Brinjal Chutney Recipe: ಈ ರೀತಿ ಬದನೆಕಾಯಿ ಚಟ್ನಿ ಮಾಡಿ ಒಂದು ಸ್ವಲ್ಪ ಜಾಸ್ತಿ ತಿಂತೀರಾ
ಹಲವರ ನೆಚ್ಚಿನ ತರಕಾರಿಗಳಲ್ಲಿ ಬದನೆಕಾಯಿ ಕೂಡ ಒಂದು. ನೀವು ಕೂಡ ಬದನೆಕಾಯಿ ಪ್ರಿಯರಾಗಿದ್ದರೆ ಒಮ್ಮೆ ಈ ರೀತಿಯಾಗಿ ಚಟ್ನಿ ತಯಾರಿಸಿ. ಇದರ ರುಚಿಗೆ ನೀವು ಕಳೆದು ಹೋಗುವುದು ಪಕ್ಕ. ಹಾಗಾದರೆ ಬದನೆಕಾಯಿ ಚಟ್ನಿ ತಯಾರಿಸುವ ವಿಧಾನವನ್ನು ತಿಳಿಯೋಣ.
ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಎಣ್ಣೆ ಬದನೆಕಾಯಿ, ವಾಂಗಿ ಬಾತ್, ಬದನೆಕಾಯಿ ಕರಿ, ಬದನೆಕಾಯಿ ಸಾಂಬರ್ ಮಾಡುವುದು ಇದೆ. ಬದನೆಕಾಯಿ ಗೊಜ್ಜು ಕೂಡ ಹಲವಾರು ಜನ ತಯಾರಿಸುತ್ತಾರೆ. ಆದರೆ ಒಮ್ಮೆ ಈ ರೀತಿಯಾಗಿ ಬದನೆಕಾಯಿ ಚಟ್ನಿಯನ್ನು ತಯಾರಿಸಿ ನೋಡಿ. ಇದು ಚಪಾತಿ, ಅನ್ನ, ಪೂರಿ, ಪರೋಟ ಹಾಗೂ ದೋಸೆ ಜೊತೆಗೆ ತಿನ್ನಲು ಅದ್ಭುತವಾಗಿರುತ್ತದೆ. ಇದರ ರುಚಿಗೆ ಮನೆ ಮಂದಿಯೆಲ್ಲಾ ಫಿದಾ ಆಗುತ್ತಾರೆ. ಹಾಗಾದರೆ ಮೊದಲು ಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳ ಬಗ್ಗೆ ತಿಳಿಯೋಣ.

ಬೇಕಾಗಿರುವ ಪದಾರ್ಥಗಳು:-
* ಬದನೆಕಾಯಿ 5 ರಿಂದ 6
* ಹಸಿ ಮೆಣಸಿನಕಾಯಿ 5
* ಈರುಳ್ಳಿ 1
* ಟೊಮ್ಯಾಟೋ 2
* ಶುಂಠಿ ಸ್ವಲ್ಪ
* ಬೆಳ್ಳುಳ್ಳಿ 3 ಎಸಳು
* ಕರಿಬೇವು ಸ್ವಲ್ಪ
* ಕೊತ್ತಂಬರಿ ಸೊಪ್ಪು ಸ್ವಲ್ಪ
* ಜೀರಿಗೆ, ಸಾರಿವೆ ಒಗ್ಗರಣೆಗೆ ಬೇಕಾಗುವಷ್ಟು
* ಅಡುಗೆ ಎಣ್ಣೆ
* ಉಪ್ಪು ರುಚಿಗೆ ತಕ್ಕಷ್ಟು
* ಅರಿಶಿಣ ಸ್ವಲ್ಪ
* ಹಸಿ ಕಾಯಿ ತುರಿ ಒಂದು ಟೇಬಲ್ ಸ್ಪೂನ್
* ಒಣ ಮೆಣಸಿನಕಾಯಿ ಎರಡು
ತಯಾರಿಸುವ ವಿಧಾನ:-
* ಮೊದಲಿಗೆ ಬದನೆಕಾಯಿಯನ್ನು ಒಲೆಯಲ್ಲಿ ಸುಟ್ಟುಕೊಳ್ಳಬೇಕು.
* ನಂತರ ಈರುಳ್ಳಿ ಹಾಗೂ ಟೊಮ್ಯಾಟೋವನ್ನೂ ಸುಟ್ಟುಕೊಳ್ಳಬೇಕು.
* ಬಳಿಕ ಇದೆಲ್ಲದರ ಸಿಪ್ಪೆ ತೆಗೆದು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಿ
* ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಇದಕ್ಕೆ ಸ್ವಲ್ಪ ಎಣ್ಣೆ ಹಾಕಿ ಸ್ವಲ್ಪ ಬಿಸಿಯಾದ ಬಳಿಕ ಹೆಚ್ಚಿದ ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು, ಹಸಿ ಕಾಯಿ ತುರಿ, ಅರಿಶಿಣ ಹಾಕಿ ಸ್ವಲ್ಪ ಕೆಂಪಾಗುವವರೆಗೂ ಹುರಿಯಿರಿ.
* ನಂತರ ಇದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಂಡು ಇದಕ್ಕೆ ಸ್ಮ್ಯಾಶ್ ಮಾಡಿದ ಟೊಮ್ಯಾಟೋ, ಈರುಳ್ಳಿ ಹಾಗೂ ಬದನೆಕಾಯಿಯನ್ನು ಮಿಶ್ರಣ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಂದು ಸ್ವಲ್ಪ ಹೊತ್ತು ಮಾತ್ರ ಮಿಕ್ಸಿಗೆ ಹಾಕಿ ತೆಗೆದು ಬಿಡಿ.
* ನಂತರ ಒಲೆಯ ಮೇಲೆ ಪಾತ್ರೆ ಇಟ್ಟು ಎಣ್ಣೆ ಹಾಕಿ, ಜೀರಿಗೆ, ಸಾಸಿವೆ, ಕರಿಬೇವು, ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ ಬೆರೆಸಿದರೆ ರುಚಿ ರುಚಿಯಾದ ಬದನೆಕಾಯಿ ಚಟ್ನಿ ಸವಿಯಲು ಸಿದ್ಧ.












Click it and Unblock the Notifications