ಆಹಾ..ಎಂಥಾ ಟೇಸ್ಟ್! ಕಾಡುಮಾವಿನ ಹಣ್ಣನ್ನು ಸವಿದವರಿಗೆಷ್ಟೇ ಗೊತ್ತದರ ರುಚಿ!
ಮಡಿಕೇರಿ, ಏಪ್ರಿಲ್ 28: ಕಾಡುಮಾವಿನ ಹಣ್ಣನ್ನು ಸವಿದವರಿಗಷ್ಟೇ ಅದರ ರುಚಿ ಗೊತ್ತಿರುತ್ತದೆ. ಕಾಡಿನ ನಡುವೆ, ಕಾಫಿ, ಏಲಕ್ಕಿ ತೋಟಗಳ ನಡುವೆ ಹೆಮ್ಮರವಾಗಿ ಬೆಳೆದು ಗೊಂಚಲು ಗೊಂಚಲಾಗಿ ಚಿಕ್ಕ ಚಿಕ್ಕ ಹಣ್ಣುಗಳನ್ನು ಬಿಟ್ಟು ಕಂಗೊಳಿಸುವ ಹಣ್ಣುಗಳು ವಿಭಿನ್ನ ಮತ್ತು ವಿಶಿಷ್ಟ ರುಚಿಯನ್ನು ಹೊಂದಿರುತ್ತವೆ. ಇವುಗಳನ್ನು ನೇರವಾಗಿ ಸೇವಿಸುವುದಕ್ಕಿಂತ ಹೆಚ್ಚಾಗಿ ಮಿಡಿಯನ್ನು ಉಪ್ಪಿನಕಾಯಿಯಾಗಿ, ಸಾರು, ಹುಳಿ ಹೀಗೆ ಇತರೆ ಖಾದ್ಯವಾಗಿ ಬಳಕೆ ಮಾಡುವುದು ಕಂಡು ಬರುತ್ತದೆ.
ಕೊಡಗಿಗೆ ಸುತ್ತುಹೊಡೆದರೆ ಇಲ್ಲಿನ ಕಾಫಿ ತೋಟಗಳು ಮತ್ತು ಅರಣ್ಯಗಳಲ್ಲಿ ಇವತ್ತಿಗೂ ನೂರಾರು ವರ್ಷಗಳ ಹಿಂದಿನ ಕಾಡುಮಾವಿನ ಹೆಮ್ಮರಗಳು ಕಾಣಸಿಗುತ್ತವೆ. ಇವು ವಿವಿಧ ಬಗೆಯ ರುಚಿಯನ್ನು ಹೊಂದಿವೆ. ಇವುಗಳ ಗಾತ್ರ, ಬಣ್ಣ, ರುಚಿ, ಎಲ್ಲವೂ ಭಿನ್ನವಾಗಿರುತ್ತವೆ. ಮಿಡಿಯಿದ್ದಾಗ ಉಪ್ಪಿನಕಾಯಿಗೆ ಬಳಕೆಯಾಗುತ್ತದೆ. ಆದರೆ ಹೆಮ್ಮರಗಳಲ್ಲಿ ಬಿಡುವ ಮಿಡಿಯನ್ನು ಕೊಯ್ಲು ಮಾಡಲು ಸಾಧ್ಯವಾಗದ ಕಾರಣದಿಂದ ಕಾಡಿನಲ್ಲಿ ಅದರ ಪಾಡಿಗೆ ಮಿಡಿಬಿಟ್ಟು ಕಾಯಿಯಾಗಿ, ಹಣ್ಣಾಗಿ ಬಿದ್ದು ಹೋಗುತ್ತವೆ.

ಇದರ ಹಣ್ಣುಗಳನ್ನು ದನಗಳು ಸೇರಿದಂತೆ ಪ್ರಾಣಿ ಪಕ್ಷಿಗಳು ತಿಂದು ಹಾಕುತ್ತವೆ. ಮೇ ಜೂನ್ ಸಮಯದಲ್ಲಿ ಹಣ್ಣಾಗುತ್ತವೆ. ಈ ಹಣ್ಣುಗಳು ಉದುರಿದಾಗ ಅದನ್ನು ಹೆಕ್ಕಿ ತಂದು ಮನೆಯಲ್ಲಿ ಮಣ್ಣಿನ ಮಡಿಕೆಗಳಲ್ಲಿ ಅಥವಾ ಪ್ಲಾಸ್ಟಿಕ್ ಡಬ್ಬಗಳಲ್ಲಿ ಉಪ್ಪಿನೊಳಗೆ ಹಾಕಿಡುತ್ತಾರೆ. ಮಳೆಗಾಲದಲ್ಲಿ ಇದನ್ನು ಬಳಕೆ ಮಾಡುತ್ತಾರೆ. ಮಲೆನಾಡಿಗರಿಗೆ ಇದರ ಉಪಯೋಗ ಚೆನ್ನಾಗಿ ಗೊತ್ತಿರುತ್ತದೆ.
