ವಿಷಯಾಸಕ್ತಿಯ ಬಿರುಗಾಳಿಗೆ ಸಿಲುಕದಂತೆ ಎಚ್ಚರವಾಗಿರಿ..!
ಬಹಳಷ್ಟು ಸಾರಿ ಯಾವುದೋ ವಸ್ತು ಅಥವಾ ಇನ್ಯಾವುದೋ ವಿಷಯ ನಮ್ಮನ್ನು ಹಿಡಿದು ನಿಲ್ಲಿಸಿ ಬಿಟ್ಟಿರುತ್ತದೆ. ಇಂತಹ ಅನುಭವ ಎಲ್ಲರಿಗೂ ಆಗಿಂದಾಗ್ಗೆ ಆಗಿರುತ್ತದೆ. ಆಧ್ಯಾತ್ಮದಲ್ಲಿ ಇಂತಹ ಸೆಳೆತವನ್ನು ಪ್ರಲೋಭನೆ ಎನ್ನಲಾಗುತ್ತಿದ್ದು, ಈ ರೀತಿಯ ಸೆಳೆತಕ್ಕೆ ಒಳಗಾಗದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ಇಲ್ಲದೇ ಹೋದರೆ ನಮ್ಮ ಮನಸ್ಸು ಬಲವಂತವಾಗಿ ಸೆಳೆಯುವಂತಹ ಗುಣಗಳುಳ್ಳ ವಸ್ತುಗಳತ್ತ ಅಥವಾ ಅಂತಹದ್ದೇ ವಿಷಯಗಳಲ್ಲಿ ಅನುರಕ್ತಗೊಂಡು ಕ್ರಮೇಣ ಅವುಗಳ ದಾಸರಾಗಿ ಬಿಡುವ ಅಪಾಯವೂ ಇಲ್ಲದಿಲ್ಲ.
ಹಾಗಾದರೆ ನಮ್ಮ ಮನಸ್ಸು ಹೇಗಿರಬೇಕು? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ನಿಜವಾಗಿ ಹೇಳಬೇಕೆಂದರೆ ನಾವು ನಮಗೆ ಯಾವುದು ಇಷ್ಟವಾಗಿದೆಯೋ ಅಂತಹ ವಸ್ತುಗಳ ಅಥವಾ ವಿಷಯಗಳ ಕಡೆಗೆ ನಮ್ಮ ಮನಸ್ಸನ್ನು ಕೊಂಡೊಯ್ಯುವಂತಿರಬೇಕು. ಅದು ಬಿಟ್ಟು ವಸ್ತುಗಳೇ ಬಲವಂತವಾಗಿ ನಮ್ಮ ಮನಸ್ಸನ್ನು ಅವುಗಳತ್ತ ಸೆಳೆಯುವಂತಿರಬಾರದು. ನಾವೇ ನಮಗಿಷ್ಟ ಬಂದ ವಸ್ತುಗಳ ಕಡೆಗೆ ಮನಸ್ಸನ್ನು ರೂಢಿಸಿಕೊಳ್ಳುವದು ಅಗತ್ಯವಾಗಿದೆ.

ಒಳ್ಳೆಯವನಾಗಿರು, ಒಳ್ಳೆಯವನಾಗು, ಒಳ್ಳೇಯವನಾಗಿ ಬದುಕು ಎಂಬಂತಹ ಮಾತುಗಳನ್ನು ನಾವು ಜಗತ್ತಿನಾದ್ಯಂತ ಕೇಳುತ್ತೇವೆ. ಕಳ್ಳತನ ಮಾಡಬೇಡ, ಸುಳ್ಳು ಹೇಳಬೇಡ, ಮುಂತಾದ ಬುದ್ಧಿವಾದದ, ಮಾತುಗಳನ್ನು ಎಲ್ಲಾ ದೇಶದ ಮಕ್ಕಳೂ ಕೇಳಿಯೇ ಇರುತ್ತಾರೆ. ಆದರೆ ಅವುಗಳನ್ನು ಅನುಸರಿಸುವದು ಹೇಗೆ ಎಂಬುವುದನ್ನು ಮಕ್ಕಳಿಗೆ ಯಾರೂ ಹೇಳುವುದಿಲ್ಲ.
