ನಾನು ನಿನ್ನ ಅಪ್ಪನಲ್ಲ : ತಪ್ಪೊಪ್ಪಿಕೊಂಡ ಪಾದ್ರಿ
ಹದಿನೆಂಟಕ್ಕೆ ಕಾಲಿಟ್ಟ ತುಂಬು ಯೌವನದ ಯುವತಿಯೊಬ್ಬಳು, ಕಾಮನೆಗಳನ್ನು ಕೆರಳಿಸುವ ಚಳಿಗಾಲದಲ್ಲಿ ಭರ್ತಿ ಕಮಾಯಿಸುವ ಡಾಕ್ಟರ್‌ನೊಬ್ಬನ ಜೊತೆ ಡೇಟಿಂಗ್ ಮಾಡಲು ಶುರು ಮಾಡುತ್ತಾಳೆ. ಮೈಮರೆತ ಮನಸ್ಸು ಅರಿವಿಗೆ ಬರುವ ಹೊತ್ತಿಗೆ ಆಕೆ ಗರ್ಭಿಣಿಯಾಗಿಬಿಡುತ್ತಾಳೆ. ಇಬ್ಬರಿಗೂ ಏನು ಮಾಡಬೇಕೆಂದು ತಿಳಿಯದ ಇಬ್ಬಂದಿ ಸ್ಥಿತಿ. ಕೊನೆಗೆ ಒಂಬತ್ತು ತಿಂಗಳು ಕಳೆದೇ ಬಿಡುತ್ತವೆ.
ಇನ್ನೇನು ಯುವತಿ ಹೆರಿಗೆಗೆ ಆತನ ಆಸ್ಪತ್ರೆಯಲ್ಲಿಯೇ ದಾಖಲಾಗುವ ಹೊತ್ತಿಗೆ ಪಾದ್ರಿಯೊಬ್ಬರು ಅದೇ ಆಸ್ಪತ್ರೆಗೆ ದಾಖಲಾಗುತ್ತಾರೆ. ಅವರಿಗೆ ಯಾವುದೋ ಕಾಯಿಲೆ. ಸಾಕಷ್ಟು ವಿಚಾರ ಮಾಡಿದ ವೈದ್ಯ ಕಡೆಗೆ ಒಂದು ತೀರ್ಮಾನಕ್ಕೆ ಬರುತ್ತಾನೆ. ಪ್ರೇಮಿಗೆ ಹೆರಿಗೆಯಾದ ಕೂಡಲೆ ಮತ್ತು ಪಾದ್ರಿಯ ಆಪರೇಷನ್ ಆದಕೂಡಲೆ ಮಗುವನ್ನು ಪಾದ್ರಿಯ ಬಳಿಯಿಟ್ಟು ಪವಾಡ ಸಂಭವಿಸಿತು ಎಂದು ಹೇಳೋಣ ಎನ್ನುತ್ತಾನೆ.
ಈ ಪ್ಲಾನಿನಲ್ಲಿ ಯವತಿಗೆ ನಂಬಿಕೆ ಬರುವುದಿಲ್ಲ. ಆದರೆ, ಏನಾಗುತ್ತೋ ನೋಡೋಣ ಎಂದು ಡಾಕ್ಟರ್ ಆಕೆಗೆ ಸಮಾಧಾನ ಮಾಡುತ್ತಾನೆ. ಆಕೆಗೆ ಹೆರಿಗೆಯಾಗುತ್ತದೆ, ಪಾದ್ರಿಗೆ ಶಸ್ತ್ರಚಿಕಿತ್ಸೆಯಾಗುತ್ತದೆ. ಆ ಮಗುವನ್ನು ತಂದು ಪಾದ್ರಿಯ ಪಕ್ಕದಲ್ಲಿಟ್ಟು, "ಗುರುಗಳೇ, ಪವಾಡ ಸಂಭವಿಸಿದೆ. ನಿಮಗೆ ಗುಂಡು ಮಗುವಾಗಿದೆ" ಎಂದು ವೈದ್ಯ ಕಂಗ್ರಾಚುಲೇಟ್ ಮಾಡುತ್ತಾನೆ.
ಇದು ಹೇಗಾಯಿತು, ಸಾಧ್ಯವೇ ಇಲ್ಲ, ನಂಬಲಾರೆ ಎಂದೆಲ್ಲ ಪಾದ್ರಿ ಕೂಗಾಡಿದರೂ, "ಇದು ಕಲಿಯುಗದ ಪವಾಡ" ಎಂದೆಲ್ಲ ಹೇಳಿ ಕಡೆಗೆ ಪಾದ್ರಿಯನ್ನು ವೈದ್ಯ ಮರಳು ಮಾಡಿ ಒಪ್ಪಿಸಿಬಿಡುತ್ತಾನೆ. ಹದಿನೈದು ವರ್ಷಗಳು ಕಳೆದುಹೋಗಿಬಿಡುತ್ತವೆ. ಪಾಪಪ್ರಜ್ಞೆ ತಾಳಲಾರದೆ ಪಾದ್ರಿ, ಆ ಮಗುವಿನ ಜನ್ಮ ರಹಸ್ಯವನ್ನು ಆತನಿಗೆ ತಿಳಿಸಿಬಿಡಬೇಕೆಂದು ನಿರ್ಧರಿಸುತ್ತಾನೆ.
"ಮಗು, ನಿನಗೊಂದು ನಿಜ ಸಂಗತಿ ಹೇಳಬೇಕು. ಅದೇನೆಂದರೆ, ನಾನು ನಿನ್ನ ಅಪ್ಪ ಅಲ್ಲವೇ ಅಲ್ಲ" ಎಂದಾಗ ಮಗ ಕಕ್ಕಾಬಿಕ್ಕಿ. "ವಾಟ್, ನೀನು ನನ್ನ ಅಪ್ಪನಲ್ಲವೆ? ಹಾಗಾದ್ರೆ ನನ್ನ ಅಪ್ಪ ಯಾರು?" ಎಂದು ಕಿರುಚುತ್ತಾನೆ. ಶಾಂತ ಸ್ಥಿತಿಯಲ್ಲಿಯೇ ಇದ್ದ ಪಾದ್ರಿ, "ನಾನು ನಿನ್ನ ಅಪ್ಪನಲ್ಲ, ನಿನ್ನ ಅಮ್ಮ. ನಿನ್ನ ಅಪ್ಪ ಅಲ್ಲಿ ಫೋಟೋದಲ್ಲಿದ್ದಾರಲ್ಲ ಹಿರಿಯ ಪಾದ್ರಿ!"












Click it and Unblock the Notifications