ಕಾಡು ಮಾವು ನೇಪಥ್ಯಕ್ಕೆ ಸರಿದಿವೆ
ಒಂದು ಕಾಲದಲ್ಲಿ ಎಲ್ಲೆಂದರಲ್ಲಿ ಕಾಣಲು ಸಿಗುತ್ತಿದ್ದ ಕಾಡು ಮಾವು ಈಗ ನೇಪಥ್ಯಕ್ಕೆ ಸರಿದಿವೆ ಎಂದರೆ ತಪ್ಪಾಗಲಾರದು. ಕಾಡುಗಳು ನಾಶವಾಗಿದ್ದರಿಂದ ಮಲೆನಾಡಿನಲ್ಲಿ ಕಾಡುಮಾವು ಕೂಡ ನಿಧಾನವಾಗಿ ಕಣ್ಮರೆಯಾಗುತ್ತಿವೆ. ಇತ್ತೀಚೆಗಿನವರು ಇದರ ಬಳಕೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲವಾದರೂ ಇದರ ಬಳಕೆ ಮಾಡಿಕೊಂಡು ಬಂದಿದ್ದ ಹಿರಿಯರು ಇದರತ್ತ ಒಲವು ತೋರುತ್ತಿದ್ದಾರೆ. ಈಗ ಮೊದಲಿನಂತೆ ಎಲ್ಲೆಂದರಲ್ಲಿ ಕಾಡುಮಾವು ಸಿಗದ ಕಾರಣದಿಂದ ಒಂದಷ್ಟು ಬೇಡಿಕೆಯೂ ಹೆಚ್ಚಿದೆ.
ಈ ಹಣ್ಣನ್ನು ತಿನ್ನಲು ಮಾತ್ರವಲ್ಲದೆ ಇತರೆ ಖಾದ್ಯಗಳಲ್ಲಿ ಬಳಸುವುದರಿಂದ ಅದರ ಉಪಯೋಗ ಅರಿತ ಜನ ಅದರತ್ತ ಒಲವು ತೋರುತ್ತಿದ್ದಾರೆ. ಆದರೆ ಪಟ್ಟಣದ ಹೆಚ್ಚಿನ ಮಂದಿಗೆ ಅದರ ಬಗ್ಗೆ ಹೆಚ್ಚಾಗಿ ತಿಳಿದಂತಿಲ್ಲ. ಆದರೂ ಹಳ್ಳಿಗರು ಇದನ್ನು ತಂದು ಪಟ್ಟಣಗಳಲ್ಲಿ ಮಾರಾಟ ಮಾಡುವುದು ಕೊಡಗಿನ ಕೆಲವೆಡೆ ಕಾಣಸಿಗುತ್ತದೆ. ಇನ್ನು ಈಗಾಗಲೇ ವಿವಿಧ ರೀತಿಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ. ಪಟ್ಟಣಗಳ ಬೀದಿ ಬದಿಯಿಂದ ಆರಂಭವಾಗಿ ಮಾರುಕಟ್ಟೆವರೆಗೆ ಎಲ್ಲೆಂದರಲ್ಲಿ ವಿವಿಧ ಮಾದರಿಯ ಹಣ್ಣುಗಳು ಮಾರಾಟಕ್ಕೆ ಬಂದಿವೆ. ಈ ಹಣ್ಣುಗಳ ನಡುವೆ ಕಾಡುಮಾವುಗಳು ಕಳೆದು ಹೋಗಿವೆ.

ರೈತರಿಗೆ ಮಾವು ಜೀವನಾಧಾರ
ಹಾಗೆನೋಡಿದರೆ ಬಯಲು ಸೀಮೆಗಳಲ್ಲಿ ರೈತರಿಗೆ ಮಾವು ಜೀವನಾಧಾರವಾಗಿದ್ದು, ಈ ಬಾರಿ ಉತ್ತಮ ಫಸಲು ಇಲ್ಲದ ಕಾರಣದಿಂದಾಗಿ ಮಾವಿನ ಬೆಲೆ ಗಗನಕ್ಕೇರಿದೆ. ಬರದ ಹಿನ್ನಲೆಯಲ್ಲಿ ಫಸಲು ಬಿಡದೆ ಮಾವು ಬೆಳೆದ ಬೆಳೆಗಾರ ಸಂಕಷ್ಟಕ್ಕೀಡಾಗಿದ್ದಾನೆ. ಇನ್ನು ಮಲೆನಾಡಿನ ಬಗ್ಗೆ ಹೇಳುವುದಾದರೆ ಇವತ್ತಿಗೂ ಇಲ್ಲಿ ಹಳೆಯಕಾಲದ ಮಾವಿನ ತಳಿಗಳೇ ಹೆಚ್ಚಾಗಿ ಕಂಡು ಬರುತ್ತಿವೆ.
