ಓಮಿಕ್ರಾನ್ ಅಂಟು: ಮುಂಬೈನಲ್ಲಿ ನೆಗೆಟಿವ್ ವರದಿ ಮಾಡಿದ ವ್ಯಕ್ತಿಗೆ ಆಂಧ್ರದಲ್ಲಿ ಪಾಸಿಟಿವ್!
ತಿರುವನಂತಪುರಂ, ಡಿಸೆಂಬರ್ 13: ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಕೇರಳಕ್ಕೂ ಕಾಲಿಟ್ಟಿದೆ. ಭಾನುವಾರ ಯುನೈಟೆಡ್ ಕಿಂಗ್‌ಡಂನಿಂದ ಕೊಚ್ಚಿಗೆ ಆಗಮಿಸಿದ ವ್ಯಕ್ತಿಯಲ್ಲಿ ಹೊಸ ರೂಪಾಂತರ ಸೋಂಕು ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ. ಇತ್ತ ಇನ್ನೊಂದು ಪ್ರಕರಣದಲ್ಲಿ ಮುಂಬೈನಲ್ಲಿ ನೆಗೆಟಿವ್ ವರದಿ ಮಾಡಿದ ವ್ಯಕ್ತಿಯು ಆಂಧ್ರ ಪ್ರದೇಶಕ್ಕೆ ಬರುತ್ತಿದ್ದಂತೆ ಸೋಂಕು ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ.
"ಸೋಂಕಿತ ವ್ಯಕ್ತಿಯ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಹೆಚ್ಚಿನ ಅಪಾಯವಿರುವ ಬಗ್ಗೆ ತಿಳಿಸಲಾಗಿದ್ದು, ಯಾವುದೇ ರೀತಿ ಭಯಪಡುವ ಅಗತ್ಯವಿಲ್ಲ, ಅವರ ಸ್ಥಿತಿ ಸ್ಥಿರವಾಗಿದೆ. ಅವರ ಪತ್ನಿ ಮತ್ತು ತಾಯಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಎಲ್ಲರನ್ನೂ ಐಸೋಲೇಷನ್ ವಾರ್ಡ್‌ಗೆ ಸ್ಥಳಾಂತರಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ವೀಣಾ ಜಾರ್ಜ್ ತಿಳಿಸಿದ್ದಾರೆ.
ನಾಗ್ಪುರದಲ್ಲಿಯೂ ಮೊದಲ ಓಮಿಕ್ರಾನ್ ಸೋಂಕಿತ ಪ್ರಕರಣ ವರದಿಯಾಗಿದೆ. 40 ವರ್ಷದ ವ್ಯಕ್ತಿಯಲ್ಲಿ ಹೊಸ ರೂಪಾಂತರ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ರಾಧಾಕೃಷ್ಣನ್ ತಿಳಿಸಿದ್ದಾರೆ. ಆ ಮೂಲಕ ದೇಶದಲ್ಲಿ ಒಟ್ಟು ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆಯು 38ಕ್ಕೆ ಏರಿಕೆಯಾಗಿದೆ. ಭಾನುವಾರ ಒಂದೇ ದಿನ ಆಂಧ್ರ ಪ್ರದೇಶ, ಚಂಡೀಗಢ ಮತ್ತು ಕರ್ನಾಟಕದಲ್ಲಿ ತಲಾ ಒಂದು ಸೋಂಕಿತ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಓಮಿಕ್ರಾನ್ ಸೋಂಕಿತ ಪ್ರಕರಣ ಮತ್ತು ಸುತ್ತಲಿನ ಬೆಳವಣಿಗೆಳ ಕುರಿತು ಪ್ರಮುಖ ಅಂಶಗಳನ್ನು ವಿವರಿಸಲಾಗಿದೆ.

