ಬೆಣ್ಣೆ ಕದಿಯುವ ಕೃಷ್ಣನಿಗೆ ಪ್ರಿಯವಾದ ಪ್ರಸಾದ ಯಾವುದು? ಅದನ್ನು ಮಾಡುವ ವಿಧಾನ ಇಲ್ಲಿದೆ...
ಹಂಚಿ ತಿನ್ನುವುದು ಪ್ರಸಾದ. ಪ್ರಸಾದ ಹಂಚಿಕೊಂಡು ತಿಂದರೆ ಅದ್ರಲ್ಲಿರುವ ತೃಪ್ತಿಯೇ ಬೇರೆ. ಈ ಬಾರಿ ಕೃಷ್ಣಜನ್ಮಾಷ್ಟಮಿಗೆ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪ್ರಸಾದವನ್ನು ತಯಾರು ಮಾಡಲಾಗುತ್ತದೆ. ಅದುವೇ ಹಯಗ್ರೀವ ಪ್ರಸಾದ. ಹಯಗ್ರೀವ ಪ್ರಸಾದವನ್ನು ಶ್ರೀಕೃಷ್ಣನಿಗೆ ಪ್ರಿಯವಾದದ್ದು ಎನ್ನಲಾಗುತ್ತದೆ.
ಹಾಗಾದರೆ ಈ ಬಾರಿಯ ಶ್ರೀಕೃಷ್ಣಜನ್ಮಾಷ್ಟಮಿಗೆ ಹಯಗ್ರೀವ ಪ್ರಸಾದವನ್ನು ಮಾಡುವುದು ಹೇಗೆ ಎಂದು ತಿಳಿಯೋಣ. ನೀವು ಕೂಡ ನಿಮ್ಮ ಮನೆಯಲ್ಲಿ ಕೃಷ್ಣಜನ್ಮಾಷ್ಟಮಿ ಹಬ್ಬವನ್ನು ಆಚರಣೆ ಮಾಡುತ್ತಿದ್ದರೆ, ಹಯಗ್ರೀವ ಪ್ರಸಾದವನ್ನು ತಯಾರಿಸಬಹುದು. ಹಾಗಾದರೆ ಈ ಪ್ರಸಾದವನ್ನು ತಯಾರಿಸುವುದು ಹೇಗೆ ಎಂದು ತಿಳಿಯೋಣ.

ಹಯಗ್ರೀವ ಪ್ರಸಾದ ತಯಾರಿಸಲು ಬೇಕಾಗುವ ಪದಾರ್ಥಗಳು
*ಕಡ್ಲೆಬೇಳೆ ಒಂದು ಕಪ್
*ಬೆಲ್ಲ ಎರಡು ಕಪ್
* ಗಸಗಸೆ ಒಂದು ಟೀ ಸ್ಪೂನ್
* ತುಪ್ಪ ನಾಲ್ಕರಿಂದ ಐದು ಸ್ಪೂನ್
* ಗೋಡಂಬಿ 10-15
* ಒಣದ್ರಾಕ್ಷಿ 5-10
* ಒಣಗೊಬ್ಬರಿ ಐದು ಸ್ಪೂನ್
ಹಯಗ್ರೀವ ಪ್ರಸಾದ ತಯಾರಿಸುವ ವಿಧಾನ:-
*ನೆನೆಸಿದ ಕಡ್ಲೆಬೇಳೆ ಕುಕ್ಕರ್‌ನಲ್ಲಿ ಹಾಕಿ ಕುದಿಸಬೇಕು. ಒಂದು ಕಪ್ಪ ನೆನೆಸಿದ ಕಡ್ಲೆಬೇಳೆ ಕುದಿಸಲು ಎರಡರಷ್ಟು ಕಪ್ ನೀರು ಹಾಕಬೇಕು. ಇದನ್ನು ಒಂದು ಕೂಗು ಬರುವವರೆಗೂ ಕುದಿಸಿ.
*ಮತ್ತೊಂದೆಡೆ ಕಡ್ಲೆಬೆಳೆ ಒಂದು ಕಪ್ ತೆಗೆದುಕೊಂಡರೆ ಎರಡು ಕಪ್ ಬೆಲ್ಲ ತೆಗೆದುಕೊಳ್ಳಬೇಕು. ಇದನ್ನು ಒಂದು ಬಾಣಲೆಯಲ್ಲಿ ಹಾಕಿ ಸ್ವಲ್ಪ ನೀರು ಬೆರೆಸಿ ಮಂದ ಉರಿಯಲ್ಲಿ ಕುದಿಸಬೇಕು. ಪಾಕದ ಹದಕ್ಕೆ ಅದನ್ನು ಕುದಿಸಿ.
*ಬಳಿಕ ಒಂದು ಚಮಚ ಗಸಗಸೆ ಹಾಕಿ ಪ್ರತ್ಯೇಕ ಬಾಣಲೆಯಲ್ಲಿ ಹುರಿಯಬೇಕು. ತಟ್ಟೆಯಲ್ಲಿ ಅದನ್ನು ತೆಗೆದು ಇಟ್ಟುಕೊಳ್ಳಿ.
*ಬಳಿಕ ಅದೇ ಬಾಣಲೆಗೆ ಐದು ಸ್ಪೂನ್ ಒಣ ಕೊಬ್ಬರಿ ಹಾಕಿ ಹುರಿದುಕೊಳ್ಳಿ. ಸ್ವಲ್ಪ ಹುರಿದು ಒಂದು ಪಾತ್ರೆಯಲ್ಲಿ ತೆಗೆಯಿರಿ.
*ಬಳಿಕ ಆ ಬಾಣಲೆಯಲ್ಲಿ ಮೂರು ಸ್ಪೂನ್ ತುಪ್ಪ ಹಾಕಿ, ಹತ್ತು ಗೋಡಂಬಿ, ಒಣ ದ್ರಾಕ್ಷಿ ಹುರಿದು ತೆಗೆದುಕೊಳ್ಳಿ.
*ಬಳಿಕ ಬೆಲ್ಲದ ಪಾಕದಲ್ಲಿ ಕುದಿಸಿದ ಬೇಳೆಯನ್ನು ಹಾಕಿ ಕುದಿಸಿ. ಬಳಿಕ ಇದಕ್ಕೆ ಹುರಿದ ಒಣಗೊಬ್ಬರಿ, ಗಸಗಸೆ, ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿ ಹಾಕಿ.
*ಬಳಿಕ ಕೈಯಾಡಿಸಿ ಅದಕ್ಕೆ ಒಂದು ಚಿಟಿಕೆ ಏಲಕ್ಕಿ ಪುಡಿ ಸೇರಿಸಿದರೆ ಹಯಗ್ರೀವ ಸವಿಯಲು ಸಿದ್ದ.
ಈ ಪ್ರಸಾದವನ್ನು ನೈವೇದ್ಯಕ್ಕಾಗಿ ಹಲವಾರು ದೇವಸ್ಥಾನಗಳಲ್ಲಿ ತಯಾರಿಸಲಾಗುತ್ತದೆ. ಮಾತ್ರವಲ್ಲದೆ ಬಹುತೇಕ ಹಬ್ಬಗಳಲ್ಲಿ ಈ ಪ್ರಸಾದವನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಭಕ್ತರಿಗೆ ನೀಡಲಾಗುತ್ತದೆ. ನೀವೂ ಕೂಡ ಈ ಸಿಹಿಯಾದ ಪ್ರಸಾದವನ್ನು ಮನೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ತಯಾರಿಸಬಹುದು.












Click it and Unblock the Notifications