90 ಗಂಟೆ ಎಸ್.ಎನ್.ಸುಬ್ರಹ್ಮಣ್ಯನ್ & 70 ಗಂಟೆ ನಾರಾಯಣ ಮೂರ್ತಿಗೆ ಭಾರತ್ ಪೇ ಕಂಪನಿ ಸಿಇಒ ಕ್ಲಾಸ್
ಬೆಂಗಳೂರು, ಜನವರಿ, 22: ಈಗಾಗಲೇ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎನ್ನುವ ಹೇಳಿಕೆ ನೀಡಿ ಇನ್ಫೋಸಿಸ್ ನಾರಾಯಣಮೂರ್ತಿ ಅವರು ಉದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇತ್ತೀಚೆಗಷ್ಟೇ ಎಲ್ & ಟಿ ಕಂಪನಿ ಅಧ್ಯಕ್ಷ ಎಸ್.ಎನ್.ಸುಬ್ರಹ್ಮಣ್ಯನ್ ಅವರು ಕೆಲಸದ ಅವಧಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದಕ್ಕೆ ಭಾರತ್ ಪೇ ಕಂಪನಿ ಸಿಇಒ ನಳಿನ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮನೆಯಲ್ಲಿ ಕುಳಿತು ಎಷ್ಟು ಹೆಂಡತಿಯ ಮುಖ ನೋಡುಕೊಂಡು ಇರುತ್ತೀರಿ. ವಾರದಲ್ಲಿ 90 ಗಂಟೆ ಕೆಲಸ ಮಾಡಿ, ಶ್ರಮವಹಿಸಿ, ದುಡಿಯಲು ಭಾನುವಾರದ ರಜೆಯನ್ನು ಕೂಡ ತ್ಯಜಿಸಿ ಎಂದು ಸುಬ್ರಹ್ಮಣ್ಯನ್ ಹೇಳಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಳಿನ್ ಯೋಗಿ ಅವರು, ಎಷ್ಟು ಅವಧಿಯ ಕೆಲಸ ಮಾಡಿದ್ದೇವೆ ಎನ್ನುವುದಕ್ಕಿಂತ ಎಷ್ಟು ಗುಣಮಟ್ಟದ ಕೆಲಸ ಮಾಡಿದ್ದೇವೆ ಎನ್ನೋದೇ ಮುಖ್ಯ ಎಂದು ಹೇಳಿ ಗಮನ ಸೆಳೆದಿದ್ದಾರೆ.

ಅಲ್ಲದೆ, ನಮ್ಮ ಕಂಪನಿ ನಮ್ಮ ಉದ್ಯೋಗಿಗಳಿಗೆ ಸುಬ್ರಹ್ಮಣ್ಯನ್ ಅಂತಹವರ ಹೇಳಿಕೆಯನ್ನು ಸಮರ್ಥಿಸಿ ಕೆಲಸ ಮಾಡಲು ಹೇಳುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ವಾರದಲ್ಲಿ 90 ಗಂಟೆ ಕೆಲಸ ಮಾಡುವುದಂತೂ ಸಾಧ್ಯವಿಲ್ಲ. ದೇಶದ ಕಾರ್ಪೋರೇಟ್ ವಲಯ ನಿರೀಕ್ಷೆಗೂ ಮೀರಿ ಬೆಳೆಯುತ್ತಿದ್ದು, ಯುವಕ & ಯುವತಿಯರಿಗೆ ತುಂಬಾ ಉದ್ಯೋಗವಕಾಶಗಳು ಸಿಗುತ್ತಲಿವೆ. ಅವರಿಗೆ ಉದ್ಯೋಗವೊಂದೇ ಎಲ್ಲವೂ ಅಲ್ಲ. ಅವರ ಅಭಿರುಚಿಗಳು ಹೆಚ್ಚಾಗಿವೆ. ಅವುಗಳನ್ನು ಗೌರವಿಸಿ ಅವರಿಂದ ಕ್ವಾಲಿಟಿ ಕೆಲಸ ಪಡೆಯಬೇಕಿದೆ ಎಂದು ಹೇಳಿದರು.
ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿ ಇರುವವರಿಂದ ಕೆಲಸದ ಕ್ವಾಲಿಟಿ ಹೆಚ್ಚಿರುತ್ತದೆ. ಅವರು ಸಂತೋಷದಿಂದಲೇ ಇಷ್ಟಪಟ್ಟು ಕೆಲಸ ಮಾಡುತ್ತಾರೆ. ಇದರಿಂದ ಅವರಿಗೂ ಲಾಭ, ಕಂಪನಿಗೂ ಲಾಭ. ಒತ್ತಾಯ ಪೂರ್ವಕವಾಗಿ ಕೆಲಸದ ಅವಧಿಯನ್ನು ಹೆಚ್ಚಳ ಮಾಡಿದರೆ ಏನು ಸಾಧ್ಯ ಇಲ್ಲ ಎಂದು ಹೇಳಿದರು.
ಇನ್ನು ಸುಬ್ರಹ್ಮಣ್ಯನ್ ಅವರ 90 ಗಂಟೆ ಕೆಲಸದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಂದು ಹೇಳಿದ್ದರು. ಇದನ್ನು ಕೂಡ ಅವರು ವಿರೋದ್ಧ ವ್ಯಕ್ತಪಡಿಸಿ ಉದ್ಯೋಗಿಗಳ ಪರ ಬ್ಯಾಟ್ ಬೀಟಿದ್ದಾರೆ.
ಇನ್ಫೋಸಿಸ್ ನಾರಾಯಣ ಮೂರ್ತಿ ಅವರು 70 ಗಂಟೆ ಕೆಲಸ ಬಗ್ಗೆ ಮೊದಲಿನಿಂದಲೂ ಹೇಳಿಕೊಂಡು ಬರುತ್ತಿದ್ದು, ಇದಕ್ಕೆ ತೀವ್ರ ವಿರೋಧಗಳು ಕೂಡ ವ್ಯಕ್ತವಾಗಿದ್ದರು. ಇದರ ಬೆನ್ನಲ್ಲೇ ಎಲ್ & ಟಿ ಕಂಪನಿ ಅಧ್ಯಕ್ಷ ಎಸ್.ಎನ್.ಸುಬ್ರಹ್ಮಣ್ಯನ್ ಅವರು ಕೂಡ ನಂದೆಲ್ಲಿ ಇಡಲಿ ನಂದಗೋಪಾಲ ಎನ್ನುವಂತೆ ಭಾನುವಾರ ಸಹಿತ 90 ಗಂಟೆ ಉದ್ಯೋಗ ಮಾಡಬೇಕು ಎಂದು ಹೇಳುವ ಮೂಲಕ ಉದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.












Click it and Unblock the Notifications