ಭಾರತದಲ್ಲಿ ಒಂದೇ ದಿನ ಮೂರು ಓಮಿಕ್ರಾನ್ ಪ್ರಕರಣ
ಆಂಧ್ರ ಪ್ರದೇಶದಲ್ಲಿ ಭಾನುವಾರ ಮೊದಲ ಓಮಿಕ್ರಾನ್ ಸೋಂಕಿತ ಪ್ರಕರಣ ಪತ್ತೆಯಾಗಿದ್ದು, ಐರ್ಲೆಂಡ್ ನಿಂದ ಆಗಮಿಸಿದ 34 ವರ್ಷದ ವ್ಯಕ್ತಿಯಲ್ಲಿ ಸೋಂಕು ಇರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಚಂಡೀಗಢದಲ್ಲಿ 20 ವರ್ಷದ ವ್ಯಕ್ತಿಗೆ ಓಮಿಕ್ರಾನ್ ಸೋಂಕು ಇರುವುದು ಗೊತ್ತಾಗಿದ್ದು, ಈತ ಇಟಲಿಗೆ ಪ್ರಯಾಣಿಸಿದ ಹಿನ್ನಲೆಯನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕದಲ್ಲಿ ಮೂರನೇ ಓಮಿಕ್ರಾನ್ ಪ್ರಕರಣ ವರದಿಯಾಗಿದ್ದು, ದಕ್ಷಿಣ ಆಫ್ರಿಕಾದಿಂದ ಆಗಮಿಸಿದ 34 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಸೋಂಕಿತನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಟ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆಂಧ್ರ ಪ್ರದೇಶದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ
* ಐರ್ಲೆಂಡ್ ನಿಂದ ಹೊರಟಿದ್ದ 34 ವರ್ಷದ ವ್ಯಕ್ತಿಯು ಮೊದಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು.
* ನವೆಂಬರ್ 27ರಂದು ಅದೇ ಪ್ರಯಾಣಿಕ ವಿಶಾಖಪಟ್ಟಣಂಗೆ ಆಗಮಿಸಿದರು.
* ಆಂಧ್ರ ಪ್ರದೇಶದ ವಿಜಿಯನಗರಂನಲ್ಲಿ ನಡೆಸಿದ RT-PCR ಪರೀಕ್ಷೆಯಲ್ಲಿ ವ್ಯಕ್ತಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.
* ತದನಂತರ ಅವರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ನಡೆಸಲು ಹೈದರಾಬಾದ್‌ನಲ್ಲಿರುವ ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲಿಕ್ಯುಲರ್ ಬಯಾಲಜಿಗೆ (CSIRCCMB) ಕಳುಹಿಸಲಾಯಿತು, ಅಲ್ಲಿ ಸೋಂಕಿನಿಗೆ ಕೊರೊನಾವೈರಸ್ ಹೊಸ ರೂಪಾಂತರ ಒಮಿಕ್ರಾನ್ ಅಂಟಿಕೊಂಡಿರುವುದು ದೃಢಪಟ್ಟಿದೆ.

ಚಂಡೀಗಢದಲ್ಲಿ ಪತ್ತೆಯಾದ ಓಮಿಕ್ರಾನ್ ಪ್ರಕರಣ
* ಇಟಲಿಯಿಂದ ಹೊರಟ ವ್ಯಕ್ತಿಯು ನವೆಂಬರ್ 22ರಂದು ಭಾರತಕ್ಕೆ ಆಗಮಿಸಿದರು.
* ಡಿಸೆಂಬರ್ 1ರಂದು ಅವರನ್ನು ಕೊವಿಡ್-19 ಪರೀಕ್ಷೆಗೊಳಪಡಿಸಿದ ಸಂದರ್ಭದಲ್ಲಿ ಅವರಿಗೆ ಸೋಂಕು ಇರುವುದು ಪತ್ತೆಯಾಯಿತು. ಮಾದರಿಯ ಜೀನೋಮ್ ಸೀಕ್ವೆನ್ಸಿಂಗ್ ನಡೆಸಿದಾಗ ಅದು ಓಮಿಕ್ರಾನ್ ತಳಿ ಎಂಬುದು ದೃಢಪಟ್ಟಿತು.
* ಈ ರೋಗಿಯಲ್ಲಿ ಯಾವುದೇ ರೀತಿ ಲಕ್ಷಣಗಳು ಕಂಡು ಬಂದಿರಲಿಲ್ಲ
* ಪ್ರಸ್ತುತ ಸೋಂಕಿತನನ್ನು ಕ್ವಾರೆಂಟೇನ್ ನಲ್ಲಿ ಇರಿಸಲಾಗಿದೆ.
* ಈ ಸೋಂಕಿತನು ಪೂರ್ಣ ಪ್ರಮಾಣದಲ್ಲಿ ಫೈಜರ್ ಲಸಿಕೆ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

