Mock Drills: ಕರ್ನಾಟಕದಲ್ಲಿ ಭದ್ರತಾ ಸಿಬ್ಬಂದಿ ಕೊರತೆ, ಹೆಚ್ಚುವರಿ ನೇಮಕಾತಿ ಬಗ್ಗೆ ಜಿ.ಪರಮೇಶ್ವರ ಅಪ್ಡೇಟ್ಸ್
ಬೆಂಗಳೂರು, ಮೇ 08: ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಬಹಿರಂಗ ಯುದ್ಧ ನಡೆದಿದೆ. ಕೇವಲ ಕ್ಷಿಪಣಿ ಮಾತ್ರವಲ್ಲದೇ, ನೀರಿನ ಯುದ್ಧ ಸಾರಿದ ಭಾರತ ಪಾಕಿಸ್ತಾನಿಗಳ ವೀಸಾ ರದ್ದು ಮಾಡಿತ್ತು. ರಾಜ್ಯದಲ್ಲಿರುವ ಪಾಕಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಇದರ ಬೆನ್ನಲ್ಲೆ ಆಪರೇಷನ್ ಸಿಂದೂರ ಕೈಗೊಂಡಿದ್ದು, ಅದಕ್ಕು ಮೊದಲೇ ಮಾಕ್ ಡ್ರಿಲ್ ಆರಂಭಿಸಿತ್ತು. ಕರ್ನಾಟಕದಲ್ಲೂ ಮಾಕ್ ಡ್ರಿಲ್ ಆರಂಭವಾಗಿದೆ. ಈ ನಡುವೆ ರಾಜ್ಯದಲ್ಲಿ ಅಗತ್ಯ ಭದ್ರತಾ ಸಿಬ್ಬಂದಿ ಕೊರತೆ ಇದೆ ಎಂಬ ಮಾತುಗಳು ಕೇಳಿ ಬಂದಿದ್ದು, ಇದಕ್ಕೆ ಗೃಹ ಸಚಿವರೇ ಉತ್ತರಿಸಿದ್ದಾರೆ.
ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, ರಾಜ್ಯದಲ್ಲಿ ಅಗತ್ಯವಾದ ಭದ್ರತೆ ಸಿಬ್ಬಂದಿ ಇದೆ. ಯಾವುದೇ ರೀತಿಯ ಕೊರತೆಯಿಲ್ಲ. ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಅಗತ್ಯ ಸಿಬ್ಬಂದಿಯನ್ನು ಕಡಿಮೆ ಮಾಡಿಲ್ಲ. ಆ ಸಂಖ್ಯೆ ಹಾಗೆಯೇ ಇದೆ. ಹೆಚ್ಚುವರಿಯಾಗಿ ನೇಮಕಾತಿ ಮಾಡಿಕೊಳ್ಳಬೇಕು ಎನ್ನುವ ಪ್ರಸ್ತಾವನೆಯು ಇದೆ. ನೇಮಕಾತಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ ಎಂದು ಅವರು ಸ್ಪಷ್ಟಪಡಿಸಿದರು..

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರಗಾಮಿಗಳ ದಾಳಿ ಬಳಿಕ ನಡೆದ ಬೆಳವಣಿಗೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಕೆಲವು ನಿರ್ದೇಶನಗಳು ಬಂದಿವೆ. ರಾಜ್ಯ 03 ಜಿಲ್ಲೆಗಳನ್ನು ಆಯ್ಕೆ ಮಾಡಿದ್ದಾರೆ. ಮಾಕ್ ಡ್ರಿಲ್ ಮಾಡುತ್ತಾರೆ. ಹೆಚ್ಚುವರಿಯಾಗಿ ಮೈಸೂರು ಜಿಲ್ಲೆಯನ್ನು ಇದಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇವೆ. ಗುಪ್ತಚರ ನೀಡಿರುವ ಮಾಹಿತಿ ಮತ್ತು ಇನ್ನಿತರ ಕಾರಣಗಳಿಂದ ಈ ಜಿಲ್ಲೆ ಆಯ್ಕೆ ಮಾಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಯ ಪೊಲೀಸ್ ಅಧೀಕ್ಷಕರಿಗೆ ಪರಿಸ್ಥಿತಿಯ ಸೂಕ್ಷ್ಮತೆ ಮತ್ತು ಗಂಭೀರತೆಯನ್ನು ತಿಳಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಈಗಾಗಲೇ ಅಣಕು ಕಾರ್ಯಾಚರಣೆ ಶುರುವಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸಚಿವ ಸಂಪುಟದಲ್ಲಿ ಜಾತಿ ಗಣತಿ ಚರ್ಚೆ ಆಗಬಹುದು. ಸಚಿವ ಸಂಪುಟ ಸಭೆಯ ಕಾರ್ಯಸೂಚಿ ಇನ್ನು ಬಂದಿಲ್ಲ. ಮಧ್ಯಾಹ್ನದ ನಂತರ ಗೊತ್ತಾಗಲಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಂಗಳೂರು, ಕರ್ನಾಟಕದ ಪ್ರಮುಖ ಸ್ಥಳಗಳಲ್ಲಿ ಹೈ ಅಲರ್ಟ್
ಭಾರತವು ಆಪರೇಷನ್ ಸಿಂದೂರ ಅಡಿಯಲ್ಲಿ ಪಾಕಿಸ್ತಾನ ಮೇಲೆ ಯುದ್ಧ ಮಾಡಿದೆ. ಇದರ ಬೆನ್ನಲ್ಲೆ ಕರ್ನಾಟಕದಲ್ಲಿ ವಿವಿಧ ಜಲಾಶಯಗಳ ಭದ್ರತೆ ಹೆಚ್ಚಿಸಲಾಗಿದೆ. ಮುಖ್ಯವಾಗಿ ಬೆಂಗಳೂರಲ್ಲಿರುವ ಡಿಆರ್‌ಡಿಒ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೇರಿದಂತೆ ಕೇಂದ್ರ ರಕ್ಷಣಾ ಇಲಾಖೆ ವ್ಯಾಪ್ತಿಯ ಎಲ್ಲ ಕಚೇರಿಗಳಿಗೆ, ಕ್ಯಾಂಪಸ್‌ಗಳಿಗೆ ಕೇಂದ್ರ ಸರ್ಕಾರ ಭದ್ರತೆ ಹೆಚ್ಚಿಸಿದೆ.
ಬಂದರು ಇರುವ ಮಂಗಳೂರು, ಕಾರಾವಾರದಂತಹ ಕರಾವಳಿ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಕಾವಲು ಪಡೆಗಳ ಸಿಬ್ಬಂದಿ ಆಗಾಗ ಬಂದರು ಅನ್ನು ಪರಿಶೀಲನೆ ಮಾಡಲಿದ್ದಾರೆ. ಒಂದೆಡೆ ಕೇಂದ್ರ ಸರ್ಕಾರ ಭದ್ರತೆ ಹೆಚ್ಚಿಸಿದರೆ, ಮತ್ತೊಂದೆಡೆ ರಾಜ್ಯ ಪೊಲೀಸ್ ಇಲಾಖೆ ಸಹ ಸೂಕ್ತ ಕ್ರಮ ಕೈಗೊಂಡಿದೆ..












Click it and Unblock the Notifications