ಈ ಪೈಕಿ ಬಹಳ ಹಿಂದಿನ ಕಾಲದಿಂದಲೂ ತೋಟಗಳ ನಡುವೆ ಬೆಳೆಯುತ್ತಾ ಬಂದಿರುವ ನೆಕ್ಕರೆ(ಗೋಮಾವು) ಮಾವಿನ ಹಣ್ಣುಗಳಿಗೆ ಹೆಚ್ಚಿನ ಮಾರುಕಟ್ಟೆಯಿಲ್ಲದಿದ್ದರೂ ಗ್ರಾಮೀಣ ಜನರಿಗೆ ಅಚ್ಚುಮೆಚ್ಚಾಗಿಯೇ ಉಳಿದು ಹೋಗಿವೆ. ಇನ್ನು ಕಾಡುಗಳಲ್ಲಿ ಹೆಮ್ಮರವಾಗಿ ಬೆಳೆದು ರುಚಿಯಾದ ಹಣ್ಣುಗಳನ್ನು ಬಿಡುವ ಕಾಡುಮಾವಿನ ಹಣ್ಣುಗಳಂತು ಇಂದಿಗೂ ಹಳ್ಳಿಗರ ಪಾಲಿಗೆ ಕಲ್ಪವೃಕ್ಷವೇ.
ಅಳಿವಿನಂಚಿನತ್ತ ಸಾಗುತ್ತಿರುವ ಕಾಡುಮಾವು
ಮೊದಲೆಲ್ಲ ಈ ಮಾವಿನ ಹಣ್ಣುಗಳಿಂದ ಹಳ್ಳಿಜನರ ತರಕಾರಿ ಸಮಸ್ಯೆ ನೀಗುತ್ತಿತ್ತು. ಇತ್ತೀಚಿಗಿನ ದಿನಗಳಲ್ಲಿ ಕಾಡು ಮಾವಿನ ಮರಗಳು ನಾಶವಾಗುತ್ತಿವೆ. ಇನ್ನೊಂದೆಡೆ ಪರಿಸರದ ಮೇಲಾಗುತ್ತಿರುವ ಪರಿಣಾಮಗಳಿಂದಲೋ ಮೊದಲಿನಷ್ಟು ಫಸಲುಗಳು ಬರುತ್ತಿಲ್ಲ. ಸಂಬಾರ, ಜೀರಿಗೆ ಹೀಗೆ ವಿವಿಧ ಸುವಾಸನೆಯಿಂದ ಕೂಡಿರುವ ಈ ಹಣ್ಣುಗಳು ರಾಸಾಯನಿಕ ಮುಕ್ತ ಮತ್ತು ಹೆಚ್ಚು ಜೀವಸತ್ವ ಹೊಂದಿದ ಹಣ್ಣುಗಳಾಗಿವೆ.

ಹಿತ್ತಲಗಿಡ ಮದ್ದಲ್ಲ ಎಂಬ ಮಾತಿನಂತೆ ಇಂತಹ ಹಣ್ಣಿನ ಮರಗಳನ್ನು ನಾಶ ಮಾಡುತ್ತಿರುವ ನಾವು ಮಾರುಕಟ್ಟೆಗೆ ಬರುವ ರಾಸಾಯನಿಕವನ್ನು ಹೊಂದಿರುವ ಹಣ್ಣಿಗೆ, ಅದರ ಸೌಂದರ್ಯ, ರುಚಿಗೆ ಮಾರು ಹೋಗುತ್ತಿದ್ದೇವೆ ಆದರೆ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದ್ದ ಕಾಡು ಮಾವಿನ ಹಣ್ಣುಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ನಾವು ಮಾಡದಿರುವುದರಿಂದಾಗಿ ಅವುಗಳು ಅಳಿವಿನಂಚಿನತ್ತ ಸದ್ದಿಲ್ಲದೆ ಸಾಗುತ್ತಿವೆ.












Click it and Unblock the Notifications