ಕಲಬುರಗಿ ಟೆಕ್ಸ್‌ಟೈಲ್ಸ್ ಪಾರ್ಕ್: 1 ಲಕ್ಷ ನೇರ ಉದ್ಯೋಗ ಸೃಷ್ಟಿ
ಕಲಬುರಗಿ, ಫೆಬ್ರವರಿ 28; ಕಲಬುರಗಿಯಲ್ಲಿ ಸ್ಥಾಪನೆಯಾಗಲಿರುವ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗೆ ಆರು ತಿಂಗಳಿನಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಸುಮಾರು 1,000 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಈ ಪಾರ್ಕ್‌ನಿಂದ ಒಂದು ಲಕ್ಷನೇರ ಉದ್ಯೋಗ ಸೃಷ್ಟಿಯಾಗಲಿದೆ.
ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಮಾತನಾಡಿ, "ಜಿಲ್ಲೆಯ ಜೇವರ್ಗಿ ರಸ್ತೆಯ ಫಿರೋಜಾಬಾದ ಬಳಿ ಕೇಂದ್ರ ಸರ್ಕಾರದ ಪಿ.ಎಂ.ಮಿತ್ರ ಯೋಜನೆಯಡಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಆರಂಭಿಸಲಾಗುತ್ತಿದೆ. ಆರು ತಿಂಗಳಿನಲ್ಲಿ ಕಾರ್ಯಾರಂಭ ಮಾಡಲಿದೆ" ಎಂದರು.

ದೆಹಲಿಯ ಭಾರತ ಮಂಟಪಂನಲ್ಲಿ ಕೇಂದ್ರ ಜವಳಿ ಖಾತೆ ಆಯೋಜಿಸಿರುವ 'ಭಾರತ್ ಟೆಕ್ಸ್' 2024 ಜಾಗತಿಕ ಜವಳಿ ವಸ್ತು ಪದರ್ಶನದಲ್ಲಿ ಕೇಂದ್ರ ಜವಳಿ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪಿಯೂಷ್ ಗೋಯಲ್ ಹಾಗೂ ಅಧಿಕಾರಿಗಳೊಂದಿಗೆ ಸಂಸದರು ಈ ಕುರಿತು ಮಹತ್ವದ ಸಭೆಯನ್ನು ನಡೆಸಿದ್ದಾರೆ.
"ಕಲಬುರಗಿಯಲ್ಲಿ ಜವಳಿ ಪಾರ್ಕ್ ಕಾರ್ಯಗಳು ವಿಳಂಬವಾಗುತ್ತಿದೆ. ಈ ಜವಳಿ ಪಾರ್ಕ್‌ಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು ಬಂಡವಾಳ ಹೂಡುವಂತೆ ಉದ್ಯಮಿಗಳಿಗೆ ಪ್ರಧಾನಿಗಳು ಕರೆ ನೀಡಿದ್ದಾರೆ. ಎಲ್ಲಾ ಕೆಲಸ ಮುಗಿದು ಆರು ತಿಂಗಳಿನಲ್ಲಿ ಇದು ಕಾರ್ಯಾರಂಭ ಮಾಡಲಿದೆ" ಎಂದರು.
1 ಲಕ್ಷ ನೇರ ಉದ್ಯೋಗ: ಕರ್ನಾಟಕ ಸರ್ಕಾರ ಕಲಬುರಗಿ ಜಿಲ್ಲೆಯ ಜೇವರ್ಗಿ ರಸ್ತೆಯ ಫಿರೋಜಾಬಾದ ಬಳಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗೆ 1,000 ಎಕರೆ ಜಮೀನನ್ನು ಜವಳಿ ಇಲಾಖೆಗೆ ಒಂದು ತಿಂಗಳೊಳಗೆ ಹಸ್ತಾಂತರಿಸಿ ಆರ್‌ಟಿಸಿಯಲ್ಲಿ ಹೆಸರು ಸೇರಿಸಬೇಕು ಎಂದು ಸೂಚನೆ ನೀಡಿತ್ತು.
