ಕೆಎಎಸ್ ಪೂರ್ವಭಾವಿ ಪರೀಕ್ಷೆ ಎಡವಟ್ಟು: ಕೆಪಿಎಸ್‌ಸಿ ಕಾರ್ಯದರ್ಶಿ ಎತ್ತಂಗಡಿ
ಬೆಂಗಳೂರು, ಅಕ್ಟೋಬರ್ 23: ಕರ್ನಾಟಕ ಸರ್ಕಾರ ಆಡಳಿತ ಯಂತ್ರದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ವಿವಿಧ ಇಲಾಖೆಗಳ ಕಾರ್ಯದರ್ಶಿ, ಆಯುಕ್ತರ ವರ್ಗಾವಣೆಯಾಗಿದೆ. ಮಹತ್ವದ ವರ್ಗಾವಣೆಯೊಂದರಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಕಾರ್ಯದರ್ಶಿಯನ್ನು ವರ್ಗಾವಣೆಗೊಳಿಸಲಾಗಿದೆ. ಮಾರ್ಚ್‌ನಲ್ಲಿ ನೇಮಕಗೊಂಡಿದ್ದ ಕಾರ್ಯದರ್ಶಿಗಳನ್ನು ಅಕ್ಟೋಬರ್‌ನಲ್ಲಿ ವರ್ಗಾವಣೆ ಮಾಡಲಾಗಿದೆ.
ಕರ್ನಾಟಕ ಸರ್ಕಾರ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ರಮಣದೀಪಚೌಧರಿ ಐಎಎಸ್ (ಕೆಎನ್:2008) ಅವರನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ. ಇವರು ಸ್ಥಳ ನಿರೀಕ್ಷಣೆಯಲ್ಲಿದ್ದರು.

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಕಾರ್ಯದರ್ಶಿಯಾಗಿದ್ದ ಡಾ. ರಾಕೇಶ್ ಕುಮಾರ್ ಕೆ. ಐಎಎಸ್ ವರ್ಗಾವಣೆಗೊಳಿಸಲಾಗಿದೆ. ಮಾರ್ಚ್ 2024ರಲ್ಲಿ ಡಾ. ರಾಕೇಶ್ ಕುಮಾರ್ ಕೆ. (ಕೆಎನ್; 2012) ಆಯುಕ್ತರು ಸಮಾಜ ಕಲ್ಯಾಣ ಇಲಾಖೆ ಇವರಿಗೆ ಸರ್ಕಾರ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ ಹುದ್ದೆಯ ಹೆಚ್ಚುವರಿ ಹೊಣೆ ನೀಡಿ ಆದೇಶಿಸಿತ್ತು.
ವಿವಾದ ಉಂಟು ಮಾಡಿದ್ದ ಪರೀಕ್ಷೆ: ಕೆಪಿಎಸ್‌ಸಿ ಕಾರ್ಯದರ್ಶಿ ಡಾ. ರಾಕೇಶ್ ಕುಮಾರ್ ಕೆ. ವರ್ಗಾವಣೆಗೆ ಪರೀಕ್ಷೆಯಲ್ಲಿನ ವಿವಾದ ಕಾರಣವೇ? ಎಂಬ ಚರ್ಚೆಗಳು ಆರಂಭವಾಗಿವೆ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಆಗಸ್ಟ್ 27ರಂದು ನಡೆಸಿದ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆ ಭಾರೀ ಚರ್ಚೆಗೆ ಕಾರಣವಾಗಿತ್ತು.
ಕೆಪಿಎಸ್‌ಸಿಯಲ್ಲಿಯೇ ಬದಲಾವಣೆ ತರಬೇಕು, ಕೆಪಿಎಸ್‌ಸಿ ಮರು ಪರೀಕ್ಷೆಯನ್ನು ನಡೆಸಬೇಕು ಎಂಬ ಕೂಗು ಜೋರಾಗಿತ್ತು. ಪ್ರಶ್ನೆ ಪತ್ರಿಕೆಯಲ್ಲಿನ ತಪ್ಪು ಕನ್ನಡವನ್ನು ಖಂಡಿಸಿ, ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಂತಿಮವಾಗಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ, 'ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದವೆಂಬ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ, ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದೇನೆ' ಎಂದು ಹೇಳಿದ್ದರು.
ಕೆ. ಎಸ್. ಲತಾ ಕುಮಾರಿ ವರ್ಗಾವಣೆ: ಕೆಪಿಎಸ್‌ಸಿ ಕಾರ್ಯದರ್ಶಿಯಾಗಿ ಕೆ. ಎಸ್. ಲತಾ ಕುಮಾರಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಮಾರ್ಚ್ 5ರಂದು ಸರ್ಕಾರ ಅವರನ್ನು ವರ್ಗಾವಣೆ ಮಾಡಿ, ಡಾ. ರಾಕೇಶ್ ಕುಮಾರ್ ಕೆ. ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿತ್ತು. ವರ್ಗಾವಣೆಗೂ ಮೊದಲು ಲತಾ ಕುಮಾರಿ ಅವರಿಗೆ 10 ದಿನಗಳ ಗಳಿಕೆ ರಜೆಯನ್ನು ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.
ಲತಾ ಕುಮಾರಿ ಅವರನ್ನು ಕಾರ್ಯಕಾರಿ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆ ಭಾರೀ ಚರ್ಚೆಗೆ ಕಾರಣವಾಗಿತ್ತು. 10 ದಿನಗಳ ಕಾಲ ಗಳಿಕೆ ರಜೆ ನೀಡಿದ್ದಾಗಲೇ ಕೆಪಿಎಸ್‌ಸಿಯಲ್ಲಿ ಎಲ್ಲವೂ ಸರಿ ಇಲ್ಲವೇ? ಎಂಬ ಪ್ರಶ್ನೆ ಎದುರಾಗಿತ್ತು. ಕೆಪಿಎಸ್‌ಸಿ ಅಧ್ಯಕ್ಷರು ಸದಸ್ಯರ ಜಟಾಪಟಿ ಕಾರಣಕ್ಕೆ ಕಾರ್ಯದರ್ಶಿಗಳನ್ನು ರಜೆ ಮೇಲೆ ಕಳಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಫೆಬ್ರವರಿ 8ರಂದು ಲತಾ ಕುಮಾರಿ ಅವರಿಗೆ ರಜೆ ನೀಡಿದ್ದ ಸರ್ಕಾರ ಕೆಪಿಎಸ್‌ಸಿ ಕಾರ್ಯದರ್ಶಿಯಾಗಿ ಡಾ. ರಾಕೇಶ್ ಕುಮಾರ್ ಕೆ. ಪ್ರಭಾರಿಯಾಗಿ ಇರಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಿತ್ತು. ಬಳಿಕ ಮಾರ್ಚ್ 2ರಂದು ರಾಕೇಶ್ ಕುಮಾರ್ ಕೆ. ಅವರಿಗೆ ಕೆಪಿಎಸ್‌ಸಿ ಕಾರ್ಯದರ್ಶಿಯ ಹೆಚ್ಚುವರಿ ಹೊಣೆ ನೀಡಲಾಗಿತ್ತು.












Click it and Unblock the Notifications