ನರೇಗಾ ಅಡಿ ಕೆಲಸ ನೀಡಿ ಗುಳೆ ತಡೆದ ಕೊಪ್ಪಳ ಜಿಲ್ಲಾ ಪಂಚಾಯಿತಿ
ಕೊಪ್ಪಳ, ಏಪ್ರಿಲ್ 27; ಬೇಸಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಕೆಲಸ ಸಿಗದೆ ಜನರು ಗುಳೆ ಹೋಗುತ್ತಿದ್ದರು. ಆದರೆ ಕೊಪ್ಪಳ ಜಿಲ್ಲಾ ಪಂಚಾಯತಿ ಉತ್ತಮವಾದ ಯೋಜನೆ ರೂಪಿಸಿ, ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಜನರಿಗೆ ಕೆಲಸ ನೀಡಿದೆ. ಇದರಿಂದಾಗಿ ಗುಳೆ ತಪ್ಪಿದ್ದು, ಜನರು ಮೇ 10ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು ಸಹ ಸಹಾಯಕವಾಗಿದೆ.
ನರೇಗಾ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ನಿತ್ಯ ಲಕ್ಷಕ್ಕೂ ಹೆಚ್ಚು ಜನರಿಗೆ ಕೆಲಸ ನೀಡಲಾಗಿದ್ದು, ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಏಪ್ರಿಲ್ 26ರ ಮಾಹಿತಿ ಅನ್ವಯ ರಾಜ್ಯದಲ್ಲಿ ನರೇಗಾ ಯೋಜನೆಯಡಿ 9,15,433 ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಕೊಪ್ಪಳ ಜಿಲ್ಲೆಯಲ್ಲೇ ಅತೀ ಹೆಚ್ಚು ಅಂದರೆ 1,08,389 ಜನರಿಗೆ ಕೆಲಸ ನೀಡಲಾಗಿದೆ.

ಕೊಪ್ಪಳ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ ರಾಯಚೂರು 1,05,816 ಜನರಿಗೆ ಕೆಲಸ ನೀಡಿ ದ್ವಿತೀಯ ಸ್ಥಾನ ಪಡೆದಿದೆ. ಬೆಳಗಾವಿ ಜಿಲ್ಲೆಯು 94,590 ಜನರಿಗೆ ಕೆಲಸ ನೀಡಿ ತೃತೀಯ ಸ್ಥಾನವನ್ನು ಪಡೆದಿದೆ. ಬಳ್ಳಾರಿ 4, ಗದಗ 5 ಮತ್ತು ವಿಜಯನಗರ ಜಿಲ್ಲೆ 6ನೇ ಸ್ಥಾನವನ್ನು ಪಡೆದಿದೆ.
ಗುಳೆ ತಡೆಯುವಲ್ಲಿ ಯಶಸ್ವಿ: ಬೇಸಿಗೆ ಅವಧಿಯಲ್ಲಿ ಪ್ರತಿ ವರ್ಷ ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ಊರಲ್ಲಿ ಕೆಲಸವಿಲ್ಲದ ಕಾರಣ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಮಾರ್ಗದರ್ಶನದಲ್ಲಿ ನರೇಗಾ ಯೋಜನೆಯಡಿ ಈ ಬಾರಿ ಐಇಸಿ ಚಟುವಟಿಕೆಯಡಿ ಹೆಚ್ಚು ಪ್ರಚಾರ ಕಾರ್ಯಕ್ರಮಗಳನ್ನು ಮಾಡಿ ಕೂಲಿಕಾರರಿಗೆ ಅಗತ್ಯ ಮಾಹಿತಿ ನೀಡಲಾಗಿದೆ.

ಏಪ್ರಿಲ್ 1ರಿಂದ ನರೇಗಾ ಕೂಲಿ ಮೊತ್ತವನ್ನು 316 ರೂ.ಗೆ ಹೆಚ್ಚಳ ಮಾಡಲಾಗಿದೆ. ಈ ಬಗ್ಗೆ ಕೂಲಿಕಾರರಿಗೆ ಅರಿವು ಮೂಡಿಸಿ ಯೋಜನೆಗೆ ಹೆಚ್ಚು ಜನರನ್ನು ಕರೆತಂದು ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆಲಸ ನೀಡಲಾಗುತ್ತಿದೆ. ಬೆಳಗಾವಿ ಹಾಗೂ ಕಲಬುರಗಿ ವಿಭಾಗ ವ್ಯಾಪ್ತಿಯ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಿರುವ ಕಾರಣ ಕೊಪ್ಪಳ ಭಾಗದ ಜನರು ಗುಳೆ ಬಿಟ್ಟು ನರೇಗಾದಡಿ ತಮ್ಮ ಊರಿನಲ್ಲೇ ಕೆಲಸ ಮಾಡುತ್ತಿದ್ದಾರೆ.
ಈ ಬಾರಿಯ ಬೇಸಿಗೆಯಲ್ಲಿ ವಿಧಾನಸಭೆ ಚುನಾವಣೆ ಸಹ ಬಂದಿದೆ. ಉದ್ಯೋಗ ಅರಸಿ ಜನರು ಗುಳೆ ಹೋಗದ ಕಾರಣ ತಮ್ಮ ಗ್ರಾಮದಲ್ಲಿಯೇ ಮತದಾನ ಮಾಡಲು ಅವಕಾಶ ಸಿಕ್ಕಿದೆ. ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ ಉತ್ತಮ ಮತದಾನ ಆದರೂ ಕೆಲ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಕಡಿಮೆ ಆಗಿತ್ತು. ನರೇಗಾದಡಿ ಕೊಪ್ಪಳ ಜಿಲ್ಲೆಯ 153 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಲಿಕಾರರು ಕೆರೆ ಹೂಳೆತ್ತುವುದು, ನಾಲಾ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ.
ಈ ಕಾಮಗಾರಿ ಸ್ಥಳಗಳಲ್ಲಿ ಕೂಲಿಕಾರರಿಗೆ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ ಇವಿಎಂ, ವಿವಿಪ್ಯಾಟ್ ಬಳಕೆ ಕುರಿತು ಪ್ರಾತ್ಯಕ್ಷಿಕೆ ನೀಡಿ ಅಣಕು ಮತದಾನ ಮಾಡಿಸುವುದು, ಮತದಾನ ಜಾಗೃತಿ ಗೀತೆಗಳನ್ನು ಪ್ರಚುರ ಪಡಿಸುವುದು ಹಾಗೂ ಕೂಲಿಕಾರರಿಗೆ ಮತದಾನದ ಮಹತ್ವ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುತ್ತಿದೆ. ಇದರಿಂದ ಮತದಾನ ಪ್ರಮಾಣ ಹೆಚ್ಚಳಕ್ಕೂ ಜಿಲ್ಲಾಡಳಿತಕ್ಕೆ ಸಹಕಾರಿಯಾಗಿದೆ.
ಈ ಕುರಿತು ಮಾತನಾಡಿದ ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ, "ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿ ಜನ ಕೆಲಸ ಅರಸಿ ಗುಳೆ ಹೋಗುತ್ತಿದ್ದರು. ಹೀಗಾಗಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಪರಿಣಾಮಕಾರಿ ಅನುಷ್ಠಾನದಿಂದ ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆ ಹೆಚ್ಚು ಮಾನವ ದಿನಗಳ ಸೃಜನೆ ಮಾಡಲು ಅನುಕೂಲವಾಗಿದೆ. ನರೇಗಾದಿಂದ ಜನರ ಗುಳೆಯೂ ತಪ್ಪಿದೆ. ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಕಳೆದ ಒಂದು ತಿಂಗಳಿಂದ ನಿರಂತರವಾಗಿ ಮಾಡುಲಾಗುತ್ತಿದೆ" ಎಂದು ಹೇಳಿದರು.












Click it and Unblock the Notifications