Railway Exam: ಅಭ್ಯರ್ಥಿಗಳಿಗೆ ರೈಲ್ವೆ ಸಚಿವ ವಿ.ಸೋಮಣ್ಣ ವಿಶೇಷ ಮನವಿ..
ಬೆಂಗಳೂರು, ಏಪ್ರಿಲ್ 29: ಕರ್ನಾಟಕ ರಾಜ್ಯದಲ್ಲಿ ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಘಟನೆ ಭಾರೀ ಚರ್ಚೆ ಆಗಿತ್ತು. ಈ ವಿಚಾರ ಹಚ್ಚ ಹಸಿರಾಗಿರುವಾಗಲೇ ಭಾರತೀಯ ರೈಲ್ವೆ ಇಲಾಖೆಯು ತಾನು ನಡೆಸುವ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಕುಂಕುಮ, ಬಳೆ, ಜನಿವಾರ, ತಾಳಿ ಸೇರಿದಂತೆ ಯಾವುದೇ ಧಾರ್ಮಿಕ ಲಾಂಛನ ಧರಿಸುವಂತಿಲ್ಲ ಎಂದು ಪರೀಕ್ಷೆಗೂ ಮುನ್ನ ಆದೇಶಿಸಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸಚಿವರು ಅಭ್ಯರ್ಥಿಗಳಿಗೆ ವಿಶೇಷ ಮನವಿ ಸಹ ಮಾಡಿದ್ದಾರೆ.
ರೈಲ್ವೆ ನೇಮಕಾತಿ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು ಕುಂಕುಮ, ಬಳೆ, ಜನಿವಾರ, ತಾಳಿ ಸೇರಿದಂತೆ ಯಾವುದೇ ಧಾರ್ಮಿಕ ಲಾಂಛನಗಳನ್ನು ತೆಗೆಯುವ ಅಗತ್ಯವಿಲ್ಲ ಎಂದು ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಸಾರ್ವಜನಿಕರ ಧಾರ್ಮಿಕ ಭಾವನೆಗಳನ್ನು ಗೌರವಿಸುವ ಮತ್ತು ರಕ್ಷಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಂಡ ಕೇಂದ್ರ ಸರ್ಕಾರಕ್ಕೆ ಸಚಿವ ವಿ.ಸೋಮಣ್ಣ ಅವರು ಅಭಿನಂದನೆ ತಿಳಿಸಿದರು.

ರೈಲ್ವೆ ಇಲಾಖೆಯಿಂದ ಏಪ್ರಿಲ್ 28, 29 ಮತ್ತು ಏಪ್ರಿಲ್ 30 ರವರೆಗೆ ರೈಲ್ವೆ ಇಲಾಖೆ ನೇಮಕಾತಿಗಾಗಿ ಪರೀಕ್ಷೆ ನಡೆಯುತ್ತಿದೆ.
ಅಭ್ಯರ್ಥಿಗಳು ಜನಿವಾರ, ಮಾಂಗಲ್ಯ ಸೂತ್ರ ತೆಗೆದಿಟ್ಟು ಪರೀಕ್ಷೆ ಬರೆಯಬೇಕೆಂಬ ವಿಷಯವನ್ನು ಪರೀಕ್ಷಾ ನಿಯಮದಲ್ಲಿ ಉಲ್ಲೇಖಿಸಲಾಗಿದೆಯೆಂಬ ದೂರುಗಳು ನನಗೆ ಬಂದಿದೆ.
ಈ ಬಗ್ಗೆ ಅನೇಕ ಸಂಸದರು, ಶಾಸಕರು ಈ ನಿಷೇಧ ಸಮಸ್ಯೆ, ಜನರ ಭಾವನೆ ಕುರಿತು ಉಂಟಾಗುವ ಗೊಂದಲ ಸರಿಪಡಿಸುವಂತೆ ಮನವಿ ಮಾಡಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ವಿವಿಧ ಸಂಘಟನೆಗಳು ಈ ಬಗ್ಗೆ ನನ್ನ ಗಮನವನ್ನು ಸೆಳೆದಿರುತ್ತಾರೆ.
ಅಭ್ಯರ್ಥಿಗಳಿಗೆ ವಿ.ಸೋಮಣ್ಣ ಮನವಿ..
ಬಂದ ಎಲ್ಲ ಮನವಿ ಮೇರೆಗೆ ಸೋಮವಾರ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಈ ಬಗ್ಗೆ ಉಂಟಾಗಬಹುದಾಗಿದ್ದ ಗೊಂದಲ ನಿವಾರಿಸಲಾಗಿದೆ. ರೈಲ್ವೆ ಇಲಾಖೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಜನಿವಾರ, ಮಾಂಗಲ್ಯ ಇತ್ಯಾದಿ ಸಂಸ್ಕೃತಿಯನ್ನು ಬಿಂಬಿಸುವ ಯಾವುದೇ ವಸ್ತುವನ್ನು ಧರಿಸಿ ಬಂದಲ್ಲಿ ಅಭ್ಯರ್ಥಿಗಳಿಗೆ ತೊಂದರೆ ನೀಡಬಾರದೆಂದು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ.
ಇತರ ಎಲ್ಲಾ ಪರೀಕ್ಷಾ ನಿಯಮವನ್ನು ಪಾಲಿಸಿ, ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಸೂಚಿಸಲಾಗಿದೆ. ಪರೀಕ್ಷಾ ಅಭ್ಯರ್ಥಿಗಳು ಸಹ ನಿಯಮಾನುಸಾರ ಪರೀಕ್ಷೆ ಬರೆಯುವಂತೆ ಮನವಿ ಮಾಡುತ್ತೇನೆ. ಅಭ್ಯರ್ಥಿಗಳು ಗೊಂದಲಕ್ಕೀಡಾಗಬಾರದೆಂದು ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದಾರೆ.
ವಿಪಕ್ಷ ನಾಯಕರ ಆರ್.ಅಶೋಕ ಅವರು, ರೈಲ್ವೆ ನೇಮಕಾತಿ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು ಕುಂಕುಮ, ಬಳೆ, ಜನಿವಾರ, ತಾಳಿ ಸೇರಿದಂತೆ ಯಾವುದೇ ಧಾರ್ಮಿಕ ಲಾಂಛನಗಳನ್ನು ತೆಗೆಯುವ ಅಗತ್ಯವಿಲ್ಲ ಎಂದು ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಸಾರ್ವಜನಿಕರ ಧಾರ್ಮಿಕ ಭಾವನೆಗಳನ್ನು ಗೌರವಿಸುವ ಮತ್ತು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತ್ವರಿತ ಕ್ರಮ ಕೈಗೊಂಡಿದೆ ಎಂದು ಅಭಿನಂದನೆ ತಿಳಿಸಿದ್ದಾರೆ.
ರಾಮಲಿಂಗಾ ರೆಡ್ಡಿ ಕಿಡಿ: ಬಿಜೆಪಿ ಉತ್ತಮ ನಡೆ ಪ್ರದರ್ಶನ
ಇದೇ ವಿಚಾರ ಕುರಿತು ಇಲಾಖೆಯಿಂದ ನಿಷೇಧ ಆದೇಶ ಹೊರ ಬರುತ್ತಿದ್ದಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬಿಜೆಪಿ ನಾಯಕರ ಮೇಲೆ ಕಿಡಿ ಕಾರಿದ್ದರು. ರಾಜ್ಯದಲ್ಲಿ ಜನಿವಾರ ತೆಗೆಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕರು ರೈಲ್ವೆ ಇಲಾಖೆ ಆದೇಶದ ಕುರಿತು ಪ್ರಧಾನಿಯವರನ್ನು ದೂಷಿಸುತ್ತೀರಾ.ಕೇಂದ್ರದ ವಿರುದ್ಧ ಖಂಡಿಸಿ ಚಳವಳಿ ಮಾಡುತ್ತೀರಾ ಎಂದು ಲೇವಡಿ ಮಾಡಿದ್ದರು. ಇದರ ಬೆನ್ನಲ್ಲೆ ಬಿಜೆಪಿ ನಾಯಕರ ಮನವಿ ಮೇರೆಗೆ ಕೇಂದ್ರ ರೈಲ್ವೆ ಇಲಾಖೆಯು ಧಾರ್ಮಿಕ ಲಾಂಛನಗಳ ಧರಿಸುವುದಕ್ಕೆ ಅಡ್ಡಿ ಇಲ್ಲ ಎಂದು ಆದೇಶಿಸಿದೆ. ಈ ಮೂಲಕ ಬಿಜೆಪಿ ತಾನು ಕೇವಲ ದೂಷಿಸುವುದು ಮಾತ್ರವಲ್ಲ, ತಪ್ಪುಗಳಾದರೆ ಜನರಿಗಾಗಿ ಸರಿಪಡಿಸುವ ಕೆಲಸವನ್ನು ಮಾಡುತ್ತೇವೆ ಎಂಬ ಸಂದೇಶ ರವಾನಿಸಿದೆ.












Click it and Unblock the Notifications