Curd Rice Recipe: ಮೊಸರನ್ನ ರೆಸಿಪಿ- ಮೊಸರನ್ನ ಎಲ್ಲರು ತಯಾರಿಸುತ್ತಾರೆ ಆದರೆ ಹೀಗೆ ಯಾರೂ ಮಾಡಿರಲ್ಲ..
ಬೇಸಿಗೆ ಬಿಸಿಲು ಆರಂಭವಾಗಿದೆ. ದೇಹ ತಂಪಾಗಿಡುವ ಪಾನೀಯ ಹಾಗೂ ಆಹಾರಗಳಿಗೆ ಹೆಚ್ಚು ಜನ ಗಮನ ಹರಿಸುತ್ತಿದ್ದಾರೆ. ಸಾಮಾನ್ಯವಾಗಿ ಈ ಬೇಸಿಗೆಯಲ್ಲಿ ಹೆಚ್ಚು ಖಾರವಾದ, ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುವುದಕ್ಕಿಂತ ಆರೋಗ್ಯಕರ ಆಹಾರ ಸೇವಿಸುವುದು ತುಂಬಾ ಹಿತವನ್ನು ನೀಡುತ್ತದೆ. ಅಂತಹ ಆಹಾರದಲ್ಲಿ ಮೊಸರನ್ನ ಕೂಡ ಒಂದು.
ಸಾಮಾನ್ಯವಾಗಿ ಎಲ್ಲಾ ಗೃಹಿಣಿಯರು ಕೂಡ ಮೊಸರನ್ನವನ್ನು ತಯಾರಿಸುತ್ತಾರೆ. ಆದರೆ ಇದನ್ನು ಇನ್ನಷ್ಟು ಆರೋಗ್ಯಕರವಾಗಿಸಲು ಕೆಲ ಪದಾರ್ಥಗಳನ್ನು ಬಳಕೆ ಮಾಡುವುದು ಒಳ್ಳೆಯದು. ಹಾಗಾದರೆ ಈಗ ವಿಶೇಷವಾಗಿ ಮೊಸರನ್ನ ತಯಾರಿಸುವುದು ಹೇಗೆ ಎಂದು ತಿಳಿಯೋಣ.

ಬೇಕಾಗುವ ಪದಾರ್ಥಗಳು:-
* ಅಕ್ಕಿ ಒಂದು ಕಪ್
* ಮೊಸರು ಎರಡು ಕಪ್
* ಜೀರಿಗೆ ಕಾಲ್ ಟೇಬಲ್ ಸ್ಪೂನ್
* ಸಾಸಿವೆ ಕಾಲ್ ಟೇಬಲ್ ಸ್ಪೂನ್
* ಈರುಳ್ಳಿ ಒಂದು
* ಹಸಿ ಮೆಣಸಿನಕಾಯಿ ಮೂರು
* ಕರಿಬೇವು ಸ್ವಲ್ಪ
* ಕೊತ್ತಂಬರಿ ಸ್ವಲ್ಪ
* ದ್ರಾಕ್ಷಿ ನಾಲ್ಕು
* ದಾಳಿಂಬೆ ಕಾಳು ಒಂದು ಟೇಬಲ್ ಸ್ಪೂನ್
* ಗೋಡಂಬಿ (ಚಿಕ್ಕದಾಗಿ ಹೆಚ್ಚಿದ ಒಂದು ಟೇಬಲ್ ಸ್ಪೂನ್)
* ಚರ್ರಿ ಐದು
*ಉಪ್ಪು
*ಅಡುಗೆ ಎಣ್ಣೆ
ತಯಾರಿಸುವ ವಿಧಾನ:-
* ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಐದು ಕಪ್ ನೀರು ಬೆರಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಕುಕ್ಕರ್‌ನಲ್ಲಿ ಐದರಿಂದ ಆರು ವಿಸಿಲ್ ಆಗುವವರೆಗೂ ಬಿಡಿ (ಅನ್ನ ಸ್ವಲ್ಪ ನೀರಾಗಿದ್ದರೂ ಪರವಾಗಿಲ್ಲ ಚೆನ್ನಾಗಿ ಬೆಂದಿರಬೇಕು, ಮೆದುವಾಗಿರಬೇಕು)
* ನಂತರ ಅನ್ನವನ್ನು ಚೆನ್ನಾಗಿ ಮಿಕ್ಸ್ ಮಾಡಿ, ಮೆದುವಾಗಿಸಿ ಆರಲು ಬಿಟ್ಟು ಬಿಡಿ.
* ಒಂದು ಪ್ರತ್ಯೇಕ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು, ಗೋಡಂಬಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೂ ಹುರಿದು ಪ್ರತ್ಯೇಕವಾಗಿ ತೆಗೆದಿಡಿ. ನಂತರ ಇದೇ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಜೀರಿಗೆ, ಸಾಸಿವೆ ಹಾಕಿ ಚಟಪಟ ಅನ್ನೋವರೆಗೂ ಬಿಡಿ.
* ಬಳಿಕ ಇದಕ್ಕೆ ಚಿಕ್ಕದಾಗಿ ಹೆಚ್ಚಿದ ಹಸಿ ಮೆಣಸಿನಕಾಯಿ, ಈರುಳ್ಳಿ, ಕರಿಬೇವು ಹಾಗೂ ಕೊತ್ತಂಬರಿ ಸೊಪ್ಪು ಒಂದೊಂದಾಗಿ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ಗ್ಯಾಸ್ ಆಫ್ ಮಾಡಿ ಆರಲು ಬಿಡಿ

* ನಂತರ ಮತ್ತೊಂದು ಪಾತ್ರೆಯಲ್ಲಿ ಚಿಕ್ಕದಾಗಿ ಕಟ್ ಮಾಡಿದ ದ್ರಾಕ್ಷಿ ಹಣ್ಣು, ಬಿಡಿಸಿಕೊಂಡ ದಾಳಿಂಬೆ ಕಾಳು ಹಾಕಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ
* ಈಗ ಅನ್ನ ಚೆನ್ನಾಗಿ ಆರಿದ ಬಳಿಕ ಮತ್ತೊಮ್ಮೆ ಅದನ್ನು ಚೆನ್ನಾಗಿ ಕಲಿಸಿ ಬಳಿಕ ಅದಕ್ಕೆ ಮೊಸರು ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. (ಇದು ತುಂಬಾ ಗಟ್ಟಿಯಾಗಿರಬಾರದು)
* ಬಳಿಕ ಇದಕ್ಕೆ ಕಟ್ ಮಾಡಿದ ಹಣ್ಣುಗಳು, ಗೋಡಂಬಿ ಹಾಗೂ ಒಗ್ಗರಣೆಯನ್ನು ಹಾಕಿ ಮಿಕ್ಸ್ ಮಾಡಿದರೆ ರುಚಿ ರುಚಿಯಾದ ಹಾಗೂ ಆರೋಗ್ಯಕರವಾದ ಮೊಸರನ್ನು ಸವಿಯಲು ಸಿದ್ಧ.












Click it and Unblock the Notifications