ಕೇವಲ ಮಾತುಗಳಿಂದ ಪ್ರಯೋಜನವಿಲ್ಲ
ಕೇವಲ ಮಾತುಗಳಿಂದ ಏನೂ ಪ್ರಯೋಜನವಿಲ್ಲ. ಮಗು ಏಕೆ ಕಳ್ಳತನ ಮಾಡಬಾರದು? ಕಳ್ಳತನ ಮಾಡದೆ ಇರುವುದು ಹೇಗೆ? ಎಂಬದನ್ನು ನಾವು ಮಗುವಿಗೆ ಕಲಿಸಿದ್ದೇವೆಯೇ? ಆದರೆ ಸುಮ್ಮನೆ ಹೇಳುತ್ತೇವೆ. ನೀನು ಕಳ್ಳತನ ಮಾಡಬಾರದು ಎಂದು. ಅದರ ಬದಲು ಕದಿಯದಂತೆ ತನ್ನ ಮನಸ್ಸನ್ನು ತಡೆಯುವದು ಹೇಗೆ? ಎಂಬ ತಿಳುವಳಿಕೆಯನ್ನು ಮಗುವಿನಲ್ಲಿ ಉಂಟುಮಾಡಿದರೆ ಮಾತ್ರ ನಾವು ಮಗುವಿಗೆ ನಿಜವಾಗಿಯೂ ಸಹಾಯ ಮಾಡಿದಂತಾಗುತ್ತದೆ.

ಒಳಗಿನ ಹಾಗೂ ಹೊರಗಿನ ಎಲ್ಲ ಕ್ರಿಯೆಗಳು ಸಂಭವಿಸುವುದು ಮನಸ್ಸು ವಿಷಯೇಂದ್ರಿಯಗಳ ಜೊತೆಗೆ ಕೂಡಿಕೊಂಡಾಗ. ನಾವು ಇಷ್ಟಪಡಲಿ ಅಥವಾ ಇಷ್ಟಪಡದಿರಲಿ, ನಮ್ಮ ಮನಸ್ಸು ಸದಾ ಇಂದ್ರಿಯಗಳ ಇಚ್ಛೆಯತ್ತ ಧಾವಿಸುತ್ತಿರುತ್ತದೆ. ಆದುದರಿಂದಲೇ ಜನರು ಅವಿವೇಕದ ಕೆಲಸಗಳ್ನು ಮಾಡುತ್ತಾ ದುಃಖಕ್ಕೆ ಒಳಗಾಗುತ್ತಾರೆ. ಒಂದು ವೇಳೆ ಅವರವರ ಮನಸ್ಸು ಅವರವರ ಹತೋಟಿಯಲ್ಲಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ.
ಲೋಕ ವಿಷಯಗಳಿಂದ ವಿಮುಖವಾಗಬೇಕು
ಪಾತಂಜಲ ಯೋಗ ಸೂತ್ರದಲ್ಲಿ ಪತಂಜಲಿಯು ಪ್ರತ್ಯಾಹಾರದ ಮೂಲಕ ನಾವೇ ನಮಗಿಷ್ಟ ಬಂದ ವಸ್ತುಗಳ ಕಡೆಗೆ ಕೊಂಡೊಯ್ಯಬಹುದು ಎಂಬುವುದನ್ನು ವಿವರಿಸಲಾಗಿದೆ. ಅನಾತ್ಮ ವಿಷಯಗಳ ಸಂಸರ್ಗ ಒಳಪಡದಂತೆ ಮನಸ್ಸನ್ನು ವಿಮುಖಗೊಳಿಸುವುದರ ಮೂಲಕ ನಮ್ಮ ನಿಯಂತ್ರಣಕ್ಕೆ ತಂದುಕೊಳ್ಳುವ ಕ್ರಮ ಇದಾಗಿದೆ. ಲೋಕ ವಿಷಯಗಳಿಂದ ಮನಸ್ಸನ್ನು ಹಿಂದಕ್ಕೆ ತೆಗೆದುಕೊಂಡೆವು ಎಂದರೆ ಇಂದ್ರಿಯಗಳೂ ಲೋಕ ವಿಷಯಗಳಿಂದ ವಿಮುಖವಾಗಿ ಮನಸ್ಸನ್ನು ಅನುಕರಿಸುತ್ತವೆ ಎಂಬುದನ್ನು ನಾವು ಮರೆಯಬಾರದು.
