ಚನ್ನಪಟ್ಟಣದಲ್ಲಿ ಉದ್ಯೋಗ ಮೇಳ: ಆ. 29ಕ್ಕೆ ಸಂದರ್ಶನ, ಕೌಶಲ್ಯ ತರಬೇತಿ
ಬೆಂಗಳೂರು, ಆಗಸ್ಟ್ 28: ಚನ್ನಪಟ್ಟಣದಲ್ಲಿ ಆಗಸ್ಟ್ 30ರಂದು ರಾಮನಗರ ಜಿಲ್ಲಾ ಮಟ್ಟದ ಉದ್ಯೋಗ ಮೇಳ-2024 ನಡೆಯಲಿದೆ. 40 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಉದ್ಯೋಗ ಮೇಳದಲ್ಲಿ ಯುವಕ/ ಯುವತಿಯರು ಪಾಲ್ಗೊಳ್ಳಲು ಮನವಿ ಮಾಡಲಾಗಿದೆ. ಉದ್ಯೋಗ ಮೇಳಕ್ಕೆ ಪೂರ್ವಭಾವಿಯಾಗಿ ಸಂದರ್ಶನ, ಕೌಶಲ್ಯ ತರಬೇತಿಯನ್ನು ಆಯೋಜಿಸಲಾಗಿದೆ.
ಚನ್ನಪಟ್ಟಣದಲ್ಲಿ ನಡೆಯಲಿರುವ ಉದ್ಯೋಗ ಮೇಳದಲ್ಲಿ ಭಾಗಿಯಾಗಲು ಇಚ್ಚಿಸುವ ಉದ್ಯೋಗಾಕಾಂಕ್ಷಿಗಳಿಗೆ ಸಹಾಯಕವಾಗುವಂತೆ ಉಚಿತವಾಗಿ 'ಸಂದರ್ಶನ ಕೌಶಲ್ಯಗಳ ಕುರಿತು ಪೂರ್ವಭಾವಿ ತರಬೇತಿ ಶಿಬಿರ' ಕಾರ್ಯಕ್ರಮವನ್ನು ದಿನಾಂಕ 29-08-2024 ರಂದು ಆಯೋಜನೆ ಮಾಡಲಾಗಿದೆ.

ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಡಿಟೋರಿಯಂ ಹಾಲ್‌ನಲ್ಲಿ ಈ ಕೌಶಲ್ಯ ತರಬೇತಿ ಆಯೋಜಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಆಸಕ್ತ ಅಭ್ಯರ್ಥಿಗಳು ಆಗಮಿಸಿ ತರಬೇತಿ ಪಡೆಯಬಹುದು. ಆನ್‌ಲೈನ್ ಮೂಲಕವೂ ಕೌಶಲ್ಯ ತರಬೇತಿಯನ್ನು ಪಡೆಯುವ ವ್ಯವಸ್ಥೆ ಮಾಡಲಾಗಿದೆ.
ಆಗಸ್ಟ್ 30ರ ಶುಕ್ರವಾರ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಹಾಗೂ ರಾಮನಗರ ಜಿಲ್ಲಾಡಳಿತ ವತಿಯಿಂದ ರಾಮನಗರ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಚನ್ನಪಟ್ಟಣದಲ್ಲಿ ಆಯೋಜಿಸಲಾಗಿದೆ.
ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಲು ಇಚ್ಚಿಸುವ ಉದ್ಯೋಗಾಕಾಂಕ್ಷಿಗಳಿಗೆ ಸಹಾಯಕವಾಗಲು ಉಚಿತವಾಗಿ ಪ್ರೀ-ಇಂಟರ್ವ್ಯೂ ಓರಿಯಂಟೇಶನ್ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿದೆ. ಆಸಕ್ತರು ಪಾಲ್ಗೊಳ್ಳಬಹುದು ಎಂದು ಕರೆ ನೀಡಲಾಗಿದೆ.
ಆಗಸ್ಟ್ 30ರ ಶುಕ್ರವಾರ ನಡೆಯುವ ರಾಮನಗರ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಪ್ರವೇಶ ಉಚಿತವಾಗಿದೆ. ಉದ್ಯೋಗ ಹುಡುಕುತ್ತಿರುವವರು, ಉದ್ಯೋಗ ನೀಡುವ ಕಂಪನಿಗಳು ಯಾವುದೇ ಶುಲ್ಕವನ್ನು ಪಾವತಿ ಮಾಡದೇ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಂತಾ ನಾಯಕ ಚನ್ನಪಟ್ಟಣ ಬಾಲಕರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಆಗಸ್ಟ್ 30ರಂದು ನಡೆಯಲಿರುವ ಜಿಲ್ಲಾ ಮಟ್ಟದ ಉದ್ಯೋಗ ಮೇಳದ ತಯಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಚನ್ನಪಟ್ಟಣದಲ್ಲಿ ನಡೆಯುವ ಉದ್ಯೋಗ ಮೇಳಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದೆ. ಚನ್ನಪಟ್ಟಣ ತಾಲ್ಲೂಕಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಉದ್ಯೋಗ ಮೇಳ ನಡೆಯಲಿದೆ. ಆಸಕ್ತ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು https://skillconnect.kaushalkar.com ನಲ್ಲಿ ಹೆಸರು ನೋಂದಾಯಿಸಿಕೊಂಡು, ಮೇಳದಲ್ಲಿ ಭಾಗಿಯಾಗಬಹುದು.
ಉದ್ಯೋಗ ಮೇಳದಲ್ಲಿ 43,000ಕ್ಕೂ ಅಧಿಕ ಉದ್ಯೋಗವಕಾಶಗಳು ಲಭ್ಯವಿದ್ದು, 120ಕ್ಕೂ ಅಧಿಕ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ. ಸರ್ಕಾರದ 'ಯುವನಿಧಿ' ಗ್ಯಾರಂಟಿ ಯೋಜನೆಯಡಿ ನೋಂದಣಿಯಾದ ಅಭ್ಯರ್ಥಿಗಳಲ್ಲಿ ಕನಿಷ್ಠ 5,000 ಅಭ್ಯರ್ಥಿಗಳಿಗೆ ಉಚಿತ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿಯನ್ನು ಉದ್ಯೋಗ ಮೇಳ ಹೊಂದಿದೆ.
ಈ ಮೇಳದಲ್ಲಿ ಎಲ್ಲಾ ಕನಿಷ್ಠ ಹಾಗೂ ಗರಿಷ್ಠ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ವಿಶೇಷ ಚೇತನರಿಗೆ, ಮಹಿಳೆಯರಿಗೂ ಉದ್ಯೋಗವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ತಿಳಿಸಲಾಗಿದೆ.
ಉದ್ಯೋಗ ಮೇಳದ ಕುರಿತ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 18005999918ರ ವಿಸ್ತರಣಾ ಸಂಖ್ಯೆ 4ಕ್ಕೆ ಸಂಪರ್ಕಿಸಬೇಕು. ಈ ಉದ್ಯೋಗ ಮೇಳದಲ್ಲಿ ನೇರವಾಗಿ ಉದ್ಯಮಿಗಳಿಂದಲೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಆದ್ದರಿಂದ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ.












Click it and Unblock the Notifications