ಸೌತೆಕಾಯಿ ರೈತಾ vs ಬೂಂದಿ ರೈತಾ: ಬೇಸಿಗೆಯಲ್ಲಿ ಜೀರ್ಣಕ್ರಿಯೆಗೆ ಯಾವುದು ಉತ್ತಮ?
ಬೇಸಿಗೆಯ ತಾಪಮಾನದಲ್ಲಿ ದೇಹವನ್ನು ತಂಪಾಗಿಡಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ರೈತಾ ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ. ವಿಶೇಷವಾಗಿ ಬಿರಿಯಾನಿ, ಪರೋಟಾ, ಪುಲಾವ್ ಅಥವಾ ಖಾರದ ಆಹಾರಗಳ ಜೊತೆಗೆ ರೈತಾ ಸೇವಿಸುವುದರಿಂದ ದೇಹಕ್ಕೆ ತಂಪು ನೀಡುವುದರ ಜೊತೆಗೆ ಹೊಟ್ಟೆಗೆ ಹಿತ ನೀಡುತ್ತದೆ. ರೈತಾದಲ್ಲಿ ಹಲವು ವಿಧಗಳಿದ್ದರೂ, ಸೌತೆಕಾಯಿ ರೈತಾ ಮತ್ತು ಬೂಂದಿ ರೈತಾ ಭಾರತೀಯರ ಅಚ್ಚುಮೆಚ್ಚಿನ ಆಹಾರಗಳಾಗಿವೆ. ಆದರೆ ಈ ಎರಡರಲ್ಲಿ ಬೇಸಿಗೆಯಲ್ಲಿ ಹೊಟ್ಟೆಗೆ ಯಾವುದು ಹೆಚ್ಚು ಹಿತಕರ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುತ್ತದೆ.
ಸೌತೆಕಾಯಿ ರೈತಾದ ಲಾಭಗಳು
ಸೌತೆಕಾಯಿ ರೈತಾ ಬೇಸಿಗೆಯಲ್ಲಿ ಅತ್ಯಂತ ಆರೋಗ್ಯಕರ ಆಯ್ಕೆಯಾಗಿದೆ. ಸೌತೆಕಾಯಿಯಲ್ಲಿ ಸುಮಾರು 96% ನೀರಿನ ಅಂಶ ಇರುತ್ತದೆ, ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಇದು ಕಡಿಮೆ ಕ್ಯಾಲೊರಿಯ ಆಹಾರವಾಗಿದ್ದು, ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸಹ ತುಂಬಾ ಉಪಯುಕ್ತವಾದಗಿದೆ.

ಸೌತೆಕಾಯಿಯಲ್ಲಿರುವ ನಾರಿನಾಂಶ ಜೀರ್ಣಕ್ರಿಯೆ ಸುಧಾರಿಸಿ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ. ಮೊಸರು ಸೇರಿಸುವುದರಿಂದ ಇದು ಪ್ರೊಬಯೋಟಿಕ್ ಆಹಾರವಾಗಿ ಕೆಲಸ ಮಾಡಿ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ. ಖಾರದ ಅಥವಾ ಭಾರವಾದ ಆಹಾರದ ಬಳಿಕ ಸೌತೆಕಾಯಿ ರೈತಾ ಸೇವಿಸಿದರೆ ದೇಹಕ್ಕೆ ತಂಪು ಹಾಗೂ ಹೊಟ್ಟೆಗೆ ಆರಾಮ ದೊರೆಯುತ್ತದೆ.
ಬೂಂದಿ ರೈತಾ ಹೇಗೆ?
ಬೂಂದಿ ರೈತಾ ಕೂಡ ಬಹಳ ಜನಪ್ರಿಯವಾಗಿದೆ. ಕಡಲೆಹಿಟ್ಟಿನಿಂದ ತಯಾರಿಸುವ ಬೂಂದಿಯಲ್ಲಿ ಪ್ರೋಟೀನ್ ಅಂಶ ಇದ್ದರೂ, ಸಾಮಾನ್ಯವಾಗಿ ಇದನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಹೀಗಾಗಿ ಇದರ ಕ್ಯಾಲೊರಿ ಪ್ರಮಾಣ ಹೆಚ್ಚು ಇರುತ್ತದೆ.
ಬೂಂದಿ ಮತ್ತು ಮೊಸರಿನ ಮಿಶ್ರಣ ಕೆಲವರಿಗೆ ಹೊಟ್ಟೆ ಭಾರವಾಗುವಂತೆ ಮಾಡಬಹುದು. ವಿಶೇಷವಾಗಿ ಬೇಸಿಗೆಯಲ್ಲಿ ಅಥವಾ ಹೊಟ್ಟೆ ಸಂವೇದನಾಶೀಲವಾಗಿರುವವರಿಗೆ ಇದು ಅಜೀರ್ಣ ಅಥವಾ ಅಸ್ವಸ್ಥತೆಯನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ ಆದ್ದರಿಂದ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸೇವಿಸುವುದು ಒಳ್ಳೆಯದು. ಆದರೂ ಕೆಲವರು ಬೂಂದಿ ರೈತಾವನ್ನು ವಿಶೇಷ ಊಟಗಳ ಜೊತೆಗೆ ಸವಿಯಲು ಇಷ್ಟಪಡುತ್ತಾರೆ.
ಬೇಸಿಗೆಯಲ್ಲಿ ಹೊಟ್ಟೆಗೆ ಯಾವುದು ಉತ್ತಮ?
ಆರೋಗ್ಯ ತಜ್ಞರ ಪ್ರಕಾರ, ಬೇಸಿಗೆಯಲ್ಲಿ ಸೌತೆಕಾಯಿ ರೈತಾ ಹೊಟ್ಟೆಗೆ ಹೆಚ್ಚು ಹಿತಕರ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ. ಇದು ದೇಹಕ್ಕೆ ತಂಪು ನೀಡುವುದರ ಜೊತೆಗೆ ದೇಹದಲ್ಲಿ ನೀರಿನ ಕೊರತೆಯನ್ನು ತಪ್ಪಿಸಲು ಸಹ ಸಹಾಯ ಮಾಡುತ್ತದೆ.
ಬೂಂದಿ ರೈತಾವನ್ನು ಅಲ್ಪ ಪ್ರಮಾಣದಲ್ಲಿ ಅಥವಾ ಕೆಲವೊಮ್ಮೆ ಸೇವಿಸುವುದು ಉತ್ತಮ. ಆದರೆ ಪ್ರತಿದಿನದ ಆಹಾರದಲ್ಲಿ ಸೌತೆಕಾಯಿ ರೈತಾವನ್ನು ಸೇರಿಸುವುದು ಬೇಸಿಗೆಯಲ್ಲಿ ಆರೋಗ್ಯ ಕಾಪಾಡಲು ಉತ್ತಮ ಆಯ್ಕೆಯಾಗಿದೆ.
ಸೂಚನೆ: ಈ ಮಾಹಿತಿ ಸಾಮಾನ್ಯ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ಅಥವಾ ಯಾವುದಾದರೂ ಪೌಷ್ಟಿಕಾಂಶದ ಕೊರತೆಯಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.














Click it and Unblock the Notifications