ನಮ್ಮ ಇಂದ್ರಿಯಗಳಿಗೂ ಲೋಕವಸ್ತುಗಳಿಗೂ ಇರುವ ಸಂಬಂಧವೇ ಮನಸ್ಸಾಗಿದೆ. ಮನಸ್ಸು ಲೋಕ ವಿಷಯಗಳಿಗೆ ವಿಮುಖವಾದಾಗ ಇಂದ್ರಿಯಗಳು ಸಹ ಮನಸ್ಸನ್ನೇ ಅನುಕರಿಸುತ್ತವೆ. ಅಂದರೆ ಅವು ಸಹ ಲೋಕ ವಿಷಯಗಳಿಗೆ ವಿಮುಖವಾಗುತ್ತವೆ. ಮನಸು ಹೀಗೆ ಒಂದು ನಿಯಂತ್ರಣಕ್ಕೆ ಒಳಪಟ್ಟರೆ ಇಂದ್ರಿಗಳೂ ಸಹಜವಾಗಿಯೇ ಸ್ವಾನಕ್ಕೆ ಬರುತ್ತವೆ. ಉದಾಹರಣೆಗೆ ರಾಣಿಜೇನು ಹುಳ ಹಾರಿ ಹೋದಾಗ ಇತರ ಜೇನು ಹುಳುಗಳೂ ಹಾರಿಹೋಗುತ್ತವೆ. ಯಾವಾಗ ರಾಣಿ ಜೇನು ಗೂಡಿಗೆ ಮರಳಿ ಬರುತ್ತವೆ. ಹೀಗೆ ಮನಸ್ಸು ಒಂದು ನಿಯಂತ್ರಣಕ್ಕೆ ಒಳಗಾಯಿತೆಂದರೆ ಇಂದ್ರಿಯಗಳೂ ಅಂತೆಯೇ ಒಳಪಡುತ್ತವೆ.
ಒಂದೊಳ್ಳೆಯ ಸಂಕಲ್ಪ ಶಕ್ತಿವೃದ್ಧಿಯಾಗಬೇಕು
ಪ್ರತ್ಯಾಹಾರದ ಇಡೀ ರಹಸ್ಯವಿರುವುದು ಮನಸ್ಸಿನ ಸಂಕಲ್ಪ ಶಕ್ತಿಯಲ್ಲಿ. ಇದನ್ನು ಯಾರು ಬೇಕಾದರೂ ವೃದ್ಧಿಪಡಿಸಿಕೊಳ್ಳಬಹುದು. ಆದರೆ ಬಹುಮಂದಿಯಲ್ಲಿ ಈ ಸಾಮರ್ಥ್ಯವು ಇನ್ನೂ ಅಪ್ರಬುದ್ಧ ಸ್ಥಿತಿಯಲ್ಲಿಯೇ ಇದೆ. ಒಮ್ಮೆ ಮನಸ್ಸು ಪ್ರತ್ಯಾಹಾರದಲ್ಲಿ ನೆಲೆಗೊಂಡಿತೆಂದರೆ, ಇಂದ್ರಿಯಗಳು, ಆಲೋಚನೆ ಹಾಗೂ ಭಾವನೆಗಳು ಹತೋಟಿಗೆ ಒಳಪಡುತ್ತವೆ. ಪ್ರತ್ಯಾಹಾರದಿಂದ ಸಂಕಲ್ಪ ಶಕ್ತಿಯೂ, ಸಂಕಲ್ಪ ಶಕ್ತಿಯಿಂದ ಪ್ರತ್ಯಾಹಾರವೂ ಪರಸ್ಪರ ವೃದ್ಧಿಗೊಳ್ಳುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications