
ಗ್ರಾಮ ಲೆಕ್ಕಿಗರ ನೇಮಕಾತಿ; ಸ್ಪರ್ಧಾತ್ಮಕ ಪರೀಕ್ಷೆ ಹೇಗಿರಲಿದೆ?
ಬೆಂಗಳೂರು, ಅಕ್ಟೋಬರ್ 17; ಕರ್ನಾಟಕ ಸರ್ಕಾರ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಕುರಿತು ಸಲಹೆ ನೀಡಲು ಸಲಹಾ ಸಮಿತಿ ರಚನೆ ಮಾಡಿತ್ತು.
ಈ ಸಲಹಾ ಸಮಿತಿಗೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಅಧ್ಯಕ್ಷರಾಗಿದ್ದರು. ಅಕ್ಟೋಬರ್ 14ರಂದು ಪ್ರಾದೇಶಿಕ ಆಯುಕ್ತರು ಬೆಂಗಳೂರು ವಿಭಾಗ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಗ್ರಾಮ ಲೆಕ್ಕಿಗ ನೇಮಕಾತಿ; ಸಮಿತಿ ರಚನೆ ತೀರ್ಮಾನ ಸ್ವಾಗತಿಸಿದ ಶಾಸಕ
ಸಭೆಯಲ್ಲಿ ಚರ್ಚಿಸಲಾದ ವಿಷಯಕ್ಕೆ ಸಂಬಂಧಿಸಿದಂತೆ ಸದಸ್ಯರ ಅಭಿಪ್ರಾಯ ಮತ್ತು ಸಲಹೆಗಳನ್ನು ಕೋರಲಾಗಿದೆ. ಈ ಸಭೆಯಲ್ಲಿ ಪರೀಕ್ಷಾ ವಿಧಾನ ಹೇಗಿರಬೇಕು?, ಅಂಕಗಳ ಪರಿಗಣನೆ ಹೇಗೆ?, ಪರೀಕ್ಷೆ ಆಫ್‌ಲೈನ್‌ನಲ್ಲಿ ನಡೆಸಬೇಕು, ಪರೀಕ್ಷೆಯ ಪಠ್ಯ ವಿಷಯ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆದಿದೆ.
ಗ್ರಾಮ ಲೆಕ್ಕಿಗರ ನೇಮಕಾತಿಯಲ್ಲಿ ಬದಲಾವಣೆ, ಸ್ಪರ್ಧಾತ್ಮಕ ಪರೀಕ್ಷೆ?
ಸರ್ಕಾರ ತನ್ನ ಆದೇಶದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಗ್ರಾಮಲೆಕ್ಕಿಗರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಸಲಹೆ ನೀಡಲು ಸಲಹಾ ಸಮಿತಿಯನ್ನು ರಚನೆ ಮಾಡಲು ತಿಳಿಸಿತ್ತು.
ಗಡಿಜಿಲ್ಲೆ ಚಾಮರಾಜನಗರದ 189 ಹಳ್ಳಿ ಇತಿಹಾಸ ಬರೆದ ಗ್ರಾಮ ಲೆಕ್ಕಿಗ
ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಆಯುಕ್ತರು, ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಸದಸ್ಯರಾಗಿರುತ್ತಾರೆ. ಉಳಿದಂತೆ ಬೆಂಗಳೂರು ಗ್ರಾಮಾಂತರ, ಮೈಸೂರು, ಬೆಳಗಾವಿ, ಯಾದಗಿರಿ ಜಿಲ್ಲಾಧಿಕಾರಿಗಳು ಸದಸ್ಯರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯದರ್ಶಿಗಳು ಸಮಿತಿಯ ವಿಶೇಷ ಆಹ್ವಾನಿತರು.
ಸಭೆಯಲ್ಲಿ ಚರ್ಚಿಸಿದಂತೆ ಒಟ್ಟು 6 ಅಂಶಗಳಲ್ಲಿ ಸದಸ್ಯರ ಅಭಿಪ್ರಾಯವನ್ನು ಕೇಳಲಾಗಿದೆ. ಪರೀಕ್ಷೆಯ ಪಠ್ಯ ವಿಷಯ; ಬಹು ಆಯ್ಕೆ ಪ್ರಶ್ನೆ ಪತ್ರಿಕೆ ವಿವರಗಳನ್ನು ಸಹ ನೀಡಿ, ಸದಸ್ಯರ ಅಭಿಪ್ರಾಯವನ್ನು ಕೇಳಲಾಗಿದೆ.

1. ಸ್ಪರ್ಧಾತ್ಮಕ ಪರೀಕ್ಷಾ ಶೈಲಿ - ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸುವ ಅಂಕಗಳನ್ನು ಪರಿಗಣಿಸುವ ಬಗ್ಗೆ.
2. ಸ್ಪರ್ಧಾತ್ಮಕ ಪರೀಕ್ಷೆಯನ್ನುಆಫ್‌ಲೈನ್ ಮುಖಾಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸುವ ಬಗ್ಗೆ.
3 ಪರೀಕ್ಷೆಯ ಪಠ್ಯ ವಿಷಯ; ಬಹು ಆಯ್ಕೆ ಪ್ರಶ್ನೆ ಪತ್ರಿಕೆ. ಪ್ರಶ್ನೆ ಪತ್ರಿಕೆ-1 ಅವಧಿ 2 ಗಂಟೆಗಳು. ಸಾಮಾನ್ಯ ಜ್ಞಾನ 25 ಅಂಕಗಳು. ಕಂಪ್ಯೂಟರ್ ಜ್ಞಾನ 25 ಅಂಕಗಳು. ಸಾಮಾನ್ಯ ಕನ್ನಡ 25 ಅಂಕಗಳು. ಸಾಮಾನ್ಯ ಇಂಗ್ಲೀಶ್ 25 ಅಂಕಗಳು. ಒಟ್ಟು 100 ಅಂಕಗಳು.
ಪ್ರಶ್ನೆ ಪತ್ರಿಕೆ -2 ಅವಧಿ 2 ಗಂಟೆಗಳು. ಅಂಕ ಗಣಿತ 25 ಅಂಕಗಳು. ಅಂಕಿ ಅಂಶಗಳು 25 ಅಂಕಗಳು. ತಾರ್ಕಿಕ ವಿಷಯಗಳು 25 ಅಂಕಗಳು. ಕಂದಾಯ ನಿಯಮಗಳು 25 ಅಂಕಗಳು. ಒಟ್ಟು ಅಂಕಗಳು 100 ಅಂಕಗಳು.
4. ಸ್ಪರ್ಧಾತ್ಮಕ ಪರೀಕ್ಷೆಯನ್ನುಆಯ್ಕೆ ಪ್ರಾಧಿಕಾರದ ವತಿಯಿಂದ ಜಿಲ್ಲಾ ಮಟ್ಟದಲ್ಲಿ ನಡೆಸುವುದು.
5. ಕರ್ನಾಟಕ ಜನರಲ್ ಸರ್ವೀಸಸ್ (ರೆವಿನ್ಯೂ ಸಬಾರ್ಡಿನೇಟ್ ಬ್ರ್ಯಾಂಚ್) ಕೇಡರ್ & ರಿಕ್ರ್ಯೂಟ್‌ಮೆಂಟ್ (ಅಮೆಂಡ್‌ಮೆಂಟ್) ನಿಯಮಗಳು, 2009ರಲ್ಲಿನ ಗ್ರಾಮಲೆಕ್ಕಿಗ ವೃಂದದ ಕಾಲಂ ನಂ 3ರಲ್ಲಿ ನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಎಂದು ಸೇರ್ಪಡೆಗೊಳಿಸುವುದು.
6. ರೋಸ್ಟರ್ ಪದ್ಧತಿಯನ್ನು ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 08 ಸೆಹಿಮ 1995, ಬೆಂಗಳೂರು ದಿನಾಂಕ 20/6/1995ರಂತೆ ಹಾಗೂ ತರುವಾಯ ಕಾಲಕಾಲಕ್ಕೆ ಆಗಿರುವ ತಿದ್ದುಪಡಿಗಳಂತೆ ನಿರ್ವಹಿಸುವುದು.
ಪ್ರಸ್ತುತ ಗ್ರಾಮ ಲೆಕ್ಕಿಗ ನೇಮಕಾತಿ ಅಭ್ಯರ್ಥಿಗಳು ದ್ವೀತಿಯ ಪಿಯುಸಿ ಪರೀಕ್ಷೆ ಅಥವಾ CBSE ಅಥವಾ ICSE ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಗರಿಷ್ಕ ಅಂಕಗಳ (On merit)ಆಧಾರದ ಮೇಲೆ ಆಯಾಯ ಮೀಸಲಾತಿ ಪ್ರವರ್ಗಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗುತ್ತಿದೆ ಮತ್ತು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ಆಯ್ಕೆ/ ನೇಮಕಾತಿ ಪ್ರಾಧಿಕಾರವಾಗಿರುತ್ತಾರೆ.
ಆದರೆ ಈಗ ಕರ್ನಾಟಕ ಸರ್ಕಾರ ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ಗ್ರಾಮ ಲೆಕ್ಕಿಗರ ನೇಮಕಾತಿ ಮಾಡಲು ತೀರ್ಮಾನಿಸಿದೆ. ಈ ಹಿನ್ನಲೆಯಲ್ಲಿ ವರದಿ ನೀಡಲು ಸಮಿತಿ ರಚನೆ ಮಾಡಿದೆ.