Hesaru Kaalu Juice: ನಾಲಿಗೆಗೂ ರುಚಿ, ಆರೋಗ್ಯಕ್ಕೂ ತಂಪು; ಹೆಸರು ಕಾಳು ಜ್ಯೂಸ್ ಮಾಡಿ ನೋಡಿ
ಈ ಬಾರಿಯ ಬೇಸಿಗೆಯ ಝಳಕ್ಕೆ ಜನ ಹೈರಣಾಗಿ ಹೋಗಿದ್ದಾರೆ. ಹೊರಗಡೆ ಮಟ ಮಟ ಬಿಸಿಲು, ಮನೆಯೊಳಗೆ ಸೆಕೆ, ಜೊತೆಯಲ್ಲಿ ವಿಪರೀತ ಬಾಯಾರಿಕೆ, ನಿರ್ಜಲೀಕರಣ, ಸುಸ್ತು, ಆಯಾಸ, ತಲೆ ನೋವು ಹೀಗೆ ಸಾಲು ಸಾಲು ಆರೋಗ್ಯ ಸಮಸ್ಯೆಗಳು. ಈ ಸಮಯದಲ್ಲಿ ಪಾನೀಯಗಳ ಕಡೆಗೆ ಹೆಚ್ಚು ಒಲವು ತೋರುವುದು ಸಾಮಾನ್ಯ.
ಬೇಸಿಗೆಯಲ್ಲಿ ಕಾಡುವ ಆರೋಗ್ಯ ಸಮಸ್ಯೆಯಿಂದ ದೂರ ಇರಲು ಹೆಚ್ಚು ನೀರು ಅಥವಾ ಪಾನೀಯಗಳನ್ನು ಸೇವಿಸಬೇಕಾಗುತ್ತದೆ. ಹೀಗಾಗಿ ಹೊರಗಡೆ ಸಿಗುವ ತಂಪು ಪಾನೀಯಗಳತ್ತ ಹೆಚ್ಚು ಗಮನ ಹರಿಸದೇ ಮನೆಯಲ್ಲೇ ಪಾನೀಯಗಳನ್ನು ತಯಾರಿಸಿ ಕುಡಿಯಿರಿ. ಇದು ಆರೋಗ್ಯಕ್ಕೂ ಒಳ್ಳೆಯದು ದೇಹಕ್ಕೂ ತಂಪು. ಹೀಗಾಗಿ ಮನೆಯಲ್ಲೇ ಮಾಡಬಹುದಾದ ಒಂದು ರುಚಿಯಾದ ಪಾನಿಯ ಹೆಸರು ಕಾಳು ಜ್ಯೂಸ್ ಬಗ್ಗೆ ವಿವರ ಇಲ್ಲಿದೆ.

ಹಸಿಬೇಳೆ ಅಥವಾ ಹೆಸರುಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೆಸರುಕಾಳು ಉಸ್ಲಿ ಅಥವಾ ಹಸಿರು ಬೇಳೆ ಪಲ್ಯ , ಹಸಿರುಕಾಳಿನ ಸಲಾಡ್ , ಹಸಿರುಬೇಳೆ ಚಪಾತಿ ಮತ್ತು ಹೆಸರುಕಾಳು ಗೊಜ್ಜು ಅಥವಾ ಹಸಿರು ಬೇಳೆ ಕರಿ ಮುಂತಾದ ರೀತಿಯಲ್ಲಿ ನೀವು ಹೆಸರು ಕಾಳನ್ನು ಸೇವಿಸಬಹಹುದು. ಹಾಗೆಯೇ ಹೆಸರು ಕಾಳಿನಿಂದ ಜ್ಯೂಸ್ ತಯಾರಿಸಿ ಕುಡಿಯುವುದು ದೇಹಕ್ಕೆ ತಂಪು ಹಾಗೂ ರುಚಿಯಾಗಿರುತ್ತದೆ.
ಹೆಸರು ಕಾಳಿನ ಜ್ಯೂಸ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
* 1/2 ಕಪ್ ಹಸಿರು ಕಾಳು ಅಥವಾ ಹೆಸರು ಕಾಳು
* 1/4 ಕಪ್ ತಾಜಾ ತುರಿದ ತೆಂಗಿನಕಾಯಿ
* 1/2 ಕಪ್ ಬೆಲ್ಲ (ನಿಮ್ಮ ರುಚಿಗೆ ತಕ್ಕಂತೆ ಹೊಂದಿಸಿ)
* ಸುಮಾರು 3 ಕಪ್ ನೀರು (ರುಬ್ಬುವುದು ಸೇರಿದಂತೆ)
* 2 ಏಲಕ್ಕಿ

ಹೆಸರು ಕಾಳು ಜ್ಯೂಸ್ ತಯಾರಿಸುವ ವಿಧಾನ
ಮೊದಲು 1/2 ಕಪ್ ಹಸಿರು ಬೇಳೆಯನ್ನು ತೆಗೆದುಕೊಂಡು ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ಹುರಿಯಲು ಪ್ರಾರಂಭಿಸಿ. ಹಸಿ ವಾಸನೆ ಹೋಗುವವರೆಗೆ, ಒಳ್ಳೆಯ ಪರಿಮಳ ಬರುವವರೆಗೆ ಹುರಿಯಿರಿ. ಬಳಿಕ ಹುರಿದ ಹೆಸರು ಕಾಳನ್ನು ತಣ್ಣಗಾಗುವ ವರೆಗೂ ಕಾದು ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ತುರಿದ ತಾಜಾ ತೆಂಗಿನಕಾಯಿ ಹಾಗೂ ಅಗತ್ಯವಿರುವ ನೀರನ್ನು ಸೇರಿಸಿ ನುಣ್ಣಗೆ ಮತ್ತೆ ರುಬ್ಬಿಕೊಳ್ಳಿ. ಬಳಿಕ ಈ ಮಿಶ್ರಣವನ್ನು ಬೇರೆ ಪಾತ್ರೆಗೆ ವರ್ಗಾಯಿಸಿಕೊಳ್ಳಿ.
ಹೆಸರು ಕಾಳು ಹಾಗೂ ತೆಂಗಿನಕಾಯಿ ಮಿಶ್ರಣಕ್ಕೆ ಮೂರು ಕಪ್ ನೀರು ಸೇರಿಸಿ. ಬಳಿಕ ನಿಮ್ಮ ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ಚೆನ್ನಾಗಿ ಕಲಸಿ. ಬೆಲ್ಲ ಕರಗುವರೆಗೂ ಕಾಯಿರಿ. ಕೊನೆಯಲ್ಲಿ ಒಂದು ಚಿಟಿಕೆ ಏಲಕ್ಕಿ ಪುಡಿ ಬೆರಸಿದರೆ ಹೆಸರು ಕಾಳು ಜ್ಯೂಸ್ ಸಿದ್ಧವಾಗುತ್ತದೆ. ಇದನ್ನು ಪ್ರಿಡ್ಜ್‌ನಲ್ಲಿಟ್ಟು ಎರಡು ಮೂರು ದಿನಗಳ ಕಾಲ ಕೂಡ ಸೇವಿಸಬಹುದು. ಈ ಹೆಸರು ಕಾಳು ಜ್ಯೂಸ್ ನಿಮ್ಮ ಬಾಯಾರಿಕೆಯನ್ನು ನೀಗಿಸುವುದಲ್ಲದೇ, ಆರೋಗ್ಯಕ್ಕೂ ತುಂಬಾ ಒಳ್ಳೆಯದು.












Click it and Unblock the Notifications