UPSC ESE ಪ್ರಿಲಿಮ್ಸ್ 2026ರ ಫಲಿತಾಂಶ ಪ್ರಕಟ: ರಿಸಲ್ಟ್ ಹಾಗೂ ಮುಖ್ಯ ಪರೀಕ್ಷೆಯ ಸಂಪೂರ್ಣ ಮಾಹಿತಿ ಇಲ್ಲಿದೆ
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (UPSC) 2026ನೇ ಸಾಲಿನ ಇಂಜಿನಿಯರಿಂಗ್ ಸೇವೆಗಳ ಪ್ರಾಥಮಿಕ ಪರೀಕ್ಷೆಯ (UPSC ESE Prelims 2026) ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ಫೆಬ್ರವರಿ 8, 2026 ರಂದು ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ಈ ಮಹತ್ವದ ಪರೀಕ್ಷೆಗೆ ಹಾಜರಾಗಿದ್ದ ಸಾವಿರಾರು ಅಭ್ಯರ್ಥಿಗಳು ಇದೀಗ ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ ಮೂಲಕ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೇಡ್ ಎ ಮತ್ತು ಗ್ರೇಡ್ ಬಿ (Group A and Group B) ಇಂಜಿನಿಯರಿಂಗ್ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದೀಗ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮುಂದಿನ ಹಂತವಾದ 'ಮುಖ್ಯ ಪರೀಕ್ಷೆ'ಗೆ (Mains Exam) ಹಾಜರಾಗಲು ಅರ್ಹರಾಗಿದ್ದಾರೆ.

ಫಲಿತಾಂಶವನ್ನು ಚೆಕ್ ಮಾಡುವುದು ಹೇಗೆ?
ಫಲಿತಾಂಶವನ್ನು ನೋಡಲು ಅಭ್ಯರ್ಥಿಗಳು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಬಹುದು:
1. ಮೊದಲಿಗೆ ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ upsc.gov.in ಗೆ ಭೇಟಿ ನೀಡಿ.
2. ಮುಖಪುಟದಲ್ಲಿ ಕಾಣುವ 'UPSC ESE Prelims Result 2026' ಲಿಂಕ್ ಮೇಲೆ ಕ್ಲಿಕ್ ಮಾಡಿ.
3. ಈಗ ಹೊಸ ಪಿಡಿಎಫ್ (PDF) ಪುಟವೊಂದು ತೆರೆದುಕೊಳ್ಳುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ರೋಲ್ ನಂಬರ್‌ಗಳಿರುತ್ತವೆ.
4. ಪಟ್ಟಿಯಲ್ಲಿ ನಿಮ್ಮ ರೋಲ್ ನಂಬರ್ ಇದೆಯೇ ಎಂಬುದನ್ನು ಹುಡುಕಿ (Ctrl+F) ಪರಿಶೀಲಿಸಿ.
5. ಮುಂದಿನ ರೆಫರೆನ್ಸ್‌ಗಾಗಿ ಈ ಫಲಿತಾಂಶದ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಮುಖ್ಯ ಪರೀಕ್ಷೆ ಯಾವಾಗ?
ಪ್ರಾಥಮಿಕ ಹಂತದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ 2026ರ ಜೂನ್ 21 ರಂದು ಇಂಜಿನಿಯರಿಂಗ್ ಸೇವೆಗಳ ಪರೀಕ್ಷೆಯನ್ನು ಆಯೋಜಿಸಲು ಯುಪಿಎಸ್‌ಸಿ ನಿರ್ಧರಿಸಿದೆ. ಈ ಮುಖ್ಯ ಪರೀಕ್ಷೆಯು ಅಭ್ಯರ್ಥಿಗಳ ವಿಷಯ ಜ್ಞಾನ ಮತ್ತು ತಾಂತ್ರಿಕ ಕೌಶಲ್ಯವನ್ನು ಆಳವಾಗಿ ಪರೀಕ್ಷಿಸಲಿದೆ. ಪರೀಕ್ಷೆ ಆರಂಭವಾಗುವ ಸರಿ ಸುಮಾರು ಒಂದು ವಾರಕ್ಕೂ ಮುನ್ನ ಅಭ್ಯರ್ಥಿಗಳು ತಮ್ಮ ಇ-ಪ್ರವೇಶ ಪತ್ರವನ್ನು (e-Admit Cards) ಆಯೋಗದ ಅಧಿಕೃತ ವೆಬ್‌ಸೈಟ್‌ನಿಂದಲೇ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಅಂತಿಮ ಹಂತವಾದ 'ವ್ಯಕ್ತಿತ್ವ ಪರೀಕ್ಷೆ' ( Interview) ಎದುರಿಸಬೇಕಾಗುತ್ತದೆ.
ಸಾಮಾನ್ಯವಾಗಿ ಪರೀಕ್ಷೆ ಮುಗಿದ ತಕ್ಷಣ ಕಟ್-ಆಫ್ ಅಂಕಗಳ ಬಗ್ಗೆ ಅಭ್ಯರ್ಥಿಗಳಲ್ಲಿ ಕುತೂಹಲವಿರುತ್ತದೆ. ಆದರೆ, ಯುಪಿಎಸ್‌ಸಿ ನಿಯಮಗಳ ಪ್ರಕಾರ ಪ್ರಾಥಮಿಕ ಪರೀಕ್ಷೆಯ ಅಂಕಗಳು ಹಾಗೂ ಕಟ್-ಆಫ್ ಅಂಕಗಳನ್ನು ಈಗಲೇ ಬಿಡುಗಡೆ ಮಾಡುವುದಿಲ್ಲ. ಇಂಜಿನಿಯರಿಂಗ್ ಸೇವೆಗಳ ಪರೀಕ್ಷೆ-2026 ರ ಸಂಪೂರ್ಣ ಪ್ರಕ್ರಿಯೆ ಮುಗಿದ ನಂತರ, ಅಂದರೆ ಅಂತಿಮ ಫಲಿತಾಂಶ ಪ್ರಕಟವಾದ ಬಳಿಕವಷ್ಟೇ ಅಧಿಕೃತ ವೆಬ್‌ಸೈಟ್‌ನಲ್ಲಿ ಅಂಕಗಳು ಮತ್ತು ಕಟ್-ಆಫ್ ವಿವರಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ.












Click it and Unblock the Notifications