ದೇಶದಲ್ಲಿ ಓಮಿಕ್ರಾನ್ ರೋಗದ ಭಯ
* ಭಾರತದಲ್ಲಿ ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದೆ
* ಶನಿವಾರ, ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣದ ಇತಿಹಾಸ ಹೊಂದಿರುವ 35 ವರ್ಷದ ವ್ಯಕ್ತಿಯೊಬ್ಬರಿಗೆ ಓಮಿಕ್ರಾನ್ ಪತ್ತೆಯಾಗಿದೆ. ದೆಹಲಿಯಲ್ಲಿ ಹೊಸ COVID-19 ರೂಪಾಂತರದ ಎರಡನೇ ಪ್ರಕರಣ ವರದಿಯಾಗಿದ್ದು, ಕಳೆದ ವಾರ, ತಾಂಜಾನಿಯಾದಿಂದ ದೆಹಲಿಗೆ ಆಗಮಿಸಿದ 37 ವರ್ಷದ ಸಂಪೂರ್ಣ ಲಸಿಕೆ ಪಡೆದ ವ್ಯಕ್ತಿಗೆ ಸೋಂಕು ಪತ್ತೆಯಾಗಿದ್ದು, ಅದು ಮೊದಲ ಪ್ರಕರಣವಾಗಿತ್ತು.
* ಭಾರತದಲ್ಲಿ ಮಹಾರಾಷ್ಟ್ರ ದೇಶದಲ್ಲಿ ಅತಿಹೆಚ್ಚು ಒಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿದ್ದು, ಈವರೆಗೂ 17 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 9 ಪ್ರಕರಣಗಳನ್ನು ವರದಿ ಮಾಡಿರುವ ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ. ಗುಜರಾತ್ ಮತ್ತು ಕರ್ನಾಟಕದಲ್ಲಿ ಇದುವರೆಗೆ ಮೂರು ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ದೆಹಲಿಯಲ್ಲಿ ಎರಡು ಓಮಿಕ್ರಾನ್ ಪ್ರಕರಣಗಳಿದ್ದರೆ, ಕೇರಳ, ಆಂಧ್ರಪ್ರದೇಶ ಮತ್ತು ಚಂಡೀಗಢದಲ್ಲಿ ತಲಾ ಒಂದು ಪ್ರಕರಣಗಳಿವೆ.
* ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದೇಶದಿಂದ ವಾಪಸ್ಸಾದ ಪ್ರಯಾಣಿಕರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ, ಆದರೆ ಅದು ರೂಪಾಂತರ ತಳಿ ಓಮಿಕ್ರಾನ್ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಈ ಹಿನ್ನೆಲೆ ಅವರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ನಡೆಸಲು ರವಾನಿಸಲಾಗಿದ್ದು, ವರದಿ ಬಂದ ನಂತರ ಸ್ಪಷ್ಟವಾಗಲಿದೆ.
* ಕಳೆದ ಎಂಟು ದಿನಗಳಲ್ಲಿ ಕನಿಷ್ಠ 1,349 ಜನರು ಹೊರ ರಾಜ್ಯಗಳಿಂದ ಮಹಾರಾಷ್ಟ್ರದ ರಾಯಗಡಕ್ಕೆ ಆಗಮಿಸಿದ್ದು, ಒಮಿಕ್ರಾನ್ ಹೆಚ್ಚುತ್ತಿರುವುದರ ಹಿನ್ನೆಲೆಜಿಲ್ಲಾ ಆರೋಗ್ಯ ಇಲಾಖೆಯು ಈ ಪ್ರಮಾಣಿಕರ ಮೇಲೆ ನಿಗಾ ಇರಿಸಿದೆ.

ಓಮಿಕ್ರಾನ್ ಹರಡುವಿಕೆ ಬಗ್ಗೆ ಎಚ್ಚರಿಕೆ ನೀಡಿದ WHO
ಕೊರೊನಾವೈರಸ್ ಹೊಸ ತಳಿ ಓಮಿಕ್ರಾನ್ ಈ ಮೊದಲಿನ ಡೆಲ್ಟಾ ತಳಿಗಿಂತಲೂ ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಕೊೊವಿಡ್-19 ಲಸಿಕೆ ಪ್ರಭಾವವನ್ನು ಮೀರಿ ಹರಡುವ ಓಮಿಕ್ರಾನ್, ಕಡಿಮೆ ರೋಗದ ಲಕ್ಷಣಗಳನ್ನು ಹೊಂದಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ ವರ್ಷದ ಆರಂಭದಲ್ಲಿ ಡೆಲ್ಟಾ ತಳಿಯು ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. ಓಮಿಕ್ರಾನ್ ತಳಿಯು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದ್ದು, ಈವರೆಗೂ 63 ರಾಷ್ಟ್ರಗಳಿಗೆ ಹರಡಿದೆ.
ಲಸಿಕೆಯಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಹಾಗೂ ಸೋಂಕಿನ ಹರಡುವಿಕೆ ವೇಗವನ್ನು ಹೆಚ್ಚಿಸುವ ಶಕ್ತಿಯನ್ನು ಓಮಿಕ್ರಾನ್ ಹೊಂದಿದೆ ಎಂದು ದೃಢವಾಗಿ ಹೇಳುವುದಕ್ಕೆ ಖಚಿತವಾದ ಹೆಚ್ಚುವರಿ ಅಂಕಿ-ಅಂಶಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. ಆದರೆ ಓಮಿಕ್ರಾನ್ ತಳಿಯು ಡೆಲ್ಟಾ ತಳಿಗಿಂತ ಹೆಚ್ಚು ವೇಗವಾಗಿ ಹರಡುತ್ತಿದೆ ಎಂಬುದನ್ನು ಚಿತ್ರ ಸಮೇತವಾಗಿ ಇಲ್ಲಿ ವಿವರಿಸಲಾಗಿದೆ.












Click it and Unblock the Notifications