ಸಂಸದರು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದು, ಆರು ತಿಂಗಳಲ್ಲಿ ಕಾಂಪೌಂಡ್ ಸೇರಿ ಮೂಲ ಸೌಲಭ್ಯಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಉದ್ಯಮ ಆರಂಭಿಸುವವರಿಗೆ ಪ್ರತಿ ಯೂನಿಟ್‌ಗೆ 5 ರೂ. ಗಿಂತ, ಕಮೆ ದರದಲ್ಲಿ ವಿದ್ಯುತ್ ಪೂರೈಸಲಾಗುತ್ತದೆ. ರಿಯಾಯಿತಿ ದರದಲ್ಲಿ ನೀರು ಸಹ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ ಹತ್ತಿ ಬೆಳೆಯುವುದರಲ್ಲಿ 6ನೇ ಅತಿ ದೊಡ್ಡ ರಾಜ್ಯ. ಈ ಪಾರ್ಕ್ ನಿರ್ಮಾಣದಿಂದ ಹತ್ತಿ ಬೆಳೆಗಾರರಿಗೆ ವಿಶೇಷವಾದ ಲಾಭವಾಗಲಿದೆ. ಸಕ್ಕರೆ ಕಾರ್ಖಾನೆ ಮತ್ತು ಸುತ್ತಮುತ್ತಲಿನ ರೈತರ ಬಳಿ ನೇರವಾಗಿ ಮಾತುಕತೆ ನಡೆಸಿ ಅವರಿಗೂ ಪ್ರೋತ್ಸಾಹ ನೀಡಿದಲ್ಲಿ ಜವಳಿ ಪಾರ್ಕ್‌ಗೆ ಕಚ್ಚಾ ವಸ್ತುಗಳನ್ನು ಸುಲಭವಾಗಿ ಪಡೆಯಬಹುದು ಎಂದು ಸಭೆಯಲ್ಲಿ ಚರ್ಚೆ ನಡೆದಿದೆ.
ಸುಮಾರು 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಸ್ತಿತ್ವಕ್ಕೆ ಬರಲಿರುವ ಜವಳಿ ಪಾರ್ಕ್‌ಗೆ ಕೇಂದ್ರ ಸರ್ಕಾರ ಮೂಲಸೌಲಭ್ಯ ಅಭಿವೃದ್ಧಿಗಾಗಿ 600 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇದರಿಂದ 1 ಲಕ್ಷ ನೇರ ಉದ್ಯೋಗ ಸೃಷ್ಟಿಯಾಗಲಿದೆ. ಅಷ್ಟೇ ಸಂಖ್ಯೆಯ ಪರೋಕ್ಷ ಉದ್ಯೋಗ ಸೃಷ್ಟಿಯಾಗಿ ಜನರು ಮುಂಬೈ, ಹೈದರಾಬಾದ್ ಮುಂತಾದ ನಗರಗಳಿಗೆ ಉದ್ಯೋಗ ಹುಡುಕಿಕೊಂಡು ಹೋಗುವುದು ತಪ್ಪಲಿದೆ. ಯೋಜನೆಗಾಗಿ ಭೂಮಿ ನೀಡಿದವರಿಗೆ ಉದ್ಯೋಗ ನೀಡಲು ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಸಂಸದರು ಭರವಸೆ ನೀಡಿದರು.
ಬಹಳ ವರ್ಷಗಳಿಂದ ಕಲಬುರಗಿಯಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗೆ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿತ್ತು. ಕೇಂದ್ರ ಸರ್ಕಾರ ಕರ್ನಾಟಕದ ಕಲಬುರಗಿ ಸೇರಿದಂತೆ 7 ರಾಜ್ಯಗಳಿಗೆ ಪ್ರಧಾನಮಂತ್ರಿ ಮಿತ್ರ ಮೆಗಾ ಜವಳಿ ಪಾರ್ಕ್‌ಗಳನ್ನು 2023ರ ಮಾರ್ಚ್‌ನಲ್ಲಿ ಘೋಷಣೆ ಮಾಡಿತ್ತು. ಯೋಜನೆ ಅನ್ವಯ ತಮಿಳುನಾಡು, ತೆಲಂಗಾಣ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣವಾಗುತ್ತಿದೆ.
ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣಕ್ಕಾಗಿ 13 ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಇವುಗಳಲ್ಲಿ ಕರ್ನಾಟಕದ ಕಲಬುರಗಿ ಸೇರಿದಂತೆ 7 ಪ್ರದೇಶಗಳನ್ನು ಆಯ್ಕೆ ಮಾಡಲಾಗಿತ್ತು. ಸಂಪರ್ಕ, ಅಸ್ತಿತ್ವದಲ್ಲಿರುವ ಪರಿಸರ ವ್ಯವಸ್ಥೆ, ಜವಳಿ/ ಉದ್ಯಮ ನೀತಿ, ಮೂಲಸೌಕರ್ಯ, ಉಪಯುಕ್ತ ಸೇವೆಗಳು ಇತ್ಯಾದಿ ಅಂಶಗಳ ಮಾನದಂಡಗಳ ಆಧಾರದ ಮೇಲೆ ಪದೇಶ ಆಯ್ಕೆ ಮಾಡಲಾಗಿದೆ.












Click it and Unblock the Notifications