Gram Panchayat; ಪಂಚಾಯಿತಿ ಸಿಬ್ಬಂದಿಗೆ ಇ-ಹಾಜರಿ ಕಡ್ಡಾಯ
ಬೆಂಗಳೂರು, ಜನವರಿ 08: ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಇನ್ನು ಮುಂದೆ ಆನ್‌ಲೈನ್ ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಈ ಹಾಜರಾತಿ ಆಧರಿಸಿಯೇ ವೇತನ ಪಾವತಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ. ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯನಿರ್ವಹಣೆ ಸುಗಮಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪಂಚತಂತ್ರ 2.0 ತಂತ್ರಾಂಶ ಅನುಷ್ಠಾನಗೊಳಿಸಲಾಗಿದೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಪ್ರತಿನಿತ್ಯ ತಮ್ಮ ಹಾಜರಾತಿ ನಮೂದಿಸಲು ಈ ತಂತ್ರಾಂಶದಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ.
ಆನ್‌ಲೈನ್ ಮೂಲಕ ವೇತನ ಪಾವತಿ; ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಆನ್‌ಲೈನ್ ಹಾಜರಾಗಿ ಕಡ್ಡಾಯಗೊಳಿಸುವ ಜೊತೆಗೆ ಪಂಚತಂತ್ರ 2.0 ತಂತ್ರಾಂಶದ ಮೂಲಕವೇ ಸಿಬ್ಬಂದಿಗೆ ಮಾಸಿಕ ವೇತನವನ್ನು ಆನ್‌ಲೈನ್ ಮೂಲಕವೇ ಪಾವತಿಸಲಾಗುತ್ತದೆ.
ಈ ಹಿಂದೆ ಅನೇಕರು ಇ-ಹಾಜರಾತಿಯನ್ನು ನಿಯಮಿತವಾಗಿ ದಾಖಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಸಿಬ್ಬಂದಿ ವೇತನವನ್ನು ಇ-ಹಾಜರಾತಿ ಮಾದರಿ ಮೂಲಕ ದಾಖಲಿಸಿ, ಹಾಜರಾತಿ ಆಧರಿಸಿಯೇ ವೇತನ ಪಾವತಿಸಲು ತೀರ್ಮಾನಿಸಲಾಗಿದೆ.
ಆದ್ದರಿಂದ ಇನ್ನು ಮುಂದೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಕಡ್ಡಾಯವಾಗಿ ಪಂಚತಂತ್ರ 2.0 ತಂತ್ರಾಂಶ ಮತ್ತು ಮೊಬೈಲ್ ಆ್ಯಪ್ ಮೂಲಕ ದೈನಂದಿನ ಹಾಜರಾತಿಯನ್ನು ತಪ್ಪದೇ ಅಳವಡಿಸಲು ಪಂಚಾಯತ್ ರಾಜ್ ಆಯುಕ್ತರು ನಿರ್ದೇಶನ ನೀಡಿದ್ದಾರೆ.
ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಲವು ಸೇವೆಗಳನ್ನು ನೀಡುವ ಮೂಲಕ ಜನರ ಸಮಯ, ಹಣ ಉಳಿತಾಯ ಮಾಡಲು ಈಗಾಗಲೇ ಹಲವಾರು ಕಾರ್ಯಕ್ರಮ ರೂಪಿಸಿದೆ. ಅಟಲ್ ಜೀ ಜನಸ್ನೇಹಿ ಕೇಂದ್ರದ ಸೇವೆಗಳನ್ನು ಪಂಚಾಯಿತಿ ಮಟ್ಟದ ಬಾಪೂಜಿ ಸೇವಾ ಕೇಂದ್ರದಲ್ಲಿ ನೀಡಲು ಸಹ ತೀರ್ಮಾನ ಮಾಡಿ, ಈ ಕುರಿತು ಆದೇಶ ಹೊರಡಿಸಿದೆ.
ಪಂಚಾಯಿತಿ ಮಟ್ಟದಲ್ಲಿ ಹಲವು ಸೇವೆಗಳನ್ನು ನೀಡುವುದರಿಂದ ಪಂಚಾಯಿತಿ ಮಟ್ಟದಲ್ಲಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಣೆ ಮಾಡಬೇಕಿದೆ. ಆದ್ದರಿಂದ ಆನ್‌ಲೈನ್ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಲವಾರು ಹುದ್ದೆಗಳು ಖಾಲಿ ಇವೆ. ಆದ್ಯತೆಯ ಮೇಲೆ ಹುದ್ದೆಗಳನ್ನು ಭರ್ತಿ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಒಟ್ಟು 733 ಹುದ್ದೆಗಳನ್ನು ಭರ್ತಿ ಮಾಡುವ ನಿರೀಕ್ಷೆ ಇದೆ.
ಇವುಗಳಲ್ಲಿ ಪಿಡಿಒ 150, ಕಾರ್ಯದರ್ಶಿ ಗ್ರೇಡ್-1 135, ಕಾರ್ಯದರ್ಶಿ ಗ್ರೇಡ್-2 343 ಮತ್ತು ದ್ವಿತೀಯ ದರ್ಜೆ ಸಹಾಯಕ 105 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆರ್ಥಿಕ ಇಲಾಖೆಯ ಒಪ್ಪಿಗೆ ಸಿಕ್ಕ ಬಳಿಕ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ.












Click it and Unblock the Notifications