ಖಾಸಗಿ ಅನುದಾನಿತ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಲ್ಲಿ ಬೋಧಕ ಹುದ್ದೆ ಭರ್ತಿ
ಬೆಂಗಳೂರು, ಆಗಸ್ಟ್ 04: ಬೋಧಕ ಹುದ್ದೆಯ ನೇಮಕಾತಿ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿ ಇದೆ. ಖಾಸಗಿ ಅನುದಾನಿತ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಲ್ಲಿ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ.
ಈ ಕುರಿತು ಮಾನ್ಯ ಮುಖ್ಯಮಂತ್ರಿಯವರಿಂದ ಅನುಮೋದಿತ ಟಿಪ್ಪಣಿಯನ್ನು ಪ್ರಜೀತ್ ಕೆ. ಎಂ. ನಂಬಿಯಾರ್, ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ವೆಚ್ಚ-7&8) ಬಿಡುಗಡೆ ಮಾಡಿದ್ದಾರೆ.

ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. 1987ರಿಂದ 1994-95ರ ಶೈಕ್ಷಣಿಕ ಅವಧಿಯಲ್ಲಿ ಪ್ರಾರಂಭಗೊಂಡು ಈಗಾಗಲೇ ವೇತನಾನುದಾನಕ್ಕೆ ಒಳಪಟ್ಟ ಖಾಸಗಿ ಅನುದಾನಿತ ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು ಹಾಗೂ ಪದವಿ ಕಾಲೇಜುಗಳಲ್ಲಿ ದಿನಾಂಕ 01/01/2016ರಿಂದ ದಿನಾಂಕ 31/12/2020ರವರೆಗೆ ನಿವೃತ್ತಿ, ನಿಧನ, ರಾಜೀನಾಮೆ ಹಾಗೂ ಮತ್ತಿತರ ಕಾರಣಗಳಿಂದ ಖಾಲಿಯಾಗಿರುವ ಬೋಧಕ ಹುದ್ದೆಗಳನ್ನು ಷರತ್ತುಗಳಿಗೊಳಪಟ್ಟು ಭರ್ತಿಮಾಡಿಕೊಳ್ಳಲು ಆರ್ಥಿಕ ಇಲಾಖೆಯು ಸಹಮತಿಸಿದೆ ಎಂದು ಹೇಳಿದ್ದಾರೆ.
ಹುದ್ದೆಗಳ ಭರ್ತಿಗೆ ಷರತ್ತುಗಳು
* ಹುದ್ದೆಗಳನ್ನು ಭರ್ತಿ ಮಾಡಿಕೊಂಡ ನಂತರ ನೇಮಕಾತಿ ಅನುಮೋದನೆಗಾಗಿ ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ದಿನಾಂಕ 09/04/2013ರಲ್ಲಿನ ಚೆಕ್‌ಲಿಸ್ಟ್ ಅನುಬಂಧ-3ರನ್ವಯ ಸಂಪೂರ್ಣ ಮಾಹಿತಿ/ ದಾಖಲೆಗಳೊಂದಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದು.
* ಮೇಲ್ಕಂಡಂತೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಜಾರಿಯಲ್ಲಿರುವ ಅನುದಾನ ಸಂಹಿತೆ ಮತ್ತು ಸರ್ಕಾರದ ಆದೇಶ ಮತ್ತು ಸುತ್ತೋಲೆಗಳ ನಿಯಮಗಳನ್ನು ಪಾಲಿಸಿರುವುದನ್ನು ಖಚಿತಪಡಿಸಿಕೊಳ್ಳುವುದು.
* ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಾಗ ನಿಯಮಾನುಸಾರ ರೋಸ್ಟರ್ ಬಿಂದು ಮತ್ತು ಕಲ್ಯಾಣ ಕರ್ನಾಟಕದ ಮೀಸಲಾತಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
* 2016-2017 ರಿಂದ 2023-24ನೇ ಸಾಲಿನವೆರಗೆ ವಿದ್ಯಾರ್ಥಿಗಳ ದಾಖಲಾತಿ, ಪರೀಕ್ಷಾ ಫಲಿತಾಂಶ ಮೂಲಭೂತ ಸೌಕರ್ಯಗಳು ಉತ್ತಮವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು.
* ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಶಾಲಾ/ ಕಾಲೇಜುಗಳು ಪ್ರಾರಂಭವಾದಾಗಿನಿಂದ ಅವಿಚ್ಛಿನ್ನವಾಗಿ ನಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.
* ಅನುದಾನಿತ ಶಾಲೆಗಳು ಮತ್ತು ಕಾಲೇಜುಗಳು ಆನ್‌ಲೈನ್ ಮೂಲಕ ವಿವರಗಳು ಮತ್ತು ದಾಖಲೆಗಳನ್ನು ಸಲ್ಲಿಸಲು ತಂತ್ರಾಂಶವನ್ನು ಅಭಿವೃದ್ಧಿಪಡಿಸುವುದು. ಈ ತಂತ್ರಾಂಶದ ಮೂಲಕ ಪ್ರಸ್ತಾವನೆಗಳನ್ನು ವ್ಯವಹರಿಸುವುದು.
* ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿನ ಹುದ್ದೆಗಳನ್ನು ಅನುಮೋದಿಸಲು ಪ್ರತ್ಯಾಯೋಜಿಸಲಾದ ಆದೇಶ ದಿನಾಂಕ 30/09/2011ಅನ್ನು ಹಿಂಪಡೆದು, ಹುದ್ದೆಗಳ ಅನುಮೋದನೆಗಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆಗಳನ್ನು ಸಲ್ಲಿಸುವುದು.
ಶಿಕ್ಷಣ ಸಚಿವರ ಮಾಹಿತಿ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅನುದಾನಿತ ಶಾಲೆಗಳ ನೇಮಕಾತಿ ಕುರಿತು ಮಾಹಿತಿ ನೀಡಿದ್ದರು. ಅನುದಾನಿತ ಶಾಲೆಗಳಿಗೆ 5 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು, "9 ವರ್ಷದಲ್ಲಿ ಅನುದಾನಿತ ಶಾಲೆಗೆ ಒಬ್ಬ ಶಿಕ್ಷಕರನ್ನು ಸಹ ನೇಮಕ ಮಾಡಿಲ್ಲ. ಸಂಬಳ ಕೊಡುವ ಹೊರೆ ಕಾರಣ ಸರ್ಕಾರ ನೇಮಕ ಹಾಗೆ ಉಳಿಸಿಕೊಂಡು ಬಂದಿದೆ" ಎಂದು ತಿಳಿಸಿದ್ದರು.
"2013ರಿಂದ ಇಲ್ಲಿಯ ತನಕ ಅನುದಾನಿತ ಶಾಲೆಯಲ್ಲಿ ನೇಮಕ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಅನುದಾನಿತ ಕನ್ನಡ ಮಾಧ್ಯಮ ಶಾಲೆ ಉಳಿಸಬೇಕಿದೆ. ಒಳ್ಳೆಯ ಶಿಕ್ಷಕರು ಇರುವುದು ಕನ್ನಡ ಮಾಧ್ಯಮ ಶಾಲೆಗಳಲ್ಲಿ" ಎಂದು ಹೇಳಿದ್ದರು.












Click it and Unblock the Notifications