ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ: ವಿವರ, ಅರ್ಹತೆಗಳು
ಶಿವಮೊಗ್ಗ, ಅಕ್ಟೋಬರ್ 23: ಶಿವಮೊಗ್ಗದಲ್ಲಿ ಯುವ ಪರಿವರ್ತಕರು, ಯುವ ಸಮಾಲೋಚಕರ ಹುದ್ದೆಗೆ ಮತ್ತು ಸಲಹೆಗಾರರು ಹಾಗೂ ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ಅರ್ಜಿ ಸಲ್ಲಿಕೆ ಅರ್ಹತೆ ಮುಂತಾದ ಮಾಹಿತಿಗಳು ಇಲ್ಲಿವೆ. ಆಸಕ್ತ ಮತ್ತು ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
ಯುವ ಪರಿವರ್ತಕರು, ಯುವ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಜನ ಆರೋಗ್ಯ ಕೇಂದ್ರ, ಎಪಿಡಿಮಿಯಾಲಜಿ ವಿಭಾಗ, ನಿಮ್ಹಾನ್ಸ್ ಬೆಂಗಳೂರು ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಯುವ ಸ್ಪಂದನ ಕಾರ್ಯಕ್ರಮದಡಿಯಲ್ಲಿ ಕಾರ್ಯ ನಿರ್ವಹಿಸಲು ಯುವ ಪರಿವರ್ತಕರು ಮತ್ತು ಯುವ ಸಮಾಲೋಚಕರ ಹುದ್ದೆಗೆ ಅರ್ಜಿ ಕರೆಯಲಾಗಿದೆ.

ಅರ್ಜಿ ಸಲ್ಲಿಸುವವರಿಗೆ 21 ರಿಂದ 35 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಯುವ ಪರಿವರ್ತಕರು 3 ಮತ್ತು ಯುವ ಸಮಾಲೋಚಕರು 1 ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಪದವಿ ಹಾಗೂ ಮೇಲ್ಪಟ್ಟು (ಫಿಸಿಯೋಲಾಜಿ/ ಸೋಷಿಯಲ್ ವರ್ಕ್ ಪದವಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು) ಹಾಗೂ ಸಮುದಾಯದಲ್ಲಿ ಕೆಲಸ ಮಾಡಿರುವವರನ್ನು ಅಪೇಕ್ಷಿಸಲಾಗುವುದು.
ಅಭ್ಯರ್ಥಿಗಳು ಸ್ಪಷ್ಟವಾದ ಕನ್ನಡ ಉಚ್ಛಾರಣೆ, ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರಬೇಕು. ಯುವ ಪರಿವರ್ತಕರಿಗೆ ಗೌರವ ಧನವಾಗಿ ರೂ. 7000 ಹಾಗೂ ಯುವ ಸಮಾಲೋಚಕರಿಗೆ ಗೌರವ ಧನವಾಗಿ ರೂ. 9000 ನೀಡಲಾಗುತ್ತದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಕ್ರೀಡಾಂಗಣ, ಶಿವಮೊಗ್ಗ ಇಲ್ಲಿಗೆ ಸಂಪರ್ಕಿಬಹುದು.
ಗುತ್ತಿಗೆ ಆಧಾರದ ನೇಮಕಾತಿ: ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಆಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆಯಡಿ ಜಿಲ್ಲಾ ಮಟ್ಟದ ಯೋಜನಾ ನಿರ್ವಹಣಾ ತಂಡದ ಸೇವೆಯನ್ನು ಪಡೆಯಲು ಗುತ್ತಿಗೆ ಆಧಾರದಲ್ಲಿ ಸಲಹೆಗಾರರು ಹಾಗೂ ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಸಲಹೆಗಾರರು 1 ಹುದ್ದೆಗೆ ವಿದ್ಯಾರ್ಹತೆ ಬಿಎಸ್‌ಸಿ (ಕೃಷಿ) ಪದವಿ ಹಾಗೂ ಸ್ನಾತಕೋತ್ತರ ಪದವಿ, ತಾಂತ್ರಿಕ ಸಹಾಯಕರು 2 ಹುದ್ದೆಗೆ ವಿದ್ಯಾರ್ಹತೆ ಬಿಎಸ್‌ಸಿ (ಕೃಷಿ) ಪದವಿ, ಉತ್ತಮ ಕಂಪ್ಯೂಟರ್ ಪರಿಣಿತಿ, ಕೃಷಿ ಸಂಶೋಧನೆ ಹಾಗೂ ಕೃಷಿ ವಿಸ್ತರಣಾ ಕಾರ್ಯಕ್ರಮದಲ್ಲಿ ಅನುಭವ ಉಳ್ಳವರಿಗೆ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ.
ಈ ನೇಮಕಾತಿಯು ದಿನಾಂಕ 31-03-2025 ರವರೆಗೆ ಅಥವಾ ಕೃಷಿ ಆಯುಕ್ತಾಲಯದ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ. ಅಭ್ಯರ್ಥಿಗಳು ಸರ್ಕಾರಿ ಇಲಾಖೆ/ ಸಂಸ್ಥೆಗಳಿಂದ ನಿವೃತ್ತಿಯಾಗಿದ್ದಲ್ಲಿ (ಪಿಂಚಣಿ ಪಡೆಯುತ್ತಿದ್ದಲ್ಲಿ) ಈ ನೇಮಕಾತಿಗೆ ಅರ್ಹರಿರುವುದಿಲ್ಲ.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ವಿವರಿಸಿರುವ ಹುದ್ದೆಗಳಿಗೆ ಕನಿಷ್ಠ ವಯೋಮಿತಿ 18 ವರ್ಷಗಳು, ಗರಿಷ್ಠ ಸಾಮಾನ್ಯ 35, ಪ.ಜಾತಿ/ ಪ.ಪಂ/ ಪ್ರವರ್ಗ-1 40 ವರ್ಷಗಳು.
ಆಸಕ್ತರು ಅರ್ಜಿ ನಮೂನೆಯನ್ನು ಜಂಟಿ ನಿರ್ದೇಶಕರ ಕಚೇರಿ ಓಟಿ ರಸ್ತೆ ಶಿವಮೊಗ್ಗ ಇಲ್ಲಿಂದ ಅರ್ಜಿಯನ್ನು ಪಡೆದು ನವೆಂಬರ್ 5ರೊಳಗೆ ಸೀಲು ಮಾಡಿದ ಲಕೋಟೆಯಲ್ಲಿ ಖುದ್ದಾಗಿ/ ನೋಂದಣಿ ಅಂಚೆ ಮೂಲಕ ಜಂಟಿ ಕೃಷಿ ನಿರ್ದೇಶಕರು ಶಿವಮೊಗ್ಗ ಇವರಿಗೆ ಸಲ್ಲಿಸಬಹುದು.
ತರಬೇತಿ ಪಡೆಯಲು ಅರ್ಜಿ ಆಹ್ವಾನ: ತೋಟಗಾರಿಕೆ ಇಲಾಖೆಯು ಮಡಿಕೇರಿಯ ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರದಲ್ಲಿ ದಿನಾಂಕ 05.11.2024 ರಿಂದ ದಿನಾಂಕ 04.02.2025ರ ವರೆಗೆ 3 ತಿಂಗಳು ಜೇನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಿದೆ.
ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ 18-35 ವಯಸ್ಸಿನ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅಭ್ಯರ್ಥಿಗಳು ಅಥವಾ ಅಭ್ಯರ್ಥಿಗಳ ತಂದೆ/ ತಾಯಿ/ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿದ್ದು, ಸ್ವಂತ ಸಾಗುವಳಿ ಮಾಡುತ್ತಿರಬೇಕು.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ತೋಟಗಾರಿಕೆ ಇಲಾಖೆಯ ವೆಬ್‌ಸೈಟ್ https://horticulturedir.karnataka.gov.in ಅಥವಾ ಶಿವಮೊಗ್ಗ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರು ಕಚೇರಿ ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಪಹಣಿ ಹಾಗು ಸೂಕ್ತ ದಾಖಲೆಗಳನ್ನು ಲಗತ್ತಿಸಿ ಅಕ್ಟೋಬರ್ 28ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-222794/ 9686950460.












Click it and Unblock the Notifications