Government employee; ಸರ್ಕಾರಿ ಉದ್ಯೋಗ ಪಡೆಯಲು ಹೊಸ ನಿಯಮ
ಬೆಂಗಳೂರು, ಡಿಸೆಂಬರ್ 21; ಕರ್ನಾಟಕ ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಆಗಿರುವ ಮಹತ್ವದ ಬದಲಾಣೆಯೊಂದರ ಮಾಹಿತಿ ಇಲ್ಲಿದೆ.
ಸರ್ಕಾರ ಶೈಕ್ಷಣಿಕ ಅರ್ಹತೆ ಮತ್ತು ಪ್ರೊಬೆಷನರಿ ಅವಧಿಯ ನಿಯಮದಲ್ಲಿ ಬದಲಾವಣೆ ತಂದಿದೆ. ಇನ್ನು ಮುಂದೆ ಕರ್ನಾಟಕದ ಸರ್ಕಾರಿ ಸೇರಲು ಅಭ್ಯರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಕಡ್ಡಾಯವಾಗಿದೆ.

ದಲಾಯತ್, ಜವಾನ ಸೇರಿದಂತೆ ಯಾವುದೇ ಗ್ರೂಪ್ 'ಡಿ' ಹುದ್ದೆಗೆ ನೇಮಕವಾಗಬೇಕಿದ್ದರೂ ಸಹ ಎಸ್‌ಎಸ್‌ಎಲ್‌ಸಿ ಅಥವ ತತ್ಸಮಾನ ವಿದ್ಯಾರ್ಹತೆ ಕಡ್ಡಾಯವಾಗಿದೆ. ಎಸ್‌ಎಸ್‌ಎಲ್‌ಸಿಗಿಂತ ಕಡಿಮೆ ವಿದ್ಯಾರ್ಹತೆ ಪರಿಗಣಿಸುವಂತಿಲ್ಲ ಎಂದು ಹೊಸ ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.
7ನೇ ತರಗತಿ ಪರಿಗಣನೆ; ಈ ಹಿಂದಿನ ನಿಯಮದಂತೆ ಸರ್ಕಾರದ ವಿವಿಧ ಇಲಾಖೆ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ದಲಾಯತ್, ವಾಹನ ಚಾಲಕರು, ಜವಾನ ಸೇರಿದಂತೆ ವಿವಿಧ ಗ್ರೂಪ್ 'ಡಿ' ಹುದ್ದೆಗಳಿಗೆ 7ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಪರಿಗಣನೆ ಮಾಡಲಾಗುತ್ತಿತ್ತು.
ಈ ವಿದ್ಯಾರ್ಹತೆ ದೃಢೀಕರಣದಲ್ಲಿ ತಪ್ಪುಗಳು ಆಗುತ್ತಿದ್ದವು. ಆದ್ದರಿಂದ ಇಂಧನ ಇಲಾಖೆಯ ಲೈನ್‌ಮೆನ್, ಸಾರಿಗೆ ನಿಗಮಗಳ ಚಾಲಕರ ನೇಮಕದಲ್ಲಿ ಈಗಾಗಲೇ ಎಸ್‌ಎಸ್‌ಎಲ್‌ಸಿ ತೇರ್ಗಡೆ ವಿದ್ಯಾರ್ಹತೆ ಕಡ್ಡಾಯಗೊಳಿಸಲಾಗಿದೆ.
ಸರ್ಕಾರ ಈಗ ಎಲ್ಲಾ ಇಲಾಖೆಗಳಲ್ಲೂ ಸಹ ಇದೇ ಮಾದರಿ ಅನುಸರಿಸಲಿದೆ. ಆದ್ದರಿಂದ ಎಸ್‌ಎಸ್‌ಎಲ್‌ಸಿ ತೇರ್ಗಡೆ ಮಾನದಂಡ ಸರ್ಕಾರಿ ಉದ್ಯೋಗ ಪಡೆಯಲು ಇನ್ನು ಮುಂದೆ ಕಡ್ಡಾಯವಾಗಲಿದೆ.
ಈ ಸಂಬಂಧ ಸರ್ಕಾರ ಈಗಾಗಲೇ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಕಾಯ್ದೆ-1978ರಲ್ಲಿ ತಿದ್ದುಪಡಿಯೊಂದಿಗೆ ಜು.1ರಂದು ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ. ಅಲ್ಲದೇ 'ಸಿ' ದರ್ಜೆ ಹುದ್ದೆಗಳ ನೇರ ನೇಮಕಕ್ಕೆ ಸಂದರ್ಶನವನ್ನು ರದ್ದುಗೊಳಿಸಿ ಸಹ ಆದೇಶಿಸಲಾಗಿದೆ.
ಇದರ ಜೊತೆಗೆ ಪ್ರೊಬೆಷನರಿ ಅವಧಿ ನಿಯಮದಲ್ಲಿಯೂ ಬದಲಾವಣೆ ಮಾಡಲಾಗಿದೆ. ನೇಮಕಾತಿ ಕಾಯಂ ಅಥವ ಬಡ್ತಿಗೆ ಮಾನದಂಡವಾಗಿ 5 ವರ್ಷ ಪ್ರೊಬೆಷನರಿ ಅವಧಿಯನ್ನು ಪರಿಗಣಿಸುವ ನಿಯಮ ಬದಲಾಯಿಸಲಾಗಿದೆ.
ಸರ್ಕಾರದಲ್ಲಿ ಇರುವ ಒಟ್ಟು ಇಲಾಖೆಗಳು 43. ಇವುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಸರ್ಕಾರ ಕಾಲ ಕಾಲಕ್ಕೆ ಭರ್ತಿ ಮಾಡುತ್ತದೆ. ಎಲ್ಲಾ ಇಲಾಖೆಗಳು ಸೇರಿ ಒಟ್ಟು ಮಂಜೂರಾಗಿರುವ ಹುದ್ದೆಗಳು 7,72,025. ಇವುಗಳಲ್ಲಿ ಅಧಿಕಾರಿ ಹುದ್ದೆಗಳು 86,309 ಮತ್ತು ಸಿಬ್ಬಂದಿ ಹುದ್ದೆಗಳು 6,85,716.
43 ಇಲಾಖೆಗಳು ಒಟ್ಟು ಸೇರಿ 2,55,920 ಹುದ್ದೆಗಳು ಖಾಲಿಯಿವೆ ಎಂಬುದು ಸದ್ಯದ ಲೆಕ್ಕಾಚಾರ. 2024ರಲ್ಲಿ ಸರ್ಕಾರ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ತಯಾರಿ ನಡೆಸಿದೆ. ಕರ್ನಾಟಕ ಲೋಕಸೇವಾ ಆಯೋಗಕ್ಕೆ ಈ ಕುರಿತು ಶೀಘ್ರವೇ ಪ್ರಸ್ತಾವನೆ ಸಲ್ಲಿಕೆಯಾಗಲಿದೆ.












Click it and Unblock the Notifications