SSLC: ಎಸ್ಎಸ್‌ಎಲ್‌ಸಿ ಆಗಿದೆಯೇ?, ತರಬೇತಿಗಳಿಗೆ ಅರ್ಜಿ ಹಾಕಿ
ಶಿವಮೊಗ್ಗ, ಮೇ 22: 2024ನೇ ಸಾಲಿನ ಎಸ್‌ಎಸ್ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶದ ಬಳಿಕ ಸ್ವಂತ ಉದ್ಯಮ ಆರಂಭಿಸಬೇಕು ಎಂಬ ಕನಸು ಹೊತ್ತ ಅಭ್ಯರ್ಥಿಗಳಿಗೆ ವಿವಿಧ ತರಬೇತಿಗಳನ್ನು ನೀಡಲಾಗುತ್ತದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.
ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್ ಇವರು ಶಿವಮೊಗ್ಗ ತರಬೇತಿ ಸಂಸ್ಥೆಯಲ್ಲಿ ದಿನಾಂಕ 1/7/2024ರಿಂದ ಆರು ತಿಂಗಳ ಅವಧಿಯ ರೆಗ್ಯುಲರ್ ಡಿಪ್ಲೊಮಾ ಆಫ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್ ತರಬೇತಿಯನ್ನು ಆಯೋಜಿಸಿದ್ದಾರೆ.

ಈ ತರಬೇತಿಗೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಅಭ್ಯರ್ಥಿಗಳಿಂದ ಮತ್ತು ಸಹಕಾರ ಸಂಘ ಹಾಗೂ ಬ್ಯಾಂಕ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿ ಪಡೆಯಲು ಕನಿಷ್ಠ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರಬೇಕು. ಖಾಸಗಿ ಅಭ್ಯರ್ಥಿಗಳಿಗೂ ಪ್ರವೇಶಕ್ಕೆ ಅವಕಾಶವಿರುತ್ತದೆ. ತರಬೇತಿ ಪಡೆಯುವ ಆಭ್ಯರ್ಥಿಗಳಿಗೆ ಮಾಸಿಕ ರೂ. 500 ಶಿಷ್ಯವೇತನ ನೀಡಲಾಗುವುದು ಹಾಗೂ ವಿಶೇಷ ತರಬೇತಿ ಅನ್ವಯ 30 ವರ್ಷದೊಳಗಿನ ಪ.ಜಾತಿ/ ಪ.ಪಂಗಡದ ಆಭ್ಯರ್ಥಿಗಳಿಗೆ ಮಾಸಿಕ ರೂ. 600 ಶಿಷ್ಯವೇತನ ನೀಡಲಾಗುತ್ತದೆ.
ಆಸಕ್ತ ಆಭ್ಯರ್ಥಿಗಳು ನಿಗದಿತ ನಮೂನೆ ಅರ್ಜಿಗಳನ್ನು ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್ ಶಿವಮೊಗ್ಗ ವಿನೋಬನಗರ 2ನೇ ಹಂತ ಇಲ್ಲಿ ಪಡೆದು, ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಜೂನ್ 15ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-248873 ಮತ್ತು 7022429440 ಸಂಪರ್ಕಿಸುವುದು.
ರೈತರ ಮಕ್ಕಳಿಗೆ ತರಬೇತಿ: ತೋಟಗಾರಿಕೆ ಇಲಾಖೆಯ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ರೈತರ ಮಕ್ಕಳಿಗೆ 01/07/2024 ರಿಂದ 31/03/2025ರವರೆಗೆ 10 ದಿನಗಳ ತರಬೇತಿ ಕಾರ್ಯಕ್ರಮವನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾ, ಹೊಸೂರು ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಎಸ್ಎಸ್ಎಲ್‌ಸಿ ಉತ್ತೀರ್ಣರಾಗಿದ್ದು, ಸ್ವಂತ ಜಮೀನುವುಳ್ಳ ಸಾಗುವಳಿ ಮಾಡುತ್ತಿರುವ ಆಸಕ್ತ ರೈತರ ಮಕ್ಕಳು ಅರ್ಜಿಗಳನ್ನು ಸಲ್ಲಿಸಬಹುದು.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಇಲಾಖೆಯ ವೆಬ್‍ಸೈಟ್ https://horticulturedir.karnataka.gov.in ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕರ ಕಚೇರಿ ಶಿವಮೊಗ್ಗ ಇಲ್ಲಿಂದ ಅಥವಾ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜೂನ್ 21ರೊಳಗಾಗಿ ಸಲ್ಲಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಶಿವಮೊಗ್ಗ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 08182-222794/9686950460 ಸಂಖ್ಯೆಗೆ ಕರೆ ಮಾಡಿ.
ಅರ್ಜಿ ಆಹ್ವಾನ: ಆಗಸ್ಟ್ 2024ನೇ ಸಾಲಿನಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸಾಗರ ಮತ್ತು ಕಾರ್ಗಲ್‍ನಲ್ಲಿ ಖಾಲಿ ಇರುವ ವೃತ್ತಿಗಳಿಗೆ ಎಸ್ಎಸ್ಎಲ್‌ಸಿ ವಿದ್ಯಾರ್ಹತೆ ಹೊಂದಿದ ಆಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಾಗರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಸ್ಎಸ್ಎಲ್‌ಸಿ ಉತ್ತೀರ್ಣರಾದವರಿಗೆ ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್, ಮೆಕ್ಯಾನಿಕ್ ಮೋಟರ್ ವೆಹಿಕಲ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್, ಐ.ಸಿ.ಟಿ.ಎಸ್.ಎಂ, ಅಡ್ವಾನ್ಸ್ ಸಿ.ಎನ್.ಸಿ ಮೆಷಿನಿಂಗ್, ಮೆಕ್ಯಾನಿಕ್ ಡೀಸೆಲ್, ಇಂಡಸ್ಟ್ರಿಯಲ್ ರೋಬೋಟಿಕ್ಸ್ ಮತ್ತು ಡಿಜಿಟಲ್ ಮ್ಯಾನುಫಾಕ್ಟರಿಂಗ್ ತರಬೇತಿ ನೀಡಲಾಗುತ್ತದೆ.
8ನೇ ತರಗತಿ ಪಾಸ್/ ಎಸ್ಎಸ್ಎಲ್‌ಸಿ ಪಾಸ್/ ಫೇಲ್ ಆದವರಿಗೆ ಡ್ರಸ್ ಮೇಕಿಂಗ್, ವೆಲ್ಡರ್ ಹುದ್ದೆಗಳಿಗೆ ಮತ್ತು ಕಾರ್ಗಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಸ್ಎಸ್ಎಲ್‌ಸಿ ಉತ್ತೀರ್ಣರಾದವರಿಗೆ ಎಲೆಕ್ಟ್ರೀಷಿಯನ್, ಫಿಟ್ಟರ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್ ವೃತ್ತಿಗಳಿಗೆ ತರಬೇತಿ ನೀಡಲಾಗುವುದು.
ಆಸಕ್ತ ಆಭ್ಯರ್ಥಿಗಳು www.city.karnataka.gov.in ಆನ್‌ಲೈನ್‌ನಲ್ಲಿ ಅಥಾವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸಾಗರ/ ಕಾರ್ಗಲ್ ಭೇಟಿ ನೀಡಿ ಜೂನ್ 3ರೊಳಗಾಗಿ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ. ಮಾಹಿತಿಗಾಗಿ 7975263812/ 9480329491 ಸಂಖ್ಯೆಗೆ ಕರೆ ಮಾಡುವುದು.












Click it and Unblock the Notifications