಣುವನ ಸಾನಿಧ್ಯ ಪ್ರಾಪ್ತಿ, ಐದು ಲಕ್ಷ ಜಪಿಸಿದರೆ- ನಿರ್ಮಲ ಜ್ಞಾನ ಪ್ರಾಪ್ತಿ, ಆರು ಲಕ್ಷ ಜಪಿಸಿದರೆ-ದೈವಸಾಕ್ಷಾತ್ಕಾರ, ಏಳು ಲಕ್ಷ ಜಪಿಸಿದರೆ-ಭಗವದ್ ಸ್ವರೂಪದ ಜ್ಞಾನವುಂಟಾಗುತ್ತದೆ, ಎಂಟು ಲಕ್ಷ ಜಪಿಸಿದರೆ-ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.
ಮಂತ್ರವನ್ನು ಜಪಿಸುವ ವ್ಯಕ್ತಿಯ ಬಳಿ ದುಃಸ್ವಪ್ನ, ಅಸುರರು, ಪಿಶಾಚಿಗಳು, ಸರ್ಪಗಳು, ಬ್ರಹ್ಮರಾಕ್ಷಕರು, ಕಳ್ಳರು ಮಾನಸಿಕ ವ್ಯಾಧಿಗಳು ತಗಲುವುದಿಲ್ಲ ಎಂದು ಹೇಳಲಾಗಿದೆ. ಅದು ಏನೇ ಇರಲಿ ನಾವು ಮಾಡುವ ಕೆಲಸ, ಓದು ಹೀಗೆ ಯಾವುದೇ ಕಾರ್ಯವಾಗಿರಲಿ ಅದನ್ನು ಮಾಡುವಾಗ ಅದರತ್ತ ಚಿತ್ತಹರಿಸಬೇಕು ಅದಿಲ್ಲದೆ ಹೋದರೆ ನಾವು ಯಾಂತ್ರಿಕವಾಗಿ ಕೆಲಸ ಮಾಡುತ್ತೇವೆ. ಆಗ ನಮ್ಮ ಚಿತ್ತ ಇನ್ನೆಲ್ಲೋ ಹರಿಯುತ್ತಿರುತ್ತದೆ. ಇದರಿಂದ ಒಮ್ಮೊಮ್ಮೆ ನಾವೇನು ಮಾಡುತ್ತಿದ್ದೇವೆ ಎಂಬುದು ತಿಳಿಯದೆ ಹಲವು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತೇವೆ.
ಮನಸ್ಸಿನ ನೆಮ್ಮದಿಗೆ ಜಪ ಸಹಕಾರಿ
ಇಂದಿನ ಕಲಿಯುಗದಲ್ಲಿ ಮಂತ್ರಫಲದಿಂದ ಸಾಧನೆ ಮಾಡಲಾಗದಿದ್ದರೂ. ಅದರಿಂದ ನಾವು ನಮ್ಮ ಮನೋ ನೆಮ್ಮದಿಗೆ, ಏಕಾಗ್ರತೆಗೆ, ಶಾಂತಿಗೆ ಬಳಸಿಕೊಳ್ಳಬಹುದಾಗಿದೆ. ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಮಾನಸಿಕ ನೆಮ್ಮದಿ ಕಳೆದುಕೊಂಡು ಹೊರಳಾಡುತ್ತಿರುವಾಗ ಏಕಾಗ್ರತೆಯ ಮಂತ್ರಜಪ ನಮಗೆ ಒಂದಷ್ಟು ನೆಮ್ಮದಿ ನೀಡಿ, ಮನಸ್ಸಿನ ವಿಕಾರತೆಯನ್ನು ದೂರ ಮಾಡುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications