ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಏಪ್ರಿಲ್ 15ರಿಂದ ಆನ್‌ಲೈನ್ ಉದ್ಯೋಗ ಮೇಳ, ಯಾರೆಲ್ಲ ಭಾಗಿಯಾಗಬಹುದು?, ಮಾಹಿತಿ
ಮೈಸೂರು, ಏಪ್ರಿಲ್, 11: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಏಪ್ರಿಲ್ 15ರಿಂದ 30ರವರೆಗೆ ಆನ್‌ಲೈನ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ವಿವಿಯ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, 10ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿದ್ದು, ಎರಡು ಸಾವಿರ ಉದ್ಯೋಗ ಸೃಷ್ಟಿ ಆಗಲಿದೆ. ಇದಕ್ಕೆ ಎಂಕಾಂ, ಬಿಕಾಂ, ಎಂಬಿಎ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ವೇತನದ ವಿವರ ಇಲ್ಲಿದೆ
ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ 3ರಿಂದ 6 ಲಕ್ಷ ರೂಪಾಯಿಗಳವರೆಗೆ ವೇತನ ನೀಡಲಾಗುತ್ತದೆ. ಅದರಲ್ಲಿ ಮುತ್ತೂಟ್ ಫೈನಾನ್ಸ್, ಪೇಟಿಎಂ ಕಂಪನಿಗಳಲ್ಲಿ ಹೆಚ್ಚಿನ ಉದ್ಯೋಗಗಳಿವೆ. ಇಲ್ಲಿ ವರ್ಕ್ ಫ್ರಂ ಹೋಂಗೂ ಅವಕಾಶವಿದೆ. ಈ ಉದ್ಯೋಗ ಮೇಳವು ಪ್ರೊಫೈಲ್ ಇನ್ ಕಂಪನಿ ಸಹಯೋಗದಲ್ಲಿ 15 ದಿನಗಳ ಕಾಲ ನಡೆಯಲಿದೆ ಎಂದು ತಿಳಿಸಿದರು.
ವಿವಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ವಿವರ
ಇನ್ನು ಉತ್ತರ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಇದೀಗ ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ 67 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಅಲ್ಲದೇ 1 ಲಕ್ಷ ಪ್ರವೇಶಾತಿ ಗುರಿಮುಟ್ಟುವ ವಿಶ್ವಾಸವಿದೆ. ಬಳ್ಳಾರಿಯಲ್ಲಿ ವಿದ್ಯಾರ್ಥಿಗಳ ಪ್ರವೇಶವು 295ರಿಂದ 1755ಕ್ಕೇರಿದೆ. ಅದೇ ರೀತಿ ಬೀದರ್, ಬಾಗಲಕೋಟೆಯಲ್ಲೂ ಪ್ರವೇಶಾತಿ ಹೆಚ್ಚಳವಾಗಿದೆ ಎಂದು ತಿಳಿಸಿದರು.

ಉದ್ಯೋಗ ಘಟಕದ ನಿರ್ದೇಶಕಿ ಪ್ರೊ.ಆರ್.ಎಚ್.ಪವಿತ್ರಾ ಮಾತನಾಡಿ, 2021ರ ಉದ್ಯೋಗ ಮೇಳದಲ್ಲಿ 2,900 ಮಂದಿ ಭಾಗವಹಿಸಿದ್ದರು. ಆಗ 535 ಮಂದಿಗೆ ಉದ್ಯೋಗ ಲಭಿಸಿತ್ತು, ಎಂದು ತಿಳಿಸಿದರು.
ಏಪ್ರಿಲ್ 27ಕ್ಕೆ ನ್ಯಾಕ್ ಸಮಿತಿ ಭೇಟಿ
ಏಪ್ರಿಲ್ 27, 28 ಹಾಗೂ 29ರಂದು ಮುಕ್ತ ವಿವಿಗೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿಯ (ನ್ಯಾಕ್) ಸಮಿತಿ ಭೇಟಿ ನೀಡಲಿದ್ದು, ಶೇಕಡಾ 80ರಷ್ಟು ಸಿದ್ಧತೆ ಪೂರ್ಣಗೊಂಡಿದೆ ಎಂದು ಕುಲಪತಿ ಪ್ರೊ.ಶರಣಪ್ಪ ತಿಳಿಸಿದರು. ಹಾಗೆಯೇ ಎಂಸಿಎ, ಎಂಎಸ್ಸಿ ದತ್ತಾಂಶ ವಿಜ್ಞಾನ, ಭೂವಿಜ್ಞಾನ, ಎಂಎಸ್‌ಡಬ್ಲ್ಯೂ ಸೇರಿದಂತೆ 10 ಹೊಸ ಕೋರ್ಸ್‌ಗಳಿಗೆ ಅನುಮತಿ ನೀಡುವಂತೆ ಯುಜಿಸಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊಫೈಲ್ ಇನ್ ಸಂಸ್ಥೆಯ ವೆಂಕಟೇಶ್, ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಉದ್ಯಮ ಸಂಸ್ಥೆ ಸಮನ್ವಯ ಘಟಕದ ಸಂಯೋಜಕಿ ಡಾ.ಎಚ್. ರಾಜೇಶ್ವರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications